ಮಹಿಳಾ ಸ್ವಾವಲಂಬಿ ಬದುಕು

7
ಮಹಿಳೆಯರ ಸ್ವಾವಲಂಬನೆಗೆ ಅಗರಬತ್ತಿ ಉದ್ಯಮದ ನೆರವು

ಮಹಿಳಾ ಸ್ವಾವಲಂಬಿ ಬದುಕು

Published:
Updated:

ಇತ್ತೀಚಿನ ವರ್ಷಗಳಲ್ಲಿ ಅಗರಬತ್ತಿಗಳು ಪೂಜಾ ಕೋಣೆಯಿಂದ ಹೊರ ಬಂದಿವೆ. ಹೊಸ ಜೀವನಶೈಲಿಯನ್ನು ವ್ಯಾಪಕವಾಗಿ ಆಕ್ರಮಿಸಿಕೊಂಡಿವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದ್ದ ಅಗರಬತ್ತಿ ಈಗ ವೈವಿಧ್ಯಮಯ ರೂಪದಲ್ಲಿ ಜೀವನದ ಪ್ರತಿಯೊಂದು ಹಂತದಲ್ಲಿ ತಮ್ಮ ಬಳಕೆಯ ಮಹತ್ವದ ಸುವಾಸನೆ ಬೀರುತ್ತಿವೆ.

ಪೂಜಾ ವಿಧಿ ವಿಧಾನಗಳಿಂದ ಈಗ ಧ್ಯಾನ, ಯೋಗಾಭ್ಯಾಸ ಸಂದರ್ಭದಲ್ಲಿ ಬಳಕೆಯಾಗುತ್ತಿವೆ. ಮನೆ, ಕಚೇರಿ, ಹೋಟೆಲ್‌ಗಳಲ್ಲಿನ ವಾತಾವರಣವನ್ನು ಹೆಚ್ಚು ಆಹ್ಲಾದಕರಗೊಳಿಸಲೂ ನೆರವಾಗುತ್ತಿವೆ.

ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಜನರ ಅಭಿರುಚಿ ಬದಲಾಗುತ್ತಿದ್ದಂತೆ ಅಗರಬತ್ತಿಗಳು ಹೊರಸೂಸುವ ಸುವಾಸನೆಯಲ್ಲಿಯೂ ಪರಿವರ್ತನೆ ಅಳವಡಿಸಿಕೊಳ್ಳಲಾಗುತ್ತಿದೆ. 1949ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಮೈಸೂರು ಊದುಬತ್ತಿ ತಯಾರಕರ ಸಂಘವು 1982ರಲ್ಲಿ ಅಖಿಲ ಭಾರತ ಅಗರಬತ್ತಿ ತಯಾರಕರ ಸಂಘವಾಗಿ ಮರು ನಾಮಕರಣಗೊಂಡಿದೆ.

ಸಂಘವು ಉದ್ದಿಮೆಯ ಬೆಳವಣಿಗೆ ಮತ್ತು ಅಲ್ಲಿನ ಕಾರ್ಮಿಕರ ಕಲ್ಯಾಣಕ್ಕೆ ನಿರಂತರವಾಗಿ ಶ್ರಮಿಸುತ್ತ ಬಂದಿದೆ. ಸೌಂದರ್ಯ ಪ್ರಸಾಧನಗಳ ತಯಾರಿಕೆ ಮತ್ತು ಬಳಕೆಯಲ್ಲಿನ ಬದಲಾವಣೆಗೆ ತಕ್ಕಂತೆ ಊದುಬತ್ತಿಗಳ ವೈವಿಧ್ಯಮಯ ತಯಾರಿಕೆಯಲ್ಲಿಯೂ ಹೊಸತನ ಮೈಗೂಡಿಸಿಕೊಳ್ಳಲಾಗುತ್ತಿದೆ.

ದೇಶಿ ಅಗರಬತ್ತಿ ತಯಾರಿಕೆ ಉದ್ದಿಮೆಯ ವಾರ್ಷಿಕ ವಹಿವಾಟು ₹ 7,000 ಕೋಟಿಯ ಗಡಿ ದಾಟಿದೆ. ವರ್ಷದಿಂದ ವರ್ಷಕ್ಕೆ ಶೇ 18ರಷ್ಟು ತೃಪ್ತಿದಾಯಕ ಬೆಳವಣಿಗೆಯನ್ನೂ ದಾಖಲಿಸುತ್ತಿದೆ. ಅಗರಬತ್ತಿ ತಯಾರಿಕೆಯು ಗುಡಿ ಕೈಗಾರಿಕೆ ವ್ಯಾಪ್ತಿಯಲ್ಲಿ ಬರುವುದರಿಂದ ಜಿಎಸ್‌ಟಿ ಜಾರಿಯ ಆರಂಭದಿಂದಲೇ ಶೇ 12 ರಿಂದ ಶೇ 5ರ ದರದ ಪ್ರಯೋಜನ ಪಡೆದುಕೊಳ್ಳುವಲ್ಲಿ ಸಫಲವಾಗಿದೆ.

ದೇಶದಾದ್ಯಂತ ಏಕರೂಪದ ಜನಮನ್ನಣೆಗೆ ಪಾತ್ರವಾಗಿರುವ ಬ್ರ್ಯಾಂಡ್‌ಗಳು ಕೇವಲ ಬೆರಳಿಕೆಯಷ್ಟು ಮಾತ್ರ ಇವೆ. ಅವುಗಳಲ್ಲಿ ಮೈಸೂರಿನ ಸೈಕಲ್‌ ಬ್ರ್ಯಾಂಡ್‌ ಕೂಡ ಒಂದು.

150 ವರ್ಷದ ಇತಿಹಾಸ ಹೊಂದಿರುವ ಉದ್ದಿಮೆಯು ಸಂಘಟಿತ ವಲಯದಲ್ಲಿಯೇ ಬೆಳೆದು ನಿಂತಿದೆ. ಉದ್ದಿಮೆ, ಸಿಬ್ಬಂದಿಗೆ ಸಂಬಂಧಿಸಿದಂತೆ ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತಿದೆ. ಐದನೇ ತಲೆಮಾರಿನವರೆಗೂ ಈ ಉದ್ದಿಮೆ ಮುಂದುವರೆದುಕೊಂಡು ಬಂದಿರುವುದು ಈ ಉದ್ಯಮದ ಇನ್ನೊಂದು ಹೆಗ್ಗಳಿಕೆಯಾಗಿದೆ.

ದಿ ಮೈಸೂರು ಅಗರಬತ್ತಿ ಕಂಪನಿ ರಾಜ್ಯದ ಅತ್ಯಂತ ಹಳೆಯ ಕಂಪನಿಯಾಗಿದೆ. ಇದು 150 ವರ್ಷಗಳಷ್ಟು ಹಳೆಯದು. ಹಲವು ಕುಟುಂಬಗಳ ವೃತ್ತಿಯಾಗಿದ್ದ ಈ ಉದ್ದಿಮೆ ಈಗ ದೇಶದಾದ್ಯಂತ ವ್ಯಾಪಕವಾಗಿ ಬೆಳೆದಿದೆ. ಮೈಸೂರು – ಬೆಂಗಳೂರಿನ ಸುತ್ತಮುತ್ತ ಕೇಂದ್ರೀಕೃತಗೊಂಡಿರುವುದು ಉದ್ದಿಮೆಯ ಇನ್ನೊಂದು ಹೆಗ್ಗಳಿಕೆಯಾಗಿದೆ.


ಅಖಿಲ ಭಾರತ ಅಗರಬತ್ತಿ ತಯಾರಿಕಾ ಸಂಘದ ಅಧ್ಯಕ್ಷ ಶರತ್‌ ಬಾಬು

ಅಗರಬತ್ತಿ ತಯಾರಿಕೆಯು 25 ವರ್ಷಗಳ ಹಿಂದೆ ಕೇವಲ ಬೆಂಗಳೂರು, ಮೈಸೂರಿಗೆ ಮಾತ್ರ ಸೀಮಿತವಾಗಿತ್ತು. ಸದ್ಯಕ್ಕ ದೇಶದಾದ್ಯಂತ ವಿಸ್ತರಿಸಿದೆ. ಗುಣಮಟ್ಟದ ವಿಷಯದಲ್ಲಿ ಬೆಂಗಳೂರು ಮತ್ತು ಮೈಸೂರಿನ ತಯಾರಿಕಾ ಘಟಕಗಳು ಮೊದಲ ಸ್ಥಾನ ಕಾಯ್ದುಕೊಂಡಿರುವುದು ಈ ಉದ್ದಿಮೆಯ ಹೆಗ್ಗಳಿಕೆಯಾಗಿದೆ.

ಇಂತಹ ಘಟಕಗಳಲ್ಲಿ ಶುದ್ಧತೆಗೆ ಅಗ್ರ ಸ್ಥಾನ ಇರುವ ನಂಬಿಕೆ ಗ್ರಾಹಕರಲ್ಲಿ ಮನೆ ಮಾಡಿರುವುದೇ ಇದಕ್ಕೆ ಕಾರಣ. ಆರಂಭದಲ್ಲಿ ಶ್ರೀಗಂಧದ ಎಣ್ಣೆಯೇ ಅಗರಬತ್ತಿಗಳ ತಯಾರಿಕೆಗೆ ಮೂಲ ಸಂಪನ್ಮೂಲ ಆಗಿತ್ತು. ಇಲ್ಲಿಯ ತಯಾರಿಕಾ ಘಟಕಗಳು ಅಳವಡಿಸಿಕೊಂಡಿರುವ ವಿಶಿಷ್ಟ ತಯಾರಿಕಾ ಸೂತ್ರವೇ ಇದಕ್ಕೆ ಕಾರಣ.

ರಾಜ್ಯದಲ್ಲಿ ಬೆಳೆಯುವ ಶ್ರೀಗಂಧ ಮರವನ್ನು ಆಸ್ಟ್ರೇಲಿಯಾಕ್ಕೆ ತೆಗೆದುಕೊಂಡು ಹೋಗಿ ಬೆಳೆದಿದ್ದರೂ ಶ್ರೀಗಂಧದ ಎಣ್ಣೆಯ ಮೂಲ ಸುವಾಸನೆ ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಇಲ್ಲಿಯ ಮಣ್ಣಿನ ಗುಣ ಕಾರಣ ಎಂದು‘ಎಐಎಂಎ’ದ ಅಧ್ಯಕ್ಷ ಶರತ್‌ ಬಾಬು ಹೇಳುತ್ತಾರೆ.

ಟ್ರಸ್ಟ್‌ನ ಕಳಕಳಿ

ಅಗರಬತ್ತಿ ತಯಾರಿಸುವ ಹಲವಾರು ಜನಪ್ರಿಯ ಬ್ರ್ಯಾಂಡ್‌ ಗಳು ಸಮಾಜ ಸೇವೆ, ಕಾರ್ಮಿಕರ ಹಿತಾಸಕ್ತಿ ರಕ್ಷಣೆಗೆ ಖಾಸಗಿ ಟ್ರಸ್ಟ್‌ಗಳನ್ನು ಸ್ಥಾಪಿಸಿಕೊಂಡಿವೆ. ಅದೇ ಬಗೆಯಲ್ಲಿ ಅಖಿಲ ಭಾರತ ಅಗರಬತ್ತಿ ತಯಾರಕರ ಸಂಘವು ತನ್ನದೇ ಆದ ಮೈಸೂರು ಊದುಬತ್ತಿ ತಯಾರಕರ ಚಾರಿಟಬಲ್‌ ಟ್ರಸ್ಟ್‌ ಸ್ಥಾಪಿಸಿ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ.

ಉದ್ದಿಮೆಯಲ್ಲಿ ದುಡಿಯುವ  ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ,  ಶಿಕ್ಷಣ ಶುಲ್ಕದ ಶೇ 20 ರಿಂದ ಶೇ 30ರಷ್ಟು ಪಾಲು ಭರಿಸುವ, ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ₹ 50 ಸಾವಿರ, ವೈದ್ಯಕೀಯ ವಿದ್ಯಾರ್ಥಿಗಳಿಗೆ ₹ 75 ಸಾವಿರದಂತೆ ನೆರವು ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಟ್ರಸ್ಟ್‌ ಆಶ್ರಯದಲ್ಲಿ ಎರಡು ವರ್ಷಗಳಿಂದ 70ರಿಂದ 80 ಜನರಿಗೆ ಉಚಿತವಾಗಿ ಡಯಾಲಿಸಿಸ್‌ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಈ ಸೌಲಭ್ಯವನ್ನು ಇನ್ನಷ್ಟು ಜನರಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.

ಟ್ರಸ್ಟ್‌ ಆಶ್ರಯದಲ್ಲಿ 1975ರಲ್ಲಿ ಸ್ಥಾಪಿಸಿರುವ ಕೋ ಆಪರೇಟಿವ್‌ ಸೊಸೈಟಿಯು ಕಚ್ಚಾ ಸರಕು ಆಮದು ಮಾಡಿಕೊಳ್ಳಲು ನೆರವಾಗುತ್ತಿದೆ. ಅಸ್ತಿತ್ವಕ್ಕೆ ಬಂದಂದಿನಿಂದ ಸತತವಾಗಿ ಲಾಭಾಂಶ ವಿತರಿಸುತ್ತ ಬರಲಾಗಿದೆ. ಇದು ಸೊಸೈಟಿಯ ದಕ್ಷ ಕಾರ್ಯನಿರ್ವಹಣೆಗೆ ನಿದರ್ಶನವಾಗಿದೆ. 1973ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಟ್ರಸ್ಟ್‌, 1975ರಲ್ಲಿ ಕಾರ್ಯಾರಂಭ ಮಾಡಿದೆ. ಕಟ್ಟಡದ ಬಾಡಿಗೆಯಿಂದ ಬರುವ ವರಮಾನದಿಂದ ಇದರ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತಿದೆ. ತಯಾರಕರೂ ಪ್ರತಿ ಬಿಲ್‌ಗೆ ₹ 1ರಂತೆ ಕೊಡುಗೆ ನೀಡುತ್ತಾರೆ.

ಬಿದಿರು ಬೆಳೆಯಲು ಉತ್ತೇಜನ

ಅಗರಬತ್ತಿಗೆ ಅಗತ್ಯವಾಗಿ ಬೇಕಾದ ಕಡ್ಡಿಗಳಿಗಾಗಿ ಬಿದಿರು ಬೆಳೆಯಲೂ ಉತ್ತೇಜನ ನೀಡಲಾಗುತ್ತಿದೆ. ಬಿದಿರು ಪರಿಸರ ಸ್ನೇಹಿಯೂ ಹೌದು. ಬಿದಿರು ಹುಲ್ಲು ಎಂದು ಪರಿಗಣಿತವಾಗಿರುವಾಗ ರೈತರು ತಮ್ಮ ಹೊಲದಲ್ಲಿನ ಪಾಳು ಭೂಮಿಯಲ್ಲಿಯೂ ಇದನ್ನು ಬೆಳೆದು ಅಗರಬತ್ತಿ ತಯಾರಕರಿಗೆ ಮಾರಾಟ ಮಾಡಬಹುದು. ಎಲ್ಲೆಡೆ ಇದನ್ನು ವ್ಯಾಪಕವಾಗಿ ಬೆಳೆಯುವಂತಾದರೆ, ಬಿದಿರು ಆಮದು ಮೇಲಿನ ಅವಲಂಬನೆಯನ್ನು ತಗ್ಗಿಸಬಹುದು.

**

₹ 7,000 ಕೋಟಿ: ದೇಶಿ ಉದ್ಯಮದ ವಹಿವಾಟು

 18 %: ವಾರ್ಷಿಕ ಬೆಳವಣಿಗೆ ದರ

₹ 1,000 ಕೋಟಿ: ರಫ್ತು ವಹಿವಾಟು

8 ರಿಂದ 10 ಲಕ್ಷ: ರಾಜ್ಯದಲ್ಲಿ ಉದ್ಯಮದಲ್ಲಿ ತೊಡಗಿರುವವರ ಸಂಖ್ಯೆ

70 %: ಉದ್ದಿಮೆಯಲ್ಲಿ ಮಹಿಳೆಯರಿಗೆ ಇರುವ ಉದ್ಯೋಗ ಅವಕಾಶ

ಉದ್ಯಮದ ಚಿತ್ರಣ:  700

ದೇಶದಲ್ಲಿನ ತಯಾರಕರ ಸಂಖ್ಯೆ: 400

ರಾಜ್ಯದಲ್ಲಿನ ತಯಾರಕರು: ಶೇ 70ಕ್ಕೂ ಹೆಚ್ಚು ಮಹಿಳೆಯರು

**

ಅಗರಬತ್ತಿ ಮೂಲ

ಮದುರೈ, ತಂಜಾವೂರು ದೇವಸ್ಥಾನಗಳಲ್ಲಿ ನೈಸರ್ಗಿಕವಾದ 21 ಗಿಡಮೂಲಿಕೆಗಳಿಂದ ತಯಾರಿಸಿದ ಧೂಪಂ, ಹೋಮಗಳಲ್ಲಿ ಬಳಕೆಯಾಗುತ್ತಿತ್ತು. ಆನಂತರ ಇದು ದಶಾಂಗಂ ರೂಪ ತಳೆದು ಆನಂತರ ಅಗರಬತ್ತಿಯಾಗಿ ಬಳಕೆಗೆ ಬಂದಿದೆ.

ಧೂಪಂ, ದಶಾಂಗಂಗೆ ಆನಂತರ ಸುಗಂಧದ್ರವ್ಯ, ಕನೋಜ್‌ನ ಅತ್ತರ್‌ ಸೇರ್ಪಡೆ ಮಾಡಲಾಯಿತು. ಮೈಸೂರು ಮಹಾರಾಜರ ಕಾಲದಲ್ಲಿ ಈ ಅಗರಬತ್ತಿಗೆ ಶ್ರೀಗಂಧದ ಎಣ್ಣೆ ಸೇರ್ಪಡೆ ಮಾಡಿದ ನಂತರ ಈ ಉದ್ದಿಮೆಯ ಚಿತ್ರಣವೇ ಬದಲಾಯಿತು. ಮೈಸೂರು, ಅಗರಬತ್ತಿಗೆ ಇನ್ನೊಂದು ಹೆಸರಾಯಿತು. ಈಗಲೂ ಮೈಸೂರು, ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಈ ಉದ್ದಿಮೆ ಕೇಂದ್ರೀಕೃತಗೊಂಡಿದೆ.

ದೇಶದ ಇತರೆಡೆ ಉದ್ದಿಮೆಯ ಕೊಂಬೆಗಳು ಪಸರಿಸಿದ್ದರೂ, ಬೇರುಗಳು ಇಲ್ಲಿ ಗಟ್ಟಿಯಾಗಿ ಬೇರೂರಿವೆ. ಮೈಸೂರಿನ ಅಗರಬತ್ತಿಗಳು ವಿಶ್ವವಿಖ್ಯಾತಗೊಂಡಿವೆ.

ಅಗರಬತ್ತಿ ಶಬ್ದದ ಮೂಲ ಅಸ್ಸಾಂ. ಅಲ್ಲಿ ಬೆಳೆಯುವ ಅಗರವುಡ್‌ನಿಂದ ಇದು ಬಳಕೆಗೆ ಬಂದಿದೆ. ಹಿಂದಿ ಮೂಲದ ಅಗರಬತ್ತಿ, ಗಂಧದ ಕಡ್ಡಿ, ಊದುಬತ್ತಿ, ಸಾಂಬ್ರಾಣಿಯಾಗಿ ಬಳಕೆಗೆ ಬಂದು ಜನಪ್ರಿಯತೆ ಪಡೆದಿದೆ.

**

ಮಹಿಳೆಯರಿಗೆ ಉದ್ಯೋಗಾವಕಾಶ

ಈ ಉದ್ದಿಮೆಯಲ್ಲಿ ಕಾರ್ಮಿಕರ ಮೇಲಿನ ಅವಲಂಬನೆ ಪ್ರಮಾಣ ಹೆಚ್ಚಿಗೆ ಇದೆ. ಹೆಚ್ಚಿನ ಭಾರ ನಿರ್ವಹಿಸುವ ಅಗತ್ಯ ಇಲ್ಲದಿರುವುದರಿಂದ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ದುಡಿಯುತ್ತಿದ್ದಾರೆ. ಗೃಹಿಣಿಯರು ತಮ್ಮ ಗೃಹಕೃತ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಿ ಬಿಡುವಿನ ಸಮಯದಲ್ಲಿ ಅಗರಬತ್ತಿ ತಯಾರಿಕೆಯಲ್ಲಿ ತೊಡಗಲು ಅವಕಾಶ ಇದೆ. ಇದರಿಂದ ಕುಟುಂಬಕ್ಕೆ ಹೆಚ್ಚಿನ ಆದಾಯ ದೊರೆಯಲಿದೆ. ದುಡಿಮೆ ಆಧರಿಸಿ ಪ್ರತಿ ದಿನ ₹ 300 ರಿಂದ ₹ 400ರವರೆಗೆ ಆದಾಯ ಗಳಿಸಲು ಇಲ್ಲಿ ಸಾಧ್ಯ ಇದೆ.

ಮಹಿಳೆಯರು ಮನೆಯಲ್ಲಿ ಇದ್ದುಕೊಂಡೆ ಅಗರಬತ್ತಿ ತಯಾರಿಕೆಯಲ್ಲಿ ತೊಡಗಬಹುದು. ಇದಕ್ಕೆ ಸಂಘವು ಅಗತ್ಯವಾದ ತರಬೇತಿಯನ್ನೂ ನೀಡುತ್ತದೆ. ಮೂರು ದಿನಗಳಲ್ಲಿ ತಯಾರಿಕೆ ಕಲಿಯಬಹುದು. ಯಾರೇ ಆದರೂ ಈ ಉದ್ದಿಮೆಯಲ್ಲಿ ತೊಡಗಬಹುದು. ಹೊಲಿಗೆ ಯಂತ್ರ ಗಾತ್ರದ ಸಣ್ಣ ಯಂತ್ರದ ಮೂಲಕ ಮಹಿಳೆಯರು ಸುಲಭವಾಗಿ ಅಗರಬತ್ತಿಗಳನ್ನು ತಯಾರಿಸಬಹುದು.   ಫ್ಯಾಕ್ಟರಿಗೆ ಹೋಗಿಯೇ ಕೆಲಸ ಮಾಡಬೇಕಾಗಿಲ್ಲ. ಮನೆಯಲ್ಲಿಯೇ ಇದ್ದುಕೊಂಡೇ ತಮ್ಮ ಅನುಕೂಲದ ಸಮಯದಲ್ಲಿ ಅಗರಬತ್ತಿ ತಯಾರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !