ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಸಮೂಹಕ್ಕೆ ಮರಳಿದ ಏರ್‌ ಇಂಡಿಯಾ: ಹೇಗಿತ್ತು ಖಾಸಗೀಕರಣದ ಹಾದಿ?

ಹಸ್ತಾಂತರ ಪ್ರಕ್ರಿಯೆ ಪೂರ್ಣ: ಡಿಐಪಿಎಎಂ ಕಾರ್ಯದರ್ಶಿ ಪಾಂಡೆ
Last Updated 27 ಜನವರಿ 2022, 14:29 IST
ಅಕ್ಷರ ಗಾತ್ರ

ನವದೆಹಲಿ: ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯು 67 ವರ್ಷಗಳ ಬಳಿಕ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಸೇರಿದೆ. ಟಾಟಾ ಸಮೂಹವು ಏರ್‌ ಇಂಡಿಯಾ ವಿಮಾನಯಾನ ಕಂಪನಿಯ ಮಾಲೀಕತ್ವವನ್ನು ಗುರುವಾರ ವಹಿಸಿಕೊಂಡಿದೆ.

ಇದರಿಂದಾಗಿ ಏರ್‌ ಇಂಡಿಯಾದ ಖಾಸಗೀಕರಣವು ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಂಪನಿಯ ಶೇಕಡ 100ರಷ್ಟು ಷೇರುಗಳನ್ನು ಆಡಳಿತಾತ್ಮಕ ನಿಯಂತ್ರಣದೊಂದಿಗೆ ಟೆಲೆಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಹಸ್ತಾಂತರಿಸಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್‌ ಕಾಂತ್ ಪಾಂಡೆ ಅವರು ತಿಳಿಸಿದ್ದಾರೆ. ಟೆಲೆಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯು ಟಾಟಾ ಸಮೂಹದ ಅಂಗಸಂಸ್ಥೆ.

‘ಏರ್‌ ಇಂಡಿಯಾವನ್ನು ಮರಳಿ ಪಡೆದಿರುವುದರಿಂದ ಟಾಟಾ ಸಮೂಹಕ್ಕೆ ಸಂತೋಷವಾಗಿದೆ. ಕಂಪನಿಯ ಎಲ್ಲಾ ಉದ್ಯೋಗಿಗಳನ್ನು ಸಮೂಹಕ್ಕೆ ಸ್ವಾಗತಿಸುತ್ತೇವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ’ ಎಂದು ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಬಿಡ್‌ ಮೊತ್ತ ₹ 18 ಸಾವಿರ ಕೋಟಿ

ಏರ್‌ ಇಂಡಿಯಾದ ಸಾಲ ₹ 15,300 ಕೋಟಿ

ಸರ್ಕಾರಕ್ಕೆ ನಗದು ರೂಪದಲ್ಲಿ ನೀಡಲಿರುವುದು ₹ 2,700 ಕೋಟಿ

***

ಖಾಸಗೀಕರಣದ ಹಾದಿ

* 1932: ಜೆಹಂಗೀರ್ ರತನ್‌ಜೀ ದಾದಾಭಾಯ್ (ಜೆಆರ್‌ಡಿ) ಟಾಟಾ ಅವರು ಟಾಟಾ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿದರು

* 1946: ಏರ್‌ ಇಂಡಿಯಾ ಎಂದು ಮರುನಾಮಕರಣ

* 1948: ಏರ್‌ ಇಂಡಿಯಾದಿಂದ ಅಂತರರಾಷ್ಟ್ರೀಯ ಸೇವೆ ಆರಂಭ. ಅಂತರರಾಷ್ಟ್ರೀಯ ಸೇವಾ ಘಟಕದಲ್ಲಿ ಸರ್ಕಾರವು ಶೇ 49ರಷ್ಟು, ಟಾಟಾ ಸನ್ಸ್ ಶೇ 25ರಷ್ಟು ಮತ್ತು ಸಾರ್ವಜನಿಕರು ಉಳಿದ ಷೇರುಗಳನ್ನು ಹೊಂದಿದ್ದರು

* 1953: ಏರ್‌ ಇಂಡಿಯಾ ರಾಷ್ಟ್ರೀಕರಣ. ಕಂಪನಿಯು ಸಂಪೂರ್ಣವಾಗಿ ಸರ್ಕಾರದ ವಶಕ್ಕೆ ಬಂತು. ನಂತರದ ನಾಲ್ಕು ದಶಕಗಳ ಕಾಲ ಏರ್‌ ಇಂಡಿಯಾ ಭಾರತದ ವಿಮಾನಯಾನ ಕ್ಷೇತ್ರದ ಅನಭಿಷಿಕ್ತ ‘ಮಹಾರಾಜ’ನಾಗಿತ್ತು

* 1994-95: ವಿಮಾನಯಾನದಲ್ಲಿ ಖಾಸಗಿ ಕಂಪನಿಗಳ ಪಾಲ್ಗೊಳ್ಳುವಿಕೆಗೆ ಅವಕಾಶ. ಹಲವು ಕಂಪನಿಗಳಿಂದ ವಿಮಾನಯಾನ ಸೇವೆ ಆರಂಭ. ಖಾಸಗಿ ಕಂಪನಿಗಳ ದರ ಸಮರದೊಂದಿಗೆ ಸ್ಪರ್ಧಿಸಲಾರದೆ ಏರ್‌ ಇಂಡಿಯಾ ನಷ್ಟ ಅನುಭವಿಸಲಾರಂಭಿಸಿತು.

* 2000-01: ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಿಂದ ಏರ್‌ ಇಂಡಿಯಾ ಖಾಸಗೀಕರಣಕ್ಕೆ ಯತ್ನ. ಕಾರ್ಮಿಕ ಸಂಘಟನೆಗಳ ಪ್ರತಿಭಟನೆ, ವಿರೋಧದ ಕಾರಣ ಖಾಸಗೀಕರಣ ಕೈಬಿಟ್ಟ ಸರ್ಕಾರ

* 2007-08: ಏರ್‌ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್ ವಿಲೀನ

* 2012: ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ಸರ್ಕಾರದ ಅವಧಿಯಲ್ಲಿ, ಏರ್‌ ಇಂಡಿಯಾ ಪುನಶ್ಚೇತನಕ್ಕೆ ಯೋಜನೆ

* 2017-18: ಏರ್ ಇಂಡಿಯಾದ ಭಾಗಶಃ ಖಾಸಗೀಕರಣಕ್ಕೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಯತ್ನ. ಏರ್‌ ಇಂಡಿಯಾದಶೇ 70ರಷ್ಟುಸಾಲ ಮತ್ತು ಶೇ 76ರಷ್ಟು ಪಾಲನ್ನು ಮಾರಾಟ ಮಾಡಲು ಯತ್ನ. ಯಾವುದೇ ಕಂಪನಿ ಮುಂದೆ ಬರಲಿಲ್ಲ

* 2019: ₹ 60,000 ಕೋಟಿ ಸಾಲದಲ್ಲಿ ₹ 23,000 ಕೋಟಿ ಸಾಲದ ಹೊಣೆಯೊಂದಿಗೆ ಏರ್‌ ಇಂಡಿಯಾದ ಪೂರ್ಣ ಪಾಲು ಮಾರಾಟ ಮಾಡಲು ವಿಫಲ ಯತ್ನ

* 2020: ಏರ್‌ ಇಂಡಿಯಾದ ಪೂರ್ಣ ಪಾಲು ಮತ್ತು ಖರೀದಿದಾರರು ಬಯಸುವಷ್ಟು ಸಾಲವನ್ನು ಮಾತ್ರ ವರ್ಗಾವಣೆ ಮಾಡಲು ಅವಕಾಶ ನೀಡಿ, ಮತ್ತೆ ಮಾರಾಟಕ್ಕೆ ಯತ್ನ

* 2021ರ ಏಪ್ರಿಲ್‌: ಬಿಡ್ ಆಹ್ವಾನ. ಬಿಡ್ ಸಲ್ಲಿಕೆಗೆ ಸೆಪ್ಟೆಂಬರ್ ಮಧ್ಯದವರೆಗೆ ಅವಕಾಶ. ಟಾಟಾ ಸಮೂಹ ಮತ್ತು ಸ್ಪೈಸ್‌ಜೆಟ್‌ನಿಂದ ಬಿಡ್ ಸಲ್ಲಿಕೆ

* 2021ರ ಅಕ್ಟೋಬರ್ 8: ಬಿಡ್‌ ಗೆದ್ದುಕೊಂಡ ಟಾಟಾ ಸಮೂಹ

* 2021ರ ಅಕ್ಟೋಬರ್‌ 11: ಟಾಟಾ ಸಮೂಹಕ್ಕೆ ಮಾರಾಟ ಮಾಡುವ ಆಸಕ್ತಿ ಸೂಚಿಸಿ ಕೇಂದ್ರದಿಂದ ಪತ್ರ

* 2021ರ ಅಕ್ಟೋಬರ್‌ 25: ಷೇರು ಖರೀದಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮತ್ತು ಟಾಟಾ ಸನ್ಸ್‌ ಸಹಿ

* 2022ರ ಜನವರಿ 27: ಟಾಟಾ ಸಮೂಹಕ್ಕೆ ಏರ್‌ ಇಂಡಿಯಾ ಹಸ್ತಾಂತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT