ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಜೆಟ್‌| ಡಿಸಿಸಿ ಬ್ಯಾಂಕ್‌, ಮೆಗಾ ಡೇರಿ ಹಾವೇರಿಯ ನಿರೀಕ್ಷೆ

ರಾಜ್ಯ ಬಜೆಟ್‌ನತ್ತ ಜಿಲ್ಲೆಯ ಜನರ ಚಿತ್ತ: ಜೋಳ, ಹತ್ತಿ ಖರೀದಿ ಕೇಂದ್ರ ಆರಂಭವಾಗಲಿ
Last Updated 3 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಹಾವೇರಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಾರ್ಚ್‌ 5ರಂದು ಮಂಡಿಸಲಿರುವ ‘ರಾಜ್ಯ ಬಜೆಟ್‌’ ಮೇಲೆ ಜಿಲ್ಲೆಯ ಜನರು ಅಪಾರ ಕನಸು ಮತ್ತು ನಿರೀಕ್ಷೆ ಹೊಂದಿದ್ದಾರೆ.

ಬಹುದಿನಗಳ ನಿರೀಕ್ಷೆಯಾಗಿದ್ದ ‘ಸರ್ಕಾರಿ ಮೆಡಿಕಲ್‌ ಕಾಲೇಜು’ ಸ್ಥಾಪನೆಗೆ ₹ 478 ಕೋಟಿ ಅನುದಾನಕ್ಕೆ ಮಂಜೂರಾತಿ ಸಿಕ್ಕಿದೆ. ಜತೆಗೆಆಡಳಿತಾಧಿಕಾರಿಯನ್ನು ನೇಮಿಸಲಾಗಿದ್ದು, ಜಿಲ್ಲಾಸ್ಪತ್ರೆ ಆವರಣದ ಕೊಠಡಿಯೊಂದರಲ್ಲಿ ಫೆ.14ರಂದು ಕಚೇರಿ ಕೂಡ ಕಾರ್ಯಾರಂಭವಾಗಿದೆ. ಕಟ್ಟಡ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ.

ನೀರಾವರಿ:ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬಾಳಂಬೀಡು ಮತ್ತು ಹಿರೇಕಾಂಶಿ ಸೇರಿದಂತೆ239 ಕೆರೆಗಳಿಗೆ₹ 504 ಕೋಟಿ ವೆಚ್ಚದಲ್ಲಿ ವರದಾ ನದಿಯಿಂದ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಬಿ.ಎಸ್‌. ಯಡಿಯೂರಪ್ಪನವರೇ ಈಚೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕೂಡಲೇ ಕಾಮಗಾರಿಯನ್ನು ಆರಂಭಿಸಿ, ಯೋಜನೆಯನ್ನು ನಿಗದಿತ ವೇಳೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತರಬೇಕು ಎಂಬುದು ಅನ್ನದಾತರ ಆಶಯವಾಗಿದೆ.

ಜಿಲ್ಲೆಯಲ್ಲಿ ವರದಾ, ಧರ್ಮಾ, ತುಂಗಭದ್ರಾ ಮತ್ತು ಕುಮದ್ವತಿ ನದಿಗಳು ಹರಿಯುತ್ತಿದ್ದು, 23ಕ್ಕೂ ಅಧಿಕ ನೀರಾವರಿ ಯೋಜನೆಗಳನ್ನು ಆರಂಭಿಸಲಾಗಿತ್ತು. ಈ ಪೈಕಿ ಕೆಲವು ಚಾಲನೆಯಲ್ಲಿದ್ದರೆ, ಮತ್ತೆ ಕೆಲವು ಸ್ಥಗಿತಗೊಂಡಿವೆ. ಇವುಗಳಿಗೆ ಚಾಲನೆ ಸಿಕ್ಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ. ಜಿಲ್ಲೆಯ ಕೆರೆಗಳ ಹೂಳು ತೆಗೆಸಿ, ಅಭಿವೃದ್ಧಿಪಡಿಸಿದರೆ ಕುಡಿಯುವ ನೀರಿನ ಬವಣೆ ನೀಗಲಿದೆ.

ಮೆಗಾ ಡೇರಿ ನಿರೀಕ್ಷೆ:ಧಾರವಾಡ ಹಾಲು ಒಕ್ಕೂಟಕ್ಕೆ ಜಿಲ್ಲೆಯ 25 ಸಾವಿರಕ್ಕೂ ಅಧಿಕ ರೈತ ಕುಟುಂಬಗಳು ನಿತ್ಯ 1.15 ಲಕ್ಷ ಲೀಟರ್‌ ಹಾಲು ಪೂರೈಸುತ್ತಿದ್ದಾರೆ. 410 ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ಥಾಪನೆಯಾಗಿವೆ. ‘ಮೆಗಾ ಡೇರಿ’ಯನ್ನು ಬಜೆಟ್‌ನಲ್ಲಿ ಘೋಷಿಸುವುದಾಗಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರು. ಸೌಲಭ್ಯ ಸಿಕ್ಕೇ ಸಿಗುತ್ತದೆ ಎಂಬುದು ರೈತರ ಅಚಲ ನಂಬಿಕೆಯಾಗಿದೆ.

‘ಹಾವೇರಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ಕೆ.ಎಂ.ಎಫ್‌.ನಿಂದ ಅನುಮತಿ ಸಿಕ್ಕಿದೆ. ಹಾಲು ಒಕ್ಕೂಟ ಸ್ಥಾಪನೆಯ ಮೊದಲ ಹೆಜ್ಜೆಯಾಗಿ ₹ 100 ಕೋಟಿ ವೆಚ್ಚದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆಗೆ ಸಿ.ಎಂ. ಭರವಸೆ ನೀಡಿದ್ದಾರೆ. ಗಾಂಧಿಪುರದಲ್ಲಿರುವ ಶೀತಲೀಕರಣ ಘಟಕದ ಜಾಗದಲ್ಲೇ ‘ಮೆಗಾ ಡೇರಿ’ ಸ್ಥಾಪಿಸಲಾಗುವುದು’ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ತಿಳಿಸಿದರು.

ಡಿಸಿಸಿ ಬ್ಯಾಂಕ್: ‘ಧಾರವಾಡ, ಗದಗ, ಹಾವೇರಿ ಈ ಮೂರು ಜಿಲ್ಲೆಗಳಿಗೆ ಒಂದೇ ಡಿಸಿಸಿ ಬ್ಯಾಂಕ್‌ ಇದೆ. ಹಾವೇರಿ ಜಿಲ್ಲೆಯಲ್ಲಿ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪನೆ ಮಾಡಿ ಎಂಬುದು ದಶಕದ ಹೋರಾಟವಾಗಿದೆ. ಡಿಸಿಸಿ ಬ್ಯಾಂಕ್‌ ಸ್ಥಾಪನೆಯಾದರೆ ₹ 3 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸಿಗುತ್ತದೆ. ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಇದನ್ನು ಘೋಷಣೆ ಮಾಡಿದ್ದರೂ ಇದುವರೆಗೂ ಅನುಷ್ಠಾನಕ್ಕೆ ಬಂದಿಲ್ಲ’ ಎನ್ನುತ್ತಾರೆ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ.

ಕಾನೂನು ಕಾಲೇಜು: ಜಿಲ್ಲಾ ನ್ಯಾಯಾಲಯ ಸೇರಿದಂತೆ ನ್ಯಾಯಾಂಗ ಇಲಾಖೆಯ ಹಲವು ಅಧೀನ ನ್ಯಾಯಾಲಯಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಕಾನೂನು ಕಾಲೇಜು ಸ್ಥಾಪನೆ ಅಗತ್ಯವಿದೆ ಎಂಬುದು ವಿದ್ಯಾರ್ಥಿಗಳ ಒಕ್ಕೊರಲ ಅಭಿಮತ. ಭಾರತೀಯ ಸೇನೆಯಲ್ಲಿ ಜಿಲ್ಲೆಯ ಅತಿಹೆಚ್ಚು ಮಂದಿ ಇದ್ದಾರೆ. ಹಾಗಾಗಿ ಸೈನಿಕ ಶಾಲೆ ಆರಂಭಿಸಿದರೆ, ಯುವಕರು ದೇಶಸೇವೆ ಮಾಡಲು ಅನುಕೂಲವಾಗುತ್ತದೆ.

ಹಿರೇಕೆರೂರಿಗೆ ಫಿಲ್ಮ್‌ಸಿಟಿ, ಹಾವನೂರ–ಹಾಂವಶಿ ಶಾಕಾರ ಮಧ್ಯೆ ಬೃಹತ್‌ ಸೇತುವೆ, ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಅನುದಾನ, ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ ಘಟಕ ಸ್ಥಾಪನೆಗೆ ಆದ್ಯತೆ, ಹಲವು ಕೆರೆಗಳ ಭರ್ತಿಗೆ ವಿಶೇಷ ಅನುದಾನ ಸೇರಿದಂತೆ ಹಲವಾರು ಸೌಲಭ್ಯಗಳು ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಸಿಗಲಿ ಎಂಬುದು ಜನರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT