ಮಾರುಕಟ್ಟೆಗೆ ಬಂದ ಬೂದುಗುಂಬಳ..!, ಆಯುಧ ಪೂಜೆಗಾಗಿ ಹೆಚ್ಚಿನ ಬೇಡಿಕೆ

7
ವ್ಯಾಪಾರಿಗಳ ಜತೆ ರೈತರಿಂದಲೂ ಮಾರಾಟ

ಮಾರುಕಟ್ಟೆಗೆ ಬಂದ ಬೂದುಗುಂಬಳ..!, ಆಯುಧ ಪೂಜೆಗಾಗಿ ಹೆಚ್ಚಿನ ಬೇಡಿಕೆ

Published:
Updated:

ವಿಜಯಪುರ: ನವರಾತ್ರಿಗೆ ಅದ್ಧೂರಿಯ ಚಾಲನೆ ಸಿಕ್ಕಿದೆ. ದೇವಿ ದೇಗುಲಗಳು ಸೇರಿದಂತೆ ವಿವಿಧೆಡೆ ನಾಡದೇವಿಯ ಆರಾಧನೆ ಶ್ರದ್ಧಾಭಕ್ತಿಯಿಂದ ನಡೆದಿದೆ. ಮನೆ ಮನೆಗಳಲ್ಲೂ ನಂದಾದೀಪ ಬೆಳಗುತ್ತಿದೆ.

ಮಹಾಲಯ ಅಮಾವಾಸ್ಯೆಗೂ ಮುನ್ನಾ ದಿನವೇ ನಗರದ ಸಿದ್ಧೇಶ್ವರ ದೇಗುಲದ ಆಸುಪಾಸು ಸೇರಿದಂತೆ ಪ್ರಮುಖ ಬಜಾರ್‌ಗಳು, ಜಿಲ್ಲೆಯ ವಿವಿಧೆಡೆ ಬೂದುಗುಂಬಳದ ವಹಿವಾಟು ಸಹ ಆರಂಭಗೊಂಡಿದೆ.

ಸೋಮವಾರ ಆರಂಭಗೊಂಡಿರುವ ಬೂದುಗುಂಬಳದ ವಹಿವಾಟು ಮಹಾನವಮಿ, ಆಯುಧ ಪೂಜೆ (ಅ. 18ರ ಗುರುವಾರ)ಯ ದಿನದವರೆಗೂ ನಡೆಯಲಿದೆ. ಇದೇ 16, 17, 18ರಂದು ಮೂರು ದಿನ ಮಾರುಕಟ್ಟೆ ಬೂದುಗುಂಬಳ ಮಯವಾಗಲಿದೆ.

ಹೊರ ಜಿಲ್ಲೆಗಳಿಂದಲೂ ಬೂದುಗುಂಬಳ ಆಯುಧ ಪೂಜೆಯ ವೇಳೆಗೆ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆಗೆ ಆವಕವಾಗಲಿದೆ. ಇದರ ಜತೆ ಸ್ಥಳೀಯವಾಗಿ ರೈತರು ಬೆಳೆದ ಬೂದುಗುಂಬಳ, ಬಿಳಿ ಕುಂಬಳ, ಕರಿ ಕುಂಬಳ, ಕೆಂಪು ಕುಂಬಳ ಕಾಯಿಗಳು ಮಾರಾಟವಾಗಲಿವೆ. ಬಹುತೇಕ ರೈತರು ತಾವೇ ಮಾರಾಟ ಮಾಡುತ್ತಾರೆ. ಈಗಾಗಲೇ ವಿಜಯಪುರದ ಆರಾಧ್ಯ ದೈವ ಸಿದ್ಧೇಶ್ವರ ಗುಡಿ ಮುಂಭಾಗ ಕುಂಬಳದ ವಹಿವಾಟು ಆರಂಭಗೊಂಡಿದೆ.

‘ನಮ್ಮದು ಕಾಯಿಪಲ್ಲೆ ವಹಿವಾಟು. ದಸರಾ–ದೀಪಾವಳಿ ಸಂದರ್ಭ ಬೂದುಗುಂಬಳ ಮಾರಾಟಕ್ಕಾಗಿಯೇ ಸಿದ್ಧೇಶ್ವರ ಗುಡಿ ಮುಂಭಾಗ ತಾತ್ಕಾಲಿಕ ಅಂಗಡಿ ಹಾಕುತ್ತೇವೆ. ಈ ಹಿಂದೆ ನಮ್‌ ಕಾಕಾ ಈ ವಹಿವಾಟು ನಡೆಸುತ್ತಿದ್ದರು. ಇದೀಗ ನಾಲ್ಕೈದು ವರ್ಷದಿಂದ ನಾನು ಕುಂಬಳದ ಮಾರಾಟ ನಡೆಸುತ್ತಿರುವೆ’ ಎಂದು ನಗರದ ವ್ಯಾಪಾರಿ ನಬಿ ಸೋಮಪುರ ಹೇಳಿದರು.

‘ವಿಜಯಪುರ ಜಿಲ್ಲೆಯ ಹಳ್ಳಿಗಳು ಸೇರಿದಂತೆ ನೆರೆಯ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮುಧೋಳ, ಬೆಳಗಾವಿ, ಮಹಾರಾಷ್ಟ್ರದ ಸೊಲ್ಲಾಪುರದಿಂದಲೂ ಆಯುಧ ಪೂಜೆಗಾಗಿ ಬೂದುಗುಂಬಳ ಖರೀದಿಸಿ ತಂದು ಮಾರಾಟ ಮಾಡಲಿದ್ದೇವೆ.

ಜಿಲ್ಲೆಯ ರೈತರು ಸಹ ತಾವು ಬೆಳೆದ ಕುಂಬಳವನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲಿದ್ದಾರೆ. ಹಬ್ಬದ ದಿನ ಕನಿಷ್ಠ 100ಕ್ಕೂ ಹೆಚ್ಚು ರೈತರು ತಾವು ಬೆಳೆದ ಕುಂಬಳವನ್ನು ವಿಜಯಪುರಕ್ಕೆ ತಂದು ಮಾರಾಟ ನಡೆಸಲಿದ್ದಾರೆ’ ಎಂದು ನಬಿ ಮಾಹಿತಿ ನೀಡಿದರು.

‘ಸಿಂದಗಿ ತಾಲ್ಲೂಕಿನ ಬಂದಾಳ ಗ್ರಾಮದಲ್ಲಿ ನಮ್ಮದು ಎರಡು ಎಕರೆ ಜಮೀನಿದೆ. ಇಲ್ಲಿ ಕರಿ ಕುಂಬಳಕಾಯಿ ಬೆಳೆದಿರುವೆ. ಮಳೆ ಕೊರತೆಯಿಂದ ಬೆಳೆ ಚಲೋ ಬರಲಿಲ್ಲ. ಇದ್ದ ಕಾಯಿಯನ್ನೇ ವ್ಯಾಪಾರಕ್ಕೆ ತಂದಿರುವೆ. ಇವುಗಳ ಜತೆ ಹೊರಗಿನಿಂದಲೂ 700–800 ಕಾಯಿ ಖರೀದಿಸಿದ್ದು, ಮಾರಾಟಕ್ಕಿಟ್ಟಿರುವೆ’ ಎಂದು ಹೇಳಿದರು.

ಪೂಜೆಗೆ ಕಾಯಿ ಒಡಿತಾರೆ...

ನವರಾತ್ರಿಯ ಮಹಾನವಮಿಯಂದು ವಿಶೇಷ ಪೂಜೆ ನಡೆಯಲಿದೆ. ದೀಪ ಮುಗಿಸೋದು ಇಂದೇ. ಆಯುಧ ಪೂಜೆಯೂ ಇದೇ ದಿನ ನಡೆಯಲಿದೆ.

ನವರಾತ್ರಿ ಆಚರಿಸುವವರು, ಆಚರಿಸದವರು ಸಹ ಆಯುಧ ಪೂಜೆ, ವಿಜಯ ದಶಮಿ ಹಬ್ಬ ಆಚರಿಸಲಿದ್ದಾರೆ. ಆಯುಧ ಪೂಜೆ, ವಾಹನ ಪೂಜೆ ಬಳಿಕ ಕೆಲವರು ಬಲಿ ಕೊಡ್ತಾರೆ. ವರ್ಷದ ಅವಧಿ ಯಾವ ತಾಂತ್ರಿಕ ಅಡ್ಡಿ ಎದುರಾಗಬಾರದು. ಎಲ್ಲವೂ ಸುಸೂತ್ರವಾಗಿ ನಿರ್ವಿಘ್ನವಾಗಿ ನಡೆಯಲಿ ಎಂದು ಬೇಡಿಕೊಳ್ಳುತ್ತಾರೆ. ಈ ಸಂದರ್ಭ ಬಲಿ ಕೊಡದವರು ವಿಘ್ನ ನಿವಾರಣೆಗಾಗಿ ಬೂದುಗುಂಬಳ ಒಡೆಯೋದು ವಾಡಿಕೆ.

‘ಬೂದುಗುಂಬಳದ ಧಾರಣೆ ತುಸು ಹೆಚ್ಚಿರುವುದರಿಂದ ಹಲವರು ಕರಿ ಕುಂಬಳ, ಕೆಂಪು ಕುಂಬಳ, ಬಿಳಿ ಕುಂಬಳ ಒಡೆಯುವುದು ಸಹಜ. ಇದರಂತೆ ಮಾರುಕಟ್ಟೆಯಲ್ಲಿ ಬೂದುಗುಂಬಳಕ್ಕಿಂತ ಉಳಿದ ಕುಂಬಳಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೋಚರಿಸುತ್ತವೆ. ಬಿಕರಿಯಾಗುವುದು ಇವೇ ಎನ್ನುತ್ತಾರೆ’ ವ್ಯಾಪಾರಿ ಸಲೀಂ ಬಾಗವಾನ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !