ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2021: ಸಾಗಣೆ ಮೂಲಸೌಕರ್ಯಕ್ಕೆ ಒತ್ತು

Last Updated 1 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು 2021-22ನೇ ಸಾಲಿನ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ದಾಖಲೆಯ ₹1.10 ಲಕ್ಷ ಕೋಟಿ ಅನುದಾನವನ್ನು ಒದಗಿಸಿದೆ. ಇದರಲ್ಲಿ ₹1.07 ಲಕ್ಷ ಕೋಟಿ ಬಂಡವಾಳ ವೆಚ್ಚವಾಗಿದೆ. ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ಸರಕುಗಳನ್ನು ಸಾಗಣೆ ಮಾಡಿದ ರೈಲ್ವೆ ಇಲಾಖೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಹೊಸದಾಗಿ 2 ಸರಕು ಕಾರಿಡಾರ್
ಭಾರತೀಯ ರೈಲ್ವೆ ಇಲಾಖೆಯು 2030ರ ರಾಷ್ಟ್ರೀಯ ರೈಲ್ವೆ ಯೋಜನೆಯನ್ನು ಸಿದ್ಧಪಡಿಸಿದೆ. ಮೇಕ್ ಇನ್ ಇಂಡಿಯಾ ಭಾಗವಾಗಿ, ರೈಲ್ವೆ ಸರಕು ಸಾಗಣೆ ವೆಚ್ಚವನ್ನು ತಗ್ಗಿಸುವುದಕ್ಕಾಗಿ 2030ರ ವೇಳೆಗೆ ಭವಿಷ್ಯದ ರೈಲ್ವೆಯನ್ನು ಸಜ್ಜುಗೊಳಿಸುವುದು ಇದರ ಉದ್ದೇಶ. ಇದಕ್ಕಾಗಿ ಪೂರ್ವಸರಕು ಕಾರಿಡಾರ್‌(ಇಡಿಎಫ್‌ಸಿ) ಮತ್ತು ಪಶ್ಚಿಮ ಸರಕು ಕಾರಿಡಾರ್‌ಗಳನ್ನು (ಡಬ್ಲ್ಯುಡಿಎಫ್‌ಸಿ) ರೂಪಿಸುತ್ತಿದ್ದು, ಜೂನ್ 2022ರೊಳಗೆ ಇವು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

*ಇಡಿಎಫ್‌ಸಿ: ಈ ವರ್ಷವೇ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) 263 ಕಿ.ಮೀ. ದೂರದ ಸೋನೆನಗರ-ಗೊಮೊಹ್ ವಿಭಾಗ ಕಾರ್ಯಾರಂಭ; 274.3 ಕಿ.ಮೀ. ದೂರದ ಗೊಮೊಹ್-ಡಂಕುನಿ ವಿಭಾಗ ಶೀಘ್ರವೇ ಆರಂಭ

*ಭವಿಷ್ಯದ ದಿನಗಳಲ್ಲಿ ಸರಕು ಕಾರಿಡಾರ್ ಯೋಜನೆಗಳನ್ನು ರೈಲ್ವೆ ಕೈಗೆತ್ತಿಕೊಳ್ಳಲಿದೆ; ಖರಗ್‌ಪುರದಿಂದ ವಿಜಯವಾಡದ ಪೂರ್ವ ಕರಾವಳಿ ಕಾರಿಡಾರ್, ಭೂಸಾವಲ್‌ನಿಂದ ಖರಗ್‌ಪುರ ಹಾಗೂ ಡಂಕುನಿವರೆಗೆ ಪೂರ್ವ-ಪಶ್ಚಿಮ ಕಾರಿಡಾರ್ ಮತ್ತು ಇಟಾರ್ಸಿಯಿಂದ ವಿಜಯವಾಡದವರೆಗೆ ಉತ್ತರ-ದಕ್ಷಿಣ ಕಾರಿಡಾರ್ ಕಾರ್ಯಾರಂಭ ಮಾಡಲಿವೆ.

ನೂರರಷ್ಟು ವಿದ್ಯುದೀಕರಣ ಗುರಿ
ಬ್ರಾಡ್‌ಗೇಜ್ ಮಾರ್ಗದ ವಿದ್ಯುದೀಕರಣ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 2021ರ ಅಂತ್ಯದ ವೇಳೆಗೆ ಶೇ 72ರಷ್ಟು ಗುರಿ ಸಾಧಿಸಲಿದ್ದು,2023ರ ಡಿಸೆಂಬರ್ ವೇಳಗೆ ಶೇ 100ರಷ್ಟು ವಿದ್ಯುದೀಕರಣ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.

ಸುರಕ್ಷೆ ಜೊತೆಗೆ ಆರಾಮದಾಯಕ
ಪ್ರಯಾಣಿಕರ ಅನುಕೂಲತೆ ಮತ್ತು ಸುರಕ್ಷತೆಯ ಬಗ್ಗೆ ರೈಲ್ವೆ ಇಲಾಖೆ ಒತ್ತು ನೀಡಿದೆ. ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ಒದಗಿಸುವ ಸಲುವಾಗಿ ರೈಲ್ವೆ ಪ್ರವಾಸಿ ಮಾರ್ಗಗಳಲ್ಲಿ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ವಿಸ್ಟಾಡೋಮ್ ಎಲ್‌ಎಚ್‌ಬಿ ಬೋಗಿಗಳನ್ನು ಈಗಾಗಲೇ ಪರಿಚಯಿಸಿದೆ.

*ಕಳೆದ ಕೆಲವು ವರ್ಷಗಳಲ್ಲಿ ತೆಗೆದುಕೊಂಡ ಸುರಕ್ಷತಾ ಕ್ರಮಗಳು ಫಲಿತಾಂಶ ನೀಡಿವೆ

*ಮಾನವ ದೋಷದಿಂದ ಉಂಟಾಗುವ ರೈಲ್ವೆ ಅಪಘಾತ ತಡೆಗೆ ದೇಶೀಯವಾಗಿ ವಿನ್ಯಾಸ ಮಾಡಲಾದ ಅಪಘಾತ ತಡೆ ವ್ಯವಸ್ಥೆ ಅಳವಡಿಕೆ

*ಹೆಚ್ಚಿನ ಸಾಂದ್ರತೆಯ ರೈಲ್ವೆ ಜಾಲ ಹೊಂದಿರುವ ಮತ್ತು ಹೆಚ್ಚು ಬಳಸಿದ ಮಾರ್ಗಗಳಲ್ಲಿ ಸ್ವಯಂಚಾಲಿತ ರೈಲು ಘರ್ಷಣೆ ತಡೆ ವ್ಯವಸ್ಥೆ ರೂಪಿಸಲು ಕಾರ್ಯಕ್ರಮ

ಯಾರು ಏನೆಂದರು?

ಎಪಿಎಂಸಿ ಬಲವರ್ಧನೆಗೆ ಅಗತ್ಯವಿರುವ ಅನುದಾನ ಒದಗಿಸಲಾಗಿದೆ. ಕೃಷಿ ಸಾಲದ ಮೊತ್ತವನ್ನೂ ಹೆಚ್ಚಿಸಲಾಗಿದೆ. 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳುವಂತೆ ಮಾಡುವ ಗುರಿ ಇದ್ದು, ಇದಕ್ಕಾಗಿ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ
-ನರೇಂದ್ರ ಸಿಂಗ್‌ ತೋಮರ್‌, ಕೇಂದ್ರ ಕೃಷಿ ಸಚಿವ

*
ಸಮಾಜದ ಎಲ್ಲಾ ಸ್ತರಗಳ ಜನರ ಶ್ರೇಯೋಭಿವೃದ್ಧಿ ಯನ್ನು ಗಮನದಲ್ಲಿಟ್ಟು ಕೊಂಡು ಮಂಡಿಸಿರುವ ಬಜೆಟ್‌. ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಲಪಡಿಸಲು ವಿಶೇಷ ಒತ್ತು ನೀಡಲಾಗಿದೆ.
-ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

**
ಬಡವರು ಬಡವರಾಗಿಯೇ, ಶ್ರೀಮಂತರು ಶ್ರೀಮಂತರಾಗಿಯೇ ಉಳಿಯಬೇಕೆಂಬ ಮೂಲ ತತ್ವದಡಿ ಮಂಡನೆಯಾಗಿರುವ ಬಜೆಟ್‌ ಇದು. ರೈತರ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೀಗಿದ್ದರೂ ಕೃಷಿ ವಲಯದ ಬಲವರ್ಧನೆಗೆ ಪೂರಕ ಕ್ರಮಗಳನ್ನು ಕೈಗೊಂಡಿಲ್ಲ.
-ಸೀತಾರಾಂ ಯೆಚೂರಿ, ಸಿಪಿಐ (ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ

**
ಗಣರಾಜ್ಯೋತ್ಸವದ ದಿನ ಸಾವಿರಾರು ರೈತರು ಟ್ರ್ಯಾಕ್ಟರ್‌ ರ‍್ಯಾಲಿ ಕೈಗೊಂಡಿದ್ದರು. ಅವರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಸೆಸ್‌ ವಿಧಿಸಲಾಗಿದೆ. ಬಡವರು, ಶ್ರಮಿಕರು ಹಾಗೂ ವಲಸೆ ಕಾರ್ಮಿಕರ ಕಲ್ಯಾಣವನ್ನೂ ಕಡೆಗಣಿಸಲಾಗಿದೆ.
-ಪಿ.ಚಿದಂಬರಂ, ಕಾಂಗ್ರೆಸ್‌ ಮುಖಂಡ

*
ಇದು ನಿರಾಶಾದಾಯಕ ಬಜೆಟ್‌. ದೇಶದ ಕೆಲ ಕಾರ್ಪೊರೇಟ್‌ ಕಂಪನಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಕೊಂಡು ಮಂಡಿಸಿರುವ ಬಜೆಟ್‌. ಇದರಿಂದ ಸಾಮಾನ್ಯ ಜನರ ಬದುಕು ಸುಧಾರಿಸೊಲ್ಲ. ಹಣದುಬ್ಬರದಿಂದ ಅವರ ಸಂಕಷ್ಟ ಇನ್ನಷ್ಟು ಹೆಚ್ಚುತ್ತದೆ
-ಅರವಿಂದ್‌ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

**
ರೈತ, ಜನ ಹಾಗೂ ದೇಶ ವಿರೋಧಿ ಬಜೆಟ್‌. ಕೇಂದ್ರ ಸರ್ಕಾರವು ವಿಮೆಯಿಂದ ಹಿಡಿದು ಪಿಎಸ್‌ಯುವರೆಗೆ ಎಲ್ಲವನ್ನೂ <br/>ಮಾರಲು ಹೊರಟಿದೆ. ಸುಳ್ಳು ಭರವಸೆಗಳ ಮೂಲಕ ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿದೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT