ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ಅಸ್ಥಿರತೆ ಕಾರಣದಿಂದ ಎಫ್‌ಪಿಒ ಹಿಂಪಡೆಯಲಾಗಿದೆ: ಗೌತಮ್ ಅದಾನಿ

Last Updated 3 ಫೆಬ್ರುವರಿ 2023, 4:30 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯ ವರದಿ ಪ್ರಕಟವಾದ ನಂತರದಲ್ಲಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ‘ಮಾರುಕಟ್ಟೆಯಲ್ಲಿನ ಅಸ್ಥಿರತೆಯ ಕಾರಣದಿಂದಾಗಿ ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಒ ಹಿಂಪಡೆಯಲಾಗಿದೆ’ ಎಂದು ಹೇಳಿದ್ದಾರೆ.

‘ಎಫ್‌ಪಿಒ ಹಿಂಪಡೆಯುವ ನಿರ್ಧಾರವು ಹಲವರಲ್ಲಿ ಆಶ್ಚರ್ಯ ಮೂಡಿಸಿರಬಹುದು. ಆದರೆ ಮಾರುಕಟ್ಟೆಯಲ್ಲಿ ಇರುವ ಅಸ್ಥಿರತೆಯನ್ನು ಗಮನಿಸಿ, ಎಫ್‌ಪಿಒ ಪ್ರಕ್ರಿಯೆ ಮುಂದುವರಿಸುವುದು ನೈತಿಕವಾಗಿ ಸರಿಯಲ್ಲ ಎಂದು ಕಂಪನಿಯ ಆಡಳಿತ ಮಂಡಳಿ ತೀರ್ಮಾನಿಸಿತು’ ಎಂದು ಗೌತಮ್ ಅದಾನಿ ಅವರು ಹೂಡಿಕೆದಾರರನ್ನು ಉದ್ದೇಶಿಸಿ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಎಫ್‌ಪಿಒ ಮೂಲಕ ಷೇರನ್ನು ₹ 3,112–3,276ರ ದರದಲ್ಲಿ ಮಾರಾಟ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಮಾರುಕಟ್ಟೆಯಲ್ಲಿ ಷೇರಿನ ಬೆಲೆಯು ಇದಕ್ಕಿಂತ ಕಡಿಮೆ ಇದೆ. ಇದರಿಂದಾಗಿ ಎಫ್‌ಪಿಒ ಮೂಲಕ ಹೂಡಿಕೆ ಮಾಡುವವರು ತಮಗೆ ಅನ್ಯಾಯವಾಗಿದೆ ಎಂದು ಭಾವಿಸುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು ಎಂದು ಆಡಳಿತ ಮಂಡಳಿಯ ಮೂಲಗಳು ಹೇಳಿವೆ.

‘ಉದ್ಯಮಿಯಾಗಿ ನಾಲ್ಕು ದಶಕಗಳಿಗೂ ಹೆಚ್ಚಿನ ಅವಧಿಯ ನನ್ನ ಪಯಣದಲ್ಲಿ ಎಲ್ಲ ಭಾಗೀದಾರರಿಂದ ಬೆಂಬಲ ನನಗೆ ಸಿಕ್ಕಿದೆ. ನನಗೆ ನನ್ನ ಹೂಡಿಕೆದಾರರ ಹಿತಾಸಕ್ತಿಯು ಅತ್ಯಂತ ಹೆಚ್ಚು ಮಹತ್ವದ್ದು, ಇನ್ನುಳಿದವೆಲ್ಲವೂ ನಂತರದವು. ಹೀಗಾಗಿ ಹೂಡಿಕೆದಾರರಿಗೆ ಆಗಬಹುದಾದ ನಷ್ಟವನ್ನು ತಡೆಯಲು ನಾವು ಎಫ್‌ಪಿಒ ಹಿಂಪಡೆದಿದ್ದೇವೆ’ ಎಂದು ಗೌತಮ್ ಅದಾನಿ ತಿಳಿಸಿದ್ದಾರೆ.

ಎಫ್‌ಪಿಒ ಹಿಂದಕ್ಕೆ ಪಡೆಯುವ ತೀರ್ಮಾನವು ಸಮೂಹದ ಈಗಿನ ಚಟುವಟಿಕೆಗಳ ಮೇಲೆ ಹಾಗೂ ಭವಿಷ್ಯದ ಯೋಜನೆಗಳ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ನಮ್ಮ ಕಂಪನಿಯ ಮೂಲಭೂತ ಹಣಕಾಸಿನ ಸ್ಥಿತಿ ಗಟ್ಟಿಯಾಗಿದೆ. ಸಾಲಗಳನ್ನು ತೀರಿಸುವ ವಿಚಾರದಲ್ಲಿ ನಮ್ಮ ಹಿನ್ನೆಲೆಯು ದೋಷರಹಿತವಾಗಿದೆ’ ಎಂದು ಅವರು ವಿವರಿಸಿದ್ದಾರೆ. ಬಂಡವಾಳ ಮಾರುಕಟ್ಟೆಗಳಲ್ಲಿ ಸ್ಥಿರತೆ ಕಂಡುಬಂದ ನಂತರದಲ್ಲಿ ಷೇರು ಮಾರಾಟದ ಬಗ್ಗೆ ಮತ್ತೆ ಆಲೋಚನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎಫ್‌ಪಿಒ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಆರಂಭಿಕ ಹೂಡಿಕೆದಾರರ ವಿಭಾಗದಲ್ಲಿ ಹೂಡಿಕೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT