ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಜೆಟ್‌ 2023| ‘ಅಹಿಂದ’ ಓಲೈಕೆಗೆ ‘ಪ್ರಸಾದ’

Last Updated 17 ಫೆಬ್ರುವರಿ 2023, 19:00 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆಯ ಹೊಸ್ತಿಲಲ್ಲಿ ‘ಮತ ಬೇಟೆ’ಯ ಮೇಲೆ ಕಣ್ಣಿಟ್ಟು ಅಲ್ಪಸಂಖ್ಯಾತ, ಹಿಂದುಳಿದ, ದಲಿತ (ಅಹಿಂದ) ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಬಸವರಾಜ ಬೊಮ್ಮಾಯಿ ಸಾಕಷ್ಟು ಕೊಡುಗೆಗಳನ್ನು ಘೋಷಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ವಿಶೇಷವಾಗಿ, ಮುಸ್ಲಿಂ ಸಮುದಾಯವನ್ನು ತೃಪ್ತಿಪಡಿಸಲು ಅವರು ಯತ್ನಿಸಿದ್ದಾರೆ.

ಈ ಮೂರು ವರ್ಗಗಳಿಗೆ ಸೇರಿದ 10 ಸಾವಿರ ಯುವಜನರು ಭಾರತೀಯ ಸೇನೆಯಲ್ಲಿ ‘ಅಗ್ನಿವೀರ’ರಾಗಿ ನೇಮಕಾತಿ ಹೊಂದಲು ಉಚಿತ ತರಬೇತಿ, ಅಲ್ಪಸಂಖ್ಯಾತರ ನಿರ್ದೇಶನಾಲಯದಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ತರಬೇತಿಗೆ ₹ 2 ಕೋಟಿ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ.

ವಕ್ಫ್ ಆಸ್ತಿಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಲು ಮತ್ತು ಖಬರ್‌ಸ್ತಾನಗಳ ಅಭಿವೃದ್ಧಿಗೆ ತಲಾ ₹ 10 ಕೋಟಿ ಒದಗಿಸುವ ಜೊತೆಗೆ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಕಳೆದ ಬಜೆಟ್‌ನಲ್ಲಿ ನೀಡಿದ್ದ ₹ 60 ಕೋಟಿಯನ್ನು ₹ 110 ಕೋಟಿಗೆ ಹೆಚ್ಚಿಸಲಾಗಿದೆ. ಅತಿ ಹಿಂದುಳಿದ ಪಿಂಜಾರ, ದರ್ವೇಸು ಮತ್ತು ನದಾಫ್ ಸಮುದಾಯಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗಾಗಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಯೋಜನೆಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದೂ ಹೇಳಿದ್ದಾರೆ.

ಎಸ್‌ಸಿ ಮತ್ತು ಎಸ್‌ಟಿಗೆ ಸೇರಿದ ವಿವಿಧ ಆರು ಅಭಿವೃದ್ಧಿ ನಿಗಮಗಳಿಗೆ ನೀಡುತ್ತಿರುವ ಅನುದಾನವನ್ನು ₹795 ಕೋಟಿಗೆ ಹೆಚ್ಚಿಸಿದ್ದು, ಈಗಾಗಲೇ ಲಭ್ಯವಿರುವ ಮೊತ್ತವೂ ಸೇರಿ 2023-24ರಲ್ಲಿ ₹ 1,842 ಕೋಟಿಯಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ) ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆ
(ಟಿಎಸ್‌ಪಿ) ಕಾಯ್ದೆಯಡಿ ಮೀಸಲಿಟ್ಟ ಹಣ ಅನ್ಯಉದ್ದೇಶಗಳಿಗೆ ಬಳಸದಂತೆ ಕಡಿವಾಣ ಹಾಕಲು ಕಾಯ್ದೆಯ ಸೆಕ್ಷನ್ 7(ಡಿ)
ಪರಿಷ್ಕರಿಸುವುದೂ ಸೇರಿದಂತೆ ಹಲವು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಜಾರಿ, ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿ,
ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಕಾಮಗಾರಿಗಳಲ್ಲಿ ಶೇ 24ರಷ್ಟು ಮೀಸಲಾತಿಗೆ ನಿಗದಿಪಡಿಸಿದ್ದ ಮೊತ್ತ ₹ 1 ಕೋಟಿಗೆ ಹೆಚ್ಚಳದ ಭರವಸೆಯನ್ನೂ ನೀಡಲಾಗಿದೆ.

ಹಿಂದುಳಿದ ವರ್ಗಗಳಿಗೆ ಸೇರಿದ ವಿವಿಧ 11 ಅಭಿವೃದ್ಧಿ ನಿಗಮಗಳಿಗೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಿ, ಪ್ರಸಕ್ತ ಸಾಲಿನಲ್ಲಿ ₹ 596 ಕೋಟಿ ‌ಒದಗಿಸಲಾಗುವುದು. ಈ ನಿಗಮಗಳಿಗೆ ನೀಡಿರುವ ಹೆಚ್ಚುವರಿ ಅನುದಾನ ಮತ್ತು ಲಭ್ಯ ಮೊತ್ತವೂ ಸೇರಿ 2023-24ರಲ್ಲಿ ಒಟ್ಟು ₹ 1,600 ಕೋಟಿ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT