ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಎಸ್‌ಎಲ್‌ ಮಾರಾಟಕ್ಕೆ ಸಿದ್ಧತೆ, ಕಾರ್ಯಸಾಧ್ಯತೆಯ ಚರ್ಚೆ

18ಕ್ಕೆ ಕೇಂದ್ರ ಸಚಿವ ಸಂಪುಟ ಉಪಸಮಿತಿ ಸಭೆ
Last Updated 15 ಜೂನ್ 2019, 20:00 IST
ಅಕ್ಷರ ಗಾತ್ರ

ಭದ್ರಾವತಿ: ಇಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್‌), ಸೇಲಂ ಸ್ಟೀಲ್ ಪ್ಲಾಂಟ್ ಹಾಗೂ ಎಎಸ್‌ಪಿ ದುರ್ಗಾಪುರ ಕಾರ್ಖಾನೆಗಳ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡುವ ಸಂಬಂಧಜೂನ್‌ 18ರಂದು ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟ ಉಪಸಮಿತಿ ಸಭೆ ಹಮ್ಮಿಕೊಳ್ಳಲಾಗಿದೆ.

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಕೂಡಲೇ ದೇಶದ 42 ಸಾರ್ವಜನಿಕ ಉದ್ದಿಮೆಗಳ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.ಅದರ ಮೊದಲ ಹಂತವಾಗಿ 3 ಉಕ್ಕು ಉದ್ದಿಮೆಗಳ ಬಂಡವಾಳ ಹಿಂತೆ
ಗೆತ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಪ್ರಧಾನಿ ಕಾರ್ಯಾಲಯ ಆದೇಶಿಸಿದೆ.

ಕಾರ್ಮಿಕ ಮುಖಂಡರು, ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಭೇಟಿ ಮಾಡಿ, ಸಾರ್ವಜನಿಕ ಉದ್ದಿಮೆಯಾಗಿಯೇ ವಿಐಎಸ್‌ಎಲ್‌ ಉಳಿಸುವಂತೆ ಆಗ್ರಹಿಸಿದ್ದಾರೆ.

2008ರಲ್ಲಿ ಬಂಡವಾಳ ಹಿಂತೆಗೆತ ಪ್ರಕ್ರಿಯೆಗೆ ಅಂದಿನ ಯುಪಿಎ ಸರ್ಕಾರ ಚಾಲನೆ ನೀಡಿದಾಗ ಇಲ್ಲಿನ ವಿಐಎಸ್‌ಎಲ್‌ ಸೇರಿ ಉಕ್ಕು ಪ್ರಾಧಿಕಾರದ ಇನ್ನೆರಡು ಕಾರ್ಖಾನೆಗಳಿಗೂ ಬಿಸಿ ತಟ್ಟಲು ಆರಂಭಿಸಿತ್ತು. 2014ರಲ್ಲಿ ಈ ಪ್ರಕ್ರಿಯೆಗೆ ಪುನಃ ಚಾಲನೆ ಸಿಕ್ಕಿತು.

ಅಂದಿನ ಸಂಸದ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸಚಿವರನ್ನು ಕರೆತಂದು ಬಂಡವಾಳ ತೊಡಗಿಸುವ ಭರವಸೆ ನೀಡಿದ್ದರು. ಜೊತೆಗೆ ರಾಜ್ಯ ಸರ್ಕಾರ ಗಣಿ ನೀಡಿದರೆ ಉಕ್ಕು ಪ್ರಾಧಿಕಾರ ಹಾಗೂ ಸರ್ಕಾರದಿಂದ ಹೆಚ್ಚಿನ ರೀತಿಯ ಸಹಕಾರ ಸಿಗುವುದಕ್ಕೆ ಯತ್ನಿಸುವುದಾಗಿ ಘೋಷಿಸಿದ್ದರು.

ಮಾರಾಟ ಪ್ರಕ್ರಿಯೆ ಸದ್ದು 2017ರಲ್ಲಿ ಪುನಃ ಹೆಚ್ಚಾಗಿತ್ತು. ಮತ್ತೊಮ್ಮೆ ಕೇಂದ್ರ ಉಕ್ಕು ಸಚಿವರನ್ನು ಇಲ್ಲಿಗೆ ಕರೆ ತಂದಿದ್ದ ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಬಂಡವಾಳ ಹಿಂತೆಗೆತ ಪ್ರಕ್ರಿಯೆಯಿಂದ ಈ ಕಾರ್ಖಾನೆಯನ್ನು ಹೊರಗಿಡಲು ಕಾರ್ಖಾನೆಯ ಉತ್ತಮ ಸ್ಥಿತಿಯನ್ನು ವಿವರಿಸುವ ಕೆಲಸ ಮಾಡಿದ್ದರು.

ರಾಜ್ಯ ಸರ್ಕಾರ ಸಹ 150 ಎಕರೆ ಅದಿರು ಗಣಿಯನ್ನು ಕಾರ್ಖಾನೆಗೆ ಮಂಜೂರು ಮಾಡುವ ಪ್ರಸ್ತಾವವನ್ನು ಒಪ್ಪಿಕೊಂಡು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಇದರಿಂದ ಕಾರ್ಖಾನೆ ಸಾರ್ವಜನಿಕ ಉದ್ದಿಮೆಯಾಗಿ ಮತ್ತಷ್ಟು ಪ್ರಗತಿ ಕಾಣಲಿದೆ ಎಂಬ ಆಸೆ ಮೂಡಿಸಿತ್ತು.

‘ಖಾಸಗೀಕರಣ ತಡೆಯಲು ಯತ್ನ’
‘ಭಾನುವಾರ ಮಧ್ಯಾಹ್ನ ದೆಹಲಿಗೆ ತೆರಳಿ ಸಚಿವರಾದ ಡಿ.ವಿ. ಸದಾನಂದ ಗೌಡ, ಪ್ರಹ್ಲಾದ ಜೋಶಿ ಅವರೊಂದಿಗೆ ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ ಬಂಡವಾಳ ಹಿಂತೆಗೆತ ಪ್ರಕ್ರಿಯೆಯಿಂದ ವಿಐಎಸ್‌ಎಲ್‌ ಕೈಬಿಡುವಂತೆ ಮನವಿ ಮಾಡಲಾಗುವುದು’ ಎಂದು ಸಂಸದ ಬಿ.ವೈ. ರಾಘವೇಂದ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಈಗಾಗಲೇ ಯಡಿಯೂರಪ್ಪ ಅವರು ಧರ್ಮೇಂದ್ರಪ್ರಧಾನ್ ಜತೆ ಈ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಹೆಮ್ಮೆಯ ಸಾರ್ವಜನಿಕ ಉದ್ದಿಮೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡದೆ, ಸಾರ್ವಜನಿಕ ಉದ್ದಿಮೆಯಾಗಿಯೇ ಮುನ್ನಡೆಸಬೇಕು ಎಂದು ಮನವಿ ಮಾಡಿದ್ದಾರೆ’ ಎಂದರು.

ಹೋರಾಟದ ಎಚ್ಚರಿಕೆ
‘ವಿಐಎಸ್‌ಎಲ್‌ ಖಾಸಗೀಕರಣವಾದರೆ ಅದಕ್ಕೆ ನೇರವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣ. ಈ ರೀತಿಯ ಕ್ರಮಕ್ಕೆ ಕೇಂದ್ರ ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT