ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2021: ಕೃಷಿಕರ ಕೈ ಬಲಪಡಿಸುವ ಕ್ರಮಗಳಿಲ್ಲ

Last Updated 1 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಕೃಷಿ ಉತ್ಪನ್ನ ಮಾರುಕಟ್ಟೆಯ ಸ್ವರೂಪದಲ್ಲೇ ಬದಲಾವಣೆಗೆ ಕಾರಣವಾಗಬಹುದಾದ ಮೂರು ಕೃಷಿ ಸಂಬಂಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ ಬಳಿಕ ದೇಶದ ಕೃಷಿ ಕ್ಷೇತ್ರದಲ್ಲಿ ಹಲವು ಬಗೆಯ ಹಸ್ತಕ್ಷೇಪಗಳು ಕಾಣತೊಡಗಿವೆ. ಅದರ ಭಾಗವಾಗಿಯೇ ದೇಶದ ಉದ್ದಗಲಕ್ಕೆ ದೊಡ್ಡ ಸಂಖ್ಯೆಯ ರೈತರು ಪ್ರತಿಭಟನೆಗೆ ಇಳಿದಿರುವುದನ್ನೂ ನೋಡಬಹುದು. ಈಗ ದೇಶದ ಕೃಷಿ ಕ್ಷೇತ್ರದಲ್ಲಿ
ಪ್ರಕ್ಷುಬ್ಧವಾದ ವಾತಾವರಣ ಸೃಷ್ಟಿಯಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೃಷಿ ಸಂಬಂಧಿ ಹೊಸ ಕಾಯ್ದೆಗಳಿಂದ ಪ್ರಭಾವಿತರಾಗಿ 2021ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಹಸ್ತಕ್ಷೇಪಕ್ಕೆ ಎಡೆಮಾಡುವ ಕ್ರಮಗಳನ್ನು ಪ್ರಕಟಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅವರು ಸೋಮವಾರ ಮಂಡಿಸಿದ ಬಜೆಟ್‌ನಲ್ಲಿ ಅಂತಹ ಕ್ರಮಗಳಿಂದ ದೂರ ಉಳಿದಿದ್ದಾರೆ. 2020–21ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ₹ 1,54,770 ಕೋಟಿ ಅನುದಾನವನ್ನು ಮೀಸಲಿಟ್ಟಿತ್ತು. 2021–22ರ ಬಜೆಟ್‌ನಲ್ಲಿ ಅನುದಾನದ ಮೊತ್ತ ₹ 1,48,301 ಕೋಟಿಗೆ ಇಳಿಕೆಯಾಗಿದೆ.

ಇದನ್ನೂ ಓದಿ:

ಬೆಂಬಲ ಬೆಲೆ ವ್ಯವಸ್ಥೆಯ ರದ್ದತಿ ಮತ್ತು ಕೃಷಿ ಉತ್ಪನ್ನಗಳ ಖರೀದಿಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಬಹುದು ಎಂಬ ಆತಂಕದಿಂದ ಪ್ರತಿಭಟನೆಗೆ ಇಳಿದಿರುವ ರೈತರನ್ನು ಸಮಾಧಾನಪಡಿಸಲು ಹಣಕಾಸು ಸಚಿವೆ ಬಜೆಟ್ ಭಾಷಣದಲ್ಲಿ ಪ್ರಯತ್ನಿಸಿದ್ದಾರೆ. ಎನ್‌ಡಿಎ ಸರ್ಕಾರ, ಅದರಲ್ಲೂ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗೋಧಿ ಮತ್ತು ಭತ್ತದ ಖರೀದಿಯ ಪ್ರಮಾಣದಲ್ಲಿ ಹೆಚ್ಚಳ ಆಗಿರುವುದನ್ನು ಒತ್ತಿ ಹೇಳಿರುವುದರ ಹಿಂದೆ ಇದೇ ಉದ್ದೇಶವಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ‘ಕೃಷಿ ಮೂಲಸೌಕರ್ಯ ನಿಧಿ’ ಅಡಿಯಲ್ಲಿ ಅನುದಾನ ಒದಗಿಸಲಾಗುವುದು ಮತ್ತು ಆನ್‌ಲೈನ್‌ ಮೂಲಕ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಇ–ನ್ಯಾಮ್‌ ಪೋರ್ಟಲ್‌ ಜತೆ 1,000 ಮಂಡಿಗಳನ್ನು ಹೊಸದಾಗಿ ಜೋಡಣೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ. ಆದರೆ, ಮೂರು ಹೊಸ ಕಾಯ್ದೆಗಳ ವಿಚಾರವನ್ನು ಮಾತನಾಡುವಾಗ ಕೇಂದ್ರ ಸರ್ಕಾರವು, ‘ವರ್ತಕರು ನೇರವಾಗಿ ಕೃಷಿ ಮಾರುಕಟ್ಟೆಗೆ ಬಂದು ಸ್ಪರ್ಧಾತ್ಮಕ ದರದಲ್ಲಿ ಖರೀದಿ ಮಾಡುತ್ತಾರೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ’ ಎಂಬ ವಾದವನ್ನು ಮುಂದಿಡುತ್ತಿದೆ. ಇದಕ್ಕೆ ಪೂರಕವಾಗಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಕಿರು ಮಾರುಕಟ್ಟೆ (ರೂರಲ್‌ ಹಾತ್‌) ಅಭಿವೃದ್ಧಿಗೆ ಅನುದಾನ ಒದಗಿಸಬಹುದು ಎಂಬ ನಿರೀಕ್ಷೆ ಇತ್ತು. ಕೃಷಿ ಉತ್ಪನ್ನಗಳಿಗೆ ಸರಿಯಾದ ದರ ಪಡೆಯುವ ಹಕ್ಕನ್ನು ಪ್ರತಿಪಾದಿಸಲು ನೆರವಾಗುವಂತೆ ರೈತ– ಉತ್ಪಾದಕರ ಸಂಸ್ಥೆ (ಎಫ್‌ಪಿಒ) ಸ್ಥಾಪನೆಗೂ ಬಜೆಟ್‌ನಲ್ಲಿ ಉತ್ತೇಜನ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಎರಡೂ ವಿಚಾರಗಳ ಕುರಿತು ಬಜೆಟ್‌ನಲ್ಲಿ ಉಲ್ಲೇಖವೂ ಇಲ್ಲ.

ಇದನ್ನೂ ಓದಿ:

ಸಾಮಾನ್ಯವಾಗಿ ಎಲ್ಲ ಬಜೆಟ್‌ಗಳಲ್ಲೂ ಕೃಷಿ ಸಾಲಕ್ಕಾಗಿ ಒದಗಿಸುವ ಅನುದಾನದ ಮೊತ್ತದಲ್ಲಿ ಹೆಚ್ಚಳ ಮಾಡುವುದನ್ನು ಕಾಣಬಹುದು. ಪ್ರಸಕ್ತ ಬಜೆಟ್‌ನಲ್ಲಿ ಕೃಷಿ ₹ 16.5 ಲಕ್ಷ ಕೋಟಿಯಷ್ಟು ಕೃಷಿ ಸಾಲ ವಿತರಿಸುವ ಗುರಿಯನ್ನು ಪ್ರಕಟಿಸಲಾಗಿದೆ. ಆದರೆ, ತಳ ಮಟ್ಟದಲ್ಲಿ ಕೃಷಿ ಸಾಲ ಯೋಜನೆಯ ಅನುಷ್ಠಾನವನ್ನು ಸರಿಯಾಗಿ ಅವಲೋಕಿಸಿದರೆ ಸಾಲ ವಿತರಣೆಯಲ್ಲಿ ದೊಡ್ಡ ಪ್ರಮಾಣದ ಅಸಮಾನತೆ ಎದ್ದು ಕಾಣುತ್ತದೆ. ದೇಶದಲ್ಲಿ ಕೃಷಿ ಜಮೀನುಗಳ ‘ಮ್ಯುಟೇಷನ್‌’ ಬದಲಾವಣೆಗೆ ಸ್ವಯಂಚಾಲಿತವಾದ ವ್ಯವಸ್ಥೆ ಇಲ್ಲ. ‌ಜಮೀನಿನ ದಾಖಲೆಗಳಲ್ಲಿ ಇರುವ ನ್ಯೂನತೆಗಳಿಂದಾಗಿ ಹೆಚ್ಚಿನ ಸಂಖ್ಯೆಯ ರೈತರು ಕೃಷಿ ಸಾಲ ಸೌಲಭ್ಯದಿಂದ ಹೊರಗುಳಿಯುತ್ತಾರೆ. ವ್ಯವಸ್ಥೆಯಲ್ಲಿ ಇರುವ ಲೋಪದಿಂದಾಗಿ ಸಾಮಾಜಿಕ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಹಾಗೂ ಕಡಿಮೆ ಶಿಕ್ಷಣ ಪಡೆದಿರುವ ರೈತರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ.

ಜಮೀನಿನ ಪಹಣಿ (ರೆಕಾರ್ಡ್‌ ಆಫ್‌) ದಾಖಲೆಗಳನ್ನು ಸರಿಪಡಿಸುವುದಕ್ಕಾಗಿ ‘ಸ್ವಾಮಿತ್ವ’ ಯೋಜನೆಯನ್ನು ಅನುಷ್ಠಾನಕ್ಕೆ ತರುವುದಾಗಿ ಈ ಬಜೆಟ್‌ನಲ್ಲಿ ಉಲ್ಲೇಖಿಸಿರುವುದು ಆಶಾದಾಯಕ ಬೆಳವಣಿಗೆ. ದಾಖಲೆಗಳಲ್ಲಿನ ಲೋಪ ಮಾತ್ರವಲ್ಲ, ಕೃಷಿ ಸಾಲ ವಿತರಣೆಯ ಪ್ರಕ್ರಿಯೆಯಲ್ಲಿನ ಸಂಕೀರ್ಣತೆ ಕೂಡ ದೊಡ್ಡ ತೊಡಕಾಗಿದೆ. ರೈತನೊಬ್ಬ ಬ್ಯಾಂಕ್‌ನಿಂದ ಕೃಷಿ ಸಾಲ ಪಡೆಯಬೇಕಾದರೆ ಆ ವ್ಯಾಪ್ತಿಯಲ್ಲಿರುವ ಎಲ್ಲ ಬ್ಯಾಂಕ್‌ಗಳಿಗೂ ಹೋಗಿ ‘ಸಾಲ ಬಾಕಿ ಇಲ್ಲ’ (ಬೇಬಾಕಿ) ಎಂಬ ಪ್ರಮಾಣಪತ್ರ ತಂದು ಹಾಜರುಪಡಿಸಬೇಕಿದೆ. ಇದಕ್ಕಾಗಿ ಹೆಚ್ಚಿನ ಸಮಯ ಮತ್ತು ಹಣ ವ್ಯಯಿಸಬೇಕಾಗುತ್ತದೆ. ಈ ರೀತಿಯ ಸಮಸ್ಯೆಗಳನ್ನು ಎದುರಿಸುವುದು ಬೇಡ ಎಂಬ ಕಾರಣಕ್ಕಾಗಿ ಹೆಚ್ಚಿನ ರೈತರು ಚಿನ್ನವನ್ನು ಅಡಮಾನವಿರಿಸಿ ಕೃಷಿ ಸಾಲ ಪಡೆಯಲು ಮುಂದಾಗುತ್ತಾರೆ. ಆದರೆ, ಬಡ ರೈತರಲ್ಲಿ ಅಡಮಾನ ಇರುವುದಕ್ಕೆ ಅಗತ್ಯವಾದಷ್ಟು ಚಿನ್ನ ಲಭ್ಯವಿಲ್ಲದ ಕಾರಣ ಕೃಷಿ ಸಾಲ ಯೋಜನೆಯ ಲಾಭ ಹೆಚ್ಚಿನ ಪ್ರಮಾಣದಲ್ಲಿ ಶ್ರೀಮಂತ ರೈತರ ಪಾಲಾಗುತ್ತಿದೆ. ಡಿಜಟಲೀಕರಣದ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಡಿಜಿಟಲೀಕರಣ ಪ್ರಕ್ರಿಯೆಯು ಬಡವರಿಗೆ ಅನುಕೂಲ ಮಾಡುವಂತಹ ವಿಷಯಗಳನ್ನು ಒಳಗೊಳ್ಳಬೇಕಿದೆ. ರೈತರ ಸಾಲಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಡಿಜಿಟಲೀಕರಿಸಿ ಬ್ಯಾಂಕ್‌ಗಳಿಗೆ ಒದಗಿಸಿದರೆ ಕೃಷಿಕರು ಸಕಾಲಕ್ಕೆ ಸಾಲ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಇಂತಹ ಕೆಲವು ವಿಚಾರಗಳ ಕುರಿತು ತುರ್ತಾಗಿ ಗಮನಹರಿಸಬೇಕಾದ ಅಗತ್ಯವಿದೆ.

ಲೇಖಕಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ(ಐಸೆಕ್‌)ಯಲ್ಲಿ ಪ್ರಾಧ್ಯಾಪಕಿ

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT