ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇ–ಕಾಮರ್ಸ್‌ ಕಂಪನಿಗಳಿಗೆ ಚಾಟಿ

ಮಾರಾಟ ತಂತ್ರದಿಂದ ಸ್ಥಳೀಯ ಉದ್ಯೋಗ, ವ್ಯಾಪಾರಕ್ಕೆ ಪೆಟ್ಟು: ಗೋಯಲ್
Published : 21 ಆಗಸ್ಟ್ 2024, 15:40 IST
Last Updated : 21 ಆಗಸ್ಟ್ 2024, 15:40 IST
ಫಾಲೋ ಮಾಡಿ
Comments

ನವದೆಹಲಿ: ‘ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ದೈತ್ಯ ಇ–ಕಾಮರ್ಸ್‌ ಕಂಪನಿಗಳು ಮಾರುಕಟ್ಟೆಯಲ್ಲಿ ವರ್ತಕರು ಮತ್ತು ಇತರೆ ಕಂಪನಿಗಳನ್ನು ಮುಗಿಸಲು ಹವಣಿಸುತ್ತವೆ. ಇದಕ್ಕಾಗಿ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ತಂತ್ರ ಅನುಸರಿಸುತ್ತಿವೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

‘ಭಾರತದಲ್ಲಿ ಉದ್ಯೋಗ ಮತ್ತು ಗ್ರಾಹಕರ ಕಲ್ಯಾಣದ ಮೇಲೆ ಇ-ಕಾಮರ್ಸ್‌ನ ಪರಿಣಾಮ’ ಕುರಿತ ವರದಿಯನ್ನು ಬುಧವಾರ ಬಿಡುಗಡೆಗೊಳಿಸಿದ ಬಳಿಕ ಅವರು ಮಾತನಾಡಿದರು.

‘ಭಾರತದಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡುವುದಾಗಿ ಅಮೆಜಾನ್ ಹೇಳಿದಾಗ ನಾವು ಸಂಭ್ರಮಿಸುತ್ತೇವೆ. ಆ ಬಂಡವಾಳವು ಜನಸೇವೆ ಅಥವಾ ಭಾರತದ ಆರ್ಥಿಕತೆಗೆ ಪೂರಕವಾಗಲಿದೆಯೇ ಎಂಬುದನ್ನು ನಾವು ಮರೆಯುತ್ತೇವೆ. ಹೂಡಿಕೆಯ ವರ್ಷದಲ್ಲಿ ಆ ಕಂಪನಿಯು ಸಾಕಷ್ಟು ನಷ್ಟ ಅನುಭವಿಸಿರುತ್ತದೆ. ಅದನ್ನು ತುಂಬಿಕೊಳ್ಳಲು ಬಂಡವಾಳ ಹೂಡುತ್ತದೆ’ ಎಂದು ಚಾಟಿ ಬೀಸಿದರು.

ಇ–ಕಾಮರ್ಸ್‌ ಕಂಪನಿಗಳ ಬಂಡವಾಳ ಹೂಡಿಕೆಯು ಭಾರತದ ಆರ್ಥಿಕತೆ ಬೆಳವಣಿಗೆಗೆ ಯಾವುದೇ ಕೊಡುಗೆ ನೀಡುವುದಿಲ್ಲ. ಅವುಗಳ ಕಾರ್ಯತಂತ್ರವು ಸ್ಥಳೀಯ ಉದ್ಯೋಗ ಹಾಗೂ ವ್ಯಾಪಾರಕ್ಕೆ ಧಕ್ಕೆ ತರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇ–ಕಾಮರ್ಸ್‌ ಕಂಪನಿಗಳು ಅವಾಸ್ತವಿಕವಾಗಿ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುತ್ತವೆ. ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹಾಳು ಮಾಡುತ್ತವೆ. ಇದು ದೇಶಕ್ಕೆ ಒಳ್ಳೆಯದಲ್ಲ. ಸಾವಿರಾರು ಚಿಲ್ಲರೆ ಮಾರಾಟಗಾರರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು. 

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್ ಕಂಪನಿಯು 2022–23ನೇ ಆರ್ಥಿಕ ವರ್ಷದಲ್ಲಿ ₹5000 ಕೋಟಿ ನಷ್ಟ ಅನುಭವಿಸಿವೆ. 

‘ವೃತ್ತಿಪರರಿಗೆ ₹1 ಸಾವಿರ ಕೋಟಿ ಪಾವತಿಸಿರುವುದರಿಂದ ನಷ್ಟವಾಗಿದೆ ಎಂದು ಹೇಳುತ್ತವೆ. ಆ ವೃತ್ತಿಪರರು ಯಾರೆಂದು ನನಗೆ ಗೊತ್ತಿಲ್ಲ. ಆದರೆ, ಅವರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳುವ ಹಂಬಲವಿದೆ’ ಎಂದ ಅವರು, ಲೆಕ್ಕ ಪರಿಶೋಧಕರು, ವೃತ್ತಿಪರರು ಅಥವಾ ವಕೀಲರಿಗೆ ಇಷ್ಟು ಮೊತ್ತ ನೀಡಲಾಗಿದೆ’ ಎಂದರು.

ಇ–ಕಾಮರ್ಸ್ ಕಂಪನಿಗಳು ಸಣ್ಣ ವ್ಯಾಪಾರಿಗಳ ಮೌಲ್ಯವನ್ನು ನುಂಗಿ ಹಾಕುತ್ತವೆ. ಅಗಾಧ ಪ್ರಮಾಣದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಅವುಗಳ ಅಬ್ಬರದ ಮುಂದೆ ಸ್ವತಂತ್ರ ಅಥವಾ ಕೌಟುಂಬಿಕ ಒಡೆತನದ ವ್ಯಾಪಾರ ನಡೆಸುವವರಷ್ಟೇ ಉಳಿಯಲು ಸಾಧ್ಯ ಎಂದರು.

ಈ ಕಂಪನಿಗಳ ತಂತ್ರದಿಂದಾಗಿ ಸಾಮಾಜಿಕ ವ್ಯವಸ್ಥೆ ಕುಸಿಯುತ್ತಿದೆ. ಈಗಾಗಲೇ, ಯುರೋಪ್‌ ಮತ್ತು ಅಮೆರಿಕದಲ್ಲಿ ಈ ಪರಿಣಾಮವನ್ನು ನಾವು ನೋಡುತ್ತಿದ್ದೇವೆ ಎಂದರು.   

ಇ–ಕಾಮರ್ಸ್‌ ಕಂಪನಿಗಳ ತಂತ್ರದಿಂದ ಸಾಮಾಜಿಕ ವ್ಯವಸ್ಥೆ ಧಕ್ಕೆ ನಷ್ಟ ತುಂಬಿಕೊಳ್ಳುವುದು ಕಂಪನಿಗಳ ಕಾರ್ಯತಂತ್ರ ದೇಶದ ಆರ್ಥಿಕತೆ ಕೊಡುಗೆ ಶೂನ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT