ಆ್ಯಪಲ್‌ ಕಂಪನಿಯ ಮಾರುಕಟ್ಟೆ ಮೌಲ್ಯ ಎಷ್ಟು ಗೊತ್ತಾ?

7

ಆ್ಯಪಲ್‌ ಕಂಪನಿಯ ಮಾರುಕಟ್ಟೆ ಮೌಲ್ಯ ಎಷ್ಟು ಗೊತ್ತಾ?

Published:
Updated:

ಸ್ಯಾನ್‌ಫ್ರಾನ್ಸಿಸ್ಕೊ : ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಆ್ಯಪಲ್‌ನ ಮಾರುಕಟ್ಟೆ ಮೌಲ್ಯವು ₹ 68 ಲಕ್ಷ ಕೋಟಿಗಳಿಗೆ ತಲುಪಿ ಹೊಸ ಮೈಲುಗಲ್ಲು ದಾಖಲಾಗಿದೆ.

ಸಾರ್ವಜನಿಕರು ಹಣ ಹೂಡಿಕೆ ಮಾಡಿದ ಖಾಸಗಿ ಉದ್ದಿಮೆ ಸಂಸ್ಥೆಯೊಂದು ಇಂತಹ ಸಾಧನೆ ಮಾಡಿದ ವಿಶ್ವದ ಮೊದಲ ಕಂಪನಿ ಇದಾಗಿದೆ. ಗ್ಯಾಜೆಟ್‌ಗಳಿಂದ ಬಳಕೆದಾರರು ನಿರೀಕ್ಷಿಸುವ ವಿಶಿಷ್ಟ ತಂತ್ರಜ್ಞಾನಕ್ಕೆ ಹೊಸ ಭಾಷ್ಯೆ ಬರೆದ ಸಂಸ್ಥೆಯು, ಈಗ ಹೂಡಿಕೆದಾರರ ಪಾಲಿಗೆ ಅಪಾರ ಪ್ರಮಾಣದ ಸಂಪತ್ತು ಸೃಷ್ಟಿಸಿ ಬಂಡವಾಳ ಪೇಟೆಯನ್ನು ಬೆರಗುಗೊಳಿಸಿದೆ.

ಸಿಲಿಕಾನ್‌ ವ್ಯಾಲ್ಲೆಯ ಗ್ಯಾರೇಜ್‌ನಲ್ಲಿ 42 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಸಂಸ್ಥೆಯ ಪ್ರತಿ ಷೇರಿನ ಬೆಲೆಯು ಗುರುವಾರದ ವಹಿವಾಟಿನಲ್ಲಿ 207.39 ಡಾಲರ್‌ಗೆ (₹ 14,102.52) ತಲುಪಿತ್ತು. ಇದರ ಫಲವಾಗಿ ಮಾರುಕಟ್ಟೆ ಮೌಲ್ಯದಲ್ಲಿನ ಸಂಸ್ಥೆಯ ಒಟ್ಟಾರೆ ಸಂಪತ್ತು ₹ 68 ಲಕ್ಷ ಕೋಟಿ ದಾಟಿದೆ.

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಆ್ಯಪಲ್‌, ಈಗ ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಇತರ ಮುಂಚೂಣಿ ಸಂಸ್ಥೆಗಳಾದ ಅಮೆಜಾನ್‌, ಅಲ್ಫಾಬೆಟ್‌, ಮೈಕ್ರೊಸಾಫ್ಟ್‌, ಫೇಸ್‌ಬುಕ್‌ಗಳನ್ನು ಹಿಂದಿಕ್ಕಿದೆ.

ವಿಸ್ಮಯಕಾರಿ ಬೆಳವಣಿಗೆ: 1997ರಲ್ಲಿ ದಿವಾಳಿ ಅಂಚಿಗೆ ತಲುಪಿದ್ದ ಸಂಸ್ಥೆಯು ಈ ಪರಿ ಸಂಪತ್ತು ಸೃಷ್ಟಿಸಿರುವುದು ವಿಸ್ಮಯಕಾರಿ ವಿದ್ಯಮಾನವಾಗಿದೆ. ಆ ದಿನಗಳಲ್ಲಿ ಸಂಸ್ಥೆಯ ಪ್ರತಿ ಷೇರಿನ ಬೆಲೆ 1 ಡಾಲರ್‌ಗಿಂತ ಕಡಿಮೆ ಇತ್ತು. ಮಾರುಕಟ್ಟೆ ಮೌಲ್ಯವು ₹ 10 ಸಾವಿರ ಕೋಟಿಗಳಿಗಿಂತ ಕಡಿಮೆ ಇತ್ತು.

ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಂಸ್ಥೆಯಿಂದಲೇ ಹೊರಹಾಕಲಾಗಿದ್ದ ಸಹ ಸ್ಥಾಪಕ ಸ್ಟೀವ್‌ ಜಾಬ್ಸ್‌ ಅವರನ್ನು ಮರಳಿ ಕರೆತಂದಿತ್ತು. ಪ್ರತಿ ಸ್ಪರ್ಧಿ ಸಂಸ್ಥೆ ಮೈಕ್ರೊಸಾಫ್ಟ್‌ನಿಂದ 15 ಕೋಟಿ ಡಾಲರ್‌ನ ಹಣಕಾಸು ನೆರವನ್ನೂ ಪಡೆದುಕೊಂಡಿತ್ತು.

ಸ್ಟೀವ್‌ ಜಾಬ್ಸ್‌ ಅವರು ಅಭಿವೃದ್ಧಿಪಡಿಸಿದ ಐಫೋನ್‌, ಆ್ಯಪಲ್‌ನ ಅದೃಷ್ಟವನ್ನೆ ಬದಲಾಯಿಸಿದೆ. ಸಂಸ್ಥೆಯನ್ನು  ಹಣ ಸೃಷ್ಟಿಸುವ ಯಂತ್ರವನ್ನಾಗಿ ಬದಲಿಸಿದೆ.

ಮಂಗಳವಾರ ಪ್ರಕಟಗೊಂಡ ತ್ರೈಮಾಸಿಕ ಹಣಕಾಸು ಸಾಧನೆಯ ಬೆನ್ನಲ್ಲೇ ಸಂಸ್ಥೆಯ ಷೇರಿನ ಬೆಲೆ ಗಮನಾರ್ಹ ಏರಿಕೆ ಕಂಡಿತು. ದುಬಾರಿ ಫೋನ್‌ ಎಂದು ಟೀಕೆಗೆ ಒಳಗಾಗಿದ್ದ ಐಫೋನ್‌ ಎಕ್ಸ್‌, ವಿಶ್ಲೇಷಕರ ನಿರೀಕ್ಷೆ ಹುಸಿ ಮಾಡಿತು. ಇದರ ಮಾರಾಟವು ಜೂನ್‌ ತ್ರೈಮಾಸಿಕದಲ್ಲಿ ಶೇ 20 ಏರಿಕೆ ದಾಖಲಿಸಿತ್ತು.

ಸಂಸ್ಥೆ; -- ಮಾರುಕಟ್ಟೆ ಮೌಲ್ಯ (₹ ಲಕ್ಷ ಕೋಟಿ)

ಐಫೋನ್‌;-68 

ಅಮೆಜಾನ್‌;--60.17 

ಅಲ್ಫಾಬೆಟ್‌ (ಗೂಗಲ್‌);--58.10

ಮೈಕ್ರೊಸಾಫ್ಟ್‌;--56.09

ಫೇಸ್‌ಬುಕ್‌;--10.17

Tags: 

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !