ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ₹ 1,727 ಕೋಟಿ ಸಾಲ ಯೋಜನೆ

ಕೃಷಿಗೆ ಹೆಚ್ಚುವರಿಯಾಗಿ ₨131 ಕೋಟಿ ಮೀಸಲು, ಆದ್ಯತಾ ಕ್ಷೇತ್ರಕ್ಕೆ ₨1,546 ಕೋಟಿ ಹೊಸ ಸಾಲದ ಗುರಿ
Last Updated 30 ಮಾರ್ಚ್ 2018, 7:21 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೃಷಿ, ಕೈಗಾರಿಕೆ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡು ಜಿಲ್ಲೆಯ ಲೀಡ್‌ ಬ್ಯಾಂಕ್‌ನ 2017–18ನೇ ಆರ್ಥಿಕ ವರ್ಷಕ್ಕೆ ₹ 1,727 ಕೋಟಿ ಸಾಲ ಯೋಜನೆ ರೂಪಿಸಿದೆ.

ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್ ಹೆಗ್ಡೆ ಅವರು ‘ಜಿಲ್ಲಾ ಸಾಲ ಯೋಜನೆ’ ಕೈಪಿಡಿ ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಮಾತನಾಡಿದ ಗುರುದತ್ ಹೆಗ್ಡೆ, ‘ಸರ್ಕಾರ ವಿವಿಧ ಯೋಜನೆಗಳಡಿಯಲ್ಲಿ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಮೂಲಕ ಮಂಜೂರು ಮಾಡುವ ಸಾಲ, ಸೌಲಭ್ಯಗಳನ್ನು ಕಾಲಮಿತಿ ಒಳಗೆ ಒದಗಿಸಬೇಕು. ಸಬ್ಸಿಡಿ ಕೊಟ್ಟರೂ ಬ್ಯಾಂಕುಗಳು ಸಾಲ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಹೇಳಿದರು.

‘ಸಾಮಾಜಿಕ ಭದ್ರತೆ ದೃಷ್ಟಿಯಿಂದ ರೂಪಿಸಿದ ಸಾಲ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಮುಟ್ಟಬೇಕು. ಸಾಲದ ಹಣ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರ ಜಮಾ ಆಗುವುದರಿಂದ ಬ್ಯಾಂಕುಗಳು ಗ್ರಾಹಕರ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕು. ಆಧಾರ್ ಜೋಡಣೆಗೆ ಬ್ಯಾಂಕುಗಳು ವಿಶೇಷ ಆದ್ಯತೆ ನೀಡಬೇಕು. ನಗದು ರಹಿತ ವ್ಯವಹಾರಕ್ಕೆ ಗ್ರಾಹಕರನ್ನು ಉತ್ತೇಜಿಸಬೇಕು’ ಎಂದರು.

ಜಿಲ್ಲೆಯ ಲೀಡ್‌ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪಕ ಕೆ.ಎಸ್.ಭಟ್‌ ಮಾತನಾಡಿ, ‘ಕಳೆದ ವರ್ಷ ₹ 1,541 ಕೋಟಿ ಸಾಲ ಯೋಜನೆ ರೂಪಿಸಲಾಗಿತ್ತು. ಅದರ ಪ್ರಮಾಣ ಈ ಬಾರಿ ₹ 1,727 ಕೋಟಿಗೆ ಏರಿಕೆಯಾಗಿದೆ. ಈ ವರ್ಷ ಕೃಷಿ ಕ್ಷೇತ್ರಕ್ಕೆ ₹ 1,219 ಕೋಟಿ ಮೀಸಲಿಡಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ₹131 ಕೋಟಿ ಹೆಚ್ಚಾಗಿದೆ’ ಎಂದು ಹೇಳಿದರು.

‘ಆದ್ಯತಾ ಕ್ಷೇತ್ರಕ್ಕೆ ₹ 1,546 ಕೋಟಿ ಹೊಸ ಸಾಲ ನೀಡುವ ಗುರಿ ಹೊಂದಲಾಗಿದೆ. ಯೋಜನೇತರ ಸಾಲಗಳಿಗೆ ₹ 181 ಕೋಟಿ ಗುರಿ ಇಟ್ಟುಕೊಳ್ಳಲಾಗಿದೆ. ಜಿಲ್ಲೆಯು ಕೃಷಿ ಪ್ರಧಾನವಾದ್ದರಿಂದ ಕೃಷಿ ವಲಯಕ್ಕೆ ಸಾಲ ಯೋಜನೆಯನ್ನು ಹೆಚ್ಚಿಸಲಾಗಿದೆ’ ಎಂದರು.

ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕ ಎಚ್.ವಿ.ನಟರಾಜ್, ಕೆನರಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಸವರಾಜ್, ಸೇಟ್ ಬ್ಯಾಂಕ್ ಆಫ್ ಇಂಡಿಯ ಚಿಕ್ಕಬಳ್ಳಾಪುರ ಶಾಖೆ ಮುಖ್ಯ ಪ್ರಬಂಧಕ ಎಸ್.ಸತೀಶ್ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.

₹ 3,917 ಕೋಟಿ ಠೇವಣಿ

‘ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್‌ಗಳ 163 ಶಾಖೆಗಳಿವೆ. 173 ಎಟಿಎಂ ಕೇಂದ್ರಗಳಿವೆ. ಎಲ್ಲಾ ಬ್ಯಾಂಕ್‌ ಶಾಖೆಗಳಲ್ಲಿ ಸೇರಿ ₹ 3,917 ಕೋಟಿ ಠೇವಣಿ ಇದೆ. ಆ ಪೈಕಿ ಈವರೆಗೆ ₹ 3,449 ಕೋಟಿ ಸಾಲವನ್ನು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ನೀಡಿ ಶೇ 88 ರಷ್ಟು ಪ್ರಗತಿ ಸಾಧಿಸಲಾಗಿದೆ. ಕಳೆದ ವರ್ಷ ಜಿಲ್ಲೆಯ ಬ್ಯಾಂಕ್ ಶಾಖೆಗಳಲ್ಲಿ ₹ 7,366 ಕೋಟಿ ವ್ಯವಹಾರ ನಡೆದಿದೆ’ ಎಂದು ಕೆ.ಎಸ್.ಭಟ್‌ ತಿಳಿಸಿದರು.

**

ಫಲಾನುಭವಿಗಳಿಂದ ಬ್ಯಾಂಕುಗಳಿಗೆ ಅರ್ಜಿ ಬಂದ ತಕ್ಷಣ ವಿಲೇವಾರಿ ಮಾಡಬೇಕು. ದಾಖಲೆಗಳಿಲ್ಲದಿದ್ದರೆ ಅರ್ಜಿ ತಿರಸ್ಕರಿಸಿ, ಅರ್ಹರಿಗೆ ತಕ್ಷಣ ಸಾಲ ನೀಡಿ – ಗುರುದತ್ ಹೆಗ್ಡೆ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT