ಬೆಂಗಳೂರು: ನಗರದ ಕೋರಮಂಗಲದ ಚಾರ್ಟರ್ಡ್ ಸಹಕಾರಿ ಬ್ಯಾಂಕ್‌ನ 24ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಇತ್ತೀಚೆಗೆ ನಡೆಯಿತು.
ಲೆಕ್ಕಪತ್ರ ವರದಿ ಮಂಡಿಸಿದ ಬ್ಯಾಂಕ್‌ನ ಅಧ್ಯಕ್ಷ ಮುನಿರೆಡ್ಡಿ ಎಂ. ಮಾತನಾಡಿ, ‘ರಾಜ್ಯ ಸರ್ಕಾರದಿಂದ ನಡೆದ ಸಹಕಾರ ಫಲಾನುಭವಿಗಳ ಸಮಾವೇಶದಲ್ಲಿ ಬ್ಯಾಂಕ್‌ಗೆ ‘ಉತ್ತಮ ಸಹಕಾರಿ ಬ್ಯಾಂಕ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಾವಳಿಗಳ ಅನ್ವಯ ಉತ್ತಮ ಆರ್ಥಿಕ ಮತ್ತು ಆಡಳಿತ ನಿರ್ವಹಣೆಯ ಮಾನದಂಡಗಳನ್ನು ಪೂರೈಸಿ ಸದೃಢವಾಗಿದೆ ಎಂದು ತಿಳಿಸಿದರು.
₹8.75 ಕೋಟಿ ನಿವ್ವಳ ಲಾಭ:
2023–24ನೇ ಸಾಲಿನಡಿ ಬ್ಯಾಂಕ್ ಒಟ್ಟು ₹29.97 ಕೋಟಿ ವರಮಾನ ಗಳಿಸಿದೆ. ಈ ಪೈಕಿ ಠೇವಣಿ ಮೇಲಿನ ಬಡ್ಡಿ, ಆಡಳಿತಾತ್ಮಕ ವೆಚ್ಚ, ಆದಾಯ ತೆರಿಗೆ, ಆಸ್ತಿಗಳ ಮೇಲಿನ ಸವಕಳಿ ಕಳೆದು ₹8.75 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿದರು.
ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ನ ನಿವ್ವಳ ಎನ್‌ಪಿಎ ಶೇ 2.95ರಷ್ಟಿತ್ತು. ಪ್ರಸಕ್ತ ವರ್ಷದ ಮಾರ್ಚ್ ಅಂತ್ಯಕ್ಕೆ ನಿವ್ವಳ ಎನ್‌ಪಿಎ ಶೂನ್ಯವಾಗಿದೆ ಎಂದು ಹೇಳಿದರು.
ಬ್ಯಾಂಕ್ ಸದಸ್ಯರ ಅನುಕೂಲಕ್ಕಾಗಿ ಕಳೆದ ಮೂರು ವರ್ಷಗಳಿಂದ ವಿವಿಧ ಸಾಲಗಳ ಮೇಲಿನ ಬಡ್ಡಿದರದಲ್ಲಿ ಶೇ 3ರಷ್ಟು ಕಡಿತ ಮಾಡಲಾಗಿದೆ. ಗೃಹ ಸಾಲ ನೀಡಿಕೆಯ ವೈಯಕ್ತಿಕ ಸಾಲ ಮಿತಿಯನ್ನು ₹70 ಲಕ್ಷದಿಂದ ₹1.40 ಕೋಟಿಗೆ ಹೆಚ್ಚಿಸಲಾಗಿದೆ. ಆರ್‌ಬಿಐ ನಿಗದಿಪಡಿಸಿರುವ ಆದ್ಯತಾ ವಲಯದ ಸಾಲದ ಗುರಿ ಸಾಧಿಸಲು ಸಾಧ್ಯವಾಗುವ ರೀತಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು. ಸಾಲಗಳ ಮೇಲಿನ ನಿರ್ವಹಣಾ ಶುಲ್ಕವನ್ನು ಶೇ 0.50ರಿಂದ ಶೇ 0.25ರಷ್ಟಕ್ಕೆ ಇಳಿಸಲಾಗಿದೆ. ಇದರಿಂದ ಸಾಲ ಪಡೆಯುವ ಸದಸ್ಯರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಎಚ್‌ಎಸ್ಆರ್ ಲೇಔಟ್‌ನಲ್ಲಿರುವ ಬ್ಯಾಂಕ್‌ನ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಿ ಶಾಖೆ ತೆರೆಯುವ ಪ್ರಸ್ತಾವಕ್ಕೆ ಸಭೆಯು ಒಪ್ಪಿಗೆ ನೀಡಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಬ್ಯಾಂಕ್‌ನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.