ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2022: ಬೊಮ್ಮಾಯಿ ಬಜೆಟ್ ಬಗ್ಗೆ ಯಾರು ಏನಂದರು?

Last Updated 4 ಮಾರ್ಚ್ 2022, 18:28 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. 2022–23ನೇ ಸಾಲಿನ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಜೆಟ್ ಬಗ್ಗೆ ಪ್ರಮುಖ ರಾಜಕೀಯ ನಾಯಕರು ಏನಂದರು ಎಂಬುದು ಇಲ್ಲಿದೆ;

ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಬಜೆಟ್‌ನಲ್ಲಿ ₹1,000 ಕೋಟಿ ಅನುದಾನ ಘೋಷಿಸಿರುವುದು ಸ್ವಾಗತಾರ್ಹ. ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ. ಆದರೆ, ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು.
– ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

**

ಇದು ಆರ್ಥಿಕ ಚೇತರಿಕೆ ಬಜೆಟ್ ಅಲ್ಲ. ಚುನಾವಣೆ ಕೇಂದ್ರಿತ ಬಜೆಟ್ ಅಷ್ಟೇ. ಇಂದು ಮುಖ್ಯಮಂತ್ರಿಗಳು ಹೇಳಿರುವುದೆಲ್ಲಾ ಕೇವಲ ಘೋಷಣೆಗೇ ಸೀಮಿತವಾಗಿರಲಿದೆ.
-ಪ್ರಿಯಾಂಕ್‌ ಖರ್ಗೆ, ಕಾಂಗ್ರೆಸ್‌ ಶಾಸಕ

**

ಸಾಂಕ್ರಾಮಿಕದ ಸವಾಲುಗಳ ನಿರ್ವಹಣೆಯ ನಡುವೆ ಈ ಬಜೆಟ್ ಅತ್ಯಂತ ಆಶಾದಾಯಕವಾಗಿದೆ. ರೈತರು, ನೀರಾವರಿ, ಮೂಲಸೌಕರ್ಯ, ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಅಧಿಕ ಹೂಡಿಕೆಗೆ ಆದ್ಯತೆಯ ಜೊತೆಗೆ ಯುವಶಕ್ತಿ, ಮಹಿಳೆಯರು ಮತ್ತು ದುರ್ಬಲ ವರ್ಗಗಳ ಜನರ ಸಬಲೀಕರಣಕ್ಕೆ ಉತ್ತೇಜನ ನೀಡಲಾಗಿದೆ.
- ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಶಾಸಕ

**
ರಾಜ್ಯ ಬಜೆಟ್‌ನಲ್ಲಿ ನಿರುದ್ಯೋಗದ ಬಗ್ಗೆ ಚಕಾರವಿಲ್ಲ:

‘ಕೋವಿಡ್‌ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಇದರಿಂದ ಜನರನ್ನು ಪಾರುಮಾಡುವ ಕುರಿತು ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಚಕಾರ ಎತ್ತಿಲ್ಲ. ಯುವಜನರು ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಇದಕ್ಕೆ ಪರಿಹಾರ ಕ್ರಮಗಳನ್ನು ‍ಪ್ರಕಟಿಸಬಹುದು ಎಂದು ನಿರೀಕ್ಷಿಸಿದ್ದೆ. ಜನರೂ ಇದನ್ನೇ ನಿರೀಕ್ಷಿಸಿದ್ದರು. ಆದರೆ, ಮುಖ್ಯಮಂತ್ರಿಯವರು ಮೌನ ತಾಳಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಇದೆ.’

ರಾಜ್ಯದಲ್ಲಿ ಕೋವಿಡ್‌ನಿಂದ ಆಗಿರುವ ಅನಾಹುತವನ್ನು ಸರಿಪಡಿಸುವ ಕುರಿತಂತೆಮುಖ್ಯಮಂತ್ರಿಯವರು ಯೋಚಿಸಿಯೇ ಇಲ್ಲ. ಆದರೆ, ಸಂಕಷ್ಟ ಕಾಲದಲ್ಲೂ ಹೆಚ್ಚು ಆದಾಯವನ್ನು ಅವರು ನಿರೀಕ್ಷಿಸಿದ್ದಾರೆ.

‘ಬಜೆಟ್‌ ಅನ್ನು ವಲಯವಾರು ವಿಂಗಡಿಸಿ, ‘ಮಿಕ್ಸರ್‌ ಗ್ರೈಂಡರ್‌’ನಲ್ಲಿ ಹಾಕಿ ರುಬ್ಬಿದಂತೆ ಮಾಡಿದ್ದಾರೆ. ಯಾರಿಗೂ ಏನೂ ಕಾಣದಂತೆ ಆಗಿದೆ. ಮೀಸಲು ಅರಣ್ಯ ಪ್ರದೇಶ ‘ಜಾರಕ್‌ ಬಂಡೆ’ಯಲ್ಲಿ ಉದ್ಯಾನ ನಿರ್ಮಿಸುವಂತಹ ಬಾಲಿಶ ಯೋಜನೆಗಳೇ ತುಂಬಿವೆ. ಕಾಂಗ್ರೆಸ್‌ನವರನ್ನು ಖುಷಿಪಡಿಸಲು ಮೇಕೆದಾಟು ಯೋಜನೆಗೆ ₹ 1,000 ಕೋಟಿ ಘೋಷಿಸಿರಬಹುದು.
–ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

**
ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಜೆಟ್ ಉತ್ತಮವಾಗಿದೆ. ರಾಜ್ಯದ ಮೂಲಭೂತ ಸೌಲಭ್ಯ, ವಸತಿ, ಶಿಕ್ಷಣ, ಆರೋಗ್ಯ, ವಾಣಿಜ್ಯ, ಕೈಗಾರಿಕೆಗಳ ಅಭಿವೃದ್ಧಿಗೆ ಸಮರ್ಪಕ ಅನುದಾನಗಳನ್ನು ನೀಡಲಾಗಿದ್ದು, ಭವಿಷ್ಯದ ನಗರ, ಗ್ರಾಮಾಂತರ ಪ್ರದೇಶಗಳ ಏಳಿಗೆಗೆ ಮಾದರಿಯಾಗಿರುವ ಬಜೆಟ್ ಅನ್ನು ಅವರು ಮಂಡಿಸಿದ್ದಾರೆ.
– ನಳಿನ್ ಕುಮಾರ್ ಕಟೀಲ್, ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ

ಕೋವಿಡ್ ನಂತರ ಇದ್ದ ಆರ್ಥಿಕ ಸವಾಲುಗಳ ಮಧ್ಯೆ, ಕಲ್ಯಾಣ ಯೋಜನೆಗಳಿಗೆ ಏನೂ ಕಡಿಮೆ‌ ಆಗದಂತೆ ಮಾಡಿರುವ ಉತ್ತಮ ಲೆಕ್ಕಾಚಾರವಿದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಚೊಚ್ಚಲ ಹಾಗೂ ಉತ್ತಮ ಬಜೆಟ್‌ಗೆ ನನ್ನ ಅಭಿನಂದನೆಗಳು. ಇದು ದೂರದೃಷ್ಟಿಯ ಸಮತೋಲಿತ ಬಜೆಟ್.
– ಶ್ರೀರಾಮುಲು, ಸಚಿವ

**
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಏನೂ ವಿಶೇಷವಿಲ್ಲ. ನಿರಾಶಾದಾಯಕವಾಗಿದ್ದು, ಪ್ರತಿ ಬಾರಿಯಂತೆಯೇ ಬೆಳಗಾವಿ ಜಿಲ್ಲೆಗೆ ಕಡೆಗಣಿಸಲಾಗಿದೆ. ಕೋವಿಡ್ ಲಾಕ್‌ಡೌನ್ ಸಂಕಷ್ಟದಿಂದ ಜನತೆ ಇನ್ನೂ ಚೇತರಿಸಿಕೊಂಡಿಲ್ಲ. ಅವರ ನೆರವಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಜನರ ನಿರೀಕ್ಷೆ ಹುಸಿಯಾಗಿದೆ.
- ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

**
ನವಭಾರತಕ್ಕಾಗಿ ನವಕರ್ನಾಟಕ. ಆರೋಗ್ಯ ಕರ್ನಾಟಕ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳು.
–ಡಾ.ಕೆ. ಸುಧಾಕರ್,ಆರೋಗ್ಯ ಸಚಿವ

**

ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ
ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಗರಿಷ್ಠ ₹1 ಲಕ್ಷ ಕೋಟಿ ಅನುದಾನದ ಅಗತ್ಯವಿದೆ. ಎಲ್ಲವು ಗೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಕೇವಲ₹ 5 ಸಾವಿರ ಕೋಟಿ ನೀಡಿರುವುದು ನಿರಾಸೆ ಮೂಡಿಸಿದೆ. ಆಲಮಟ್ಟಿ ಜಲಾಶಯವವನ್ನು 524 ಮೀಟರ್‌ಗೆ ಎತ್ತರಿಸಸಲು 20 ಹಳ್ಳಿಗಳ ಸ್ಥಳಾಂತರ ಆಗಬೇಕು. ಈ ಹಣದಲ್ಲಿ ಒಂದು ಹಳ್ಳಿ ಸ್ಥಳಾಂತರವೂ ಕಷ್ಟ. ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆಯಾಗಿದೆ ಅನುಸರಿಸಲಾಗಿದೆ.
–ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ನೀರಾವರಿ ತಜ್ಞ, ಸಂಶೋಧಕ, ವಿಜಯಪುರ

**

ಕೋಟ್ಯಂತರ ಜನರು ತೊಡಗಿಸಿಕೊಂಡಿರುವ ಕೃಷಿಗೆ ₹33,700 ಕೋಟಿ, ಮೆಟ್ರೊಗೆ ₹ 16 ಸಾವಿರ ಕೋಟಿ ಹಂಚಿಕೆ ಯಾಗಿದೆ. ಸರ್ಕಾರದ ಆದ್ಯತೆಯನ್ನು ಈ ಅಂಕಿಗಳೇ ಹೇಳುತ್ತವೆ. ರೈತರ ಮೂಲಸಮಸ್ಯೆ ಗಳಿಗೆ ಪರಿಹಾರದ ಪ್ರಸ್ತಾಪವಿಲ್ಲ. ಬೆಲೆ ಭದ್ರತೆಯ ಬಗ್ಗೆ ಮಾತನಾಡಿಲ್ಲ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದಿರುವ ಮುಖ್ಯಮಂತ್ರಿ ಪೂರಕ ಕಾರ್ಯಕ್ರಮಗಳನ್ನು ಉಲ್ಲೇಖಿಸಿಲ್ಲ. ‘ರೈತ ಶಕ್ತಿ’ ಯೋಜನೆಯಡಿ ಎಕರೆಗೆ ₹ 250 ತೆ ಡೀಸೆಲ್‌ ಅನುದಾನದಿಂದ ಹೆಚ್ಚು ಪ್ರಯೋಜನವಿಲ್ಲ. ಹರಿಯಾಣದ ಮಾದರಿಯಲ್ಲಿ ಕಿಸಾನ್‌ ಪೆಟ್ರೋಲ್‌ ಬಂಕ್‌ ಸ್ಥಾಪನೆ ಆದರಷ್ಟೇ ಅನುಕೂಲ. ಯಶಸ್ವಿನಿ ಯೋಜನೆಗೆ ಜಮೀನು ರಹಿತ ರೈತರು, ರೈತ ಮಹಿಳೆಯರನ್ನೂ ಸೇರಿಸಬೇಕು.
–ಚುಕ್ಕಿ ನಂಜುಂಡಸ್ವಾಮಿ, ಕಾರ್ಯಾಧ್ಯಕ್ಷೆ ರೈತಸಂಘ–ಹಸಿರುಸೇನೆ, ಚಾಮರಾಜ ನಗರ

**

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ₹ 3 ಸಾವಿರ ಕೋಟಿ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ ₹ 12 ಸಾವಿರ ಕೋಟಿ ಘೋಷಿಸಿತ್ತು. ಹೀಗೆ ಹಣ ಘೋಷಿಸುವುದು ಸರ್ಕಾರಗಳಿಗೆ ಫ್ಯಾಷನ್‌ ಆಗಿದೆ. ಆದರೆ, ಘೋಷಿಸಿದ್ದನ್ನುಆಯಾ ವರ್ಷದಲ್ಲೇ ಬಳಸುವ ಇಚ್ಛಾಶಕ್ತಿ ತೋರುವುದಿಲ್ಲ.ತುಂಗಾ ಜಲಾಶಯದಿಂದ 29.5 ಟಿಎಂಸಿ ಅಡಿ ನೀರು ಲಿಫ್ಟ್‌ ಮಾಡಲು ಆದ್ಯತೆ ನೀಡಬೇಕು. ದಶಕಗಳು ಕಳೆದರೂ ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಯದೆ ಅಚ್ಚುಕಟ್ಟುದಾರರ ಮಧ್ಯೆಯೇ ಸಂಘರ್ಷಕ್ಕೆ ದಾರಿಯಾಗಿದೆ. ಕೆರೆಗಳ ತುಂಬಿಸುವ ಯಾವ ಕಾಮಗಾರಿಗೆ ಹಣ ಬಳಸಲಾಗುತ್ತದೆ ಎಂದು ಸ್ಪಷ್ಟತೆ ಇಲ್ಲ.
–ಎಚ್‌.ಆರ್. ಬಸವರಾಜಪ್ಪ, ರೈತ ಮುಖಂಡ, ಶಿವಮೊಗ್ಗ

**

ಕೃಷಿ ಯಂತ್ರೋಪಕರಣ ಬಳಕೆಗೆ ಎಕರೆಗೆ ₹ 250 ಸಹಾಯಧನ ನೀಡುವ ‘ರೈತ ಶಕ್ತಿ’ ಯೋಜನೆಯ ಘೋಷಣೆಯಿಂದ ಅತಿಸಣ್ಣ, ಸಣ್ಣ ರೈತರಿಗೆ ಅನುಕೂಲ. ಎರಡು ಕಡೆ ಕೃಷಿ ವಿ.ವಿ ಸ್ಥಾಪನೆಯಿಂದ ಕೃಷಿ ಅಧ್ಯಯನ, ಸಂಶೋಧನೆಗೆ ಮತ್ತಷ್ಟು ಆದ್ಯತೆ ಸಿಗಲಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರ ಕೆರೆಗಳ ಅಭಿವೃದ್ಧಿಗೆ ₹ 100 ಕೋಟಿ ಘೋಷಣೆಯೂ ಒಳ್ಳೆಯ ಬೆಳವಣಿಗೆ. ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಪಡೆಯುವ ಪ್ರಸ್ತಾಪವು ನೀರಾವರಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಸಹಕಾರಿಯಾಗಲಿದೆ. ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ನಿರ್ದಿಷ್ಟ ಯೋಜನೆಯ ಪ್ರಸ್ತಾಪ ಇಲ್ಲದಿರುವುದು ಕೊರತೆಯಾಗಿದೆ.
–ಡಾ.ಕೆ.ಕಲಾವತಿ, ಸಹ ಪ್ರಾಧ್ಯಾಪಕಿ, ವಾಣಿಜ್ಯ ವಿಭಾಗ, ಐಡಿಎಸ್‌ಜಿ ಕಾಲೇಜು, ಚಿಕ್ಕಮಗಳೂರು

**

‘ಯಶಸ್ವಿನಿ’ ಯೋಜನೆ ಪುನರಾರಂಭಿಸಿದ್ದು ಸ್ವಾಗತಾರ್ಹ. ತೊಗರಿಬೇಳೆಯನ್ನು ‘ಭೀಮಾ ಪಲ್ಸ್‌’ ಹೆಸರಿನಲ್ಲಿ ಬ್ರ್ಯಾಂಡ್‌ ರೂಪದಲ್ಲಿ ಮಾರಾಟ ಮಾಡುವುದು ಹಾಗೂ ವಿಜಯಪುರದಲ್ಲಿ ಅತ್ಯಾಧುನಿಕ ದ್ರಾಕ್ಷಾರಸ ಶೈತ್ಯಾಗಾರ ನಿರ್ಮಾಣ ಸ್ವಾಗತಾರ್ಹ. ಆದರೆ, ರಾಜ್ಯದಲ್ಲಿ ಒಂದು ಸೆಕೆಂಡರಿ ಕೃಷಿ ವಿಶ್ವವಿದ್ಯಾಲಯ ಹಾಗೂ ಬಳ್ಳಾರಿ ಜಿಲ್ಲೆಗೆ ಪ್ರತ್ಯೇಕ ಕೃಷಿ ಕಾಲೇಜು ಸ್ಥಾಪನೆ ಅನಗತ್ಯ. ಬದಲಿಗೆ ಪ್ರತಿ ಜಿಲ್ಲೆಗೆ ಒಂದು ಕೃಷಿ ಕಾಲೇಜು ನೀಡಬೇಕಿತ್ತು. ಹೋಬಳಿ ಮಟ್ಟದಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್‌ ಶಿಕ್ಷಣ ನೀಡಲುಒತ್ತು ನೀಡಿದ್ದರೆ ಹೊಸ ತಲೆಮಾರು ಜಮೀನಿನತ್ತ ಮರಳಲು ಉತ್ತೇಜನ ನೀಡಿದಂತಾಗುತ್ತಿತ್ತು.
–ಸಿದ್ರಾಮಪ್ಪ ಪಾಟೀಲ ದಂಗಾಪುರ,ಅಧ್ಯಕ್ಷ, ಜಿಲ್ಲಾ ಕೃಷಿಕ ಸಮಾಜ, ಕಲಬುರಗಿ

**
ಕೊಟ್ಟಿರುವ ಅನುದಾನ ಸಾಲದು
ಎತ್ತಿನಹೊಳೆ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಅನುದಾನ ಯಾವುದಕ್ಕೂ ಸಾಲದು. ಬೃಹತ್‌ ಯೋಜನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ನೀಡಬೇಕಿತ್ತು. ಎತ್ತಿನಹೊಳೆ ಯೋಜನೆಗೆ ಕನಿಷ್ಠ ₹ 10 ಸಾವಿರ ಕೋಟಿ ಒದಗಿಸ
ಬೇಕಿತ್ತು. ಹೀಗೆ ಅನುದಾನ ಹಂಚಿಕೆಯಾದರೆ ಯೋಜನೆ ಮುಗಿಸಲು 15 ವರ್ಷ ಬೇಕಾಗುತ್ತವೆ. ಯೋಜನೆಯ ಅಂದಾಜು ವೆಚ್ಚ ಸುಮಾರು ₹10 ಸಾವಿರ ಕೋಟಿ ಆಗಿತ್ತು. ಯೋಜನೆ ಮುಗಿಯುವ ಹೊತ್ತಿಗೆ ₹ 30 ಸಾವಿರ ಕೋಟಿ ದಾಟಬಹುದು. ಇಷ್ಟು ಕಡಿಮೆ ಹಣ ಸಾಕಾಗದು.
–ವೇದಾನಂದಮೂರ್ತಿ, ನೀರಾವರಿ ತಜ್ಞ, ತುಮಕೂರು

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT