ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಭತ್ತದ ನಾಡಿಗೆ ಬೇಕಿದೆ ಕಾಯಕಲ್ಪ

ಜಿಲ್ಲೆಯ ಸಂಶೋಧನಾ ಕಾರ್ಯ, ಮಾರುಕಟ್ಟೆ ಅಭಿವೃದ್ಧಿಗೆ ಅನುದಾನ ನಿರೀಕ್ಷೆ
Last Updated 4 ಮಾರ್ಚ್ 2020, 7:22 IST
ಅಕ್ಷರ ಗಾತ್ರ

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ 1 ಲಕ್ಷ ಹೆಕ್ಟೇರ್‌ ಜಮೀನು ನೀರಾವರಿಗೆ ಒಳಪಟ್ಟಿದ್ದರು. ರೈತರ ಬವಣೆ ಕೊನೆಗೊಂಡಿಲ್ಲ. ಜಿಲ್ಲೆಯ ಗಂಗಾವತಿ ತಾಲ್ಲೂಕು ಸಂಪೂರ್ಣ ನೀರಾವರಿ ಪ್ರದೇಶವಾಗಿದ್ದರೂ ಕಾಲುವೆ, ಭತ್ತ, ವಿದ್ಯುತ್‌ ಸಮಸ್ಯೆಗಳ ಸುತ್ತಲೇ ಗಿರಕಿ ಹೊಡೆಯುತ್ತಲೇ ಇರುತ್ತವೆ.

ಜಿಲ್ಲೆಯ ಜನರ ಜೀವನಾಡಿ ತುಂಗಭದ್ರೆಯ ಸೆರಗಿನಲ್ಲಿದ್ದರೂ ಅನ್ನ ನೀಡುವ ಅನ್ನದಾತರ ಗೋಳಿಗೆ ಮುಕ್ತಿ ಸಿಗುತ್ತಿಲ್ಲ. ಪ್ರತಿವರ್ಷದ ಬಜೆಟ್‌ ನಿರೀಕ್ಷೆಯಲ್ಲಿ ಪ್ರಸ್ತಾಪವಾಗುವ ರೈಸ್‌ ಪಾರ್ಕ್, ಭತ್ತ ಸಂಶೋಧನೆ, ಅಭಿವೃದ್ಧಿ, ಸವಳು, ಜವಳು ಮುಕ್ತಿಗೆ ಅನುದಾನ ಬರೀ ಘೋಷಣೆಯಾಗಿದೆ ಹೊರತು. ನಿರೀಕ್ಷಿಸಿದ ಪ್ರಮಾಣದ ಅನುದಾನ ಬಂದಿಲ್ಲ.

ವ್ಯಾಪಕವಾಗಿ ಭತ್ತ ಬೆಳೆಯುವ ಕೊಪ್ಪಳ ತಾಲ್ಲೂಕಿನ ಪಶ್ಚಿಮ ಭಾಗ, ಗಂಗಾವತಿ, ಕಾರಟಗಿ ತಾಲ್ಲೂಕುಗಳಲ್ಲಿ ಭತ್ತ ಆಧಾರಿತ ಉದ್ಯಮ ಸ್ಥಾಪನೆಗೆ ಹೇರಳವಾದ ಅವಕಾಶವಿದೆ. ಭತ್ತದ ಮಿಲ್‌ಗಳು ಕಾರ್ಯನಿರ್ವಹಿಸುತ್ತವೆ. ಪರ್ಯಾಯ ಉತ್ಪನ್ನಗಳನ್ನು ತಯಾರಿಸಲು ಮತ್ತು ಮಾರಾಟಕ್ಕೆ ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರ ಕೇಂದ್ರವನ್ನು ಆರಂಭಿಸಬೇಕು ಎಂಬುವುದು ಇಲ್ಲಿನ ರೈತರ ಬೇಡಿಕೆ. ಆದರೆ ಈಗಾಗಲೇ ₹120 ಕೋಟಿ ವೆಚ್ಚದಲ್ಲಿ ಸ್ಥಾಪನೆಯಾಗಿರುವ ರೈಸ್‌ಮಿಲ್‌ ಇನ್ನೂ ಕಾಮಗಾರಿ ಹಂತದಲ್ಲಿಯೇ ಇದೆ. ಆಡಳಿತ ಕಚೇರಿ ಸೇರಿದಂತೆ ಉಗ್ರಾಣಗಳನ್ನು ನಿರ್ಮಾಣ ಮಾಡಿದ್ದನ್ನು ಬಿಟ್ಟರೆ ಯಾವುದೇ ಕಾರ್ಯ ಚಟುವಟಿಕೆ ನಡೆದಿಲ್ಲ.

ಬಜೆಟ್‌ನಲ್ಲಿ ಪೂರಕ ಅನುದಾನ ನೀಡಿ ಈ ಕೇಂದ್ರಗಳನ್ನು ಶೀಘ್ರ ಕ್ರಿಯಾಶೀಲಗೊಳಿಸಬೇಕಾಗಿದೆ. ಇವುಗಳ ಲಾಭ ರೈತರಿಗೆ ದೊರೆಯುವಂತೆ ಮಾಡಬೇಕಾಗಿದೆ. ಆದರೆ ರೈತರ ನಿರೀಕ್ಷೆಗಳು ಮಾತ್ರ ಸಾಕಾರಗೊಳ್ಳುತ್ತಿಲ್ಲ. ಚುನಾವಣೆ ಸಮಯದಲ್ಲಿ ಸದ್ದು ಮಾಡುವ ಈ ಪಾರ್ಕ್ ನಂತರ ಪಕ್ಕಕ್ಕೆ ಸರಿಯುತ್ತದೆ. ಕಾಟರಗಿ ಸಮೀಪದಲ್ಲಿ ಸ್ಥಾಪನೆಯಾಗಿರುವ ಈ ರೈಸ್‌ ಪಾರ್ಕ್ ರೈತರಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ಆದರೆ ಅನುಷ್ಠಾನ ಮಾತ್ರ ಆಗದೇ ಇರುವುದು
ದುರ್ದೈವ.

ಭತ್ತ ಸಂಶೋಧನಾ ಕೇಂದ್ರ: ಗಂಗಾವತಿ ಕೇಂದ್ರವಾಗಿಟ್ಟುಕೊಂಡು ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರವನ್ನು ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಇಲ್ಲಿ ಬೆಳೆಯುವ ಸೋನಾ ಮಸೂರಿಗೆ ಜಾಗತಿಕ ಮಾರುಕಟ್ಟೆ ಇದೆ. ಅನೇಕ ರೈತರು ಸಾವಯವ ಪದ್ಧತಿಯಲ್ಲಿ ಭತ್ತ ಬೆಳೆದು ಲಾಭ ಮಾಡಿಕೊಂಡಿದ್ದಾರೆ. ಅಂತಹ ರೈತರ ಅನುಭವ ಮತ್ತು ವಿಜ್ಞಾನಿಗಳ ಸಂಶೋಧನೆಯಿಂದ ಭತ್ತ ಮತ್ತು ಅಕ್ಕಿಗೆ ವಿಶೇಷ ಪ್ರಸಿದ್ಧಿ ತರುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ವಿಶೇಷ ಅನುದಾನದ ಅವಶ್ಯಕತೆ ಇದೆ.

ಆ ಮೂಲಕ ಇಲ್ಲಿಯ ಬೆಳೆಗಾರರಲ್ಲಿ ವೃತ್ತಿಪರತೆ, ವ್ಯಾಪಾರದ ನೈಪುಣ್ಯತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎನ್ನಲಾಗುತ್ತದೆ. ಇಲ್ಲಿರುವ ಅಕ್ಕಿ ಗಿರಣಿಗಳಿಗೆ ಕೆಲವು ರಿಯಾಯ್ತಿಗಳನ್ನು ಘೋಷಣೆ ಮಾಡಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸುತ್ತಾರೆ. ಇದರಿಂದ ಆರ್ಥಿಕ ಲಾಭದ ಜೊತೆಗೆ ಜನರ ಜೀವನಮಟ್ಟ ಸುಧಾರಣೆಗೆ ಹೆಚ್ಚು ಅನುಕೂಲವಾಗುತ್ತದೆ ಎನ್ನಲಾಗುತ್ತದೆ.

ಸವಳು-ಜವಳು
ತುಂಗಭದ್ರಾ ಕಾಲುವೆಗಳಿಂದ ವ್ಯಾಪಕ ಪ್ರಮಾಣದಲ್ಲಿ ನೀರು ಮತ್ತು ರಾಸಾಯನಿಕ ಬಳಸಿಕೊಂಡ ಪರಿಣಾಮ ಸಾವಿರಾರು ಹೆಕ್ಟೇರ್‌ ಜಮೀನುಗಳು ಸವಳಾಗಿದ್ದು, ಬೆಳೆಯಲು ಬಾರದಂತೆ ಉಪ್ಪು ಮಿಶ್ರಿತ ಜಮೀನುಗಳಾಗಿ ಪರಿವರ್ತೆನೆ ಹೊಂದಿವೆ. ಲಾಭದ ಆಶೆಗೆ ಪರ್ಯಾಯ ಬೆಳೆಯತ್ತ ಚಿತ್ತ ಹರಿಸದ ರೈತರ ನಿರಾಸಕ್ತಿ ಕೂಡಾ ಇದಕ್ಕೆ ಕಾರಣವಾಗಿದೆ ಎಂದು ವಿಜ್ಞಾನಿಗಳು ವಿಷಾದದಿಂದ ಹೇಳುತ್ತಾರೆ.

ಈಗಿರುವ ಸವಳು-ಜವಳು ಮುಕ್ತಿಗೆ 50 ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ. ಬಜೆಟ್‌ನಲ್ಲಿ ಪೂರಕ ಅನುದಾನ ಮೀಸಲಿರಿಸಿ ಸಂಬಂಧಿಸಿದ ಇಲಾಖೆ ಸಹಯೋಗದಲ್ಲಿ ಇದನ್ನು ಅನುಷ್ಠಾನಗೊಳಿಸಬಹುದು ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

*
ಪ್ರತಿವರ್ಷ ತುಂಗಭದ್ರಾ ಜಲಾಶಯದಲ್ಲಿ ಹೂಳು ತೆಗೆಯಲುಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಫಸಲ್ ಬಿಮಾ ಯೋಜನೆಯಲ್ಲಿ ಭತ್ತ ಬೆಳೆಗಾರರಿಗೆ ಅನುಕೂಲವಾಗುವ ಯೋಜನೆಗೆ ಹಣ ನೀಡಬೇಕು.
-ದೊಡ್ಡಪ್ಪ ದೇಸಾಯಿ, ಸಹಕಾರಿ ಧುರೀಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT