ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ಜಿಎಸ್‌ಟಿ ಪಾಲು ಸಿಕ್ಕಿಲ್ಲ, ಅನುದಾನವೂ ಕಡಿತ: ಬಿ.ಎಸ್.ಯಡಿಯೂರಪ್ಪ

Last Updated 5 ಮಾರ್ಚ್ 2020, 5:58 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರದಿಂದ ಬರಬೇಕಿದ್ದ ಸುಮಾರು ₹ 11 ಸಾವಿರ ಕೋಟಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಪಾಲು ರಾಜ್ಯಕ್ಕೆ ಸಿಕ್ಕಿಲ್ಲ. ಅನುದಾನದಲ್ಲಿಯೂ ಸುಮಾರು ₹ 8 ಸಾವಿರ ಕೋಟಿ ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬಜೆಟ್ ಭಾಷಣದಲ್ಲಿ ಕೇಂದ್ರದಿಂದ ಬರಬೇಕಿರುವ ತೆರಿಗೆ ಪಾಲು ಮತ್ತು ಅನುದಾನದ ಬಗ್ಗೆ ಪ್ರಸ್ತಾಪಿಸಿದ ಅವರು, ‘ತೆರಿಗೆ ಮತ್ತು ಮಾಹಿತಿ ತಂತ್ರಜ್ಞಾನ ಆಧರಿತ ಉತ್ಪನ್ನಗಳ ಮೂಲಕ ಕರ್ನಾಟಕ ರಾಜ್ಯವು ದೇಶಕ್ಕೆ ಆದಾಯ ತಂದುಕೊಡುತ್ತಿದೆ. ಆದರೆ ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತಿಲ್ಲ’ ಎಂದು ಹೇಳಿದರು.

2019–20ರಲ್ಲಿ ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು ₹ 1,993 ಕೋಟಿಯಷ್ಟು ಕಡಿತವಾಗಿದೆ. ರಾಜಸ್ವ ಸಂಪನ್ಮೂಲ ಇಳಿಕೆಯಾಗಿದೆ. ಜಿಎಸ್‌ಟಿ ಉಪಕರದ ನಿರೀಕ್ಷಿತ ಸಂಗ್ರಹ ಖೋತಾ ಕಾರಣ ಸುಮಾರು ₹ 3000 ಕೋಟಿ ರೂಪಾಯಿ ರಾಜ್ಯದ ಪಾಲು ಕಡಿಮೆಯಾಗಿದೆ. ಹೀಗಾಗಿ ಅನಿವಾರ್ಯವಾಗಿ ಕೆಲ ಇಲಾಖೆಗಳ ವೆಚ್ಚ ಕಡಿಮೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

ಪ್ರಾದೇಶಿಕ ಅಸಮತೋಲನ ನಿವಾರಣೆ, ಕೃಷಿ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಕೌಶಲ ಅಭಿವೃದ್ಧಿ ಮೂಲಕ ನಿರುದ್ಯೋಗ ನಿವಾರಣೆಗೆ ಗಮನ ನೀಡುತ್ತಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

ನೆರೆ ಪರಿಹಾರಕ್ಕೆ ಆದ್ಯತೆ: ಪ್ರಕೃತಿಯ ಮುನಿಸು, ನೈಸರ್ಗಿಕ ವಿಕೋಪ ಪರಿಹಾರಕ್ಕೆ ಆದ್ಯತೆ ನೀಡಿದ್ದೇವೆ. ಒಂದೆಡೆ ನೆರೆ, ಮತ್ತೊಂದೆಡೆ ಬರವನ್ನು ರಾಜ್ಯ ಏಕಕಾಲಕ್ಕೆ ಎದುರಿಸಿತು. 7 ಲಕ್ಷ ಜನರ ಬದುಕಿಗೆ ತೊಂದರೆಯಾಯಿತು. 4.69 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾನಿಗೀಡಾಯಿತು. ರಸ್ತೆ, ಸೇತುವೆ, ಶಾಲೆ, ಅಂಗನವಾಡಿಗಳಿಗೆ ಹಾನಿಯಾಯಿತು. ₹ 35,160 ಕೋಟಿ ನಷ್ಟವಾಗಿದೆ. ಕೇಂದ್ರ ಸರ್ಕಾರ ₹ 1869 ಕೋಟಿ ನೀಡಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT