ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget-2022: ನಿರೀಕ್ಷೆ ಹುಸಿಯಾಗಿಸಿದ ಕೇಂದ್ರ ಬಜೆಟ್‌

ಕುಸಿದ ಆರ್ಥಿಕತೆಗೆ ದೊರೆಯದ ಚಿಕಿತ್ಸೆ
Last Updated 1 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಅಲೆಯಿಂದಾಗಿ ಸತತ 3ನೇ ವರ್ಷವೂ ಕುಸಿತದತ್ತಲೇ ಸಾಗಿರುವ ಆರ್ಥಿಕತೆಯನ್ನು ಸರಿದಾರಿಗೆ ತರುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಬಹುದು ಎಂಬ ನಿರೀಕ್ಷೆಯ 2022–23ನೇ ಸಾಲಿನ ಕೇಂದ್ರ ಬಜೆಟ್‌ ಸಂಪೂರ್ಣ ನಿರಾಸೆ ಮೂಡಿಸಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದಿಂದ, ಶತಮಾನೋತ್ಸವ ಸಂಭ್ರಮದವರೆಗಿನ 25 ವರ್ಷಗಳ ಅವಧಿಯ ಅಭಿವೃದ್ಧಿಯನ್ನು ಗುರಿಯಾಗಿಸಿ ಅರ್ಥ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ಮಂಗಳವಾರ ಮಾಡಿದ ಬಜೆಟ್‌ ಭಾಷಣದಲ್ಲಿ ಬಣ್ಣಿಸಿದರೂ, ನಿರೀಕ್ಷೆಗಳ ಈಡೇರಿಕೆಯ ಯತ್ನ ಕಂಡುಬಂದಿಲ್ಲ.

ಉತ್ತರ ಪ್ರದೇಶ, ಉತ್ತರಾಖಂಡ ಒಳಗೊಂಡಂತೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಮಂಡನೆಯಾಗುತ್ತಿರುವ ಈ ಬಜೆಟ್‌ ಮೂಲಕ, ‘ಮತ ಸೆಳೆಯಬಹುದಾದ’ ಹತ್ತುಹಲವು ಜನಪ್ರಿಯ ಯೋಜನೆಗಳ ಘೋಷಣೆ ಹೊರಬೀಳಬಹುದು ಎಂಬ ಲೆಕ್ಕಾಚಾರವೂ ತಲೆಕೆಳಗಾಗಿದೆ.

ವೈಯಕ್ತಿಕ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಈ ವರ್ಷವೂ ಯಾವುದೇ ರೀತಿಯ ಬದಲಾವಣೆ ತರದೇ ಕಳೆದ ವರ್ಷದ ವ್ಯವಸ್ಥೆಯನ್ನೇ ಮುಂದುವರಿಸಲಾಗಿದ್ದು, ಕೋವಿಡ್‌ನಿಂದಾಗಿ ಅಧಿಕ ಹಣದುಬ್ಬರ, ವೇತನ ಕಡಿತದಿಂದ ತೊಂದರೆಗೆ ಈಡಾದವರನ್ನು ಮತ್ತೆ ನಿರಾಸೆಗೆ ಈಡು ಮಾಡಿದೆ.

ಆದರೆ, ತೆರಿಗೆ ಪಾವತಿಯ ರಿಟರ್ನ್‌ ವ್ಯವಸ್ಥೆಗೆ ಹೊಸ ರೂಪ ನೀಡಿ, ತೆರಿಗೆ ಪಾವತಿಯಲ್ಲಿನ ಪ್ರಮಾದ ಸರಿಪಡಿಸಲು 2 ವರ್ಷಗಳವರೆಗೆ ಅವಕಾಶ ಕಲ್ಪಿಸಲಿರುವುದು ವಿಶೇಷ. ಜಾಗತಿಕವಾಗಿ ಕಚ್ಚಾ ತೈಲದ ದರದಲ್ಲಿ ಹೆಚ್ಚಳ ಕಂಡುಬರುತ್ತಿದ್ದರೂ, ತೈಲ ಬೆಲೆ ನಿಯಂತ್ರಣ ಕುರಿತು ಸರ್ಕಾರ ಚಿಂತನೆ ನಡೆಸಿಲ್ಲ.

25,000 ಕಿ.ಮೀ. ಹೆದ್ದಾರಿ ಅಭಿವೃದ್ಧಿ, 3.8 ಕೋಟಿ ಗ್ರಾಮೀಣರ ಮನೆಗೆ ನಲ್ಲಿ ನೀರಿನ ಸಂಪರ್ಕ, ವಸತಿ ಯೋಜನೆಗೆ ಹೆಚ್ಚುವರಿ ನೆರವು ಹಾಗೂ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಒಳಗೊಂಡ ಮೂಲಸೌಲಭ್ಯ ಅಭಿವೃದ್ಧಿಗೆ ಒಟ್ಟು ₹ 7.50 ಲಕ್ಷ ಕೋಟಿ ಅನುದಾನವನ್ನು ಮೀಸಲಿರಿಸುವ ಪ್ರಸ್ತಾವ ಹೊರಬಿದ್ದಿದೆ.

ಸೌರವಿದ್ಯುತ್‌ ಉತ್ಪಾದನಾ ಕ್ಷೇತ್ರದಲ್ಲಿ ₹ 19,500 ಕೋಟಿ ಖಾಸಗಿ ಹೂಡಿಕೆಗೆ ಅವಕಾಶ ನೀಡುವ ಮೂಲಕ 2030ರೊಳಗೆ ಈ ವಲಯದ ಮೇಲಿನ ಅವಲಂಬನೆಯನ್ನು ಹೆಚ್ಚಿಸುವ ಗುರಿಯನ್ನೂ ಇರಿಸಿಕೊಳ್ಳಲಾಗಿದೆ.

ಕೃಷಿ ಕ್ಷೇತ್ರಕ್ಕಿಲ್ಲ ಕೊಡುಗೆ: ಕೋವಿಡ್‌ ಸಾಂಕ್ರಾಮಿಕದ ಸಂದರ್ಭ ಗ್ರಾಮೀಣರ ಕೈಹಿಡಿದ ಕೃಷಿ ಕ್ಷೇತ್ರಕ್ಕೆ ವಿಶೇಷ ಎನ್ನಬಹುದಾದ ಕೊಡುಗೆಯನ್ನೂ ₹ 39.54 ಲಕ್ಷ ಕೋಟಿಯಷ್ಟು ಬೃಹತ್‌ ಗಾತ್ರದ ಬಜೆಟ್‌ನಲ್ಲಿ ಮೋದಿ ನೇತೃತ್ವದ ಸರ್ಕಾರ ಪ್ರಕಟಿಸಿಲ್ಲ.

ಎಣ್ಣೆಕಾಳುಗಳ ದೇಶೀ ಉತ್ಪಾದನೆ ಹೆಚ್ಚಳ ಮತ್ತು ಕೀಟನಾಶಕ ಮತ್ತು ಪೋಷಕಾಂಶ ಸಿಂಪರಣೆ ಹಾಗೂ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಹಾಗೂ ಕೃಷಿ ಬೆಳೆ ಮೌಲ್ಯಮಾಪನಕ್ಕಾಗಿ ‘ಡ್ರೋನ್’ಗಳ ಬಳಕೆ ಉತ್ತೇಜಿಸುವ ಗುರಿ ಇರಿಸಿಕೊಳ್ಳಲಾಗಿದೆ.

ಸಾವಯವ ಕೃಷಿಯ ಮೌಲ್ಯವರ್ಧನೆಗಾಗಿ ಕೃಷಿ ವಿಶ್ವವಿದ್ಯಾಲಯದ ಪಠ್ಯಕ್ರಮ ಪರಿಷ್ಕರಿಸುವಂತೆ ರಾಜ್ಯ ಸರ್ಕಾರಗಳಿಗೆ ಸಹಕಾರ ನೀಡುವುದಲ್ಲದೆ, ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ನೀಡುವ ಘೋಷಣೆ ಹೊರತುಪಡಿಸಿ ಕೃಷಿ ವಲಯದ ಉತ್ತೇಜನದತ್ತ ಗಮನ ಹರಿಸಿರುವುದು ಕಂಡುಬಂದಿಲ್ಲ.

ಪೆನ್ನಾರ್– ಕಾವೇರಿ, ಕೃಷ್ಣಾ– ಪೆನ್ನಾರ್, ಕೃಷ್ಣಾ– ಗೋಧಾವರಿ ಸೇರಿದಂತೆ ನದಿ ಜೋಡಣೆಯ ಒಟ್ಟು ಐದು ಯೋಜನೆಗಳಿಗೆ ಆಯಾ ರಾಜ್ಯ ಸರ್ಕಾರಗಳ ಅನುಮತಿ ದೊರೆತ ನಂತರ ಅನುಮೋದನೆ ನೀಡುವುದಾಗಿ ತಿಳಿಸಲಾಗಿದೆ.

ಉದ್ಯೋಗ ಸೃಷ್ಟಿ: ಮುಂದಿನ ಐದು ವರ್ಷಗಳಲ್ಲಿ 60 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಭರವಸೆಯೊಂದಿಗೆ, ‘ಆತ್ಮನಿರ್ಭರ’ ಯೋಜನೆ ಅಡಿ ₹ 30 ಲಕ್ಷ ಕೋಟಿ ಮೀಸಲಿರಿಸುವುದಾಗಿ ಹೇಳಿರುವ ಸರ್ಕಾರ, ದೇಶದ 1.50 ಲಕ್ಷ ಅಂಚೆ ಕಚೇರಿಗಳನ್ನು ‘ಕೋರ್‌ ಬ್ಯಾಂಕಿಂಗ್‌’ ವ್ಯವಸ್ಥೆ ಅಡಿ ತರಲು ಮುಂದಾಗಿದೆ.

ಈ ಮೂಲಕ, ಬ್ಯಾಂಕ್‌ ಮತ್ತು ಅಂಚೆ ಕಚೇರಿಯ ಖಾತೆಗಳನ್ನು ಜೋಡಣೆ ಮಾಡಿ ಗ್ರಾಹಕರ ವಹಿವಾಟಿಗೆ ಮುಕ್ತಗೊಳಿಸುವ ಹಾಗೂ ಆಯ್ದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ ಸ್ಥಾಪಿಸುವ ಪ್ರಸ್ತಾವ ಹೊಂದಲಾಗಿದೆ. ಬೆಂಗಳೂರಿನ ನಿಮ್ಹಾನ್ಸ್‌ ತಜ್ಞರ ಸಹಯೋಗದೊಂದಿಗೆ ಮಾನಸಿಕ ಆರೋಗ್ಯಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ ರೂಪಿಸಲಾಗಿದೆ.

ಪಿಪಿಪಿ ಮಾದರಿ: ಖಾಸಗೀಕರಣದ ಕಡೆಗಿನ ತನ್ನ ಒಲವನ್ನು ಮತ್ತೆ ತೋರಿರುವ ಕೇಂದ್ರ, ‘ಪ್ರಧಾನಮಂತ್ರಿ ಗತಿಶಕ್ತಿ’ ಕಾರ್ಯಕ್ರಮದಡಿ ಆಧುನಿಕ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗೂ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿ ಅನುಸರಿಸುವುದಾಗಿ ತಿಳಿಸಿದೆ.

ಸಣ್ಣ, ಮಧ್ಯಮ ಮತ್ತು ಅತಿ ಸಣ್ಣ ಉದ್ಯಮಗಳ ಪುನಶ್ಚೇತಕ್ಕೆ ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಲಾಗಿದೆ. 2025ರೊಳಗೆ ದೇಶದ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಇ–ಡಿಜಿಟಲ್‌ ಸಂಪರ್ಕ ವ್ಯವಸ್ಥೆ ಜಾರಿಗೆ ‘ಭಾರತ್‌ ನೆಟ್‌’ ಆಪ್ಟಿಕಲ್‌ ಫೈಬರ್‌ ಅಳವಡಿಕೆಗೆ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ಇದೇ ಮಾದರಿ ಅಡಿ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಲಾಗಿದೆ.

ಕ್ರಿಪ್ಟೋ ಕರೆನ್ಸಿ: ರಾಜ್ಯದಲ್ಲಿ ಕಂಡುಬಂದ ಬಹುಕೋಟಿ ಮೌಲ್ಯದ ಬಿಟ್‌ ಕಾಯಿನ್‌ ಹಗರಣ ದೇಶದಾದ್ಯಂತ ಸದ್ದು ಮಾಡಿದ್ದ ಹಿನ್ನೆಲೆಯಲ್ಲಿ, ಬಿಟ್ ಕಾಯಿನ್ ಒಳಗೊಂಡ ಕ್ರಿಪ್ಟೋ ಕರೆನ್ಸಿಯ ನಿಯಂತ್ರಣಕ್ಕಾಗಿ ಭಾರತೀಯ ರಿಜರ್ವ್‌ ಬ್ಯಾಂಕ್‌ ಮುಖೇನ ಅಧಿಕೃತ ಚಾಲನೆಯ ಮುದ್ರೆ ಒತ್ತಲು ನಿರ್ಧರಿಸಲಾಗಿದೆ.
2022–23ನೇ ಹಣಕಾಸು ವರ್ಷದಲ್ಲೇ ಸ್ವತಂತ್ರ ಡಿಜಿಟಲ್‌ ಕರೆನ್ಸಿಗೆ ಚಾಲನೆ ದೊರೆಯಲಿದ್ದು, ಈ ಕರೆನ್ಸಿ ಹೊಂದಿದವರಿಗೆ ಶೇ 30ರಷ್ಟು ತೆರಿಗೆ ವಿಧಿಸುವ ಹಾಗೂ ಅದರ ಡಿಜಿಟಲ್‌ ವರ್ಗಾವಣೆಯ ಮೇಲೂ ಟಿಡಿಎಸ್‌ ಮೂಲಕ ಶೇ 1ರಷ್ಟು ತೆರಿಗೆ ವಿಧಿಸುವ ಮೂಲಕ ಆದಾಯ ಹೆಚ್ಚಳಕ್ಕೆ ಮುಂದಾಗಿರುವುದು ಹೊಸ ನಡೆಯಾಗಿದೆ.

5–ಜಿ ತರಂಗಾಂತರ ಹರಾಜು: ಅಂತರ್ಜಾಲ ಸಂಪರ್ಕ ವ್ಯವಸ್ಥೆಯ ವೇಗವರ್ಧನೆಗೆಂದೇ 5–ಜಿ ತರಂಗಾಂತರ ಹರಾಜು ಪ್ರಕ್ರಿಯೆಯನ್ನೂ ಪ್ರಸಕ್ತ ವರ್ಷವೇ ನಡೆಸುವ ಮೂಲಕ ಆರ್ಥಿಕತೆಯ ಸುಧಾರಣೆಯತ್ತ ಹೆಜ್ಜೆ ಇರಿಸಲಾಗುವುದು ಎಂಬುದು 90 ನಿಮಿಷಗಳ ಅವಧಿಯ ಬಜೆಟ್‌ ಭಾಷಣದ ಮೂಲಕ ಹಣಕಾಸು ಸಚಿವರು ನೀಡಿದ ವಾಗ್ದಾನವಾಗಿದೆ.

*

ಅಭಿವೃದ್ಧಿ ಕುರಿತಹೊಸ ವಿಶ್ವಾಸ
ಇದು ಜನಸ್ನೇಹಿ ಮತ್ತು ಪ್ರಗತಿಪರ ಬಜೆಟ್‌. ಬಡವರ ಕಲ್ಯಾಣ ವಿಷಯವೇ ಇದರ ಪ್ರಮುಖ ಅಂಶ. ಹೆಚ್ಚಿನ ಹೂಡಿಕೆ, ಮೂಲಸೌಕರ್ಯ ವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಸಾಧ್ಯತೆಗಳನ್ನು ಇದು ಸ್ಪಷ್ಟಪಡಿಸಿದೆ. 100 ವರ್ಷಗಳಲ್ಲಿ ಕಂಡರಿಯದ ವಿಪತ್ತಿನ ನಡುವೆಯೂ (ಕೋವಿಡ್‌ ಪಿಡುಗು) ಈ ಬಜೆಟ್‌ ಅಭಿವೃದ್ಧಿ ಕುರಿತು ಹೊಸ ವಿಶ್ವಾಸವನ್ನು ಮೂಡಿಸಿದೆ. ಇದು ದೇಶದ ಆರ್ಥಿಕತೆಯನ್ನು ಬಲಪಡಿಸುವುದರ ಜತೆಗೆ ಸಾಮಾನ್ಯ ಜನರಿಗೆ ಅನೇಕ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.
-ನರೇಂದ್ರ ಮೋದಿ, ಪ್ರಧಾನಿ

*

ಉದ್ಯಮ ವಲಯಕ್ಕೆ ಪೂರಕ
ಕೋವಿಡ್ ಕಾಲಘಟ್ಟದಿಂದ ಹೊರಬರುತ್ತಿರುವ ದೇಶದ ಆರ್ಥಿಕ ಚಕ್ರಕ್ಕೆ ಕೇಂದ್ರದ ಬಜೆಟ್ ಹೊಸ ಶಕ್ತಿಯನ್ನು ನೀಡುತ್ತದೆ ಮತ್ತು ಅದರ ಸರ್ವತೋಮುಖ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಕೇಂದ್ರದ ಬಿಜೆಪಿ ಸರ್ಕಾರವು ಕೃಷಿ ಅಭಿವೃದ್ಧಿ, ರೈತರ ಕಲ್ಯಾಣ ಮತ್ತು ಅವರ ಆದಾಯವನ್ನು ದ್ವಿಗುಣಗೊಳಿಸಲು ಬದ್ಧವಾಗಿದೆ. ಸಾಮಾಜಿಕ ನ್ಯಾಯ, ಸಮಾನತೆ, ಗೌರವ ಮತ್ತು ಎಲ್ಲರಿಗೂ ಸಮಾನ ಅವಕಾಶ ಎಂಬ ಮೋದಿ ಸರ್ಕಾರದ ದೂರದೃಷ್ಟಿಯನ್ನು ಸಾಕಾರಗೊಳಿಸುವ ಬಜೆಟ್ ಇದಾಗಿದೆ.
-ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ

*

ಬಡವರ ವಿರೋಧಿಬಜೆಟ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಡವರ ವಿರೋಧಿ ಕಾರ್ಯಸೂಚಿ ಯನ್ನು ಮುಂದುವರಿಸಿದೆ. 2022ರ ಬಜೆಟ್‌ ಅದಕ್ಕೆ ನಿದರ್ಶನವಾಗಿದೆ. ಬಿಜೆಪಿಯು ಆಯ್ದ ಉದ್ಯಮಿ (ಕ್ರೋನಿ ಕ್ಯಾಪಿಟಲಿಸ್ಟ್‌) ಸ್ನೇಹಿತರನ್ನು ಮೆಚ್ಚಿಸಲು ಈ ಬಜೆಟ್‌ ಅನ್ನು ವಿನ್ಯಾಸಗೊಳಿಸಿದೆ. ದೇಶದ ಶೇ 90ರಷ್ಟು ಜನಸಂಖ್ಯೆ ಇರುವ ಮಧ್ಯಮ ಮತ್ತು ಬಡವರ್ಗದವರ ಅಗತ್ಯಗಳನ್ನು ಇದರಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
-ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ

ಇವನ್ನೂ ಓದಿ
*

*
*
*
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT