ನವದೆಹಲಿ: ಕೃಷಿ ಉತ್ಪನ್ನಗಳ ರಫ್ತು ಮೌಲ್ಯವು 2021–22ನೇ ಹಣಕಾಸು ವರ್ಷದಲ್ಲಿ ₹ 3.82 ಲಕ್ಷ ಕೋಟಿಗಳಷ್ಟಾಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆಶೇ 20ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶನಿವಾರ ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕದಿಂದ ಸಾಗಣೆ ವ್ಯವಸ್ಥೆಯು ಬಹಳಷ್ಟು ಸವಾಲು ಗಳನ್ನು ಎದುರಿಸಿದ ಹೊರತಾಗಿಯೂ ರಫ್ತು ವಹಿವಾಟಿನಲ್ಲಿ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಿದೆ ಎಂದು ಹೇಳಿದೆ.
ಒಟ್ಟಾರೆ ರಫ್ತಿನಲ್ಲಿ ಅತಿ ಹೆಚ್ಚು ಪಾಲು ಹೊಂದಿರುವ ಅಕ್ಕಿ ರಫ್ತು ಮೌಲ್ಯವು ₹ 73,340 ಕೋಟಿಗಳಷ್ಟು ಆಗಿದೆ. 2020–21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 9.35ರಷ್ಟು ಹೆಚ್ಚಳ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಗೋಧಿ ರಫ್ತು ₹ 16,720 ಕೋಟಿಗಳಿಗೆ ಏರಿಕೆ ಆಗಿದೆ. ಕುರಿ/ಮೇಕೆ ಮಾಂಸದ ರಫ್ತು ಶೇ 34ರಷ್ಟು ಹೆಚ್ಚಾಗಿದೆ. ಡೈರಿ ಉತ್ಪನ್ನಗಳ ರಫ್ತು ಸಹ ಹೆಚ್ಚಾಗಿದೆ ಎಂದು ಹೇಳಿದೆ.
ಬಾಂಗ್ಲಾದೇಶ, ಯುಎಇ, ವಿಯೆಟ್ನಾಂ, ಅಮೆರಿಕ, ನೇಪಾಳ, ಮಲೇಷ್ಯಾ, ಸೌದಿ ಅರೇಬಿಯಾ, ಇಂಡೋನೇಷ್ಯಾ, ಇರಾನ್ ಮತ್ತು ಈಜಿಪ್ಟ್ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.