4

ಸುರಕ್ಷತೆಗೆ ವೈಯಕ್ತಿಕ ಅಪಘಾತ ವಿಮೆ

Published:
Updated:

ಭಾರತದಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿ ಪ್ರಕಾರ 2016ರಲ್ಲಿ 5 ಲಕ್ಷ ಅಪಘಾತಗಳಾಗಿವೆ. ಪ್ರತಿ ಗಂಟೆಗೆ 55 ಅಪಘಾತಗಳು ಸಂಭವಿಸುತ್ತವೆ ಎನ್ನುವ ಅಂದಾಜಿದೆ. ಹೆಚ್ಚುತ್ತಿರುವ ಅಪಘಾತಗಳಿಂದಾಗಿ ವಿಮೆ ವ್ಯಾಪ್ತಿಗೊಳಪಡುವುದು ಈಗ ಅತ್ಯಂತ ಮಹತ್ವದ್ದಾಗಿದೆ. ಇದರಿಂದ ಸಂಕಷ್ಟದ ಪರಿಸ್ಥಿತಿಯಲ್ಲಿ ಅವಲಂಬಿತರಿಗೂ ಅನುಕೂಲವಾಗುತ್ತದೆ. ವಿಮೆಯಿಂದ ದೊರೆಯುವ ಹಣಕಾಸಿನ ನೆರವು ಭವಿಷ್ಯವನ್ನೂ ಸದೃಢಗೊಳಿಸುತ್ತದೆ.

ನಿಮ್ಮ ಅನುಪಸ್ಥಿತಿಯಲ್ಲಿ ಕುಟುಂಬದ ಹಣಕಾಸಿನ ಕೊರತೆಯನ್ನು ಜೀವ ವಿಮೆ ದೂರಮಾಡುತ್ತದೆ. ಜತೆಗೆ ಆರೋಗ್ಯ ವಿಮೆಯು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ರಕ್ಷಣೆಯ ಕಾಳಜಿಯನ್ನೂ ವಹಿಸುತ್ತದೆ. ಅಪಘಾತದಿಂದ ಎದುರಾಗುವ ಸಂಕಷ್ಟದ ಸಂದರ್ಭಗಳಲ್ಲಿ ನಿಮ್ಮ ಆದಾಯಕ್ಕೆ ಧಕ್ಕೆಯಾದರೆ ವೈಯಕ್ತಿಕ ಅಪಘಾತ ವಿಮೆಯು ಸುರಕ್ಷತೆಯನ್ನು ಕಾಪಾಡುತ್ತದೆ. ಈ ಆಯ್ಕೆಯು ಜೀವ ವಿಮೆ ಮತ್ತು ಆರೋಗ್ಯ ವಿಮೆಯಲ್ಲಿ ದೊರೆಯುವುದಿಲ್ಲ. ಅಪಘಾತದಿಂದ ಸಾವು ಸಂಭವಿಸಿದಾಗ ಅಥವಾ ಗಾಯಗೊಂಡರೆ ಎದುರಾಗುವ ಆರ್ಥಿಕ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ನೆರವಾಗುತ್ತದೆ. ಘಟನೆ ನಡೆದ 365 ದಿನಗಳ ಒಳಗೆ ಶಾಶ್ವತ ಅಥವಾ ಭಾಗಶಃ ಅಂಗವಿಕಲರಾದರೆ ಈ ವಿಮೆ ವ್ಯಾಪ್ತಿಗೆ ಒಳಪಡಬಹುದಾಗಿದೆ. ಜತೆಗೆ ಈ ವಿಮೆಯು ಮಕ್ಕಳ ಶಿಕ್ಷಣ ವೆಚ್ಚದ ಮತ್ತು 30 ದಿನಗಳ ಆಸ್ಪತ್ರೆಯ ವೆಚ್ಚ ಭರವಿಸುವ ಅಂಶವನ್ನು ಒಳಗೊಂಡಿರುತ್ತದೆ.

ಉದಾಹರಣೆಗೆ ಮಾಹಿತಿ ತಂತ್ರಜ್ಞಾನದ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ವಿಜಯ್‌ ಎನ್ನುವವರು ಇಡೀ ಕುಟುಂಬಕ್ಕೆ ಆಧಾರವಾಗಿರುತ್ತಾರೆ ಎಂದಿಟ್ಟುಕೊಳ್ಳೋಣ. ಆದರೆ, ದುರದೃಷ್ಟವಶಾತ್‌ ಅಪಘಾತವಾಗಿ ಭಾಗಶಃ ಅಂಗವಿಕಲರಾದರೂ ಶಾಶ್ವತವಾಗಿ ಅದರ ನೋವು ಅನುಭವಿಸುವ ಸ್ಥಿತಿ ಉಂಟಾಯಿತು. ಇದರಿಂದ, ಅವರು ಹೊರಬರಲು ಹಲವು ತಿಂಗಳುಗಳು ಬೇಕಾಯಿತು. ಈ ಸಂಕಷ್ಟದ ಸಂದರ್ಭದಲ್ಲಿ ಹಲವು ತಿಂಗಳುಗಳು ಕಾಲ ಆದಾಯಕ್ಕೆ ಹೊಡೆತ ಬಿದ್ದಿತು. ಇದರಿಂದ ಕುಟುಂಬಕ್ಕೂ ಆರ್ಥಿಕ ಸಮಸ್ಯೆಯಾಯಿತು.

ವಿಜಯ ಅವರಿಗೆ ಜೀವ ಮತ್ತು ಆರೋಗ್ಯ ವಿಮೆ ಪಾಲಿಸಿಗಳಿದ್ದವು. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಒಂದೇ ಕೈಯಿಂದ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಒಂದು ವೇಳೆ ವೈಯಕ್ತಿಕ ಅಪಘಾತ ವಿಮೆ ಹೊಂದಿದ್ದರೆ ವಿಜಯ ಅವರ ಜೀವನದ ಬಗ್ಗೆ ಆ ವಿಮೆ ಸೌಲಭ್ಯವು ಕಾಳಜಿವಹಿಸುತ್ತಿತ್ತು. ಶಾಶ್ವತ ಅಂಗವಿಕಲರಾದರೆ ವಿಜಯ ಅವರ ಜೀವನಶೈಲಿಗೆ ನೆರವಾಗುತ್ತಿತ್ತು. ಈ ವಿಮೆಯ ಲಾಭಗಳು ಅವರಿಗೆ ದೊರೆಯುತ್ತಿದ್ದವು.

ವಿಜಯ ಅವರ ಆರೋಗ್ಯ ವಿಮೆ ಪಾಲಿಸಿಗಳು ಆಸ್ಪತ್ರೆಯ ವೆಚ್ಚವನ್ನು ಭರಿಸಿದವು. ಆದರೆ, ಅನಾರೋಗ್ಯದ ಸಂದರ್ಭದಲ್ಲಿ ಹಲವು ತಿಂಗಳ ಕಾಲದ ಆದಾಯ ನಷ್ಟವಾಗಿದ್ದಕ್ಕೆ ಪರಿಹಾರ ನೀಡಲಿಲ್ಲ. ಅವರ ಜೀವ ವಿಮೆ ಪಾಲಿಸಿ ಸಹ ನೆರವಾಗಲಿಲ್ಲ. ಶಾಶ್ವತ ಅಂಗವಿಕಲರಾಗಿರಬೇಕು ಅಥವಾ ಸಾವು ಸಂಭವಿಸಿದಾಗ ಮಾತ್ರ ಜೀವ ವಿಮೆ ವ್ಯಾಪ್ತಿಗೆ ಒಳಪಡಲಾಗುತ್ತದೆ. ವೈಯಕ್ತಿ ಅಪಘಾತ ವಿಮೆಯು ಹೆಚ್ಚು ಕೈಗೆಟುಕುವ ವಿಮೆಯಾಗಿದೆ. ಉದಾಹರಣೆಗೆ ವೈಯಕ್ತಿಕ ಅಪಘಾತ ವಿಮೆಯ ಒಟ್ಟು ಮೊತ್ತ ₹ 10ಲಕ್ಷಕ್ಕೆ ಮಾಡಿಸಿದ್ದರೆ ಕಂತಿನ ವೆಚ್ಚವು ಪ್ರತಿ ದಿನಕ್ಕೆ ₹ 5ಕ್ಕೂ ಕಡಿಮೆಯಾಗುತ್ತದೆ. ಇದನ್ನು ಬೇರೆ ಉದಾಹರಣೆಗಳಿಗೆ ಹೋಲಿಸಿದರೆ ಬಹುತೇಕ ಮಂದಿ ಪ್ರತಿ ದಿನ ₹ 5ಕ್ಕೂ ಹೆಚ್ಚು ಖರ್ಚು ಮಾಡುತ್ತಾರೆ. ಸರ್ಕಾರವು ವಿಮೆಯ ಗಂಭೀರತೆಯನ್ನು ಪರಿಗಣಿಸಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನಾ (ಪಿಎಂಎಸ್‌ಬಿವೈ) ಆರಂಭಿಸಿದೆ. ಪ್ರತಿ ವರ್ಷ ಕೇವಲ ₹12 ಪಾವತಿಸಿದರೆ ₹2 ಲಕ್ಷದವರೆಗೆ ಅಪಘಾತದ ಸಂದರ್ಭದಲ್ಲಿ ಪರಿಹಾರ ದೊರೆಯುತ್ತದೆ. ಶಾಶ್ವತ ಅಂಗವಿಕಲರಾದರೆ ₹1 ಲಕ್ಷ ದೊರೆಯುತ್ತದೆ.

ಸಾಂಪ್ರದಾಯಿಕವಾಗಿ ವೈಯಕ್ತಿಕ ಅಪಘಾತ ಪಾಲಿಸಿಯು ಸಾವು, ಶಾಶ್ವತ ಅಂಗವಿಕಲತೆ, ಶಾಶ್ವತ ಭಾಗಶಃ ಅಂಗವಿಕಲತೆಯನ್ನು ಒಳಗೊಂಡಿರುತ್ತದೆ. ಹೊಸ ರೀತಿಯ ಅಪಾಯಗಳು ಸಹ ಎದುರಾಗುತ್ತಿರುವುದರಿಂದ ಜೀವನಶೈಲಿಗೆ ತಕ್ಕಂತೆ ಹಣಕಾಸಿನ ವ್ಯವಸ್ಥೆಯನ್ನು ಹೊಂದಿಸಿಕೊಳ್ಳುವುದು ಅಗತ್ಯವಿದೆ. ಈ ಮೊದಲು ಸಾಹಸ ಕ್ರೀಡೆ ಅಥವಾ ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ವೈಯಕ್ತಿಕ ಅಪಘಾತ ವಿಮೆಯಿಂದ ಹೊರಗಿಡಲಾಗಿತ್ತು. ಆದರೆ, ಈಗ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವವರನ್ನೂ ಸಹ ಈ ವಿಮೆ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಜತೆಗೆ ಆಂಬುಲನ್ಸ್ ಸೇವೆಯು ಒಳಗೊಂಡಿದೆ. ಈ ವಿಮೆ, ಇಡೀ ಕುಟುಂಬದಲ್ಲಿನ ಪ್ರತಿಯೊಬ್ಬ ಸದಸ್ಯರನ್ನು ಒಳಗೊಳ್ಳಲು ಒಂದು ಅಥವಾ ಹಲವು ಆಯ್ಕೆಗಳನ್ನು ನೀಡುತ್ತದೆ. ಸಾಹಸ ಪ್ರವಾಸೋದ್ಯಮ ಹೆಚ್ಚುತ್ತಿರುವುದರಿಂದ ಕೇಂದ್ರ ಪ್ರವಾಸೋದ್ಯಮ ಇಲಾಖೆ ವೈಯಕ್ತಿಕ ಅಪಘಾತ ವಿಮೆಗೆ ಒತ್ತು ನೀಡುತ್ತಿದೆ. ಅಪಘಾತದಿಂದ ರಕ್ಷಣೆ ಅಥವಾ ಸಾವು ಮತ್ತು ಅಂಗವಿಕಲತೆಗೆ ಹಾಗೂ ಆಸ್ಪತ್ರೆಯ ವೆಚ್ಚ ಭರಿಸಲು ಭದ್ರತೆ ಒದಗಿಸುವ ವಿಮೆ ಮಾಡಿಸಿರಬೇಕು ಎಂದು ಇಲಾಖೆಯ ನಿಯಮಾವಳಿಗಳು ತಿಳಿಸುತ್ತದೆ.

‘ಒಂದೇ ಗಾತ್ರವು ಎಲ್ಲರಿಗೂ ಹೊಂದುತ್ತದೆ’ ಎನ್ನುವ ಮನೋಭಾವದಿಂದ ವಿಮಾ ಕಂಪನಿಗಳು ಹೊರಬರುತ್ತಿವೆ. ಗ್ರಾಹಕರಿಗೆ ಅನುಕೂಲವಾಗುವ ಭಿನ್ನ ವಿಮಾ ಪಾಲಿಸಿಗಳನ್ನು ರೂಪಿಸುತ್ತಿವೆ. ಜನರು ತಮಗೆ ಅನುಕೂಲವಾಗುವಂತೆ ವಿಮೆಗಳನ್ನು ಈಗ ಆಯ್ಕೆ ಮಾಡಿಕೊಳ್ಳಬಹುದು. ಈ ಎಲ್ಲ ಪಾಲಿಸಿಗಳಿಗೆ ಪ್ರತ್ಯೇಕ ಮೊತ್ತದ ವಿಮೆ ಒದಗಿಸುತ್ತದೆ. ಇದು ಅಗತ್ಯಕ್ಕೆ ತಕ್ಕಂತೆ ಸಕಾಲಕ್ಕೆ ನೆರವು ನೀಡುತ್ತದೆ.

ಅಪಘಾತಗಳು ನಿಮ್ಮ ಉಳಿತಾಯದ ಹಣವನ್ನು ನುಂಗಬಹುದು. ಇದರಿಂದ ಆರ್ಥಿಕ ಸಂಕಷ್ಟಗಳು ಎದುರಾಗಬಹುದು. ಜತೆಗೆ ಹಣಕಾಸಿನ ಸಮಸ್ಯೆಯಿಂದ ಬೇರೆ ಬೇರೆ ರೀತಿಯ ಸಮಸ್ಯೆಗಳು ಸಹ ಎದುರಾಗಬಹುದು. ಹೀಗಾಗಿ, ವೈಯಕ್ತಿಕ ಅಪಘಾತ ವಿಮೆ ಹೊಂದುವುದರಿಂದ ಅನುಕೂಲವಾಗುತ್ತದೆ. ಯಾವುದೇ ರೀತಿಯ ಆತಂಕಗಳನ್ನು ಧೈರ್ಯದಿಂದ ಎದುರಿಸಬಹುದು.

(ಲೇಖಕ: ಬಜಾಜ್‌ ಅಲೈಯನ್ಸ್‌ ಜನರಲ್‌ ಇನ್ಶುರನ್ಸ್‌ ಕಂಪನಿಯ  ಆರೋಗ್ಯ ಆಡಳಿತ ತಂಡದ ಮುಖ್ಯಸ್ಥ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !