ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ 2023: ಖಜಾನೆ ಭರ್ತಿಗಾಗಿ ಖರ್ಚಿಗೆ ಉತ್ತೇಜನ

ಬಜೆಟ್ ಗಾತ್ರ: ₹45.03 ಲಕ್ಷ ಕೋಟಿ
Last Updated 1 ಫೆಬ್ರುವರಿ 2023, 19:35 IST
ಅಕ್ಷರ ಗಾತ್ರ

ನವದೆಹಲಿ: ಆಕರ್ಷಕ ಹೆಸರಿನ ನವನವೀನ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸುವ ಮೂಲಕ ಎಲ್ಲ ವರ್ಗದ ಜನರಿಗೆ ‘ಪಂಚಕಜ್ಜಾಯ’ ನೀಡಿ ಬಿಜೆಪಿಯ ಮತ ಬುಟ್ಟಿಯನ್ನು ಇನ್ನಷ್ಟು ಗಟ್ಟಿ ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಯತ್ನಿಸಿದ್ದಾರೆ. ಉಳಿತಾಯಕ್ಕೆ ಆದ್ಯತೆ ನೀಡುತ್ತಿದ್ದ ಜನರು ಹೆಚ್ಚು ಖರ್ಚು ಮಾಡುವಂತೆ ಹುರಿದುಂಬಿಸಿ ಕೇಂದ್ರದ ಖಜಾನೆ ಭರ್ತಿ ಮಾಡುವ ಯತ್ನವನ್ನೂ ಮಾಡಿದ್ದಾರೆ.

ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಒಂಬತ್ತು ರಾಜ್ಯಗಳ ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಮಂಡಿಸಿರುವ ಬಜೆಟ್‌ನಲ್ಲಿ, ಮತ ಸೆಳೆಯಬಹುದಾದ ಹತ್ತು ಹಲವು ಜನಪ್ರಿಯ ಯೋಜನೆಗಳನ್ನು ಸಂಭ್ರಮದಿಂದ ಘೋಷಿಸಿದ್ದಾರೆ. ಲೋಕಸಭೆಯಲ್ಲಿ ಬುಧವಾರ ಮಂಡನೆಯಾದ ಬಜೆಟ್‌ನಲ್ಲಿ, ‘ಇದು ಅಮೃತ ಕಾಲದ ಮೊದಲ ಬಜೆಟ್‌. ವಿಶ್ವವು ಭಾರತೀಯ ಆರ್ಥಿಕತೆಯ‌ನ್ನು ಪ್ರಕಾಶಮಾನವಾದ ನಕ್ಷತ್ರವೆಂದು ಗುರುತಿಸಿದೆ’ ಎಂದು ಬಣ್ಣಿಸಿದ್ದಾರೆ. ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಬಸವಳಿದಿರುವ ಜನಸಮುದಾಯವನ್ನು ಸಂತೃಪ್ತಿಪಡಿಸುವ ಹಲವು ಉಪಕ್ರಮಗಳನ್ನು ಘೋಷಿಸಿದ್ದಾರೆ. ಅದೇ ವೇಳೆ, ಕೋವಿಡ್‌ ಅಲೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಮಧ್ಯಮ ವರ್ಗ ಹಾಗೂ ಬಡವರಿಗೆ ನೀಡುತ್ತಿದ್ದ ಹಲವು ಸಬ್ಸಿಡಿಗಳ ಮೊತ್ತದಲ್ಲಿ ಕಡಿತ ಮಾಡುವುದಾಗಿ ಪ್ರಕಟಿಸಿದ್ದಾರೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಮೀಸಲಿಟ್ಟಿರುವ ಅನುದಾನವು ಶೇ 38ರಷ್ಟು ಕಡಿಮೆ ಆಗಿದೆ.

2024ರ ಲೋಕಸಭಾ ಚುನಾವಣೆಗೆ ಮುನ್ನ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ಅವರು, ಮಧ್ಯಮ ವರ್ಗದ ಜನರಿಗೆ ಆದಾಯ ತೆರಿಗೆ ಪಾವತಿಯಲ್ಲಿ ನಿರಾಳತೆ ಒದಗಿಸುವ ಯತ್ನ ಮಾಡಿದ್ದಾರೆ. ಹೊಸ ತೆರಿಗೆ ಯೋಜನೆಯನ್ನು ಆಯ್ಕೆ ಮಾಡಿಕೊಂಡಿರುವವರಿಗೆ ಸಾಕಷ್ಟು ವಿನಾಯಿತಿಗಳನ್ನು ಪ್ರಕಟಿಸುವ ಮೂಲಕ, ಜನರು ಹಳೆಯ ಯೋಜನೆಯಿಂದ ಹೊಸ ಯೋಜನೆಯನ್ನು ಅನಿವಾರ್ಯವಾಗಿ ಆಯ್ಕೆ ಮಾಡಿಕೊಳ್ಳಲು ಭೂಮಿಕೆ ಸಿದ್ಧಪಡಿಸಿದ್ದಾರೆ.

2020ರಲ್ಲಿ ಪರಿಚಯಿಸಿರುವ ಹೊಸ ತೆರಿಗೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಹಲವು ಉತ್ತೇಜನಗಳನ್ನು ‍ನೀಡಲಾಗಿದೆ. ವಾರ್ಷಿಕ ₹7 ಲಕ್ಷ ಆದಾಯ ಹೊಂದಿರುವವರು ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡರೆ ಏಪ್ರಿಲ್‌ 1ರ ನಂತರ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಜತೆಗೆ, ₹50 ಸಾವಿರ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸಹ ದೊರಕಲಿದೆ. ತೆರಿಗೆ ಹಂತಗಳನ್ನು ಐದಕ್ಕೆ ಇಳಿಸಲಾಗಿದೆ. ಹಳೆಯ ತೆರಿಗೆ ಯೋಜನೆ ಪ್ರಕಾರ, ₹5 ಲಕ್ಷಗಳವರೆಗೆ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ‘ಈ ಪ್ರಸ್ತಾವಿತ ಬದಲಾವಣೆಗಳು ಹೊಸ ಯೋಜನೆ ಆಯ್ಕೆ ಮಾಡುವ ಎಲ್ಲ ತೆರಿಗೆ ಪಾವತಿದಾರರಿಗೆ ದೊಡ್ಡ ನಿರಾಳತೆ ಒದಗಿಸಲಿದೆ’ ಎಂದು ಸಚಿವರು ಹೇಳಿಕೊಂಡಿದ್ದಾರೆ.

ಬಹುಸಂಖ್ಯೆಯ ತೆರಿಗೆ ಪಾವತಿದಾರರು ಈಗಲೂ ನೆಚ್ಚಿಕೊಂಡಿರುವ ಹಳೆಯ ಯೋಜನೆಯಲ್ಲಿ ಯಾವುದೇ ಮಾರ್ಪಾಡು ಮಾಡಿಲ್ಲ. ವೇತನದಾರರನ್ನು ಹೊರತುಪಡಿಸಿ ಯಾವುದೇ ತೆರಿಗೆದಾರರು ಒಮ್ಮೆ ಹೊಸ ಯೋಜನೆ ಆಯ್ಕೆ ಮಾಡಿದ ನಂತರ ಹಳೆಯ ಯೋಜನೆಗೆ ಮರಳುವಂತಿಲ್ಲ. ಹೊಸ ಯೋಜನೆಯಲ್ಲಿ ನಿಗದಿತ ಕಡಿತ ₹52,500 ಹಾಗೂ ನಿವೃತ್ತಿ ಪ್ರಯೋಜನಗಳನ್ನು ಬಿಟ್ಟು ಬೇರೆ ಕಡಿತಗಳ ಸೌಲಭ್ಯ ದೊರಕುವುದಿಲ್ಲ.

‘ಹೊಸ ತೆರಿಗೆ ಯೋಜನೆ ಆಯ್ಕೆ ಮಾಡಿಕೊಂಡರೆ ₹9 ಲಕ್ಷ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿ ₹45,000 ತೆರಿಗೆ ಪಾವತಿಸಬೇಕು. ಇದು ಆಕೆ ಅಥವಾ ಆತನ ಆದಾಯದ ಶೇ 5ರಷ್ಟು ಮಾತ್ರ. ಇದರಿಂದ ಅವರು ಈಗ ಪಾವತಿಸಬೇಕಿರುವ ಮೊತ್ತದ ಶೇ 25ರಷ್ಟು ಕಡಿತವಾಗಲಿದೆ. ಅದೇ ರೀತಿ, ₹15 ಲಕ್ಷ ಆದಾಯ ಹೊಂದಿರುವ ವ್ಯಕ್ತಿ ₹1.5 ಲಕ್ಷ ಅಥವಾ ಆದಾಯದ ಶೇ 10ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ’ ಎಂದು ಸಚಿವರು ವಿವರಿಸಿದ್ದಾರೆ.

ಜಾಗತಿಕ ಆರ್ಥಿಕ ಹಿಂಜರಿತದ ಲಕ್ಷಣಗಳು ಕಾಣಿಸಿಕೊಂಡಿರುವ ಹೊತ್ತಿನಲ್ಲಿ ಉದ್ಯೋಗ ಸೃಷ್ಟಿಗೆ ‘ಬೂಸ್ಟರ್‌ ಡೋಸ್‌’ ನೀಡಲು ಬಜೆಟ್‌ನಲ್ಲಿ ಪ್ರಯತ್ನಿಸಲಾಗಿದೆ. ಈ ಸಲ ಬಂಡವಾಳ ವೆಚ್ಚವನ್ನು ₹10 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ.

ಇದು ಭಾರತದ ಜಿಡಿಪಿಯ ಶೇ 3.3ರಷ್ಟು. ಕಳೆದ ಸಾಲಿಗೆ ಹೋಲಿಸಿದರೆ ಇದನ್ನು ಶೇ 33ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರ.

ಈ ವರ್ಷ ₹18 ಲಕ್ಷ ಕೋಟಿಯಷ್ಟು ಸಾಲ ಮಾಡಲು ಪ್ರಸ್ತಾಪಿಸಲಾಗಿದೆ. ಇದರಿಂದಾಗಿ, ದೊಡ್ಡ ಮೊತ್ತವು ಸಾಲದ ಬಡ್ಡಿ ಪಾವತಿಗೆ ಹೋಗಲಿದೆ. ಈ ಮೊತ್ತ ₹10.79 ಲಕ್ಷ ಕೋಟಿಗಳಷ್ಟು. ರಾಜ್ಯ ಸರ್ಕಾರಗಳಿಗೆ ಒಕ್ಕೂಟ ಸರ್ಕಾರದಿಂದ ಸಂದಾಯ ಆಗಬೇಕಿರುವ ಮೊತ್ತ ₹18.62 ಲಕ್ಷ ಕೋಟಿಗಳಷ್ಟು.

ಕೋವಿಡ್‌ ಸಂಕಷ್ಟ ಕಾಲದಲ್ಲಿ ಗ್ರಾಮೀಣ ಜನರನ್ನು ಮೇಲೆತ್ತಿದ್ದ ಹಾಗೂ ಗ್ರಾಮೀಣ ಉದ್ಯೋಗ ಸೃಷ್ಟಿಯಲ್ಲಿ ಸಂಚಲನ ಉಂಟು ಮಾಡಿರುವ ‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯ ಅನುದಾನವನ್ನು ಶೇ 32ರಷ್ಟು ಕಡಿಮೆ ಮಾಡಲಾಗಿದೆ. ಈ ಯೋಜನೆಗೆ 2021–22ರಲ್ಲಿ ₹89,154 ಕೋಟಿ ಮೀಸಲಿಡಲಾಗಿತ್ತು. 2023-24ರ ಸಾಲಿನಲ್ಲಿ ಅನುದಾನವನ್ನು ₹61,032 ಕೋಟಿಗೆ ಇಳಿಸಲಾಗಿದೆ. ಆಹಾರ ಸಬ್ಸಿಡಿ, ಎಲ್‌ಪಿಜಿ ಸೇರಿದಂತೆ ಹಲವು ಸಬ್ಸಿಡಿಗಳಿಗೆ ದೊಡ್ಡ ಪ್ರಮಾಣದಲ್ಲಿ ಕತ್ತರಿ ಪ್ರಯೋಗ ಮಾಡಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಬಂಡವಾಳ ಹಿಂದೆಗೆತದ ಮಂತ್ರ ಪಠಿಸುತ್ತಿದ್ದ ಸರ್ಕಾರವು ಈ ವರ್ಷ ಅದರ ಗಾತ್ರ, ಪ್ರಮಾಣಗಳ ಕುರಿತು ಮೌನಕ್ಕೆ ಶರಣಾಗಿದೆ. ರೈಲ್ವೆ, ವಿದ್ಯುತ್‌ ಕ್ಷೇತ್ರಗಳ ಖಾಸಗೀಕರಣದ ವಿಚಾರದಲ್ಲಿ ಸರ್ಕಾರವು ಮತ್ತೊಂದು ಹೆಜ್ಜೆ ಮುಂದಕ್ಕೆ ಇಟ್ಟಿದೆ. ಜತೆಗೆ, ರೈಲ್ವೆ ಕ್ಷೇತ್ರಕ್ಕೆ ₹2.40 ಲಕ್ಷ ಕೋಟಿಯಷ್ಟು ಮೀಸಲಿಡಲಾಗಿದೆ. ಇದು 2013–14ರ ಸಾಲಿಗಿಂತ ಒಂಬತ್ತು ಪಟ್ಟು ಹೆಚ್ಚು ಎಂದು ಹೇಳಿಕೊಂಡಿದೆ.

ಯುವಕರಿಗೆ ಉದ್ಯೋಗ ಸೃಷ್ಟಿ, ಅಭಿವೃದ್ಧಿ, ಸುಸ್ಥಿರ ಆರ್ಥಿಕ ವಾತಾವರಣ ಸೃಷ್ಟಿಸಲು ಏಳು ಆದ್ಯತಾ ಕ್ಷೇತ್ರಗಳನ್ನು ಗುರುತಿಸಿ ಬಲ ತುಂಬಲಾಗಿದೆ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಮೂಲಸೌಕರ್ಯಗಳು ಹಾಗೂ ಹೂಡಿಕೆ, ಪರಿಸರ ಸಹ್ಯ ಬೆಳವಣಿಗೆ, ಯುವ ಶಕ್ತಿ, ಹಣಕಾಸು ವಲಯ, ಕಟ್ಟಕಡೆಯ ಫಲಾನುಭವಿಗೆ ಸೌಕರ್ಯ ಒದಗಿಸಲಾಗುತ್ತದೆ ಎಂಬ ಸಪ್ತರ್ಷಿ ಮಾರ್ಗವನ್ನು ನಿರ್ಮಲಾ ಸೀತಾರಾಮನ್‌ ಅವರು ತೋರಿಸಿದ್ದಾರೆ.

ಸಿರಿಧಾನ್ಯವನ್ನು ಪ್ರೋತ್ಸಾಹಿಸಲು ಹಲವು ಉಪಕ್ರಮಗಳನ್ನು ಪ್ರಕಟಿಸಲಾಗಿದೆ. 50 ಹೊಸ ವಿಮಾನ ನಿಲ್ದಾಣಗಳನ್ನು ಆರಂಭಿಸಲಾಗುತ್ತದೆ ಎಂದು ಘೋಷಿಸಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡದ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬುಡಕಟ್ಟು ಸಮುದಾಯಗಳ ಏಳಿಗೆಗೆ ಹಲವು ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ.

ಯಾವುದಕ್ಕೆ ಕತ್ತರಿ?

lಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಅನುದಾನ ₹29 ಸಾವಿರ ಕೋಟಿ ಕಡಿಮೆ

lಆಹಾರಕ್ಕೆ ನೀಡುವ ಸಬ್ಸಿಡಿ ಪ್ರಮಾಣ 2022-23 ಕ್ಕಿಂತ ₹90 ಸಾವಿರ ಕೋಟಿಗಳಷ್ಟು ಕಡಿಮೆಯಾಗಿದೆ. (2022-23ರಲ್ಲಿ ₹2.87 ಲಕ್ಷ ಕೋಟಿ ಇತ್ತು. ಈ ವರ್ಷ ₹1.97 ಲಕ್ಷ ಕೋಟಿಗೆ ಇಳಿದಿದೆ)

lರಸಗೊಬ್ಬರದ ಮೇಲಿನ ಸಬ್ಸಿಡಿ ಪ್ರಮಾಣ ₹50 ಸಾವಿರ ಕೋಟಿ ಕಡಿಮೆ

lಕೈಗಾರಿಕಾ ಅಭಿವೃದ್ಧಿಗೆ ಕಳೆದ ಸಾಲಿನಲ್ಲಿ ₹53 ಸಾವಿರ ಕೋಟಿ ಇಡಲಾಗಿತ್ತು. ಈ ವರ್ಷ ₹48 ಸಾವಿರ ಕೋಟಿ ಆಗಿದೆ

lಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯಕ್ಕೆ 2022–23ರಲ್ಲಿ ₹5,020 ಕೋಟಿ ಅನುದಾನ ಇತ್ತು. ಈ ವರ್ಷ ₹3,097 ಕೋಟಿ ನೀಡಲಾಗಿದೆ (ಇಳಿಕೆ ಶೇ38)

lಗ್ರಾಮೀಣಾಭಿವೃದ್ಧಿ ಸಚಿವಾಲಯದ ಅನುದಾನವನ್ನು ಶೇ 13ರಷ್ಟು ಕಡಿತ ಮಾಡಲಾಗಿದ್ದು, ₹1.81 ಲಕ್ಷ ಕೋಟಿ ಯಿಂದ ₹1.57 ಲಕ್ಷ ಕೋಟಿಗೆ ಇಳಿಕೆ ಮಾಡಲಾಗಿದೆ

lಪೋಷಣ್ ಅಭಿಯಾನದ ಅನುದಾನವನ್ನು ₹12,800 ಕೋಟಿಯಿಂದ ₹11,600 ಕೋಟಿಗೆ ಇಳಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT