ಬುಧವಾರ, ಏಪ್ರಿಲ್ 21, 2021
23 °C
ಕೃಷಿ ವಲಯಕ್ಕೆ ₹31.021 ಕೋಟಿ ಅನುದಾನ

Karnataka Budget 2021: ಇಲ್ಲದ ಜನಪ್ರಿಯ ಘೋಷಣೆ, ಮೌಲ್ಯವರ್ಧನೆಗೆ ಒತ್ತು

ಎಸ್‌ ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

Prajavani

ಎಂದಿನಂತೇ ಹಸಿರು ಶಾಲು ಹೊದ್ದುಕೊಂಡು ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರನ್ನು ಖುಷಿಪಡಿಸುವ ಯಾವುದೇ ‘ಜನಪ್ರಿಯ’ ಕಾರ್ಯಕ್ರಮಗಳನ್ನು ಪ್ರಕಟಿಸಿಲ್ಲ. ಬದಲಿಗೆ ಕೃಷಿ ಕ್ಷೇತ್ರವನ್ನು ಮತ್ತೊಂದು ಹಂತಕ್ಕೆ ಮೇಲಕ್ಕೆತ್ತುವ ಪ್ರಯತ್ನ ಬಜೆಟ್‌ನಲ್ಲಿ ಗೋಚರಿಸುತ್ತದೆ.

ಚುನಾವಣಾ ವರ್ಷ ಅಲ್ಲದ ಕಾರಣ ಜನಪ್ರಿಯ ಘೋಷಣೆಗಳಿಗೆ ಮೊರೆ ಹೋಗಿಲ್ಲ. ಸಾಲ ಮನ್ನಾ ಪ್ರಸ್ತಾಪವಿಲ್ಲ. ಬದಲಿಗೆ ರೈತರಿಗೆ ಹೆಚ್ಚಿನ ಆದಾಯ ತರಬಹುದಾದ ಹಣ್ಣು– ತರಕಾರಿ, ದ್ವಿದಳ ಧಾನ್ಯಗಳು, ಸಾವಯವ ಕೃಷಿ, ಸಿರಿಧಾನ್ಯ ಮತ್ತು ಹೈಬ್ರೀಡ್‌ ತಳಿಗಳಿಗೆ ಸಂಬಂಧಿಸಿದ ವಿಷಯಗಳಿಗೇ ಹೆಚ್ಚಿನ ಒತ್ತು ನೀಡಲಾಗಿದೆ. ಹೆಚ್ಚು ಆದಾಯ ತರಬಲ್ಲ ಕೃಷಿ ಉತ್ಪನ್ನಗಳನ್ನು ಆದ್ಯತೆಯಾಗಿ ಸರ್ಕಾರ ಪರಿಗಣಿಸಿದೆ. ಕೃಷಿ ಯಾಂತ್ರೀಕರಣ, ನವೋದ್ಯಮಗಳಿಗೆ ಆದ್ಯತೆ ನೀಡುವ ಮೂಲಕ ಸಂಶೋಧನೆಗೂ ಪ್ರೋತ್ಸಾಹ ನೀಡಲಾಗಿದೆ. ಒಟ್ಟಿನಲ್ಲಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಸಂಬಂಧಿ ಕಾಯ್ದೆಗಳಿಗೆ ಪೂರಕವಾಗಿಯೇ ಬಜೆಟ್‌ ರೂಪುಗೊಂಡಿದೆ. ಕೃಷಿ ಮತ್ತು ಅದಕ್ಕೆ ಪೂರಕ ಚಟುವಟಿಕೆಗಳಿಗಾಗಿ ₹31,028 ಕೋಟಿ ಅನುದಾನ ನೀಡಿದೆ.

ರೈತರ ಜೇಬು ತುಂಬುವ ಕಾರ್ಯಕ್ರಮಗಳಿಗಿಂತ ಕೃಷಿ ಪದ್ಧತಿಯಲ್ಲಿ ನವೀನತೆ ಮತ್ತು ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ದೀರ್ಘ ಕಾಲದಲ್ಲಿ ಹೆಚ್ಚು ಆದಾಯ ತರುವ ಉತ್ಪನ್ನಗಳ ಬಗ್ಗೆ ಗಮನ ಕೇಂದ್ರೀಕರಿಸಿದಂತೆ ಕಾಣುತ್ತದೆ. ಹೀಗಾಗಿ ಸಾವಯವ ಮತ್ತು ಸಿರಿಧಾನ್ಯಗಳನ್ನು ವೈಜ್ಞಾನಿಕವಾಗಿ ಮಾರಾಟ ಮಾಡಲು ರೈತರಿಗೆ ಗರಿಷ್ಠ ಬೆಲೆ ದೊರಕಿಸಲು ರಾಷ್ಟ್ರೀಯ ಇ–ಮಾರುಕಟ್ಟೆ ಪ್ರೈವೇಟ್‌ ಲಿಮಿಟೆಡ್‌ ಮೂಲಕ ಅವಕಾಶ ನೀಡಲಾಗಿದೆ. ಆಧುನಿಕ ಕೃಷಿ ಮತ್ತು ಕೊಯ್ಲೋತ್ತರ ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸುವುದು, ವಿವಿಧ ಕೃಷಿ ಬೆಳೆಗಳನ್ನು ಒಕ್ಕಲು ಮಾಡಲು ಕಂಬೈನ್ಡ್‌ ಹಾರ್ವೆಸ್ಟರ್‌ಗಳನ್ನೂ ಪೂರೈಸುವ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ. ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನ ಯೋಜನೆಯನ್ನು ಇನ್ನು ಮುಂದೆ 25–45 ಪಿಟಿಒ ಎಚ್‌ಪಿ ಟ್ರ್ಯಾಕ್ಟರ್‌ಗಳಿಗೆ ವಿಸ್ತರಿಸಲು ಮುಂದಾಗಿದೆ.

ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಬೀಜ ಮತ್ತು ಹಸಿರೆಲೆ ಗೊಬ್ಬರ ವಿತರಣೆ ಮಾಡಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ ರಾಜ್ಯದಲ್ಲಿ ಆರಂಭಿಸಲಾಗುವುದು. ಇದಕ್ಕಾಗಿ ಐದು ವರ್ಷಗಳಿಗೆ ₹75 ಕೋಟಿ ನಿಗದಿ ಮಾಡಲಾಗಿದೆ. ಇದರಿಂದ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸಲು ರೈತರನ್ನು ಪ್ರೋತ್ಸಾಹಿಸುವುದು ಸರ್ಕಾರದ ಉದ್ದೇಶ.

ಅತಿ ಬೇಗನೆ ಹಾಳಾಗುವ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ, ಅವುಗಳನ್ನು ಹೆಚ್ಚು ಕಾಲ ಸಂಗ್ರಹಿಸಿಡುವುದು ಸವಾಲಿನ ಕೆಲಸ. ಇದಕ್ಕಾಗಿ ಶೀತಲಗೃಹ ನಿರ್ಮಾಣ, ಕೊಯ್ಲೊತ್ತರ ನಿರ್ವಹಣೆ ಮತ್ತು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆತ್ಮ ನಿರ್ಭರ ಭಾರತ ಅಭಿಯಾನದಡಿ ಶೇ35 ರಷ್ಟು ಸಹಾಯಧನ ನೀಡಲಾಗುತ್ತಿದೆ. ಈ ಪ್ರಮಾಣವನ್ನು ಶೇ50 ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಶೇ15 ರಷ್ಟು ಹೆಚ್ಚುವರಿ ಸಹಾಯ ಧನ ನೀಡಲು ಪ್ರಸ್ತಾಪಿಸಿದೆ. ಅಲ್ಪ ಪ್ರಮಾಣದ ಬಂಡವಾಳ ಹೂಡಿ ಈ ರೀತಿಯ ಚಟುವಟಿಕೆಗಳಲ್ಲಿ ತೊಡಗುವವರಿಗೆ ಇದರಿಂದ ಅನುಕೂಲವಾಗಲಿದೆ.

ರೈತರೇ ಸ್ಥಾಪಿಸಿದ ಸಹಕಾರ ಸಂಸ್ಥೆಗಳು ಮಾರಾಟ ಮಾಡುವ ತೋಟಗಾರಿಕೆ ಉತ್ಪನ್ನಗಳಿಗೆ ಏಕರೂಪದ ಬ್ರ್ಯಾಂಡಿಂಗ್ ಮತ್ತು ಮಾರಾಟ ಸೌಲಭ್ಯ ಒದಗಿಸಿ ಬ್ರ್ಯಾಂಡ್‌ ವ್ಯಾಲ್ಯೂ ಹೆಚ್ಚಿಸಲು ಕ್ರಮ. ಸಣ್ಣ ಮತ್ತು ಅತಿ ಸಣ್ಣ ರೈತರು ಕಡಿಮೆ ಜಮೀನಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಜತೆ ಉಪಕಸುಬುಗಳನ್ನು ಕೈಗೊಳ್ಳುವ ಮೂಲಕ ವರ್ಷವಿಡೀ ಆದಾಯ ಪಡೆಯಲು ‘ಸಮಗ್ರ ಕೃಷಿ ಪದ್ಧತಿ’ ಕಾರ್ಯಕ್ರಮ ಜಾರಿ ಮಾಡುವುದಾಗಿ ಹೇಳಿದೆ. ಹೈಬ್ರೀಡ್‌ ಬೀಜ ಮತ್ತು ಬೀಜ ತಂತ್ರಜ್ಞಾನ ರೈತರಿಗೆ ಒದಗಿಸಲು ‘ಹೊಸ ಹೈಬ್ರೀಡ್‌ ಬೀಜ ನೀತಿ’ ರೂಪಿಸುವ ಪ್ರಸ್ತಾಪವಿದೆ.

ಕೃಷಿ ವ್ಯಾಪ್ತಿ ಹೆಚ್ಚಿಸುವ ಆಶಯಕ್ಕೆ ಪೂರಕವಾಗಿ ನೀರಾವರಿ ಯೋಜನೆಗಳಿಗೂ ಆದ್ಯತೆ ನೀಡಲಾಗಿದೆ. ಆದರೆ ಇವ್ಯಾವುದೂ ಹೊಸ ಯೋಜನೆಗಳಲ್ಲ. ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3, ಕಳಸಾ ಬಂಡೂರಿ ನಾಲಾ ತಿರುವು ಯೋಜನೆ, ಎತ್ತಿನ ಹೊಳೆ, ಬೇಡ್ತಿ–ವರದಾ ನದಿ ಜೋಡಣೆ, ನವಲಿ ಬಳಿ ಸಮಾನಾಂತರ ಜಲಾಶಯ ಬೃಹತ್‌ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ವಿಶೇಷವೆಂದರೆ, ಐದು ಲಕ್ಷ ಹೆಕ್ಟೇರ್‌ಗೂ ಅಧಿಕ ಅಚ್ಚುಕಟ್ಟು ಪ್ರದೇಶಗಳಿಗೆ ಸೂಕ್ಷ್ಮ ಮತ್ತು ತುಂತುರು ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಹೇಳಿದೆ. ಇವುಗಳಲ್ಲಿ ಬಹುತೇಕ ಚಾಲ್ತಿಯಲ್ಲಿರುವ ಯೋಜನೆಗಳೇ ಆಗಿವೆ.

ಬೇಡ್ತಿ–ವರದಾ ನದಿಗಳ ಜೋಡಣೆ ಪ್ರಸ್ತಾಪ
ವಿವಿಧ ನೀರಾವರಿ ಯೋಜನೆಗಳಿಗೆ ₹20,996 ಕೋಟಿ ಅನುದಾನ ನೀಡಲಾಗಿದೆ. ವಿಶೇಷವಾಗಿ, ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯನ್ನು ಪ್ರಸ್ತಾಪಿಸಿದ್ದು, ಇದರಿಂದ ಒಟ್ಟು 22 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ವಿವಿಧ ಯೋಜನಾ ವರದಿಯನ್ನು ಎನ್‌ಡಬ್ಲ್ಯುಡಿಎ ಸಿದ್ಧಪಡಿಸುತ್ತಿದೆ. ಈ ಯೋಜನೆಯಿಂದ ಉತ್ತರ ಕರ್ನಾಟಕ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರು ಸರಬರಾಜಿಗೆ ಅವಕಾಶವಾಗುತ್ತದೆ ಎಂದು ಹೇಳಿದೆ.

ಅಲ್ಲದೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3 ನ್ನು‘ರಾಷ್ಟ್ರೀಯ ಯೋಜನೆ’ಗೆ ಮಾನ್ಯತೆ ಪಡೆಯುವುದರ ಜತೆಗೆ, ನೀರಾವರಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ₹5,600 ಕೋಟಿ ಅನುದಾನ ಒದಗಿಸಲಿದೆ.

ವಿಶ್ವಬ್ಯಾಂಕ್‌ ನೆರವಿನ ಡ್ರಿಪ್‌ ಯೋಜನೆಯಡಿ ₹15,000 ಕೋಟಿ ವೆಚ್ಚದಲ್ಲಿ 58 ಅಣೆಕಟ್ಟುಗಳ ಪುನಶ್ಚೇತನ ಮತ್ತು ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುವುದು. ಜಲಸಂಪನ್ಮೂಲ ಇಲಾಖೆಯಡಿ ಐದು ಲಕ್ಷ ಹೆಕ್ಟೇರ್‌ಗೂ ಅಧಿಕ ಅಣೆಕಟ್ಟು ಪ್ರದೇಶಗಳಿಗೆ ಸೂಕ್ಷ್ಮ ಮತ್ತು ತುಂತುರು ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು.

‘ಪಶ್ಚಿಮವಾಹಿನಿ’ ಯೋಜನೆಗೆಯಡಿ ₹3,986 ಕೋಟಿ ವೆಚ್ಚದಲ್ಲಿ 5 ವರ್ಷಗಳಲ್ಲಿ 1,348 ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಕರಾವಳಿ ಮತ್ತು ಉತ್ತರಕನ್ನಡದಲ್ಲಿ ಸಮುದ್ರದ ಅಲೆಗಳಿಂದ ಉಪ್ಪು ನೀರು ಹಿಮ್ಮುಖವಾಗಿ ನುಗ್ಗುವುದನ್ನು ತಡೆಯಲು ₹300 ಕೋಟಿ ವೆಚ್ಚದಲ್ಲಿ ಖಾರ್‌ ಲ್ಯಾಂಡ್‌ ಯೋಜನೆ ಜಾರಿ.

ಬಜೆಟ್‌: ಪ್ರಮುಖಾಂಶಗಳು

* ಕೃಷಿ ಆದಾಯವನ್ನು 2023ರ ಹೊತ್ತಿಗೆ ದ್ವಿಗುಣಗೊಳಿಸಲು ಸರ್ಕಾರ ಬದ್ಧ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಈವರೆಗೆ 53 ಲಕ್ಷಕ್ಕೂ ಹೆಚ್ಚು ರೈತರಿಗೆ ಆರ್ಥಿಕ ನೆರವು ವರ್ಗಾಯಿಸಲಾಗಿದೆ.

* ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಗೆ ₹ 900 ಕೋಟಿ ಹಾಗೂ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ₹831 ಕೋಟಿ ಅನುದಾನ

* ಆರೋಗ್ಯಕರ ಮತ್ತು ರಾಸಾಯನಿಕ ಮುಕ್ತ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ದೊರಕಿಸಲು ಹಾಗೂ ಸಾವಯವ ಕೃಷಿ ಉತ್ತೇಜಿಸಲು ₹500 ಕೋಟಿ ಮೊತ್ತದ ಯೋಜನೆ

* ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ನೀಡುತ್ತಿರುವ ಮೀಸಲಾತಿ ಪ್ರಮಾಣ ಶೇ 40 ರಿಂದ ಶೇ 50ಕ್ಕೆ ಹೆಚ್ಚಳ

* ತೋಟಗಾರಿಕಾ ಬೆಳೆಗಾರರ ಆರ್ಥಿಕ ಅಭಿವೃದ್ಧಿಗೆ ನೆರವು ನೀಡಲು ಕೊಪ್ಪಳ ತಾಲ್ಲೂಕಿನ ಸಿರಿವಾರ ಗ್ರಾಮದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್‌ ಅಭಿವೃದ್ಧಿ

* ಸಮಗ್ರ ಕೃಷಿ ಪದ್ಧತಿ ಕಾರ್ಯಕ್ರಮ ಅನುಷ್ಠಾನ

* ಹೊಸ ಹೈಬ್ರಿಡ್‌ ಬೀಜ ನೀತಿ ಅಸ್ತಿತ್ವಕ್ಕೆ

* ಅಡಿಕೆ ಬೆಳೆಗಾರರನ್ನು ಬಾಧಿಸುತ್ತಿರುವ ಹಳದಿ ಎಲೆ ರೋಗ ಕುರಿತು ಸಂಶೋಧನೆ ಹಾಗೂ ಪರ್ಯಾಯ ಬೆಳೆ ಪ್ರೋತ್ಸಾಹಿಸಲು ₹25 ಕೋಟಿ ಮೊತ್ತದ ಯೋಜನೆ

* ಸುವಾಸನೆಯುಕ್ತ ಹಾಗೂ ವೈದ್ಯಕೀಯ ಗಿಡಗಳು, ತರಕಾರಿ, ಹಣ್ಣು–ಹಂಪಲು, ಸಾಂಬಾರ ಪದಾರ್ಥಗಳಿಗಾಗಿ ಹೊಸ ಕೃಷಿ ರಫ್ತು ವಲಯ ಸ್ಥಾಪನೆ. ರಫ್ತಿಗೆ ಅನುವಾಗುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯ

* ಕರ್ನಾಟಕ ದ್ರಾಕ್ಷಾರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿಯನ್ನಾಗಿ ಪುನರ್‌ ರಚನೆ

* ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಚಾಮರಾಜನಗರದಲ್ಲಿ ಅರಿಶಿಣ ಮಾರುಕಟ್ಟೆ ಅಭಿವೃದ್ಧಿ

* ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ₹4 ಕೋಟಿ ವೆಚ್ಚದಲ್ಲಿ ಆಧುನಿಕ ಗುಣವಿಶ್ಲೇಷಣಾ ಘಟಕ ಸ್ಥಾಪನೆ

* ಕಳಸಾ– ಬಂಡೂರಿ ನಾಲಾ ತಿರುವು ಯೋಜನೆಗಳಿಗೆ ಹಂಚಿಕೆಯಾದ ನೀರಿನ ಬಳಕೆಗೆ ₹1677 ಕೋಟಿ ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ

* ಭದ್ರಾ ಮೇಲ್ದಂಡೆ ಯೋಜನೆಯ ₹21,474 ಕೋಟಿ ಮೊತ್ತದ ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ

* ಕೃಷ್ಣಾ ಭಾಗ್ಯ ಜಲ ನಿಗಮ ನಿಮಿಯತಕ್ಕೆ ₹5,600 ಕೋಟಿ ಅನುದಾನ

* ಕಟ್ಟಡ ಕಾರ್ಮಿಕರ ಮಕ್ಕಳ ಸಂರಕ್ಷಣೆಗಾಗಿ ಹೆಚ್ಚುವರಿಯಾಗಿ 100 ಕಿತ್ತೂರು ರಾಣಿ ಚೆನ್ನಮ್ಮ ಶಿಶು ಪಾಲನಾ ಕೇಂದ್ರಗಳ ಸ್ಥಾಪನೆ

* ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ 25 ಸಂಚಾರಿ ಆರೋಗ್ಯ ತಪಾಸಣಾ ಕೇಂದ್ರಗಳ ಆರಂಭ

* ನಿರ್ಮಾಣ ಕಾರ್ಮಿಕರಿಗೆ ವಸತಿ ಸೌಲಭ್ಯ

* ಗ್ರಾಮೀಣ ಪ್ರದೇಶದ ಯುವತಿಯರನ್ನು ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ 1000 ಯುವತಿಯರಿಗೆ ಮೃದು ಕೌಶಲ (ಸಾಫ್ಟ್‌ ಸ್ಕಿಲ್‌), ಸಂವಹನ ಕೌಶಲ, ವ್ಯಕ್ತಿತ್ವ ವಿಕಸನ ತರಬೇತಿ

* ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ. 2021–2022ನೇ ಸಾಲಿನಲ್ಲಿ 22 ಲಕ್ಷ ಗ್ರಾಮೀಣ ಕುಟುಂಬಗಳಿಗೆ ₹4316 ಕೋಟಿ ವೆಚ್ಚದಲ್ಲಿ ನಳಗಳ ಸಂಪರ್ಕ, 2022–2023ನೇ ಸಾಲಿನಲ್ಲಿ 21 ಲಕ್ಷ ಕುಟುಂಬಗಳಿಗೆ ₹3172 ಕೋಟಿ ವೆಚ್ಚದಲ್ಲಿ ನಳ್ಳಗಳ ಸಂಪರ್ಕ. ₹25,740 ಕೋಟಿ ವೆಚ್ಚದಲ್ಲಿ ಶಾಶ್ವತ ನೀರಿನ ಮೂಲಗಳಿಂದ ಸಗಟು ನೀರು ಪೂರೈಕೆ

* 5622 ಗ್ರಾಮೀಣ ಗ್ರಂಥಾಲಯಗಳನ್ನು ಗ್ರಾಮೀಣ ಮಾಹಿತಿ ಮತ್ತು ಜ್ಞಾನ ಕೇಂದ್ರಗಳನ್ನಾಗಿ ಉನ್ನತೀಕರಣ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು