ಷೇರು ಮಾರುಕಟ್ಟೆ ವಿಶಾಲವಾದ ಸಮುದ್ರವಿದ್ದಂತೆ. ಅಲ್ಲಿ ಈಜಲು ಬಾರದವರಿಗೆ ಮ್ಯೂಚುವಲ್ ಫಂಡ್ಗಳು ಜೀವ ರಕ್ಷಕನಂತೆ (ಲೈಫ್ ಜಾಕೆಟ್) ಕೆಲಸ ಮಾಡುತ್ತವೆ. ಆದರೆ, ಆಶ್ಚರ್ಯದ ಸಂಗತಿಯೆಂದರೆ, ಉತ್ತಮ ಫಂಡ್ಗಳನ್ನು ಆರಿಸಿದರೂ ಅನೇಕ ಹೂಡಿಕೆದಾರರು ನಿರೀಕ್ಷಿತ ಲಾಭ ಪಡೆಯಲು ವಿಫಲರಾಗುತ್ತಾರೆ. ವೃತ್ತಿಪರ ನಿಧಿ ನಿರ್ವಾಹಕರು (ಫಂಡ್ ಮ್ಯಾನೇಜರ್) ಇದ್ದರೂ ಹೂಡಿಕೆದಾರರು ಏಕೆ ಸೋಲುತ್ತಾರೆ? ಇದು ಮಾರುಕಟ್ಟೆಯ ತಪ್ಪಲ್ಲ, ಬದಲಾಗಿ ನಾವು ಮಾಡುವ ಸಣ್ಣ ತಪ್ಪುಗಳ ಫಲಿತಾಂಶ. ಆ ಏಳು ಪ್ರಮುಖ ತಪ್ಪುಗಳನ್ನು ತಿಳಿಯುವುದು ಅಗತ್ಯ.

1. ಭಾವನಾತ್ಮಕ ನಿರ್ಧಾರಗಳು, ಭಯ ಮತ್ತು ದುರಾಸೆಯ ಆಟ: ಹೂಡಿಕೆ ಎನ್ನುವುದು ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಮನೋವಿಜ್ಞಾನಕ್ಕೆ ಸಂಬಂಧಿಸಿದ ಕೆಲಸ. ಮಾರುಕಟ್ಟೆ ಏರುತ್ತಿರುವಾಗ ಎಲ್ಲರೂ ಉತ್ಸಾಹದಿಂದ ಹಣ ಹೂಡಿಕೆ ಮಾಡುತ್ತಾರೆ. ಆದರೆ ಮಾರುಕಟ್ಟೆ ಸ್ವಲ್ಪ ಕುಸಿದಾಗ, ಟಿ.ವಿ. ವಾಹನಿಗಳಲ್ಲಿ ‘ಮಾರುಕಟ್ಟೆ ಪತನ’ ಎಂಬ ಸುದ್ದಿಗಳು ಬಂದಾಗ ಭಯಗೊಂಡು ತಮ್ಮ ಹೂಡಿಕೆಯನ್ನು ನಷ್ಟದಲ್ಲಿ ಮಾರಾಟ ಮಾಡುತ್ತಾರೆ. ಆದರೆ ಯಶಸ್ವಿ ಹೂಡಿಕೆದಾರರು ಮಾತ್ರ ಬೆಲೆ ಕಡಿಮೆ ಇದ್ದಾಗ ಖರೀದಿಸುತ್ತಾರೆ ಮತ್ತು ಬೆಲೆ ಹೆಚ್ಚಾದಾಗ ಸುಮ್ಮನಿರುತ್ತಾರೆ. ಆದರೆ ಸಾಮಾನ್ಯರು ತದ್ವಿರುದ್ಧ ನಡೆ ಅನುಸರಿಸುವುದರಿಂದ ಹಣ ಕಳೆದುಕೊಳ್ಳುತ್ತಾರೆ.

2. ಹಳೆಯ ಲಾಭದ ಬೆನ್ನಟ್ಟುವಿಕೆ: ಹಲವರು ಫಂಡ್ ಆಯ್ಕೆ ಮಾಡುವಾಗ ಕಳೆದ ಒಂದು ವರ್ಷದಲ್ಲಿ ಯಾವ ಫಂಡ್ ಹೆಚ್ಚು ಲಾಭ ಕೊಟ್ಟಿದೆ ಎಂಬುದನ್ನು ನೋಡುತ್ತಾರೆ. ಆದರೆ ನೆನಪಿಡಿ, ಕಳೆದ ವರ್ಷ ಅತಿ ಹೆಚ್ಚು ವೇಗವಾಗಿ ಓಡಿದ ಕುದುರೆ ಈ ವರ್ಷವೂ ಗೆಲ್ಲುತ್ತದೆ ಎಂಬ ಗ್ಯಾರಂಟಿ ಇಲ್ಲ. ಮಾರುಕಟ್ಟೆಯೂ ಬದಲಾಗುತ್ತದೆ. ಹಿಂದಿನ ಲಾಭ ನೋಡಿ ಹೂಡಿಕೆ ಮಾಡುವುದು, ಕನ್ನಡಿಯ ಹಿಂಭಾಗ ನೋಡಿ ಕಾರು ಚಲಾಯಿಸಿದಂತೆ. ಒಂದು ನಿರ್ದಿಷ್ಟ ವಲಯ (ಉದಾಹರಣೆಗೆ ಐ.ಟಿ ಅಥವಾ ಫಾರ್ಮಾ) ಹಿಂದಿನ ವರ್ಷ ಚೆನ್ನಾಗಿ ಗಳಿಕೆ ತಂದಿರಬಹುದು, ಆದರೆ ಈಗ ಅದು ಕುಸಿಯುವ ಹಂತದಲ್ಲಿರಬಹುದು. ನೆನಪಿಡಿ ಹಳೆಯ ಗಳಿಕೆ ಭವಿಷ್ಯದ ಲಾಭಕ್ಕೆ ಖಾತರಿ ನೀಡುವುದಿಲ್ಲ. ಗೆದ್ದೆತ್ತಿನ ಬಾಲ ಹಿಡಿದು ಪ್ರಯೋಜನವಿಲ್ಲ.

3. ಎಕ್ಸ್ಪೆನ್ಸ್ ರೇಷಿಯೋ ಅರಿಯುವುದು ಹೇಗೆ?: ಮ್ಯೂಚುವಲ್ ಫಂಡ್ನಲ್ಲಿ ಎಕ್ಸ್ಪೆನ್ಸ್ ರೇಷಿಯೊ ಎನ್ನುವುದು ನಿಮ್ಮ ಹಣವನ್ನು ನಿರ್ವಹಿಸಲು ಫಂಡ್ ನಿರ್ವಹಣಾ ಕಂಪನಿಗಳು ಪಡೆಯುವ ವಾರ್ಷಿಕ ಶುಲ್ಕ. ನೀವು ಏಜೆಂಟ್ ಅಥವಾ ಮಧ್ಯವರ್ತಿ (ಬ್ರೋಕರ್) ಮೂಲಕ ಹೂಡಿಕೆ ಮಾಡಿದರೆ ಅದು ರೆಗ್ಯುಲರ್ ಪ್ಲಾನ್ ಎನಿಸಿಕೊಳ್ಳುತ್ತದೆ, ಇದರಲ್ಲಿ ಏಜೆಂಟ್ನ ಕಮಿಷನ್ ಸೇರಿರುವುದರಿಂದ ಶುಲ್ಕ ಹೆಚ್ಚಿರುತ್ತದೆ. ಅದೇ ನೀವು ನೇರವಾಗಿ ಹೂಡಿಕೆ ಮಾಡಿದರೆ ಅದು ಡೈರೆಕ್ಟ್ ಪ್ಲಾನ್ ಆಗಿರುತ್ತದೆ ಮತ್ತು ಇಲ್ಲಿ ಶುಲ್ಕ ಕಡಿಮೆ ಇರುತ್ತದೆ.

ಈ ಎರಡರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ನೋಡಿ. ನೀವು ಪ್ರತಿ ತಿಂಗಳು ₹10,000 ಮೊತ್ತವನ್ನು 20 ವರ್ಷ ಹೂಡಿಕೆ ಮಾಡುತ್ತೀರಿ ಎಂದು ಭಾವಿಸೋಣ. ಕೇವಲ ಶೇ 1ರಷ್ಟು ಹೆಚ್ಚುವರಿ ಶುಲ್ಕವಿರುವ ರೆಗ್ಯುಲರ್ ಪ್ಲಾನ್ ಆರಿಸಿಕೊಂಡರೆ, 20 ವರ್ಷಗಳ ನಂತರ ನಿಮ್ಮ ಕೈಗೆ ಸಿಗುವ ಲಾಭವು ಡೈರೆಕ್ಟ್ ಪ್ಲಾನ್ಗಿಂತ ಸುಮಾರು ₹17 ಲಕ್ಷದಷ್ಟು ಕಡಿಮೆ ಇರುತ್ತದೆ (ಡೈರೆಕ್ಟ್ ಪ್ಲಾನ್ನಲ್ಲಿ ₹1.32 ಕೋಟಿ ಸಿಕ್ಕರೆ, ರೆಗ್ಯುಲರ್ನಲ್ಲಿ ಕೇವಲ ₹ 1.15 ಕೋಟಿ ಸಿಗಬಹುದು). ಅಂದರೆ, ನಿಮ್ಮ ಹೂಡಿಕೆಯ ಅವಧಿ ಮತ್ತು ಮೊತ್ತ ಹೆಚ್ಚಾದಂತೆ, ಕಮಿಷನ್ ರೂಪದಲ್ಲಿ ನಿಮ್ಮ ಲಾಭದ ದೊಡ್ಡ ಭಾಗವು ಬೇರೆಯವರ ಪಾಲಾಗುತ್ತದೆ. ಆದ್ದರಿಂದ, ಈ ಸದ್ದುಮಾಡದ ಶತ್ರುವಿನಿಂದ ತಪ್ಪಿಸಿಕೊಳ್ಳಲು ಡೈರೆಕ್ಟ್ ಪ್ಲಾನ್ ಆರಿಸಿಕೊಳ್ಳುವುದು ಬುದ್ಧಿವಂತಿಕೆಯ ನಿರ್ಧಾರ.

4. ಹೆಚ್ಚು ವೈವಿಧ್ಯತೆ: ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬೇಡಿ ಎಂಬ ಮಾತನ್ನು ಕೇಳಿ ಹೂಡಿಕೆದಾರರು 20-30 ಫಂಡ್ಗಳನ್ನು ಖರೀದಿಸುತ್ತಾರೆ. ಇದು ನಿಮ್ಮನ್ನು ಸುರಕ್ಷಿತವಾಗಿರಿಸುವ ಬದಲು ನಿಮ್ಮ ಲಾಭವನ್ನು ಕುಂಠಿತಗೊಳಿಸುತ್ತದೆ. ನೀವು ಹೆಚ್ಚು ಫಂಡ್ಗಳನ್ನು ಹೊಂದಿದಾಗ, ನೀವು ಪರೋಕ್ಷವಾಗಿ ಮಾರುಕಟ್ಟೆಯಲ್ಲಿರುವ ಎಲ್ಲ ಕಂಪನಿಗಳ ಷೇರುಗಳನ್ನು ಹೊಂದಿದಂತಾಗುತ್ತದೆ. ಇದರಿಂದ ನಿಮ್ಮ ಫಂಡ್ ಇಂಡೆಕ್ಸ್ಗಿಂತ (ಸೂಚ್ಯಂಕ) ಹೆಚ್ಚು ಲಾಭ ಕೊಡಲು ಸಾಧ್ಯವಾಗುವುದೇ ಇಲ್ಲ, ಜೊತೆಗೆ ಪ್ರತಿ ಫಂಡ್ಗೂ ನೀವು ಪ್ರತ್ಯೇಕ ಶುಲ್ಕ ನೀಡಬೇಕಾಗುತ್ತದೆ.

5. ತಾಳ್ಮೆಯ ಕೊರತೆ: ಮ್ಯೂಚುವಲ್ ಫಂಡ್ ಹೂಡಿಕೆ ಎನ್ನುವುದು ರಾತ್ರೋರಾತ್ರಿ ಹಣ ಮಾಡುವ ಯೋಜನೆ ಅಲ್ಲ, ಅದೊಂದು ದೀರ್ಘಕಾಲದ ಪ್ರಕ್ರಿಯೆ. ಇಂದಿನ ಮೊಬೈಲ್ ಆ್ಯಪ್ಗಳು ಹೂಡಿಕೆ ಮಾಡುವುದನ್ನು ಎಷ್ಟು ಸರಳವಾಗಿಸಿವೆ ಎಂದರೆ, ನಾವು ಬೆರಳ ತುದಿಯಲ್ಲೇ ಎಲ್ಲವನ್ನೂ ನಿಯಂತ್ರಿಸಬಹುದು. ಆದರೆ, ಈ ಸುಲಭ ಲಭ್ಯತೆಯಿಂದಾಗಿ ಹಲವರು ಪದೇ ಪದೇ ತಮ್ಮ ಪೋರ್ಟ್ಫೋಲಿಯೊ ಪರಿಶೀಲಿಸುತ್ತಾರೆ ಮತ್ತು ಮಾರುಕಟ್ಟೆಯ ಸಣ್ಣ ಏರಿಳಿತಗಳಿಗೆ ಗಾಬರಿಯಾಗುತ್ತಾರೆ. ಮ್ಯೂಚುವಲ್ ಫಂಡ್ ಒಂದು ಗಿಡವಿದ್ದಂತೆ. ಮೊಬೈಲ್ ಆ್ಯಪ್ಗಳು ನಮಗೆ ನೀರು ಹಾಕಲು (ಹೂಡಿಕೆ ಮಾಡಲು) ಸಹಾಯ ಮಾಡುತ್ತವೆಯೇ ಹೊರತು, ಗಿಡ ತಕ್ಷಣ ಮರವಾಗಲು ಅವು ಸಹಾಯ ಮಾಡುವುದಿಲ್ಲ, ಗಿಡವು ತಕ್ಷಣಕ್ಕೆ ಮರವಾಗುವುದೂ ಇಲ್ಲ. ಒಂದು ವರ್ಷ ಲಾಭ ಬರಲಿಲ್ಲ ಎಂಬ ಕಾರಣಕ್ಕೆ ಅಥವಾ ಸಣ್ಣ ಲಾಭದ ಆಸೆಗೆ ಪದೇ ಪದೇ ಹಣ ಹಿಂಪಡೆಯುವುದು ಅಥವಾ ಫಂಡ್ ಬದಲಾಯಿಸುವುದು, ಗಿಡವನ್ನು ಆಗಾಗ ಕಿತ್ತು ಬೇರೆಡೆ ನೆಟ್ಟಂತೆ. ಆ್ಯಪ್ಗಳನ್ನು ಹೂಡಿಕೆ ಬೆಳೆಸಲು ಬಳಸಬೇಕೇ ಹೊರತು, ಅನಗತ್ಯ ಗೊಂದಲಕ್ಕಲ್ಲ. ತಾಳ್ಮೆಯಿಂದ ಕುಳಿತರೆ ಮಾತ್ರ ಹೂಡಿಕೆಯ ಪೂರ್ಣ ಲಾಭ ನಿಮ್ಮದಾಗುತ್ತದೆ.

6. ತೆರಿಗೆ ಮತ್ತು ಎಕ್ಸಿಟ್ ಲೋಡ್ ಅರಿವಿಲ್ಲದಿರುವುದು: ಹಲವರು ಫಂಡ್ಗಳನ್ನು ಷೇರುಗಳಂತೆ ಆಗಾಗ ಖರೀದಿ ಮತ್ತು ಮಾರಾಟ ಮಾಡುತ್ತಾರೆ. ಆದರೆ ಪ್ರತಿ ಬಾರಿ ನೀವು ಫಂಡ್ ಮಾರಿದಾಗಲೂ ಅದಕ್ಕೆ ಅವಧಿಗೂ ಮುನ್ನ ಹೂಡಿಕೆ ಹಿಂಪಡೆಯುವಿಕೆ ಶುಲ್ಕ (ಎಕ್ಸಿಟ್ ಲೋಡ್) ಮತ್ತು ಬಂಡವಾಳ ಗಳಿಕೆ ತೆರಿಗೆ ಅನ್ವಯವಾಗುತ್ತದೆ. ಒಂದು ವರ್ಷದ ಒಳಗೆ ಹಣ ತೆಗೆದರೆ ಲಾಭಕ್ಕೆ ಶೇ 20ರವರೆಗೆ ತೆರಿಗೆ ಕಟ್ಟಬೇಕಾಗುತ್ತದೆ. ಈ ಸಣ್ಣ ಸಣ್ಣ ಶುಲ್ಕಗಳು ಮತ್ತು ತೆರಿಗೆಗಳು ಹೂಡಿಕೆದಾರರ ಅಂತಿಮ ಲಾಭವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ.

7. ಎನ್ಎಫ್ಒ ಮತ್ತು ಅಗ್ಗದ ಬೆಲೆಯ ಭ್ರಮೆ: ಹೊಸ ಫಂಡ್ ಆಫರ್ (ಎನ್ಎಫ್ಒ) ಬಂದಾಗ ಅದರ ಎನ್ಎವಿ ಕೇವಲ ₹10 ಇದೆ ಎಂಬ ಕಾರಣಕ್ಕೆ ಹೂಡಿಕೆ ಮಾಡುವುದು ದೊಡ್ಡ ತಪ್ಪು. ಏಕೆಂದರೆ ನಿವ್ವಳ ಆಸ್ತಿ ಮೌಲ್ಯ (ಎನ್ಎವಿ) ಬೆಲೆ ಕಡಿಮೆ ಇದ್ದ ತಕ್ಷಣ ಅದು ಲಾಭದಾಯಕ ಎಂದು ಅರ್ಥವಲ್ಲ. ಉದಾಹರಣೆಗೆ, ₹10ರ ಎನ್ಎವಿ ಇರುವ ಹೊಸ ಫಂಡ್ ಮತ್ತು ₹100ರ ಎನ್ಎವಿ ಇರುವ ಹಳೆಯ ಫಂಡ್ ಎರಡೂ ಒಂದೇ ರೀತಿಯ ಷೇರುಗಳ ಮೇಲೆ ಹೂಡಿಕೆ ಮಾಡಿದ್ದರೆ, ಮಾರುಕಟ್ಟೆ ಬೆಳೆದಾಗ ಎರಡೂ ಫಂಡ್ಗಳು ನೀಡುವ ಲಾಭದ ಪ್ರಮಾಣ ಒಂದೇ ಆಗಿರುತ್ತದೆ. ಆದ್ದರಿಂದ ಎನ್ಎವಿ ಕಡಿಮೆ ಇದೆ ಎಂದು ಹೊಸ ಫಂಡ್ಗಳ ಹಿಂದೆ ಹೋಗುವ ಬದಲು, ಆ ಫಂಡ್ನ ಹೂಡಿಕೆಯ ತಂತ್ರ ಮತ್ತು ನಿರ್ವಾಹಕನ ಅನುಭವವನ್ನು ನೋಡಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.