ಮಂಗಳವಾರ, ಸೆಪ್ಟೆಂಬರ್ 24, 2019
29 °C

ನಿವೃತ್ತಿ ಪಡೆದ ಅಲಿಬಾಬಾ ಅಧ್ಯಕ್ಷ ಜಾಕ್‌ ಮಾ

Published:
Updated:

ಬೀಜಿಂಗ್‌: ಚೀನಾದ ಪ್ರಮುಖ ಇ–ಕಾಮರ್ಸ್‌ ಸಂಸ್ಥೆ ಅಲಿಬಾಬಾ ಮುಖ್ಯಸ್ಥ ಜಾಕ್‌ ಮಾ ಅವರು ಮಂಗಳವಾರ ಸಂಸ್ಥೆಯ ಅಧ್ಯಕ್ಷ ಸ್ಥಾನ ತೊರೆದಿದ್ದಾರೆ. ಈ ಮೂಲಕ 55 ವರ್ಷ ವಯಸ್ಸಿನ ಯಶಸ್ವಿ ಉದ್ಯಮಿ ನಿವೃತ್ತಿ ಜೀವನ ಆರಂಭಿಸಿದ್ದಾರೆ. 

ವೇಗವಾಗಿ ಬದಲಾಗುತ್ತಿರುವ ಇ ಕಾಮರ್ಸ್‌ ಹಾಗೂ ಅಮೆರಿಕ–ಚೀನಾ ವಾಣಿಜ್ಯ ಸಮರದ ಕಾರ್ಮೋಡದ ನಡುವೆಯೂ ವರ್ಷದ ಹಿಂದೆ ಘೋಷಿಸಿದ್ದಂತೆ ಜಾಕ್‌ ಮಾ ನಿವೃತ್ತಿ ಪಡೆದಿದ್ದಾರೆ. ಚೀನಾದ ಸಿರಿವಂತ ಮತ್ತು ಪ್ರಖ್ಯಾತ ಉದ್ಯಮಿಯಾಗಿರುವ ಮಾ, ಅಲಿಬಾಬಾ ಸಮೂಹ ಸಂಸ್ಥೆಯ ಪಾಲುದಾರಿಕೆ ಸದಸ್ಯರಾಗಿ ಮುಂದುವರಿಯಲಿದ್ದಾರೆ.

1999ರಲ್ಲಿ ಅಲಿಬಾಬಾ ಅರಂಭಿಸುವುದಕ್ಕೂ ಮುನ್ನ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದ ಜಾಕ್‌ ಅವರು ಇದೀಗ ಮತ್ತೆ ಶಿಕ್ಷಣ ಕ್ಷೇತ್ರದಲ್ಲಿಯೇ ತಮ್ಮನ್ನು ತೊಡಗಿಸಿಕೊಳ್ಳಲು ಬಯಸಿದ್ದಾರೆ. ಚೀನಾದ ರಫ್ತುದಾರರು ಮತ್ತು ಅಮೆರಿಕದ ವ್ಯಾಪಾರಿಗಳ ನಡುವೆ ಸಂಪರ್ಕ ಬೆಸೆಯುವ ಉದ್ದೇಶದಿಂದ 1991ರಲ್ಲಿ ಅಲಿಬಾಬಾ ಸಂಸ್ಥೆಯನ್ನು ಮಾ ಪ್ರಾರಂಭಿಸಿದರು. 

ಇ–ಮಾರಾಟ ವಲಯದಿಂದ ಆನ್‌ಲೈನ್‌ ಬ್ಯಾಂಕಿಂಗ್‌, ಮನರಂಜನಾ ಕ್ಷೇತ್ರ ಹಾಗೂ ಕ್ಲೌಡ್‌ ಕಂಪ್ಯೂಟಿಂಗ್‌ ಕ್ಷೇತ್ರಕ್ಕೂ ಅಲಿಬಾಬಾ ವಿಸ್ತರಿಸಿಕೊಂಡಿದೆ. 

2018ರಲ್ಲಿ ಶೇ 23.9ರಷ್ಟಿದ್ದ ಆನ್‌ಲೈನ್‌ ಮಾರಾಟ 2019ರ ಮೊದಲಾರ್ಧದಲ್ಲಿ ಶೇ 17.8ಕ್ಕೆ ಇಳಿಕೆಯಾಗಿದೆ. ಆದರೆ, ಅಲಿಬಾಬಾ 2019ರ ಮೊದಲಾರ್ಧದಲ್ಲಿ ಶೇ 42ರಷ್ಟು ಆದಾಯ ಹೆಚ್ಚಳವಾಗಿದೆ ಎಂದು ಹೇಳಿದೆ. ಜೂನ್‌ನಲ್ಲಿ ಘೋಷಿಸಲಾಗಿರುವ ಸಂಸ್ಥೆಯ ಆದಾಯ ₹1,19,914 ಕೋಟಿ.

ಅಲಿಬಾಬಾ ₹30.15 ಲಕ್ಷ ಕೋಟಿಯಷ್ಟು ಮಾರುಕಟ್ಟೆ ಮೌಲ್ಯ ಹೊಂದಿದ್ದು, 66 ಸಾವಿರಕ್ಕೂ ಹೆಚ್ಚು ಮಂದಿ ಪೂರ್ಣಾವಧಿ ನೌಕರರಿದ್ದಾರೆ. 

ಚೀನಾದ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ 2014ರಲ್ಲಿ ಜಾಕ್‌ ಮಾ ಪ್ರತಿಷ್ಠಾನ ಸ್ಥಾಪಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ನೆರವಾಗುವುದು ಹಾಗೂ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಗಳನ್ನು ಮಾ ಹೊಂದಿದ್ದಾರೆ. ಇದಕ್ಕಾಗಿ ₹2.94 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ. 

Post Comments (+)