ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಗರಿಗೆದರಿದ ನಿರೀಕ್ಷೆ

ರಾಜ್ಯ ಬಜೆಟ್‌ನಲ್ಲಿ ದಾವಣಗೆರೆಗೆ ಹರಿದೀತೆ ಅನುದಾನಗಳ ಹೊಳೆ? ಉದ್ಯೋಗ ಸೃಷ್ಟಿಸಿ ಹಾಕುವರೇ ಮಣೆ?
Last Updated 4 ಮಾರ್ಚ್ 2020, 7:19 IST
ಅಕ್ಷರ ಗಾತ್ರ

ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರವು ಮಾರ್ಚ್‌ 5ರಂದು ಮಂಡಿಸಲಿರುವ ಬಜೆಟ್‌, ಜಿಲ್ಲೆಯ ಅಭಿವೃದ್ಧಿಯ ನಿರೀಕ್ಷೆಗಳು ಗರಿಗೆದರಿವೆ. ಮುಖ್ಯಮಂತ್ರಿಯವರು ಜಿಲ್ಲೆಯ ಅಭಿವೃದ್ಧಿಯ ಕನಸಿನ ಗಿಡಕ್ಕೆ ‘ಅನುದಾನ’ವೆಂಬ ನೀರೆರೆದು ಪೋಷಿಸುವರೇ ಎಂಬ ಕುತೂಹಲದಿಂದ ಜಿಲ್ಲೆಯ ಜನ ಬಜೆಟ್‌ನತ್ತ ದೃಷ್ಟಿ ಹರಿಸುತ್ತಿದ್ದಾರೆ.

ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ವಿಶೇಷ ಅನುದಾನ ಸಿಕ್ಕಿರಲಿಲ್ಲ ಎಂದು ಬೇಸರಪಟ್ಟುಕೊಂಡಿದ್ದ ಜನ, ಈ ಸರ್ಕಾರವಾದರೂ ಹೆಚ್ಚು ಅನುದಾನ ನೀಡುವ ಮೂಲಕ ಗಾಯಕ್ಕೆ ಮುಲಾಮು ಹಚ್ಚೀತೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಪಾಲಿನ ಅನುದಾನಕ್ಕೆ ಕೊಕ್ಕೆ ಹಾಕಿರುವುದರಿಂದ ಜಿಲ್ಲೆಗೆ ಎಷ್ಟು ಅನುದಾನ ಹಂಚಿಕೆಯಾಗಲಿದೆ ಎಂಬ ಕುತೂಹಲವೂ ಮೂಡಿದೆ.

ಸರ್ಕಾರಿ ವೈದ್ಯಕೀಯ ಕಾಲೇಜು, ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು, ಕೆರೆ ತುಂಬಿಸುವುದು, ಸಂಶೋಧನಾ ಕೇಂದ್ರ ಸ್ಥಾಪನೆ, ವಿಮಾನ ನಿಲ್ದಾಣ ನಿರ್ಮಾಣ, ಕೈಗಾರಿಕೆ ಸ್ಥಾಪನೆ... ಹೀಗೆ ಹಲವು ಅಭಿವೃದ್ಧಿ ಕೆಲಸಗಳಾಗಲಿ ಎಂದು ಜನ ಕನವರಿಸುತ್ತಿದ್ದಾರೆ.

ವಿಜ್ಞಾನ ಸಂಶೋಧನಾ ಕೇಂದ್ರ ತೆರೆಯಲಿ: ‘ದಾವಣಗೆರೆ ಶೈಕ್ಷಣಿಕ ಕೇಂದ್ರವಾಗಿದೆ. ಇಲ್ಲಿ ವೈದ್ಯಕೀಯ, ಎಂಜಿನಿಯರಿಂಗ್‌, ಫಾರ್ಮಸಿ ಕಾಲೇಜುಗಳು, ವಿಶ್ವವಿದ್ಯಾಲಯ ಇರುವುದರಿಂದ ವಿದ್ಯಾರ್ಥಿಗಳಿಗೆ ಸಂಶೋಧನೆ ನಡೆಸಲು ಅನುಕೂಲವಾಗುವಂತೆ ಬೆಂಗಳೂರಿನ ಐಐಎಸ್‌ಸಿ ಮಾದರಿಯಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪಿಸಲು ಬಜೆಟ್‌ನಲ್ಲಿ ಅನುದಾನ ನೀಡಬೇಕು. ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ತರಬೇತಿ ನೀಡಲು ಆನಗೋಡಿನಲ್ಲಿರುವ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರಕ್ಕೆ ಪ್ರತಿ ವರ್ಷ ₹ 2 ಕೋಟಿ ಅನುದಾನ ಕೊಡಬೇಕು’ ಎಂದು ಬಾಪೂಜಿ ಎಂಜಿನಿಯರಿಂಗ್‌ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಆಶಯ ವ್ಯಕ್ತಪಡಿಸಿದರು.

ಜನರ ಆರೋಗ್ಯಮಟ್ಟವನ್ನು ಏರಿಸಲು ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎನ್ನುತ್ತಾರೆ ವೃಷಭೇಂದ್ರಪ್ಪ.

‘ಜಿಲ್ಲೆಯಲ್ಲಿ ದೊಡ್ಡ ಉದ್ಯಮ ಸ್ಥಾಪಿಸಲು ಆದ್ಯತೆ ನೀಡಬೇಕು. ಒಣ ಭೂಮಿ ಹೆಚ್ಚಿರುವ ಜಗಳೂರಿನಲ್ಲಿ ಉದ್ಯಮಗಳ ಸ್ಥಾಪನೆಗೆ ಹೆಚ್ಚಿನ ಅವಕಾಶವಿದೆ. ಹಳ್ಳಿಗಳಲ್ಲಿ ಉದ್ಯಮ ಸ್ಥಾಪಿಸಿದರೆ ಮಾತ್ರ ಸಬ್ಸಿಡಿ ನೀಡುವ ಗುಜರಾತ್‌ ಮಾದರಿಯನ್ನೇ ರಾಜ್ಯದಲ್ಲೂ ಜಾರಿಗೆ ತಂದರೆ ಗ್ರಾಮಗಳಲ್ಲೇ ಜನರಿಗೆ ಕೆಲಸ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಕೆರೆ ಭರ್ತಿ ಮಾಡಲಿ: ‘ರೈತರಿಗೆ ನೀರಿನ ವ್ಯವಸ್ಥೆ ಮಾಡಿ, ಕೈತುಂಬಾ ಕೆಲಸ ಕೊಟ್ಟರೆ ಸಾಲವನ್ನು ಮನ್ನಾ ಮಾಡಬೇಕಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಚಾನೆಲ್‌ ಇರುವುದರಿಂದ ಎಲ್ಲಾ ಕೆರೆಗಳ ಹೂಳು ತೆಗೆಸಿ ನೀರು ತುಂಬಿಸುವುದಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಮೆಕ್ಕೆಜೋಳ ಹಾಗೂ ದ್ವಿದಳ ಧಾನ್ಯಗಳ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು’ ಎನ್ನುತ್ತಾರೆ ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ.

‘ಮಧ್ಯ ಕರ್ನಾಟಕ ಭಾಗವಾದ ದಾವಣಗೆರೆಯಲ್ಲಿ ನಿರುದ್ಯೋಗಿ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸಲು ಜವಳಿ ಪಾರ್ಕ್‌ ನಿರ್ಮಿಸಬೇಕು. ಇಲ್ಲಿ ದೊಡ್ಡ ಉದ್ಯಮಗಳ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಿಸಲು ವಿಮಾನ ನಿಲ್ದಾಣವನ್ನು ಸ್ಥಾಪಿಸಬೇಕು’ ಎಂಬುದು ಅವರ ಬೇಡಿಕೆ.

‘ಗುಡಿಸಲು ಮುಕ್ತ ಕರ್ನಾಟಕ’ ನಿರ್ಮಾಣದ ಬಗ್ಗೆ ಸರ್ಕಾರ ಹೇಳುತ್ತಿದೆ. ರಾಜ್ಯದಲ್ಲಿ 37 ಲಕ್ಷ ವಸತಿರಹಿತರಿದ್ದಾರೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ವಸತಿರಹಿತರು ಹಾಗೂ ನಿವೇಶನರಹಿತರು ಇದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ವಸತಿ ಹಾಗೂ ನಿವೇಶನ ಹಂಚಲು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪಾಲಿಟೆಕ್ನಿಕ್‌ ಕಾಲೇಜಿಗೆ ಬೇಡಿಕೆ: ‘ಜಗಳೂರಿಗೆ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಮಂಜೂರು ಮಾಡುವಂತೆ ಪ್ರಸ್ತಾವ ಸಲ್ಲಿಸಿದ್ದೇನೆ. ಪಾವಗಡಕ್ಕೆ ತೆಗೆದುಕೊಂಡು ಹೋಗುತ್ತಿರುವ ತುಂಗಭದ್ರಾ ಹಿನ್ನೀರನ್ನು ಕ್ಷೇತ್ರದ ಆರು ಹಳ್ಳಿಗಳಿಗೂ ನೀಡುವಂತೆ ಬೇಡಿಕೆ ಮಂಡಿಸಿದ್ದೇನೆ. 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕೆಲಸ ಆರಂಭಗೊಂಡಿದೆ. 40 ಸಾವಿರ ಎಕರೆಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಹಾಗೂ ಇನ್ನೂ 11 ಕೆರೆಗಳಿಗೆ ನೀರು ತುಂಬಿಸಲು ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ’ ಎನ್ನುತ್ತಾರೆ ಜಗಳೂರಿನ ಶಾಸಕ ಎಸ್‌.ವಿ. ರಾಮಚಂದ್ರ.

ಕೃಷಿಯಾಧಾರಿತ ಕೈಗಾರಿಕೆ ಸ್ಥಾಪಿಸಲಿ

‘ಬಜೆಟ್‌ನಲ್ಲಿ ಉದ್ಯಮಗಳ ಸ್ಥಾಪನೆಯಲ್ಲಿ ವಿಕೇಂದ್ರೀಕರಣಕ್ಕೆ ಒತ್ತು ನೀಡಿ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕೃಷಿಯಾಧಾರಿತ ಕೈಗಾರಿಕೆ ಸ್ಥಾಪಿಸುವ ಮೂಲಕ ನಿರುದ್ಯೋಗ ಹಾಗೂ ವಲಸೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಸಂಪೂರ್ಣವಾಗಿ ಖಾಸಗಿಯವರಿಗೆ ಕೈಗಾರಿಕೆ ಆರಂಭಿಸಲು ಅವಕಾಶ ನೀಡುವ ಬದಲು ಪಿಪಿಪಿ ಮಾದರಿಯನ್ನಾದರೂ ಪಾಲಿಸಬೇಕು’ ಎಂಬುದು ರೈತ ಮುಖಂಡ ತೇಜಸ್ವಿ ಪಟೇಲ್‌ ಅಭಿಪ್ರಾಯ.

‘ಜಿಲ್ಲೆಯಲ್ಲಿ ಭತ್ತದ ನಂತರ ಮೆಕ್ಕೆಜೋಳವನ್ನು ಅತಿ ಹೆಚ್ಚು ಬೆಳೆಯಲಾಗುತ್ತಿದೆ. ಕಾರ್ಗಿಲ್‌ ಕಂಪನಿಯಿಂದ ಹೆಚ್ಚಿನ ಲಾಭ ರೈತರಿಗೆ ಸಿಗುತ್ತಿಲ್ಲ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಮೆಕ್ಕೆಜೋಳ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು’ ಎಂಬುದು ತೇಜಸ್ವಿ ಪಟೇಲ್‌ ಅವರ ಒತ್ತಾಯ.

ನೀರಾವರಿ ಕಾಮಗಾರಿಗಳ ವಿಳಂಬದಿಂದಾಗಿ ಯೋಜನಾ ಮೂಲ ವೆಚ್ಚಕ್ಕಿಂತ ನಾಲ್ಕೈದು ಪಟ್ಟು ಖರ್ಚಾಗುತ್ತಿದೆ. ಜಿಲ್ಲೆಯಲ್ಲಿನ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.

ರಾಜ್ಯ ಸರ್ಕಾರ ಕನಿಷ್ಠ 10 ಸಾವಿರ ಕೋಟಿ ಆವರ್ತ ನಿಧಿಯನ್ನು ಇಡಬೇಕು. ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ತಕ್ಷಣವೇ ರೈತರ ನೆರವಿಗೆ ಧಾವಿಸಲು ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಬೇಡಿಕೆ

‘ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ವಿಶೇಷ ಅನುದಾನ ಸಿಕ್ಕಿರಲಿಲ್ಲ. ಈಗ ನಮ್ಮದೇ ಸರ್ಕಾರದ ಇರುವುದರಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಎಂಟು ಪ್ರಮುಖ ಬೇಡಿಕೆಗಳಿರುವ ಪಟ್ಟಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದೇನೆ. ಕೆಲವನ್ನಾದರೂ ಈಡೇರಿಸುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸರ್ಕಾರದ ಹಣಕಾಸಿನ ಸ್ಥಿತಿಗತಿ ಹೇಗಿದೆ ಎಂಬುದನ್ನೂ ನೋಡಬೇಕು. ಬಜೆಟ್‌ನಲ್ಲಿ ಅಗ್ಗದ ಪ್ರಚಾರ ಯೋಜನೆಗಳಿಗೆ ಒತ್ತು ನೀಡಿದರೆ ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಅನುದಾನ ಸಿಗುವುದಿಲ್ಲ. ಬಜೆಟ್‌ ಮಂಡಿಸಿದಾಗ ತನಗೆ ಏನು ಸಿಕ್ಕಿತು ಎಂದು ಜನ ಯೋಚಿಸುತ್ತಾರೆಯೇ ಹೊರತು, ರಾಜ್ಯದ ಅಭಿವೃದ್ಧಿಗೆ ಇದರಿಂದ ಎಷ್ಟು ಅನುಕೂಲವಾಗಲಿದೆ ಎಂದು ಯೋಚಿಸುತ್ತಿಲ್ಲ. ಇದು ದೇಶದ ದೌರ್ಭಾಗ್ಯ. ಹೀಗಾಗಿ ಬಜೆಟ್‌ನಲ್ಲಿ ಯಾವುದಕ್ಕೆ ಆದ್ಯತೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು’ ಎಂದು ಹೇಳಿದರು.

ಸಂಸದರು ಮಂಡಿಸಿರುವ ಬೇಡಿಕೆ

* ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು.

* ಕೊಂಡಜ್ಜಿ ಅಥವಾ ಕತ್ತಲಗೆರೆಯಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸಬೇಕು.

* ದಾವಣಗೆರೆ ನಗರದ ಅಭಿವೃದ್ಧಿಗಾಗಿ ಮಹಾನಗರ ಪಾಲಿಕೆಗೆ ₹ 150 ಕೋಟಿ ವಿಶೇಷ ಅನುದಾನ ನೀಡಬೇಕು.

* ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧ ಕಚೇರಿಯಲ್ಲೇ ಉಪವಿಭಾಗಾಧಿಕಾರಿ ಕಚೇರಿ ನಿರ್ಮಾಣಕ್ಕೆ ₹ 15 ಕೋಟಿ ಅನುದಾನ ಒದಗಿಸಬೇಕು.

* ಶಾಂತಿಸಾಗರವನ್ನು ಪ್ರವಾಸಿ ತಾಣವಾಗಿಸಲು ₹ 50 ಕೋಟಿ ನೀಡಬೇಕು.

* ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದ ಅಭಿವೃದ್ಧಿಗೆ ₹ 25 ಕೋಟಿ ಕೊಡಬೇಕು.

* ದಾವಣಗೆರೆ–ಚಿತ್ರದುರ್ಗ–ಹಿರಿಯೂರು–ತುಮಕೂರು ನೇರ ರೈಲು ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆಗೆ ಅಗತ್ಯ ಅನುದಾನ ನೀಡಬೇಕು.

* ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು.

‘ಪತ್ರಿಕಾ ವಿತರಕರ ಸಮಸ್ಯೆಗೆ ಸ್ಪಂದಿಸಲಿ’

ಹಿಂದಿನ ಸರ್ಕಾರವು 2018ರಲ್ಲಿ ದಿನಪತ್ರಿಕೆ ಹಂಚುವವರ ಕ್ಷೇಮಾಭಿವೃದ್ಧಿಗಾಗಿ ₹ 2 ಕೋಟಿ ಅನುದಾನವನ್ನು ಮಂಜೂರು ಮಾಡಿತ್ತು. ಅದರಂತೆ ನಂತರ ಮಾಧ್ಯಮ ಅಕಾಡೆಮಿಯಿಂದ ಎಲ್ಲಾ ಜಿಲ್ಲೆಗಳ ವಾರ್ತಾಧಿಕಾರಿಗಳಿಂದ ಪತ್ರಿಕಾ ವಿತರಕರ ಮಾಹಿತಿ ತರಿಸಿಕೊಳ್ಳಲಾಗಿತ್ತು. ಆದರೆ, ಯಾವುದೇ ವಿತರಕರ ನೆರವಿಗೆ ಸರ್ಕಾರ ಬಂದಿಲ್ಲ. ಕ್ಷೇಮಾಭಿವೃದ್ಧಿಗೆ ಮೀಸಲಿಟ್ಟಿರುವ ₹ 2 ಕೋಟಿ ಮೊತ್ತವನ್ನು ಈ ಬಾರಿಯ ಬಜೆಟ್‌ನಲ್ಲಿ ₹ 5 ಕೋಟಿಗೆ ಹೆಚ್ಚಿಸುವ ಮೂಲಕ ವಿತರಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾ ಪತ್ರಿಕಾ ವಿತರಕರ ಸಂಘದ ಹಿರಿಯ ಪತ್ರಿಕಾ ವಿತರಕ ಎ.ಎನ್‌. ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ.

ಸೂಳೆಕೆರೆ ಅಭಿವೃದ್ಧಿಗೆ ಹಾಗೂ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಡಿ ಬಿಟ್ಟು ಹೋಗಿರುವ ಚನ್ನಗಿರಿ ತಾಲ್ಲೂಕಿನ 36 ಕೆರೆಗಳನ್ನೂ ಸೇರಿಸಿಕೊಳ್ಳಲು ಅನುದಾನ ಕೋರಿದ್ದೇನೆ ಎನ್ನುತ್ತಾರೆ ಚನ್ನಗಿರಿ ಶಾಸಕ ಮಾಡಾಳ ವಿರೂಪಾಕ್ಷಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT