ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ 2023: ಗ್ರೀನ್‌ ಗ್ರೋಥ್‌- ಶೂನ್ಯ ಇಂಗಾಲದತ್ತ ದಿಟ್ಟ ಹೆಜ್ಜೆ

Last Updated 1 ಫೆಬ್ರುವರಿ 2023, 13:07 IST
ಅಕ್ಷರ ಗಾತ್ರ

ನವದೆಹಲಿ: ವಾತಾವರಣಕ್ಕೆ ಸೇರುತ್ತಿರುವ ಇಂಗಾಲದ ಪ್ರಮಾಣವನ್ನು 2070ರೊಳಗೆ ಶೂನ್ಯಕ್ಕಿಳಿಸುವ ಗುರಿಯನ್ನು ದೇಶ ಹೊಂದಿದೆ. ಇದಕ್ಕಾಗಿ ದಿಟ್ಟ ಹೆಜ್ಜೆ ಇಟ್ಟಿದ್ದು, ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು, ಹಸಿರು ಇಂಧನ ಉತ್ಪಾದನೆಯ ‘ಗ್ರೀನ್‌ ಗ್ರೋಥ್‌’ಗೆ ಹೆಚ್ಚಿನ ಆದ್ಯತೆ ನೀಡಿದೆ.

ಹಸಿರು ಇಂಧನ, ಹಸಿರು ವಿದ್ಯುತ್‌, ಹಸಿರು ಕೃಷಿ, ಹಸಿರು ಕಟ್ಟಡಗಳು ಮತ್ತು ಹಸಿರು ಉಪಕರಣಗಳು, ವಿವಿಧ ಆರ್ಥಿಕ ಕ್ಷೇತ್ರಗಳಲ್ಲಿ ಇಂಧನ ದಕ್ಷ ಬಳಕೆಯ ನೀತಿಗಳ ಅನುಷ್ಠಾನಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ‘ಗ್ರೀನ್‌ ಗ್ರೋಥ್‌’ ಪ್ರಯತ್ನಗಳು ಇಂಗಾಲದ ತೀವ್ರತೆ ತಗ್ಗಿಸಲಿವೆ. ಜತೆಗೆ ಹಸಿರು ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ಆರ್ಥಿಕತೆಗೆ ದೊಡ್ಡ ಪ್ರಮಾಣದ ಕೊಡುಗೆ ನೀಡಲಿವೆ ಎನ್ನುವುದನ್ನು ಬಜೆಟ್‌ನಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.

ಪ್ರಧಾನಿ ಮೋದಿ ಅವರ ‘LiFE’ ಅಥವಾ ಪರಿಸರಕ್ಕಾಗಿ ಜೀವನಶೈಲಿ (ಲೈಫ್‌ಸ್ಟೈಲ್‌ ಫಾರ್‌ ಎನ್ವಿರಾನ್‌ಮೆಂಟ್‌) ದೃಷ್ಟಿಕೋನವು ಪರಿಸರ ಪ್ರಜ್ಞೆಯ ಜೀವನಶೈಲಿ ರೂಢಿಸಿಕೊಳ್ಳಲು ಉತ್ತೇಜನ ನೀಡುತ್ತದೆ. ಹಸಿರು ಕೈಗಾರಿಕೆ ಮತ್ತು ಆರ್ಥಿಕ ಪರಿವರ್ತನೆಗೆ ಭಾರತ 2070ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿ ಸಾಧಿಸಲು ‘ಪಂಚಾಮೃತ’ ಯೋಜನೆಗೆ ಆದ್ಯತೆ ನೀಡಿದೆ.

‘ಗ್ರೀನ್‌ ಗ್ರೋಥ್‌’ನಲ್ಲಿ ಯಾವುದಕ್ಕೆ ಆದ್ಯತೆ?

* ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್‌ನಡಿ 2030ರ ವೇಳೆಗೆ ವಾರ್ಷಿಕ 5 ಎಂಎಂಟಿ ಹಸಿರು ಇಂಧನ ಉತ್ಪಾದನೆ ಗುರಿ ಹೊಂದಲಾಗಿದೆ. ಇಂಗಾಲದ ತೀವ್ರತೆ, ಪಳೆಯುಳಿಕೆ ಇಂಧನ ಆಮದು ಅವಲಂಬನೆ ತಗ್ಗಿಸಲು ₹19,700 ಕೋಟಿ ಅನುದಾನ

* ಇಂಧನ ಪರಿವರ್ತನೆ, ಇಂಗಾಲ ಹೊರಸೂಸುವಿಕೆ ಶೂನ್ಯಕ್ಕಿಳಿಸುವುದು, ಇಂಧನ ಭದ್ರತೆಗಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮೂಲಕ ₹35,000 ಕೋಟಿ ಆದ್ಯತೆಯ ಬಂಡವಾಳ ಹೂಡಿಕೆ

* ಸುಸ್ಥಿರ ಆರ್ಥಿಕಾಭಿವೃದ್ಧಿಗಾಗಿ 4,000 ಎಂಡಬ್ಯುಎಚ್‌ ಸಾಮರ್ಥ್ಯದ ಬ್ಯಾಟರಿ ವಿದ್ಯುತ್‌ ಶೇಖರಣಾ ವ್ಯವಸ್ಥೆಗಳಿಗೆ ಬೆಂಬಲ

* ನವೀಕರಿಸಬಹುದಾದ 13 ಗಿಗಾ ವಾಟ್‌ ಇಂಧನ ಅಂತರರಾಜ್ಯ ಪ್ರಸರಣ ವ್ಯವಸ್ಥೆಯ ಗ್ರಿಡ್‌ ಲಡಾಖ್‌ನಲ್ಲಿ ಸ್ಥಾಪನೆ. ಇದಕ್ಕಾಗಿ ₹20,700 ಕೋಟಿ ಬಂಡವಾಳ ಹೂಡಿಕೆ, ಇದರಲ್ಲಿ ₹8,300 ಕೋಟಿ ಕೇಂದ್ರದ ಪಾಲು

* ಸುಸ್ಥಿರ ಪರಿಸರಕ್ಕಾಗಿ ಪರಿಸರ (ಸಂರಕ್ಷಣೆ) ಕಾಯ್ದೆಯಡಿ ಸ್ಥಳೀಯಾಡಳಿತ, ಕಂಪನಿಗಳು ಮತ್ತು ವ್ಯಕ್ತಿಗತವಾಗಿ ಹೆಚ್ಚುವರಿ ಸಂಪನ್ಮೂಲ ಕ್ರೋಡೀಕರಿಸಿ ಗ್ರೀನ್‌ ಕ್ರೆಡಿಟ್ ಪ್ರೋಗ್ರಾಂ ಅನುಷ್ಠಾನ

*ಜೈವಿಕ ಅನಿಲ/ಸಿಎನ್‌ಜಿಗೆ ಹಾಕಿರುವ ಜಿಎಸ್‌ಟಿಗೆ ಸಮಾನವಾಗಿ, ಹಸಿರು ಇಂಧನ ಉತ್ತೇಜಿಸಲು ಬ್ಲೆಂಡೆಡ್‌ ಕಂಪ್ರೆಸ್ಡ್‌ ನೈಸರ್ಗಿಕ ಅನಿಲದ ಮೇಲೆ ಕೇಂದ್ರ ಅಬಕಾರಿ ತೆರಿಗೆ ವಿನಾಯಿತಿ ಇಂದಿನಿಂದಲೇ (ಫೆ.2) ಜಾರಿ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT