ಮೊಳಕಾಲ್ಮುರು: ಸೀತಾಫಲ ಇಳುವರಿ ಕುಸಿತ

7
ಹೂ ಬಿಡುವ ವೇಳೆ ಕೈಕೊಟ್ಟ ಮಳೆ; ಹರಾಜು ರದ್ದು

ಮೊಳಕಾಲ್ಮುರು: ಸೀತಾಫಲ ಇಳುವರಿ ಕುಸಿತ

Published:
Updated:

ಮೊಳಕಾಲ್ಮುರು: ಮೊಳಕಾಲ್ಮುರು ಸೀತಾಫಲ ಹಣ್ಣಿಗೆ ಪ್ರಸಿದ್ಧಿ. ತಾಲ್ಲೂಕಿನಲ್ಲಿರುವ ಬೆಟ್ಟಗಳಲ್ಲಿ ಪ್ರಕೃತಿದತ್ತವಾಗಿ ನೂರಾರು ವರ್ಷಗಳಿಂದ ಸೀತಾಫಲ ಗಿಡಗಳು ಬೆಳೆದಿವೆ.

ತಾಲ್ಲೂಕಿನಲ್ಲಿ ಮುಖ್ಯವಾಗಿ ಮೊಳಕಾಲ್ಮುರು, ನುಂಕಮಲೆ ಬೆಟ್ಟ, ಕೂಗಿಬಂಡಿ, ಹಾನಗಲ್, ಪೂಜಾರಹಟ್ಟಿ, ಕೆಳಗಹಳಹಟ್ಟಿ, ಮೇಗಲಹಟ್ಟಿ, ರಾಯದುರ್ಗ ರಸ್ತೆಯಲ್ಲಿ ಹರಡಿಕೊಂಡಿರುವ ಬೆಟ್ಟದಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ಸೀತಾಫಲ ಗಿಡಗಳು ಬೆಳೆದಿವೆ.

ಡಿಸೆಂಬರ್ ಹಾಗೂ ಜನವರಿಯಲ್ಲಿ ಈ ಹಣ್ಣಿನ ಭರಾಟೆ ಹೆಚ್ಚು. ಆದರೆ, ಈ ಬಾರಿ ಶೇ 10ರಷ್ಟು ಮಾತ್ರ ಇಳುವರಿ ಇದೆ ಎಂದು ಹಣ್ಣಿನ ವ್ಯಾಪಾರಿ ತಿಪ್ಪೇಸ್ವಾಮಿ ಹೇಳಿದರು.

ಬೆಂಗಳೂರು, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮಾರುಕಟ್ಟೆಗಳಿಗೆ ಇಲ್ಲಿನ ಹಣ್ಣು ರಫ್ತು ಮಾಡಲಾಗುತ್ತಿತ್ತು. ಎರಡು ತಿಂಗಳ ಸೀಜನ್ ಹೊಂದಿರುವ ಈ ಹಣ್ಣು ತಾಲ್ಲೂಕಿನ ನೂರಾರು ಕೂಲಿ ಕಾರ್ಮಿಕರ ಹೊಟ್ಟೆ ತುಂಬಿಸುತ್ತಿತ್ತು. ಈ ವರ್ಷ ಮಳೆ ಇಲ್ಲದಿರುವುದರಿಂದ ಕಾರ್ಮಿಕರ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ ಎಂದು ಹಣ್ಣು ಮಾರಾಟಗಾರ ಸಿದ್ದಣ್ಣ ಬೇಸರದಿಂದ ಹೇಳಿದರು.

ವಲಯ ಅರಣ್ಯಾಧಿಕಾರಿ ಮಂಜುನಾಥ್ ಮಾಹಿತಿ ನೀಡಿ, ‘ನಮ್ಮ ಇಲಾಖೆ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಸೀತಾಫಲ ಗಿಡಗಳಿವೆ. ಸಾಮಾನ್ಯವಾಗಿ ಆಗಸ್ಟ್‌ ತಿಂಗಳಿನಲ್ಲಿ ಗಿಡಗಳು ಹೂ ಬಿಡುತ್ತವೆ. ಈ ವೇಳೆ ಮಳೆ ಪೂರ್ಣ ಕೈಕೊಟ್ಟಿದ್ದ ಪರಿಣಾಮ ಹೂವು ಬಿಡದೇ ಕಾಯಿ ಕಟ್ಟಲಿಲ್ಲ. ಪರಿಣಾಮ ಶೇ 5ರಷ್ಟು ಇಳುವರಿ ಬಂದಿದೆ. ಈ ಕಾರಣಕ್ಕಾಗಿ ಹಣ್ಣು ಮಾರಾಟ ಹರಾಜು ರದ್ದು ಮಾಡಲಾಯಿತು. ಇತ್ತೀಚಿನ ವರ್ಷಗಳಲ್ಲಿ ಹರಾಜು ರದ್ದು ಮಾಡಿರುವುದು ಇದೇ ಮೊದಲು’ ಎಂದು ಹೇಳಿದರು.

*
ಮಳೆ ಕೊರತೆಯಾಗಿದ್ದರೂ ಗಿಡಗಳ ಸಂಖ್ಯೆ ಕುಸಿದಿಲ್ಲ. ಕಳೆದ ವರ್ಷ ಅಲ್ಲಲ್ಲಿ ನಾಟಿ ಮಾಡಿಸಲಾಗಿದೆ. ಹೂ ಬಿಡುವಾಗ ಮಳೆ ಕೈಕೊಟ್ಟಿದ್ದೇ ಸಮಸ್ಯೆಗೆ ಮೂಲ ಕಾರಣ
-ಮಂಜುನಾಥ್, ವಲಯ ಅರಣ್ಯಾಧಿಕಾರಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !