ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2,500 ಕೋಟಿ ಪಾವತಿ ಪ್ರಸ್ತಾಪ ಮುಂದಿಟ್ಟ ವೊಡಾಫೋನ್: ಮನವಿ ತಿರಸ್ಕರಿಸಿದ ಸುಪ್ರೀಂ

Last Updated 17 ಫೆಬ್ರುವರಿ 2020, 10:00 IST
ಅಕ್ಷರ ಗಾತ್ರ

ನವದೆಹಲಿ: ದೂರಸಂಪರ್ಕ ಇಲಾಖೆಗೆ ಪಾವತಿಸಬೇಕಿರುವ ಮೊತ್ತದಲ್ಲಿ ಸೋಮವಾರ ₹2,500 ಕೋಟಿ ಹಾಗೂ ಶುಕ್ರವಾರದೊಳಗೆ ₹1,000 ಕೋಟಿ ಪಾವತಿಸುವುದಾಗಿ ವೊಡಾಫೋನ್‌ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಸಂಬಂಧಿಸಿ ಬಾಕಿ ಇರುವ ಮೊತ್ತ ಪಾವತಿಗೆ ಒತ್ತಾಯಿಸುವ ಕ್ರಮಗಳನ್ನು ತೆಗೆದುಕೊಳ್ಳದಂತೆ ಹಾಗೂ ಸೀಮಿತ ಮೊತ್ತವನ್ನು ಪಾವತಿಸಲು ಅನುವು ಮಾಡಿಕೊಡುವಂತೆ ವೊಡಾಫೋನ್‌ ಪರವಾಗಿ ಹಿರಿಯ ಅಡ್ವೊಕೇಟ್‌ ಮುಕುಲ್‌ ರೋಹತಗಿ ಕೋರ್ಟ್‌ಗೆ ಮನವಿ ಮಾಡಿದರು. ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ನ್ಯಾಯಪೀಠವು ಮನವಿ ತಿರಸ್ಕರಿಸಿತು.

ಇಂದು ₹2,500 ಕೋಟಿ ಹಾಗೂ ಶುಕ್ರವಾರದೊಳಗೆ ₹1,000 ಕೋಟಿ ಪಾವತಿಸಲು ಅವಕಾಶ ಮಾಡಿಕೊಡುವಂತೆ ಕೇಳಲಾಯಿತು. ಸರ್ಕಾರಕ್ಕೆ ವೊಡಾಫೋನ್‌ ನೀಡಿರುವ ಬ್ಯಾಂಕ್‌ ಭದ್ರತಾ ಠೇವಣಿ ನಗದೀಕರಿಸಿಕೊಳ್ಳದಂತೆಯೂ ರೋಹತಗಿ ಮನವಿ ಮಾಡಿದರು. ಆದರೆ, ಸುಪ್ರೀಂ ಕೋರ್ಟ್‌ ಮನವಿ ತಿರಸ್ಕರಿಸಿರುವುದರಿಂದ ವೊಡಾಫೋನ್‌ ಕೂಡಲೇ ಬಾಕಿ ಪಾವತಿಸುವುದು ಅನಿವಾರ್ಯವಾಗಿದೆ.

ಆದೇಶ ಪಾಲನೆಯಾಗದಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ದೂರ ಸಂಪರ್ಕ ಇಲಾಖೆ ಟೆಲಿಕಾಂ ಕಂಪನಿಗಳಿಗೆ ಕೂಡಲೇ ಬಾಕಿ ಪಾವತಿಸುವಂತೆ ತಾಕೀತು ಮಾಡಿತು. ಭಾರ್ತಿ ಏರ್‌ಟೆಲ್‌ ₹10,000 ಕೋಟಿ ಪಾವತಿಸಿರುವುದಾಗಿ ಸೋಮವಾರ ಹೇಳಿದೆ.

'ಭಾರ್ತಿ ಏರ್‌ಟೆಲ್, ಭಾರ್ತಿ ಹೆಕ್ಸಾಕಾಮ್‌ ಹಾಗೂ ಟೆಲಿನಾರ್‌ ಪರವಾಗಿ ಒಟ್ಟು ₹10,000 ಕೋಟಿ ಪಾವತಿಸಲಾಗಿದೆ. ತೆರಿಗೆ ಲೆಕ್ಕಾಚಾರ ಸೇರಿದಂತೆ ಇತರೆ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಬಾಕಿ ಮೊತ್ತ ಪಾವತಿಸಲಿದ್ದೇವೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ದಿನದೊಳಗೆ ಬಾಕಿ ಪಾವತಿ ಆಗಲಿದೆ' ಎಂದು ಭಾರ್ತಿ ಏರ್‌ಟೆಲ್‌ ಹೇಳಿದೆ.

ತರಂಗಾಂತರ ಬಳಕೆ ಹಾಗೂ ಪರವಾನಗಿ ಶುಲ್ಕ ಸೇರಿದಂತೆ ವೊಡಾಫೋನ್‌ ಐಡಿಯಾ ಸರ್ಕಾರಕ್ಕೆ ₹53,000 ಕೋಟಿ ಪಾವತಿಸಬೇಕಿದೆ.

₹35,586 ಕೋಟಿ ಬಾಕಿ ಉಳಿಸಿಕೊಂಡಿರುವ ಭಾರ್ತಿ ಏರ್‌ಟೆಲ್‌, ಸೋಮವಾರ₹10,000 ಕೋಟಿ ಪಾವತಿಸಿರುವುದಾಗಿ ತಿಳಿಸಿದೆ.ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ದಿನದೊಳಗೆ ಬಾಕಿ ಮೊತ್ತ ಪೂರ್ಣ ಪಾವತಿ ಆಗಲಿದೆ ಎಂದು ಭಾರ್ತಿ ಏರ್‌ಟೆಲ್‌ ಹೇಳಿದೆ.

ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಸಂಬಂಧಿಸಿ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ₹1.47 ಲಕ್ಷ ಕೋಟಿ ಪಾವತಿಸುವ ಬಗ್ಗೆ ನೀಡಿದ್ದ ಆದೇಶ ಪಾಲನೆಯಾಗದ್ದಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಸುಪ್ರೀಂ ಕೋರ್ಟ್‌ 2019ರ ಅಕ್ಟೋಬರ್‌ 24ರಂದು ನೀಡಿದ್ದ ಆದೇಶದ ಪ್ರಕಾರ ಜನವರಿ 23ರಂದು ಟೆಲಿಕಾಂ ಆಪರೇಟರ್‌ಗಳು ಬಾಕಿ ಮೊತ್ತ ಸರ್ಕಾರಕ್ಕೆ ಪಾವತಿಸಬೇಕಿತ್ತು. ಫೆಬ್ರುವರಿ 14ರಂದು ದೂರ ಸಂಪರ್ಕ ಇಲಾಖೆ ತಕ್ಷಣ ಬಾಕಿ ಮೊತ್ತ ಪಾವತಿಸುವಂತೆ ಭಾರ್ತಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಸೇರಿದಂತೆ ಇತರೆ ಟೆಲಿಕಾಂ ಕಂಪನಿಗಳಿಗೆ ನೋಟಿಸ್‌ ಜಾರಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT