ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಪ್ರಸ್ತಾವ ಪ್ರಭಾವ: ಪೇಟೆಯಲ್ಲಿ ಕರಡಿ ಕುಣಿತ

ಜಾಗತಿಕ ಷೇರುಪೇಟೆಗಳಲ್ಲಿನ ಮಾರಾಟ ಒತ್ತಡ
Last Updated 8 ಜುಲೈ 2019, 19:45 IST
ಅಕ್ಷರ ಗಾತ್ರ

ಮುಂಬೈ: ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ತೆರಿಗೆ ಪ್ರಸ್ತಾವನೆಗಳು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಮಾರಾಟದ ಒತ್ತಡಕ್ಕೆ ಒಳಗಾಗಿ ದೇಶದ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಭಾರಿ ಕುಸಿತಕ್ಕೆ ಒಳಗಾದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 793 ಅಂಶ ಕುಸಿತ ಕಂಡು 38,720 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು. 2019ರಲ್ಲಿ ಇದುವರೆಗಿನ ದಿನದ ವಹಿವಾಟಿನಲ್ಲಿ ಸೂಚ್ಯಂಕದ ಗರಿಷ್ಠ ಕುಸಿತ ಇದಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 252 ಅಂಶ ಇಳಿಕೆಯಾಗಿ 11,558 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಶುಕ್ರವಾರ ಬಜೆಟ್‌ ಮಂಡನೆ ಬಳಿಕ ಸಂವೇದಿ ಸೂಚ್ಯಂಕ 394 ಅಂಶ ಇಳಿಕೆ ಕಂಡಿತ್ತು. ಬಿಎಸ್‌ಇನಲ್ಲಿ ನೋಂದಾಯಿತ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯವು ಎರಡು ದಿನಗಳಲ್ಲಿ ₹ 5.61 ಲಕ್ಷ ಕೋಟಿಗಳಷ್ಟು ಕರಗಿದೆ.

ಬಜಾಜ್‌ ಫೈನಾನ್ಸ್‌ ಶೇ 8.18ರಷ್ಟು ಗರಿಷ್ಠ ನಷ್ಟ ಕಂಡಿದೆ. ಒಎನ್‌ಜಿಸಿ ನಷ್ಟ ಶೇ 5.43ರಷ್ಟಾಗಿದೆ.

ವಾಹನ ಷೇರುಗಳೂ ಇಳಿಕೆ: ಕಂಪನಿಗಳ ವಾಹನ ಮಾರಾಟ ಒಂದು ವರ್ಷದಿಂದ ಇಳಿಮುಖವಾಗಿದೆ. ಇದರಿಂದ ಕೆಲವು ಕಂಪನಿಗಳು ತಯಾರಿಕೆಯನ್ನು ಕಡಿತಗೊಳಿಸಲಾರಂಭಿಸಿವೆ. ಹೀಗಾಗಿ ಕಂಪನಿಗಳ ಷೇರುಗಳಲ್ಲಿಯೂ ಇಳಿಕೆ ಕಾಣುತ್ತಿದೆ. ಹೀರೊ ಮೋಟೊಕಾರ್ಪ್‌ ಶೇ 5.3, ಮಾರುತಿ ಶೇ 5.2, ಟಾಟಾ ಮೋಟರ್ಸ್ ಶೇ 3.4 ಮತ್ತು ಬಜಾಜ್‌ ಆಟೊ ಶೇ 2ರಷ್ಟು ಇಳಿಕೆ ಕಂಡಿವೆ.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 24 ಪೈಸೆ ಕಡಿಮೆಯಾಗಿ ಒಂದು ಡಾಲರ್‌ಗೆ ₹ 68.66ರಂತೆ ವಿನಿಮಯಗೊಂಡಿತು.

ಷೇರುಪೇಟೆಯಲ್ಲಿನ ಮಾರಾಟದ ಒತ್ತಡ ಮತ್ತು ಅಮೆರಿಕದ ಫೆಡರಲ್‌ ರಿಸರ್ವ್‌ನಿಂದ ಬಡ್ಡಿದರ ಕಡಿತದ ಸಾಧ್ಯತೆ ಕಡಿಮೆಯಾಗಿರುವುದು ರೂಪಾಯಿ ಮೌಲ್ಯ ಇಳಿಕೆಗೆ ಕಾರಣಗಳಾಗಿವೆ ಎಂದು ವರ್ತಕರು ಹೇಳಿದ್ದಾರೆ.

ಬ್ರೆಂಟ್ ಕಚ್ಚಾ ತೈಲ ದರ ಶೇ 0.16ರಷ್ಟು ಕಡಿಮೆಯಾಗಿ ಒಂದು ಬ್ಯಾರೆಲ್‌ಗೆ 64.33 ಬ್ಯಾರೆಲ್‌ಗಳಂತೆ ಮಾರಾಟವಾಯಿತು.

ಕುಸಿತಕ್ಕೆ ಕಾರಣಗಳು
ಕಂಪನಿಗಳಲ್ಲಿ ಸಾರ್ವಜನಿಕ ಪಾಲು ಬಂಡವಾಳವನ್ನು ಶೇ 25 ರಿಂದ ಶೇ 35ಕ್ಕೆ ಹೆಚ್ಚಿಸುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದ ವಿಪ್ರೊ, ಇನ್ಫೊಸಿಸ್‌ ಸೇರಿದಂತೆ 1,174 ಕಂಪನಿಗಳ ಪ್ರವರ್ತಕರ ಪಾಲು ಬಂಡವಾಳವನ್ನು ಕಡಿಮೆ ಮಾಡಬೇಕಾಗಿದೆ.

ಸರ್ಚಾರ್ಜ್‌ ಹೆಚ್ಚಿಸಿರುವುದರಿಂದ ವಿದೇಶಿ ಹೂಡಿಕೆದಾರರಿಗೂ ತೆರಿಗೆ ಹೊರೆಯಾಗಿ ಪರಿಣಮಿಸಲಿದೆ.

ಷೇರು ಮರುಖರೀದಿ ಮೇಲೆಯೂ ಸರ್ಚಾರ್ಜ್‌ ವಿಧಿಸುವ ಪ್ರಸ್ತಾವನೆಯೂ ಹೂಡಿಕೆ ಚಟುವಟಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

ಅಮೆರಿಕದಲ್ಲಿ ಜೂನ್‌ ತಿಂಗಳಿನಲ್ಲಿ ಹೊಸದಾಗಿ 2.24 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಇದರಿಂದಾಗಿ ಅಲ್ಲಿನ ಕೇಂದ್ರೀಯ ಬ್ಯಾಂಕ್‌ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ಜಾಗತಿಕ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಕಂಡುಬಂದಿತು. ಸೂಚ್ಯಂಕ ಪತನಕ್ಕೆ ಇದು ಕೂಡ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT