ಗುರುವಾರ , ನವೆಂಬರ್ 14, 2019
22 °C

ಬಜೆಟ್‌ನಲ್ಲಿ ಹೇಳಿದ ‘ಹರ್‌ ಘರ್ ಜಲ್‌’ ಗೆ ಜಲಮೂಲವೆಲ್ಲಿ?

Published:
Updated:

ಶೂನ್ಯ ಬಂಡವಾಳ ಕೃಷಿಗೆ ಆದ್ಯತೆ, ಆ ಮೂಲಕ 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಕ್ಕೆ ಒತ್ತು. ಹಳ್ಳಿಗಳಿಂದ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ, ಜಲ ಸಂರಕ್ಷಣೆಗಾಗಿ ‘ಜಲಶಕ್ತಿ ಸಚಿವಾಲಯ’ ಸ್ಥಾಪನೆ, ಇವು ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕಿರುವ ಭರವಸೆಗಳು.

ಇದರ ಜತೆಗೆ ಜಲಸಂಪನ್ಮೂಲ, ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಸಚಿವಾಲಯ, ನಮಾಮಿ ಗಂಗಾ ಯೋಜನೆಗಳನ್ನು ವಿಲೀನಗೊಳಿಸಿ ಹೊಸದಾಗಿ 'ಜಲ ಶಕ್ತಿ' ಸಚಿವಾಲಯವನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಹಾಗೆಯೇ, ರೈತ ಉತ್ಪಾದಕ ಕಂಪನಿಗಳಿಗೆ ಪ್ರೋತ್ಸಾಹ, ರಾಜ್ಯಗಳ ಜಲಸಂರಕ್ಷಣಾ ಯೋಜನೆಗಳಿಗೆ ನೆರವು, ಮೀನುಗಾರರ ಅಭಿವೃದ್ಧಿಗಾಗಿ ಮತ್ಸ್ಯ ಸಂಪದ ಯೋಜನೆ, ಇವು ಕೃಷಿ ಕ್ಷೇತ್ರಕ್ಕೆ ಪೂರಕವಾಗಿ ಬಜೆಟ್‌ನಲ್ಲಿ ಹೇಳಲಾಗಿದೆ.

ಈ ಬಜೆಟ್‌ನಲ್ಲಿ ಕೃಷಿಗೆ ನೀಡಿರುವ ಆದ್ಯತೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಯಾವ ಯೋಜನೆಯನ್ನು ಹೇಗೆ ಅನುಷ್ಠಾನ ಮಾಡುತ್ತಾರೆ ಎಂಬುದೇ ಸ್ಪಷ್ಟವಾಗಿ, ನಿಖರವಾಗಿಲ್ಲ. ಹಾಗೆಯೇ, ಚುನಾವಣಾ ಪೂರ್ವದ ಮಧ್ಯಂತರ ಬಜೆಟ್‌ನಲ್ಲಿ ರೈತರೆಡೆಗೆ ತೋರಿದ ’ಆತ್ಮೀಯತೆ’ಯ ನೋಟ, ಈ ಬಜೆಟ್‌ನಲ್ಲಿ ಕಾಣಲಿಲ್ಲ. ಹಿಂದಿನ ಚುನಾವಣೆಯಲ್ಲಿ ಕಿಸಾನ್‌ ಸಮ್ಮಾನ್‌ (ರೈತರಿಗೆ ಪಿಂಚಣಿ ನೀಡುವ ಯೋಜನೆ) ಘೋಷಣೆಯಾಗಿತ್ತು. ನಿನ್ನೆ(ಗುರುವಾರ) ಕೇಂದ್ರ ಸರ್ಕಾರ ಕೆಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ ಅದನ್ನು ಬಜೆಟ್‌ ಮಂಡನೆಯಲ್ಲಿ ಪ್ರಸ್ತಾಪಿಸಿಲ್ಲ. 

ದೇಶದಲ್ಲಿ ರಾಜಸ್ಥಾನ ಬಿಟ್ಟರೆ ಅತಿ ಹೆಚ್ಚುಒಣಭೂಮಿ ಕೃಷಿ ಭೂಮಿಯನ್ನು ಹೊಂದಿರುವ ಎರಡನೇ ರಾಜ್ಯ ಕರ್ನಾಟಕ. ತೀವ್ರವಾಗಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವುದರಲ್ಲೂ ಕರ್ನಾಕಟವೇ ಮುಂದು. ಹೀಗಾಗಿ, ಈ ಬಜೆಟ್‌ನಲ್ಲಿ ರಾಜ್ಯಕ್ಕೆ ವಿಶೇಷವಾಗಿ ಜಲ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುವಂತಹ ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಇತ್ತು. ಇತ್ತೀಚೆಗೆ ’ಮನ್‌ ಕಿ ಬಾತ್‌’ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು’ ಎಂದು ಕರೆಕೊಟ್ಟಿದ್ದರು. ಹೀಗಾಗಿ ಆ ನಿರೀಕ್ಷೆ ಮತ್ತೂ ಹೆಚ್ಚಾಗಿತ್ತು. ಆದರೆ ಸ್ಪಷ್ಟ ವಿವರಣೆ ಬಜೆಟ್‌ನಲ್ಲಿ ಇಲ್ಲ.  

ಕರ್ನಾಟಕ ಸಿರಿಧಾನ್ಯಗಳ ತವರು. ಆದರೆ, ಈ ಬೆಳೆಯ ಸಂಸ್ಕರಣೆಯೇ ಒಂದು ದೊಡ್ಡ ಸವಾಲು. ಇದಕ್ಕಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಂಸ್ಕರಣಾ ಘಟಕಗಳು ಅಗತ್ಯವಾಗಿದೆ. ಜತೆಗೆ, ಈ ಧಾನ್ಯಗಳನ್ನು ಬೆಳೆಯುವಲ್ಲೇ ಮೌಲ್ಯವರ್ಧನೆ ಮಾಡಿ, ಉಪ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ಘೋಷಿಸಬೇಕಿತ್ತು. 

’ಹರ್‌ ಘರ್‌ ಜಲ್‌’–ನೀರಿನ ಮೂಲ ಎಲ್ಲಿ ?

ಈ ಬಜೆಟ್‌ನಲ್ಲಿ ’ಹರ್‌ ಘರ್‌ ಜಲ್‌’ ಎಂಬ ಯೋಜನೆ ಘೋಷಿಸಲಾಗಿದೆ. ’ಜಲಶಕ್ತಿ ಸಚಿವಾಲಯ’ದ ಮೂಲಕ 2020ರ ವೇಳೆಗೆ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೂ ಕುಡಿಯುವ ನೀರು ಪೂರೈಸುತ್ತೇವೆಂದು ಭರವಸೆ ನೀಡಲಾಗಿದೆ. ಕರ್ನಾಟಕವೂ ಸೇರಿದಂತೆ, ದೇಶದ ಹಲವು ಭಾಗಗಳಲ್ಲಿ ಜಲಮೂಲಗಳು ಬತ್ತಿ ಹೋಗುತ್ತಿವೆ. ಮಳೆ ಪ್ರಮಾಣದಲ್ಲೂ ಏರುಪೇರಾಗುತ್ತಿದೆ. ಜಲಾಶಯಗಳು ಬರಿದಾಗುವ ಆತಂಕ ಎದುರಾಗುತ್ತಿದೆ. ಮೂರ್ನಾಲ್ಕು ಸಾವಿರ ಮಿಲಿ ಮೀಟರ್ ಮಳೆ ಸುರಿಯುವ ಕರ್ನಾಟಕದ ಮಲೆನಾಡು, ಕರಾವಳಿ ಪ್ರದೇಶಗಳೇ ಈ ಬಾರಿ ನೀರಿನ ಸಮಸ್ಯೆಯಿಂದ ತತ್ತರಿಸಿವೆ. ಅವ್ಯಾಹತವಾಗಿ ಕೊರೆದಿರುವ ಕೊಳವೆಬಾವಿಗಳಿಂದಾಗಿ ಅಂತರ್ಜಲವೇ ಬರಿದಾಗಿದೆ. ಪುನಶ್ಚೇತನಗೊಳ್ಳದಷ್ಟು ಅಂತರ್ಜಲ ಪಾತಾಳಕ್ಕೆ ಹೋಗಿದೆ. ಪರಿಸ್ಥಿತಿ ಹೀಗಿರುವಾಗ, ಪ್ರತಿ ಮನೆ ಮನೆಗೆ ಎಲ್ಲಿಂದ ಕುಡಿಯುವ ನೀರು ಪೂರೈಸಲು ಸಾಧ್ಯ?

ಕೊಳವೆಬಾವಿಗಳ ಕೊರತಕ್ಕೆ ನಿರ್ಬಂಧ ಹೇರಿ, ಜಲ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ, ಅದಕ್ಕೆ ಬೇಕಾದ ತಂತ್ರಜ್ಞಾನಗಳನ್ನು ಗ್ರಾಮಗಳಿಗೆ, ರೈತರ ಜಮೀನುಗಳಿಗೆ ವರ್ಗಾಯಿಸುವಂತಹ ಯೋಜನೆಗಳು ಘೋಷಣೆಯಾಗಬೇಕಿತ್ತು. ಅದಕ್ಕೆ ಬೇಕಾದ ಹಣನ್ನು ಈ ಬಜೆಟ್‌ನಲ್ಲಿ ತೆಗೆದಿಡಬೇಕಿತ್ತು. ಇವು ಈ ಹೊತ್ತಿನ ಅನಿವಾರ್ಯ ಹಾಗೂ ಅಗತ್ಯದ ಕ್ರಮ. ಆದರೆ, ಅವ್ಯಾವುದನ್ನೂ ಗಣನೆಗೆ ತೆಗೆದುಕೊಂಡಂತೆ ಕಾಣಲಿಲ್ಲ.

ಆದರೆ, ರಾಜ್ಯ ಸರ್ಕಾರಗಳು ಕೈಗೊಳ್ಳುವ ಜಲ ಸಂರಕ್ಷಣಾ ಕಾರ್ಯಕ್ಕೆ ಪ್ರೋತ್ಸಹ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆ ಪ್ರಕ್ರಿಯೆ ಹೇಗೆ ಎಂಬ ವಿವರಣೆ ಮಾತ್ರ ನೀಡಿಲ್ಲ. ಕನಿಷ್ಠ ಪಕ್ಷ ಕೇಂದ್ರದಲ್ಲಿ ಈಗ ಜಾರಿಯಲ್ಲಿರುವ ‘ನೆಲ – ಜಲ ಸಂರಕ್ಷಣಾ ಯೋಜನೆ’ಯನ್ನಾದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತೇವೆ’ ಎಂದಾದರೂ ಘೋಷಿಸಬಹುದಿತ್ತು. ಚುನಾವಣೆಗೆ ಮುನ್ನ ‘ಸ್ವಾಮಿನಾಥನ್ ವರದಿ’ ಜಾರಿಗೊಳಿಸುವ ಕುರಿತು ಸಾಕಷ್ಟು ಒತ್ತಾಯ ಕೇಳಿಬಂದಿತ್ತು. ಆದರೆ, ಸರ್ಕಾರ ಆ ಬಗ್ಗೆ ಚಕಾರವನ್ನೇ ಎತ್ತಲಿಲ್ಲ.

ಆಶಾದಾಯಕ ಸಂಗತಿಗಳು: ಕೃಷಿ ಕೇತ್ರಕ್ಕೆ ನೀಡಿರುವ ಆದ್ಯತೆ ಕಡಿಮೆ ಎನ್ನಿಸಿದರೂ, ರೈತ ಉತ್ಪಾದಕ ಕಂಪನಿಗಳಿಗೆ ಪ್ರೋತ್ಸಾಹ ನೀಡುವಂತಹ ವಿಚಾರ ಆಶಾದಾಯಕವಾಗಿದೆ. ಆದರೆ, ಈ ಹಿಂದಿನ ಬಜೆಟ್‌ನಲ್ಲೂ ಈ ವಿಷಯ ಪ್ರಸ್ತಾಪವಾಗಿತ್ತು. ಸದ್ಯ ಚಾಲ್ತಿಯಲ್ಲಿರುವ ರೈತರ ಉತ್ಪಾದಕ ಕಂಪನಿಗಳಿಗೆ ಸರ್ಕಾರ ಯಾವ ನೆರವು ಕೊಟ್ಟಿದೆ ?

ಇದರ ಜತೆಗೆ, ಮಹಾತ್ಮಗಾಂಧಿ ಅವರ 150ನೇ ಜನ್ಮಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಗ್ರಾಮೀಣ ಸಾಂಪ್ರದಾಯಿಕ ಕೈಗಾರಿಕೆಗಳ ಪುನಶ್ಚೇತನಕ್ಕೆ ಉತ್ತೇಜನ ನೀಡುವುದಾಗಿ ಹೇಳಿರುವುದೂ ಸ್ವಾಗತಾರ್ಹ ಬೆಳವಣಿಗೆ. ಕ್ಲಸ್ಟರ್‌ ಆಧಾರಿತವಾಗಿ ಬಿದಿರು, ಜೇನು ಮತ್ತು ಖಾದಿಯಂತಹ ಕೈಗಾರಿಕಾ ಘಟಕಗಳು ಪುನಶ್ಚೇತನಗೊಳಿಸುವುದಾದರೆ, ಬಜೆಟ್‌ನಲ್ಲಿ ಘೋಷಿಸಿರುವಂತೆ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವುದಾದರೆ, ಗ್ರಾಮೀಣ ಭಾಗದ ಯುವ ಸಮೂಹಕ್ಕೆ ಒಂದಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ. ಇದು ಪರೋಕ್ಷವಾಗಿ ಕೃಷಿ ಕ್ಷೇತ್ರಕ್ಕೆ ಸಹಾಯವಾಗುತ್ತದೆ.

ಹಳ್ಳಿಗಳಿಂದ ಮಾರುಕಟ್ಟೆ ವಿಭಾಗಕ್ಕೆ ಸಂಪರ್ಕ ಕಲ್ಪಿಸುವ 30 ಸಾವಿರ ರಸ್ತೆ ಅಭಿವೃದ್ಧಿ, ಐದು ವರ್ಷಗಳಲ್ಲಿ 70 ಸಾವಿರ ಕೃಷಿ ಕೌಶಲ ಕೈಗಾರಿಕಾ ಕೇಂದ್ರಗಳ ಸ್ಥಾಪನೆ, 50 ಸಾವಿರ ಕುಶಲ ಕರ್ಮಿಗಳಿಗೆ ನೆರವು ಇವೆಲ್ಲ ಗ್ರಾಮೀಣ – ಕೃಷಿ ಕ್ಷೇತ್ರಕ್ಕೆ ಪೂರಕವಾಗಿ ನೆರವಾಗುವ ವಿಚಾರಗಳು.

ಪ್ರತಿಕ್ರಿಯಿಸಿ (+)