ಮಂಗಳವಾರ, ಏಪ್ರಿಲ್ 13, 2021
28 °C

Karnataka Budget 2021: ಶ್ರಮಿಕ ವರ್ಗ ಮರೆತ ಬಿಎಸ್‌ವೈ

ವಿನಯ್‌ ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಸಾರ್ವಜನಿಕ ಆರೋಗ್ಯಕ್ಕೆ ಮುಂಚೆಗಿಂತ ಸ್ವಲ್ಪ ಹೆಚ್ಚು ಒತ್ತು ಕೊಟ್ಟಿರುವುದು ಬಜೆಟ್‌ನ ಸ್ವಾಗತಾರ್ಹ ಅಂಶ. ಇದು ಬಿಟ್ಟರೆ ಶ್ರಮಿಕ ಸಮುದಾಯಕ್ಕೆ ಕೇವಲ ನಿರಾಶೆ ತರುವ ಬಜೆಟ್‌.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಇತ್ತೀಚಿನ ಸಂಶೋಧನಾ ವರದಿಯ ಪ್ರಕಾರ, ನಗರದ ಅಸಂಘಟಿತ ಕ್ಷೇತ್ರದ ಕಾರ್ಮಿಕರಲ್ಲಿ ಶೇ 46ರಷ್ಟು ಮಂದಿಯ ಆದಾಯ ಕಡಿಮೆಯಾಗಿದೆ. ಈಗಲೂ ಶೇ 15ರಷ್ಟು ಕಾರ್ಮಿಕರು ಕೆಲಸವಿಲ್ಲದೆ ಇದ್ದಾರೆ. ಇದು ಇಡೀ ರಾಜ್ಯದ ಪರಿಸ್ಥಿತಿಯೂ ಹೌದು. ಈ ಸಮಸ್ಯೆ ಪರಿಹರಿಸುವ ಗೋಜಿಗೆ ಮುಖ್ಯಮಂತ್ರಿ ಹೋದಂತಿಲ್ಲ.

ನಗರದಲ್ಲಿ ಸಾವಿರಾರು ಮಕ್ಕಳು ಶಾಲೆ ಬಿಟ್ಟಿದ್ದಾರೆ - ಅವರನ್ನು ಮತ್ತೆ ಶಾಲೆಗೇ ಕರೆ ತರುವುದು ಹೇಗೆ ಎನ್ನುವುದರ ಬಗ್ಗೆ ಒಂದು ಪದವಿಲ್ಲ. ಒಂದು ವರ್ಷ ಕಲಿಕೆ ಕಳೆದುಕೊಂಡ ಮಕ್ಕಳ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲ. ಲಾಕ್‌ಡೌನ್‌ ಸಮಯದಲ್ಲಿ ಊರಿಗೆ ನಡೆದುಕೊಂಡೇ ಹೋಗುತ್ತಾ ಮೃತಪಟ್ಟ ಗಂಗಮ್ಮ ಅವರನ್ನು, ಲಕ್ಷಾಂತರ ವಲಸೆ ಕಾರ್ಮಿಕರನ್ನು ಸರ್ಕಾರ ಮರೆತಿದೆ. ಅವರಿಗೆ ಉತ್ತರ ಬೆಂಗಳೂರಿನಲ್ಲಿ ಒಂದು ಆಸ್ಪತ್ರೆಯನ್ನಷ್ಟೇ ಘೋಷಿಸಿದೆ. ಆದರೆ, ಅದಕ್ಕೆ ಎಷ್ಟು ಹಣ ಹಂಚಿಕೆ ಮಾಡಲಾಗಿದೆ ಎಂಬ ವಿವರವಿಲ್ಲ. ನೋಂದಾಯಿಸಿದ ಕಟ್ಟಡ ಕಾರ್ಮಿಕರಿಗೆ ಕೆಲವು ಸಣ್ಣ ಪುಟ್ಟ ಯೋಜನೆಗಳಿವೆ. ಲಕ್ಷಾಂತರ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಆಗಿಲ್ಲ. ಅವರ ಬಗ್ಗೆ ಚಕಾರ ಎತ್ತಿಲ್ಲ. 

ಇಡೀ ಬಜೆಟ್‌ನಲ್ಲಿ ಶ್ರೀಮಂತರಿಗೆ ನೆರವಿನ ಘೋಷಣೆಗಳಿವೆ. ಬಡವರಿಗೆ ಚಿಕ್ಕಾಸಷ್ಟೇ ನೀಡಲಾಗಿದೆ. ಹೊರವರ್ತುಲ ರಸ್ತೆಯ ಮೆಟ್ರೊಗೆ ₹1600 ಕೋಟಿ ಬಿಡುಗಡೆ ಮಾಡಿದ ಸರ್ಕಾರ, ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸಲು ಅಥವಾ ದರ ಕಡಿಮೆ ಮಾಡಲು ಆರ್ಥಿಕ ಸಹಾಯ ನೀಡಿಲ್ಲ. ಕಳೆದ ವರ್ಷಗಳಂತೆ ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಕಡಿಮೆ ದರದ ಬಸ್ ಪಾಸ್ ಬಗ್ಗೆ ಘೋಷಣೆ ಇದೆ. ಈ ಹಣ ರಾಜ್ಯ ಸರ್ಕಾರದಲ್ಲ -ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಗಮದ್ದು– ಅಂದರೆ ಕಾರ್ಮಿಕರದ್ದು!

ನವೋದ್ಯಮಗಳು, ಬೆಂಗಳೂರಿನ ವಿಮಾನ ನಿಲ್ದಾಣದ ಬಗ್ಗೆ ಮಾತನಾಡುವ ಬಜೆಟ್‌ - ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಮಿಕರು, ಪೌರಕಾರ್ಮಿಕರು, ಗೃಹ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳ ಕುರಿತು ಮೌನವಾಗಿದೆ. ಕೋವಿಡ್ ಸೋಂಕು ಹಾಗೂ ಲಾಕ್‌ಡೌನ್‌ನಿಂದ ನಗರದ ಬಡವರು ಇನ್ನೂ ನರಳುತ್ತಿದ್ದಾರೆ. ಅವರ ಬಗ್ಗೆ ಬಜೆಟ್‌ನಲ್ಲಿ ಗಮನವನ್ನೇ ನೀಡಿಲ್ಲ.

–ಬೀದಿಬದಿ ವ್ಯಾಪಾರಿಗಳ ಸಂಘಟನೆ ಸದಸ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು