ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತರ ನಾಡಿಗೆ ‘ಜವಳಿ ಪಾರ್ಕ್‌’ ಭಾಗ್ಯ

₹ 20 ಕೋಟಿ ವೆಚ್ಚದಲ್ಲಿ ಆಯುಷ್ ಆಸ್ಪತ್ರೆ; ಶಿಶುನಾಳದಲ್ಲಿ ₹ 5 ಕೋಟಿ ಅಭಿವೃದ್ಧಿ ಕಾರ್ಯ
Last Updated 5 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಹಾವೇರಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ‘ಜವಳಿ ಪಾರ್ಕ್‌’ ಮತ್ತು ‘ಆಯುಷ್‌ ಸಂಯುಕ್ತ ಆಸ್ಪತ್ರೆ’ ಸೌಲಭ್ಯವನ್ನು ನೀಡಿರುವುದುಜನರ ಸಂತಸವನ್ನು ಹೆಚ್ಚಿಸಿದೆ.

ಜಿಲ್ಲೆಯ ಶಿಗ್ಗಾವಿಯಲ್ಲಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೂತನ ‘ಜವಳಿ ಪಾರ್ಕ್‌’ ಅನ್ನು ಪ್ರಾರಂಭಿಸಲಾಗುವುದು. ಇದರಿಂದ ಸುಮಾರು 3,000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ 20 ಹಾಸಿಗೆಗಳ ಆಯುಷ್‌ ಸಂಯುಕ್ತ ಆಸ್ಪತ್ರೆಯನ್ನು ₹ 20 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗುವುದು. ಈ ಉದ್ದೇಶಕ್ಕಾಗಿ 2020–21ನೇ ಸಾಲಿನಲ್ಲಿ ₹ 5 ಕೋಟಿ ಅನುದಾನ ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಸಂತರ ಸ್ಥಳಗಳ ಅಭಿವೃದ್ಧಿ:

ಸಂತ ಶಿಶುನಾಳ ಶರೀಫರ ಸಮಾಧಿಯಿರುವ ಶಿಶುನಾಳ ಗ್ರಾಮದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಬಿಎಸ್‌ವೈ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಕವಿ ಸರ್ವಜ್ಞ ತಮ್ಮ ಸರಳ ತ್ರಿಪದಿಗಳ ಮೂಲಕ ಬಿಂಬಿಸಿದ ಬದುಕಿನ ತತ್ವಗಳು, ವಾಸ್ತವಗಳು, ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿವೆ. ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ’ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿರುವುದನ್ನು ಜನರು ಸ್ವಾಗತಿಸಿದ್ದಾರೆ.

ಹಾವೇರಿ ಜಿಲ್ಲೆಯ ಹೆಮ್ಮೆಯ ಮಗಳಾದಸುಧಾ ಮೂರ್ತಿ ನೇತೃತ್ವದಲ್ಲಿ ‘ಕರ್ನಾಟಕ ಪ್ರವಾಸೋದ್ಯಮ ಟಾಸ್ಕ್‌ ಫೋರ್ಸ್‌’ ಅನ್ನು ಸ್ಥಾಪಿಸಲಾಗಿದೆ. ಇದರ ಶಿಫಾರಸ್ಸುಗಳಂತೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ರಾಜ್ಯಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವುದಕ್ಕೆ ಉತ್ತೇಜನ ನೀಡಲು, ಜಾಹೀರಾತು ಮತ್ತು ಇತರೆ ಚಟುವಟಿಕೆಗಳಿಗಾಗಿ ₹ 100 ಕೋಟಿ ಒದಗಿಸಲಾಗುವುದು. ರಾಜ್ಯದ ಪ್ರವಾಸೋದ್ಯಮದ ಸರ್ವತೋಮುಖ ಅಭಿವೃದ್ಧಿಯನ್ನು ₹ 500 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಲಾಗಿದೆ.

ಈ ಅನುದಾನದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಂಡರೆ ಪ್ರವಾಸೋದ್ಯಮ ಗರಿಗೆದರುತ್ತದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬರುವುದರಿಂದ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬುದು ಇಲ್ಲಿನ ಪ್ರವಾಸಿ ಪ್ರಿಯರ ನಿರೀಕ್ಷೆಯಾಗಿದೆ.

ಮೆಡಿಕಲ್‌ ಕಾಲೇಜು:

ಈಗಾಗಲೇ ಬಹುದಿನಗಳ ನಿರೀಕ್ಷೆಯಾಗಿದ್ದ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ₹ 478 ಕೋಟಿ ಅನುದಾನ ಮಂಜೂರಾಗಿದೆ. ಆಡಳಿತಾಧಿಕಾರಿಯನ್ನೂ ನೇಮಿಸಿದ್ದು, ಜಿಲ್ಲಾಸ್ಪತ್ರೆ ಆವರಣದ ಕೊಠಡಿಯೊಂದರಲ್ಲಿ ಫೆ.14ರಂದು ಕಚೇರಿ ಕೂಡ ಕಾರ್ಯಾರಂಭವಾಗಿದೆ. ಕಟ್ಟಡ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಸಹ ಆರಂಭವಾಗಿದೆ.

ನೀರಾವರಿ:

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಜಿಲ್ಲೆಗೆ ಭರಪೂರ ನೀರಾವರಿ ಯೋಜನೆಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಹಾನಗಲ್‌ ತಾಲ್ಲೂಕಿನ ಬಾಳಂಬೀಡು ಮತ್ತು ಹಿರೇಕಾಂಶಿ ಸೇರಿದಂತೆ 239 ಕೆರೆಗಳಿಗೆ ₹ 504 ಕೋಟಿ ವೆಚ್ಚದಲ್ಲಿ ವರದಾ ನದಿಯಿಂದ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಬಿ.ಎಸ್‌.ಯಡಿಯೂರಪ್ಪನವರೇ ಶಂಕುಸ್ಥಾಪನೆ ಕೂಡ ನೆರವೇರಿಸಲಾಗಿದೆ.

ಜಿಲ್ಲೆಯಲ್ಲಿ ವರದಾ, ಧರ್ಮಾ, ತುಂಗಭದ್ರಾ ಮತ್ತು ಕುಮದ್ವತಿ ನದಿಗಳು ಹರಿಯುತ್ತಿದ್ದು, 23ಕ್ಕೂ ಅಧಿಕ ನೀರಾವರಿ ಯೋಜನೆಗಳನ್ನು ಆರಂಭಿಸಲಾಗಿತ್ತು. ಅವುಗಳಲ್ಲಿ ಕೆಲವು ಚಾಲನೆಯಲ್ಲಿದ್ದರೆ, ಮತ್ತೆ ಕೆಲವು ಸ್ಥಗಿತಗೊಂಡಿವೆ. ಇವುಗಳಿಗೆ ಚಾಲನೆ ಸಿಕ್ಕಿದ್ದರೆ ಮತ್ತಷ್ಟು ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗುತ್ತಿತ್ತು. ಅದೇ ರೀತಿ ಜಿಲ್ಲೆಯ ಕೆರೆಗಳ ಹೂಳು ತೆಗೆಸಿ ಅಭಿವೃದ್ಧಿಪಡಿಸಲು ಅನುದಾನ ನೀಡಿದ್ದರೆ ಕುಡಿಯುವ ನೀರಿನ ಬವಣೆ ತಪ್ಪುತ್ತಿತ್ತು ಎಂಬುದು ರೈತರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT