ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆಗೆ ₹5,300 ಕೋಟಿ

Last Updated 1 ಫೆಬ್ರುವರಿ 2023, 18:50 IST
ಅಕ್ಷರ ಗಾತ್ರ

ನವದೆಹಲಿ: ಹನಿ ನೀರಾವರಿ ಮೂಲಕ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ ಪ್ರಕಟಿಸಲಾಗಿದೆ.

ಈ ಯೋಜನೆಯಲ್ಲಿ 29.90 ಟಿಎಂಸಿ ಅಡಿ ನೀರು (ತುಂಗಾ ನದಿಯಿಂದ 17.40 ಟಿಎಂಸಿ ಅಡಿ ಹಾಗೂ ಭದ್ರಾ ಜಲಾಶಯದಿಂದ 12.50 ಟಿಎಂಸಿ ಅಡಿ) ಬಳಕೆ ಮಾಡಲಾಗುತ್ತದೆ. ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಸೂಕ್ಷ್ಮ ನೀರಾವರಿ ಮೂಲಕ ಸೌಲಭ್ಯ ಕಲ್ಪಿಸಲಾಗುತ್ತದೆ.

ತುಂಗಾ ನದಿಯಿಂದ 17.40 ಟಿಎಂಸಿ ಅಡಿ ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್‌ ಮಾಡಿ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಅಲ್ಲಿಂದ 29.90 ಟಿಎಂಸಿ ಅಡಿ ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್‌ ಮಾಡಿ ಅಜ್ಜಂಪುರ ಸುರಂಗದವರೆಗೆ ಕೊಂಡೊಯ್ಯಲಾಗುತ್ತದೆ. ಬಳಿಕ ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಈ ಯೋಜನೆಗಾಗಿ ನಾಲ್ಕು ಸ್ಥಳಗಳಲ್ಲಿ ನೀರು ಲಿಫ್ಟ್ ಮಾಡಲಾಗುತ್ತದೆ. ಈ ಯೋಜನೆಗೆ ಒಟ್ಟಾರೆ 7,720 ಎಕರೆಯ ಭೂಸ್ವಾಧೀನ ಮಾಡಬೇಕಿದ್ದು, ಇಲ್ಲಿವರೆಗೆ 3,922 ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಈ ಯೋಜನೆಗೆ ತಗಲುವ ವೆಚ್ಚ ₹21,473 ಕೋಟಿ. ಕೇಂದ್ರ ಸರ್ಕಾರದಿಂದ ₹9,675 ಕೋಟಿ ನೀಡಲು ಜಲಶಕ್ತಿ ಸಚಿವಾಲಯದ ಉನ್ನತಾಧಿಕಾರ ಸಮಿತಿ ಈಗಾಗಲೇ ಒಪ್ಪಿಗೆ ನೀಡಿದೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಲು ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದೆ. ಈ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ಸಿಗಲು ಕೇಂದ್ರ ಸರ್ಕಾರದ ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ.

ಈ ಯೋಜನೆಯ ₹13,507 ಕೋಟಿ ಮೊತ್ತದ ಕಾಮಗಾರಿಗಳನ್ನು ಗುತ್ತಿಗೆ ನೀಡಲಾಗಿದೆ. ಡಿಸೆಂಬರ್ ಅಂತ್ಯದ ವರೆಗೆ 6,717 ಕೋಟಿಯ ಆರ್ಥಿಕ ಪ್ರಗತಿ ಸಾಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT