ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ನಿರೀಕ್ಷೆ ಹುಸಿಗೊಳಿಸಿದ ಬಜೆಟ್‌

ಐಐಐಟಿ, ರಾಯಚೂರು ವಿವಿ ಮೂಲ ಸೌಕರ್ಯಕ್ಕೆ ಅನುದಾನವಿಲ್ಲ
Last Updated 5 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಶೈಕ್ಷಣಿಕ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಅನುದಾನ ಘೋಷಿಸಬಹುದು ಎಂದು ನಿರೀಕ್ಷಿಸಿದ್ದ ಜನರಲ್ಲಿ ನಿರಾಸೆ ಆವರಿಸಿದೆ!

ಮುಖ್ಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ಸ್ಥಾಪನೆ ಆಗಬೇಕಾಗಿರುವ ‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್ಫಾರ್ಮೆಷನ್‌ ಟೆಕ್ನಾಲಜಿ (ಐಐಐಟಿ)’ ಮತ್ತು ಪ್ರಸ್ತಾಪಿತ ರಾಯಚೂರು ವಿಶ್ವವಿದ್ಯಾಲಯ ಕ್ಯಾಂಪಸ್‌ಗಳ ಅಭಿವೃದ್ಧಿಗಾಗಿ ಅನುದಾನವನ್ನು ನಿರೀಕ್ಷಿಸಲಾಗಿತ್ತು. ಹಿಂದುಳಿದ ಜಿಲ್ಲೆಗಳಲ್ಲೊಂದಾದ ರಾಯಚೂರಿನ ಶೈಕ್ಷಣಿಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡಬಹುದು ಎನ್ನಲಾಗಿತ್ತು. ಇದಕ್ಕೆ ಇಂಬು ನೀಡುವಂತೆ, ಈಚೆಗೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಜಿಲ್ಲೆಗೆ ಭೇಟಿ ನೀಡಿ ಭರವಸೆ ಕೂಡಾ ನೀಡಿದ್ದರು.

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸರ್ಕಾರ ಮಹತ್ವ ನೀಡಿರುವುದರಿಂದ, ಈಗಾಗಲೇ ವಿಮಾನ ನಿಲ್ದಾಣಕ್ಕಾಗಿ ರಾಯಚೂರು ಹೊರವಲಯದಲ್ಲಿ ಮೀಸಲಿಟ್ಟ 400 ಎಕರೆ ಜಮೀನು ಅಭಿವೃದ್ಧಿ ಕಾರ್ಯ ಆರಂಭಿಸುವುದಕ್ಕೆ ಸರ್ಕಾರ ಅನುದಾನ ಕೊಡಬಹುದೆನ್ನುವ ಆಕಾಂಕ್ಷೆ ಜನರಲ್ಲಿ ಬಲವಾಗಿತ್ತು. ಹೊಸದಾಗಿ ಸ್ಥಾಪನೆಯಾಗುವ ಶೈಕ್ಷಣಿಕ ಕೇಂದ್ರಗಳು, ಎರಡು ವಿದ್ಯುತ್‌ ಸ್ಥಾವರಗಳು ಹಾಗೂ ಕೃಷಿ ಆಧಾರಿತ ಕೈಗಾರಿಕೆಗಳ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಗಣ್ಯರ ಸಂಚಾರಕ್ಕೆ ಅನುಕೂಲ ಮಾಡಲು ವಿಮಾನ ನಿಲ್ದಾಣ ಘೋಷಿಸಬಹುದು ಎನ್ನುವ ನಿರೀಕ್ಷೆ ಕೂಡಾ ಹುಸಿಯಾಗಿದೆ.

ತುಂಗಭದ್ರಾ ಅಣೆಕಟ್ಟೆಗೆ ಸಮಾನಾಂತರ ಜಲಾಶಯ ನಿರ್ಮಾಣಕ್ಕಾಗಿ ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ವಿಸ್ತೃತ ಯೋಜನೆಯನ್ನು ಪ್ರಕಟಿಸಲಾಗಿತ್ತು. ಮತ್ತೊಮ್ಮೆ ಅದೇ ಯೋಜನೆ ಘೋಷಿಸಿ ಅನುದಾನ ಮೀಸಲಿಡಲಾಗಿದೆ. ಯೋಜನೆ ತಯಾರಿಸುವ ಬದಲಾಗಿ ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರ ಪ್ರಕಟಣೆ ಮಾಡದಿರುವುದು ಈ ಭಾಗದ ರೈತರಲ್ಲಿ ನಿರಾಸೆ ಮೂಡಿಸಿದೆ. ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ಆಧುನೀಕರಣಕ್ಕೆ ಕ್ರಮ ಕೈಗೊಳ್ಳಬಹುದು ಎಂದು ದೇವದುರ್ಗ, ರಾಯಚೂರು ತಾಲ್ಲೂಕುಗಳ ಜನರು ಸರ್ಕಾರದ ಬಜೆಟ್‌ನತ್ತ ಗಮನ ಕೇಂದ್ರೀಕರಿಸಿದ್ದರು. ಆದರೆ, ರಾಯಚೂರು ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಯಾವವು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ.

ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆ ಮಾಡುವುದಕ್ಕಾಗಿ ಹಲವಾರು ಬೇಡಿಕೆಗಳನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಒಂದೇ ಒಂದು ಯೋಜನೆಗೆ ಸರ್ಕಾರ ಮನ್ನಣೆ ನೀಡಿಲ್ಲ. ನಾಲ್ಕು ಕಡೆಗಳಲ್ಲಿ ಹೊಸದಾಗಿ ಕೃಷಿ ಮಹಾವಿದ್ಯಾಲಯಗಳನ್ನು ಪ್ರಾರಂಭಿಸುವ ಬಗ್ಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯ ಪ್ರಸ್ತಾವ ಕೊಟ್ಟಿತ್ತು.

ಹತ್ತಿ, ಭತ್ತ, ಮೆಣಸಿನಕಾಯಿ ಅತಿಹೆಚ್ಚಾಗಿ ಬೆಳೆಯುವ ರಾಯಚೂರು ಜಿಲ್ಲೆಯಲ್ಲಿ ಹೊಸದಾಗಿ ಕೈಗಾರಿಕೆಗಳನ್ನು ಸ್ಥಾಪಿಸುವ ಯೋಜನೆಗಳನ್ನು ಸರ್ಕಾರ ಘೋಷಸಬಹುದು ಎಂದು ಹತ್ತಿ ಕಾರ್ಖಾನೆಗಳ ಮಾಲೀಕರು ಕಾದಿದ್ದರು. ಈ ಭಾಗದಲ್ಲಿ ನೂಲುವ ಕಾರ್ಖಾನೆ ಆರಂಭಿಸಿದರೆ, ಜಿಲ್ಲೆಯಿಂದ ತಮಿಳುನಾಡಿಗೆ ಹತ್ತಿ ರವಾನೆ ಆಗುವುದನ್ನು ತಪ್ಪಿಸಬಹುದಿತ್ತು. ರಾಜ್ಯದಲ್ಲೇ ಮೌಲ್ಯವರ್ಧನೆ ಮಾಡುವುದರಿಂದ ಎಲ್ಲರಿಗೂ ಅನುಕೂಲವಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT