ಭಾನುವಾರ, ಡಿಸೆಂಬರ್ 15, 2019
26 °C

ಕೃಷಿ ರಫ್ತು ನೀತಿಗೆ ಕೇಂದ್ರ ಸಮ್ಮತಿ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಕೃಷಿ ರಫ್ತು ನೀತಿಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

2022ರ ವೇಳೆಗೆ ಕೃಷಿ ರಫ್ತು ಪ್ರಮಾಣವನ್ನು ₹ 4.20 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ನಿಗದಿ ಮಾಡಲಾಗಿದೆ. ಎಲ್ಲ ಬಗೆಯ ಸಾವಯವ ಮತ್ತು ಸಂಸ್ಕರಣೆಗೊಂಡ ಉತ್ಪನ್ನಗಳ ರಫ್ತಿಗೆ ಯಾವುದೇ ನಿರ್ಬಂಧಗಳನ್ನು ದೇಶದ ಈ ಮೊದಲ ಕೃಷಿ ರಫ್ತು ನೀತಿಯು ಒಳಗೊಂಡಿಲ್ಲ.

‘ಈರುಳ್ಳಿಯಂತಹ ಪ್ರಾಥಮಿಕ ಉತ್ಪನ್ನಗಳ ಬೆಲೆ ಮತ್ತು ಪೂರೈಕೆ ಪ್ರಮಾಣ ಆಧರಿಸಿ ಅವುಗಳ ರಫ್ತು ನೀತಿಯನ್ನು ಕಾಲ ಕಾಲಕ್ಕೆ ಪರಾಮರ್ಶಿಸಲಾಗುವುದು’ ಎಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

‘ಸದ್ಯಕ್ಕೆ ಕೃಷಿ ರಫ್ತು ಪ್ರಮಾಣವು ₹ 2.10 ಲಕ್ಷ ಕೋಟಿಗಳಷ್ಟಿದೆ. ಇದನ್ನು ಐದು ವರ್ಷಗಳಲ್ಲಿ ದುಪ್ಪಟ್ಟುಗೊಳಿಸಲು ಉದ್ದೇಶಿಸಲಾಗಿದೆ. ಈ ಗುರಿ ಈಡೇರುವ ಬಗ್ಗೆ ಸರ್ಕಾರಕ್ಕೆ ದೃಢ ವಿಶ್ವಾಸ ಇದೆ. ಈ ಹಿಂದೆ ದೇಶವು ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಈಗ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತಿದೆ. ಕೃಷಿ ಉತ್ಪನ್ನಗಳನ್ನು ಬೆಳೆಯುವ ಪ್ರಮುಖ ದೇಶವಾಗಿದ್ದರೂ ಇದುವರೆಗೆ ಪ್ರತ್ಯೇಕ ರಫ್ತು ನೀತಿ ಹೊಂದಿರಲಿಲ್ಲ. ಈಗ ಆ ಕೊರತೆ ನಿವಾರಣೆಯಾಗಲಿದೆ.

‘ದೇಶದ ಮೊದಲ ಕೃಷಿ ರಫ್ತು ನೀತಿಯು ರೈತರ ವರಮಾನವನ್ನು ದುಪ್ಪಟ್ಟುಗೊಳಿಸುವ ಸರ್ಕಾರದ ಗುರಿ ಸಾಧನೆಗೆ ನೆರವಾಗಲಿದೆ. ಚಹ, ಕಾಫಿ, ಅಕ್ಕಿ ರಫ್ತು ಉತ್ತೇಜಿಸಲು ಮತ್ತು ಜಾಗತಿಕ ಕೃಷಿ ವ್ಯಾಪಾರದಲ್ಲಿ ಭಾರತದ ಪಾಲು ಹೆಚ್ಚಿಸಲು ಈ ನೀತಿ ನೆರವಾಗಲಿದೆ.

‘ಸಾವಯವ ಉತ್ಪನ್ನಗಳ ರಫ್ತು ಮೇಲಿನ ಎಲ್ಲ ಬಗೆಯ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ವಿಭಿನ್ನ ದೇಶಗಳಿಗೆ ವೈವಿಧ್ಯಮಯ ಉತ್ಪನ್ನಗಳ ರಫ್ತು, ಕೃಷಿ ರಫ್ತಿನ ಮೌಲ್ಯವರ್ಧನೆ ಹೆಚ್ಚಿಸಿ ರಫ್ತು ಪ್ರಮಾಣ ದ್ವಿಗುಣಗೊಳಿಸುವುದು ಹೊಸ ನೀತಿಯ ಉದ್ದೇಶಗಳಾಗಿವೆ.

‘ರಾಜ್ಯಗಳ ಅಭಿಪ್ರಾಯ ಪಡೆದು ಈ ನೀತಿ ರೂಪಿಸಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ನಿಯಮಗಳಲ್ಲಿ ಸುಧಾರಣೆ ತರಲು ಸಮ್ಮತಿಸಿವೆ’ ಎಂದು ಸುರೇಶ ಪ್ರಭು ಹೇಳಿದ್ದಾರೆ.

ಕೃಷಿ ರಫ್ತಿಗೆ ಸಂಬಂಧಿಸಿದಂತೆ ಮೂಲ ಸೌಕರ್ಯಗಳ ಆಧುನೀಕರಣ, ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲು, ನಿಯಂತ್ರಣ ಕ್ರಮಗಳ ಸರಳೀಕರಣ, ಅವಸರದ ತೀರ್ಮಾನಗಳಿಗೆ ಕಡಿವಾಣ ಹಾಕಲು ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೂ ಈ ನೀತಿಯು ಆದ್ಯತೆ ನೀಡಲಿದೆ.

ಪ್ರತಿಕ್ರಿಯಿಸಿ (+)