ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಆತ್ಮವಿಲ್ಲದ ಸೂಪರ್ ಪವರ್

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ತಮ್ಮ ದೇಶವನ್ನು ಒಂದು ಕಾಲದಲ್ಲಿ ‘ಗ್ರೇಟ್‍ ಬ್ರಿಟನ್‍ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು’ ಎಂದು ಸ್ಕಾಟ್ಲೆಂಡ್‍ ಮೂಲದ ಲಂಡನ್‍ನ ಲೇಖಕ ಇಯಾನ್‍ ಜಾಕ್‍ ಒಮ್ಮೆ ಹೇಳಿದ್ದರು. ಈ ಹೇಳಿಕೆ ನಿರ್ಭಾವುಕವಾದುದು ಮತ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ಕಟ್ಟಿಕೊಡುವಂಥದ್ದಾಗಿದೆ. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಯುನೈಟೆಡ್‍ ಕಿಂಗ್‍ಡಮ್‍ನ ಕುಸಿತ ಹಲವು ದಶಕಗಳ ಹಿಂದೆಯೇ ಆರಂಭವಾಗಿದೆ. ಹಾಗಿದ್ದರೂ ಬ್ರಿಟನ್‍ ಒಂದು ವಿಚಾರದಲ್ಲಿ ಈಗಲೂ ಶ್ರೇಷ್ಠವಾಗಿಯೇ ಉಳಿದಿದೆ. ಅದು ಅಲ್ಲಿನ ನಿಯತಕಾಲಿಕೆಗಳ ಗುಣಮಟ್ಟ. ‘ದ ಫೈನಾನ್ಶಿಯಲ್‍ ಟೈಮ್ಸ್’ ಜಗತ್ತಿನ ಅತ್ಯುತ್ತಮ ದಿನಪತ್ರಿಕೆ. ‘ನ್ಯೂಯಾರ್ಕ್‌ ಟೈಮ್ಸ್’ ಮತ್ತು ‘ವಾಲ್‍ ಸ್ಟ್ರೀಟ್‍ ಜರ್ನಲ್‌’ಗಿಂತಲೂ ಶ್ರೇಷ್ಠ. ವಾರಪತ್ರಿಕೆಗಳ ವಿಚಾರಕ್ಕೆ ಬಂದರೆ, ‘ದ ಎಕನಾಮಿಸ್ಟ್’ ಗುಣಮಟ್ಟದ ವಿಚಾರದಲ್ಲಿ ತನ್ನದೇ ಆದ ವಿಶೇಷ ವರ್ಗವನ್ನೇ ಸೃಷ್ಟಿಸಿಕೊಂಡಿದೆ.

‘ದ ಎಕನಾಮಿಸ್ಟ್’ ಮತ್ತು ‘ಫೈನಾನ್ಶಿಯಲ್‍ ಟೈಮ್ಸ್’ ಶ್ರೇಷ್ಠ ಪತ್ರಿಕೆಗಳು ಎಂಬುದರ ಬಗ್ಗೆ ವ್ಯಾಪಕವಾದ ಒಪ್ಪಿಗೆ ಇದೆ. ಹೆಚ್ಚು ಪ್ರಸಿದ್ಧ ಅಲ್ಲದಿದ್ದರೂ ಬ್ರಿಟನ್‍ನ ಇನ್ನೊಂದು ಮಹತ್ವದ ನಿಯತಕಾಲಿಕ ‘ಪ್ರಾಸ್ಪೆಕ್ಟ್ ಮ್ಯಾಗಜಿನ್‌’. ಜಾಗತಿಕ ವ್ಯವಹಾರಗಳ ಬಗೆಗಿನ ಮಾಸಪತ್ರಿಕೆಯಾದ ಇದು, ಅಮೆರಿಕದ ಪ್ರತಿಸ್ಪರ್ಧಿಗಳಾದ ‘ಫಾರಿನ್‍ ಅಫೇರ್ಸ್‍’ ಮತ್ತು ‘ಫಾರಿನ್‍ ಪಾಲಿಸಿ’ಗಳಿಗಿಂತ ಉತ್ತಮವಾಗಿದೆ. ಈ ಪತ್ರಿಕೆಗಳಿಗೆ ಬರೆಯುವವರ ವ್ಯಾಪ್ತಿ ದೊಡ್ಡದು ಮತ್ತು ಲೇಖನಗಳ ಗುಣಮಟ್ಟ ಹೆಚ್ಚು ಉತ್ತಮ.

‘ಪ್ರಾಸ್ಪೆಕ್ಟ್‌’ನ ಇತ್ತೀಚಿನ ಸಂಚಿಕೆಯನ್ನು ಚೀನಾದ ಪ್ರಗತಿಯ ಬಗ್ಗೆ ರೂಪಿಸಲಾಗಿತ್ತು. ಇಬ್ಬರು ಪತ್ರಕರ್ತೆಯರ ಲೇಖನ ಈ ಸಂಚಿಕೆಯಲ್ಲಿ ಇದೆ. ಅವರಲ್ಲಿ ಒಬ್ಬರು ಬ್ರಿಟನ್‍ನವರಾದರೆ ಮತ್ತೊಬ್ಬರು ಚೀನಾದವರು. ಇಬ್ಬರು ವಿದ್ವಾಂಸರ ಲೇಖನಗಳಿದ್ದು ಅವರಲ್ಲಿ ಒ‍ಬ್ಬರು ಭಾರತ ಸಂಜಾತ ಬ್ರಿಟಿಷ್‍ ವ್ಯಕ್ತಿಯಾದರೆ ಮತ್ತೊಬ್ಬರು ಆಸ್ಟ್ರೇಲಿಯಾದವರು. ಚೀನಾದ ಅರ್ಥವ್ಯವಸ್ಥೆಯ ಗಟ್ಟಿತನ, ರಾಜಕೀಯ ನಾಯಕತ್ವದ ಏಕಾಗ್ರ ಚಿತ್ತ ಮತ್ತು ಚೈತನ್ಯ, ಮಧ್ಯಮ ವರ್ಗದಲ್ಲಿ ಮನೆಮಾಡಿರುವ ಗುರಿ ಸಾಧನೆಯ ಭಾವಗಳನ್ನು ಲೇಖನಗಳಲ್ಲಿ ವಿವರಿಸಲಾಗಿದೆ. ಲೇಖಕರೆಲ್ಲರೂ ಪ್ರಜಾಪ್ರಭುತ್ವವಾದಿಗಳಾಗಿದ್ದು ನಿರಂಕುಶಾಧಿಕಾರವನ್ನು ಒಪ್ಪುವವರಲ್ಲ; ಹಾಗಿದ್ದರೂ ಪ್ರಾಸ್ಪೆಕ್ಟ್‌ನ ಲೇಖನಗಳನ್ನು ಓದಿದರೆ, ಚೀನಾ ಗಳಿಸಿಕೊಂಡಿರುವ ಜಾಗತಿಕ ಪ್ರಾಬಲ್ಯವು ತಡೆಯಲಾಗದ ಮತ್ತು ಬದಲಾಯಿಸಲಾಗದ ವಿದ್ಯಮಾನ ಎಂಬ ಭಾವನೆ ಮೂಡುತ್ತದೆ.

ಚೀನಾಕ್ಕೆ ನಾನು ಎರಡು ಬಾರಿ ಮಾತ್ರ ಭೇಟಿ ನೀಡಿದ್ದೇನೆ. ಆ ದೇಶ, ಅದರ ಇತಿಹಾಸ ಅಥವಾ ರಾಜಕಾರಣದ ಬಗ್ಗೆ ನಾನು ಪರಿಣತ ಅಲ್ಲ. ಹಾಗಿದ್ದರೂ, ಸೂಪರ್ ಪವರ್ ಸ್ಥಾನಕ್ಕೆ ಆ ದೇಶದ ನಾಗಾಲೋಟವನ್ನು ತಡೆಯಲಾಗದು ಎಂಬ ವಿಶ್ಲೇಷಣೆಗಳನ್ನು ಓದಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ವಾಂಸ ಜೋಸೆಫ್‍ ನೈ ಹಿಂದೊಮ್ಮೆ ಸೂಚಿಸಿದ್ದ ‘ಸಾಫ್ಟ್ ಪವರ್’ (ಸಾಂಸ್ಕೃತಿಕ ಪ್ರಾಬಲ್ಯ) ಎಂಬ ಅಂಶ ಚೀನಾದ ರಾಜಕೀಯ, ಸೇನೆ ಮತ್ತು ಆರ್ಥಿಕ ಶಕ್ತಿಯ ಜತೆಗೆ ಇಲ್ಲ. ಈ ನಿಟ್ಟಿನಲ್ಲಿ ನೋಡಿದರೆ, 20ನೇ ಶತಮಾನದ ಸೂಪರ್ ಪವರ್ ಅಮೆರಿಕ ಮತ್ತು 19ನೇ ಶತಮಾನದ ಸೂಪರ್ ಪವರ್ ಗ್ರೇಟ್‍ ಬ್ರಿಟನ್‍ನ ಹಾಗೆ ಚೀನಾ ಇಲ್ಲವೇ ಇಲ್ಲ.

ಶೇಕ್ಸ್‌ಪಿಯರ್‌ ಮತ್ತು ಡಿಕನ್ಸ್‌ನಂತಹ ಬ್ರಿಟನ್‍ನ ಲೇಖಕರ ಬಗ್ಗೆ ಪ್ರತಿ ಸಾಕ್ಷರ ಮನುಷ್ಯನಿಗೂ ತಿಳಿದಿದೆ ಮತ್ತು ಜಗತ್ತಿನಾದ್ಯಂತ ಈಗಲೂ ಜನರು ಅವರನ್ನು ಓದುತ್ತಿದ್ದಾರೆ. ನ್ಯೂಟನ್‍, ಫ್ಯಾರಡೆ ಮತ್ತು ಡಾರ್ವಿನ್‍ನಂತಹ ಬ್ರಿಟನ್‍ನ ವಿದ್ವಾಂಸರು ಆಧುನಿಕ ವಿಜ್ಞಾನವನ್ನು ಕ್ರಾಂತಿಕಾರಕವಾಗಿ ಬದಲಾಯಿಸಿದರು ಎಂಬುದೂ ಅಷ್ಟೇ ಪ್ರಸಿದ್ಧವಾದ ವಿಚಾರ. ಬ್ರಿಟನ್‍ನ ಸಾಫ್ಟ್ ಪವರ್‌ನ ಮೂರನೇ ಮತ್ತು ಇನ್ನೂ ಹೆಚ್ಚು ಶ್ರೇಷ್ಠವಾದ ವಿಚಾರದ ಬಗ್ಗೆ ಇಷ್ಟೊಂದು ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗಿಲ್ಲ. ಅದು ದೇಶವು ಸೃಷ್ಟಿಸಿದ ಆಧುನಿಕ ಜನಪ್ರಿಯ ಕ್ರೀಡೆಗಳು. ರಷ್ಯಾದಲ್ಲಿ ಫುಟ್ಬಾಲ್‍ ವಿಶ್ವಕಪ್‍ ಪಂದ್ಯಾವಳಿಗಳು ಶೀಘ್ರವೇ ಆರಂಭ ಆಗಲಿವೆ. ಈ ಕ್ರೀಡೆಯನ್ನು ಆರಂಭಿಸಿದವರು ಬ್ರಿಟಿಷರಾದರೂ ಈ ಬಾರಿ ಆ ದೇಶ ವಿಶ್ವಕಪ್‍ ಪಂದ್ಯಾವಳಿ ಗೆಲ್ಲುವ ಸಾಧ್ಯತೆ ಇಲ್ಲ. ಭಾರತ ಉಪಖಂಡದ ಅತ್ಯಂತ ಜನಪ್ರಿಯ ಕ್ರೀಡೆಯಾದ ಕ್ರಿಕೆಟ್ ಅನ್ನು ಕಂಡು ಹಿಡಿದವರು ಬ್ರಿಟಿಷರೇ. ಅಷ್ಟೇ ಅಲ್ಲ, ಟೆನಿಸ್‍, ಟೇಬಲ್‍ ಟೆನಿಸ್‍ ಮತ್ತು ಬ್ಯಾಡ್ಮಿಂಟನ್‍ ಕೂಡ ಅವರದ್ದೇ ಕೊಡುಗೆ. ಓಟ, ನೆಗೆತ, ಈಜು ಮತ್ತು ಕುಸ್ತಿಯಲ್ಲಿ ಅನಾದಿ ಕಾಲದಿಂದಲೂ ಪುರುಷ ಮತ್ತು ಮಹಿಳೆಯರು ತೊಡಗಿಕೊಂಡಿದ್ದರೂ ಸ್ಪರ್ಧಾತ್ಮಕ ಅಥ್ಲೆಟಿಕ್ಸ್, ಬಾಕ್ಸಿಂಗ್‍ ಮತ್ತು ಈಜಿನ ನಿಯಮಗಳು 19ನೇ ಶತಮಾನದಲ್ಲಿ ಗ್ರೇಟ್‍ ಬ್ರಿಟನ್‍ನಲ್ಲಿ ರೂಪುಗೊಂಡವು. ವಿದ್ವಾಂಸರೊಬ್ಬರು ಹೇಳುವಂತೆ ವಿಕ್ಟೋರಿಯಾ ಯುಗದ ಬ್ರಿಟನ್‍ ‘ಜಗತ್ತಿನ ಕ್ರೀಡೆಗಳ ದೊರೆ’.

ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಬ್ರಿಟನ್‍ ವಸಾಹತುಗಳನ್ನು ಸೃಷ್ಟಿಸಿಕೊಂಡಿತು, ನೆಲ ಮತ್ತು ಸಾಗರದ ಮೇಲೆ ದೇಶವು ಯುದ್ಧಗಳನ್ನು ಗೆದ್ದಿತು; ಹಾಗಿದ್ದರೂ, ಈ ದೇಶದ ರಾಜಕೀಯ ಮತ್ತು ಸೇನಾ ಪ್ರಾಬಲ್ಯವನ್ನು ಅವರ ಸಾಹಿತ್ಯ ಮತ್ತು ಅವರು ಶೋಧಿಸಿದ ಕ್ರೀಡೆಗಳು ಸಮರ್ಥಿಸಿಕೊಂಡವು ಹಾಗೂ ನ್ಯಾಯಸಮ್ಮತಗೊಳಿಸಿದವು. ಎರಡನೇ ಜಾಗತಿಕ ಮಹಾಯುದ್ಧವು ಗ್ರೇಟ್‍ ಬ್ರಿಟನ್‍ನಲ್ಲಿದ್ದ ‘ಗ್ರೇಟ್‌’ ಅನ್ನು ಕಳಚಿತು. ಆದರೆ, ಆ ದೇಶದ ಸಾಫ್ಟ್ ಪವರ್‌ನ ಪ್ರಭಾವ ಮಾತ್ರ ಹಾಗೆಯೇ ಮುಂದುವರಿಯಿತು. ಬ್ರಿಟಿಷ್‍ ವಸಾಹತುಗಳು ಸಾಮ್ರಾಜ್ಯಶಾಹಿ ಆಡಳಿತದಿಂದ ತಮ್ಮನ್ನು ಬಿಡಿಸಿಕೊಂಡ ಬಳಿಕ, 1960ರ ದಶಕದಲ್ಲಿ ಆಫ್ರಿಕಾ ಮತ್ತು ಭಾರತದ ಜನರು ಬ್ರಿಟನ್‍ನ ಬ್ಯಾಂಡ್‍ ಗುಂಪುಗಳಾದ ಬೀಟಲ್ಸ್ ಮತ್ತು ರೋಲಿಂಗ್‍ ಸ್ಟೋನ್ಸ್‌ನ ಹಾಡುಗಳಿಗೆ ಕುಣಿದರು. ಈಗ, ಬ್ರೆಕ್ಸಿಟ್‍ ಬಳಿಕ (ಐರೋಪ್ಯ ಒಕ್ಕೂಟದಿಂದ ಬ್ರಿಟನ್‍ ಹೊರಬರುವ ಪ್ರಕ್ರಿಯೆ) ಬ್ರಿಟನ್‍ನ ಅವನತಿ ಇನ್ನಷ್ಟು ಖಚಿತವಾಗಿದೆ. ಹಾಗಿದ್ದರೂ ಜಗತ್ತಿನಾದ್ಯಂತ ಇರುವ ಗಣ್ಯರು ‘ಫೈನಾನ್ಶಿಯಲ್‍ ಟೈಮ್ಸ್‌’ ಮತ್ತು ‘ದ ಎಕನಾಮಿಸ್ಟ್’ ಓದುತ್ತಾರೆ, ಬ್ರಿಟಿಷ್‍ ಬ್ರಾಡ್‍ಕಾಸ್ಟಿಂಗ್‍ ಕಾರ್ಪೊರೇಷನ್‍ (ಬಿಬಿಸಿ) ಕೇಳುತ್ತಾರೆ.

ಇಪ್ಪತ್ತನೇ ಶತಮಾನದಲ್ಲಿ ಜಗತ್ತಿನ ಸೂಪರ್ ಪವರ್ ಆಗಿ ಬ್ರಿಟನ್‍ನ ಸ್ಥಾನಕ್ಕೆ ಅಮೆರಿಕ ಬಂತು. ಆ ದೇಶದ ಆರ್ಥಿಕ ಮತ್ತು ಸೇನಾ ಬಲದ ಪರಿಣಾಮ ಇದು. ಆದರೆ, ಆ ದೇಶದ ಸಾಂಸ್ಕೃತಿಕ ಮತ್ತು ರಸಾನುಭೂತಿಗಳು ಕೂಡ ಇದಕ್ಕೆ ನೆರವಾಗಿವೆ. ಮನರಂಜನೆಯ ಪ್ರಧಾನ ಮೂಲವಾಗಿದ್ದ ಪುಸ್ತಕದ ಸ್ಥಾನವನ್ನು ಸಿನಿಮಾ ಆವರಿಸಿಕೊಂಡಿತು ಮತ್ತು ಈ ಹಾದಿಯನ್ನು ತೋರಿಸಿದ್ದು ಹಾಲಿವುಡ್‍ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಜಾಜ್‍ ಮತ್ತು ಜನಪದ ರಾಕ್‍ ಮೂಲಕ 20ನೇ ಶತಮಾನದ ಶ್ರೇಷ್ಠ ಸಂಗೀತ ಸಾಧನೆಗಳು ಅಮೆರಿಕದಿಂದಲೇ ಬಂದವು. ಲೂಯಿಸ್‍ ಆರ್ಮ್‌ಸ್ಟ್ರಾಂಗ್‍ ಮತ್ತು ಬಾಬ್‍ ಡಿಲಾನ್‍ ಅಮೆರಿಕ ವಿರೋಧಿ ಎಡಪಂಥೀಯರು ಮತ್ತು ಲ್ಯಾಟಿನ್‍ ಅಮೆರಿಕದ ಜನರಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡರು. ಅಮೆರಿಕವು ಫಾಕ್ನರ್ ಮತ್ತು ಹೆಮಿಂಗ್ವೆಯಂತಹ ಅತ್ಯುತ್ತಮ ಕಾದಂಬರಿಕಾರರನ್ನು ಮತ್ತು ಅಷ್ಟೇ ಶ್ರೇಷ್ಠರಾದ ವಿಜ್ಞಾನಿಗಳನ್ನು ಸೃಷ್ಟಿಸಿತು. ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ನೊಬೆಲ್‍ ಪುರಸ್ಕೃತರಾದ ಹಲವು ವಿಜ್ಞಾನಿಗಳು ಬೋಧಿಸುತ್ತಿದ್ದಾರೆ. ಈ ಮಧ್ಯೆ, ಬ್ಯಾಸ್ಕೆಟ್‍ಬಾಲ್‍ ಎಂಬ ಕ್ರೀಡೆಯನ್ನೂ ಅಮೆರಿಕ ಶೋಧಿಸಿತು. ಒಂದು ಕಾಲದಲ್ಲಿ ಫುಟ್ಬಾಲ್‍ ಜಗತ್ತನ್ನು ಆವರಿಸಿದಂತೆಯೇ ನಿಧಾನಕ್ಕೆ ಬ್ಯಾಸ್ಕೆಟ್‍ಬಾಲ್‍ ಎಲ್ಲೆಡೆ ಪಸರಿಸಿದೆ.

ಇನ್ನೊಂದು ದೇಶದ ಪ್ರಾಬಲ್ಯದ ಅಡಿಯಲ್ಲಿ ಇರುವುದಕ್ಕೆ ಯಾವ ದೇಶವೂ ಬಯಸುವುದಿಲ್ಲ. ಘಾನಾದವರಿಂದ ಹಿಡಿದು ಕ್ಯೂಬಾದ ಜನರವರೆಗೆ ಎಲ್ಲರಿಗೂ ರಾಷ್ಟ್ರೀಯ ಘನತೆ ಮತ್ತು ರಾಷ್ಟ್ರೀಯ ಆತ್ಮಗೌರವ ಬಹಳ ಮುಖ್ಯ. ಬ್ರಿಟಿಷರು ತಮ್ಮನ್ನು ಆಳುತ್ತಿದ್ದ ಬಗ್ಗೆ ಭಾರತೀಯರಿಗೆ ಖುಷಿಯೇನೂ ಇರಲಿಲ್ಲ, ಮೆಕ್ಸಿಕನ್ನರಿಗೆ ತಮ್ಮ ಮೇಲೆ ದೌರ್ಜನ್ಯ ನಡೆಸುವ ವಸಾಹತು ಆಡಳಿತದ ಬಗ್ಗೆ ಪ್ರೀತಿ ಇರಲಿಲ್ಲ. ಅದೇನೇ ಇದ್ದರೂ, 19ನೇ ಶತಮಾನದಲ್ಲಿ ಬ್ರಿಟನ್‍ ಮತ್ತು 20ನೇ ಶತಮಾನದಲ್ಲಿ ಅಮೆರಿಕ ಜಾಗತಿಕ ನಾಯಕತ್ವವನ್ನು ಪಡೆದುಕೊಂಡು ಯಜಮಾನಿಕೆಯ ಸ್ಥಾನಕ್ಕೆ ಹೋದದ್ದನ್ನು ಸ್ವಲ್ಪ ಮಟ್ಟಿಗೆ ಸಹ್ಯವಾಗುವಂತೆ ಮಾಡಿದ್ದು ಆ ದೇಶಗಳು ಸೃಷ್ಟಿಸಿದ ಸಾಹಿತ್ಯ, ಕಲೆ, ಸಂಗೀತ, ಸಿನಿಮಾ ಮತ್ತು ಕ್ರೀಡೆಗಳ ಸಂಸ್ಕೃತಿ.

ಚೀನಾದ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಜಗತ್ತಿನಾದ್ಯಂತ ಸಹ್ಯವಾಗುವಂತೆ ಮಾಡುವವರು ಯಾರು ಅಥವಾ ಆ ಅಂಶಗಳು ಯಾವುವು? ಚೀನಾದ ಶೇಕ್ಸ್‌ಪಿಯರ್‌ ಎಲ್ಲಿದ್ದಾನೆ? ಚೀನಾದ ಜಾನ್‍ ಲೆನನ್‍ ಯಾರು? ಫುಟ್ಬಾಲ್‍ ಅಥವಾ ಬ್ಯಾಸ್ಕೆಟ್‍ಬಾಲ್‍ಗೆ ಜನಪ್ರಿಯತೆಯಲ್ಲಿ ಸ್ಪರ್ಧೆ ಒಡ್ಡಬಲ್ಲ ಚೀನಾ ಆಟಗಳು ಯಾವುವು? ಸ್ಟೀವನ್‍ ಸ್ಪಿಲ್‌ಬರ್ಗ್‌ನಷ್ಟು ಪ್ರಭಾವಿಯಾದ ಚೀನಾದ ಯಾವುದಾದರೂ ಸಿನಿಮಾ ನಿರ್ದೇಶಕರ ಹೆಸರು ನೆನಪಿಗೆ ಬರುತ್ತದೆಯೇ? ಒಂದು ಕಾಲದಲ್ಲಿ ಚಾರ್ಲಿ ಚಾಪ್ಲಿನ್‍ನಷ್ಟು ಜನಮನ ಗೆದ್ದ ಚೀನಾದ ನಟರು ಯಾರಾದರೂ ಇದ್ದಾರೆಯೇ? ಭಾರತೀಯರು ಈಗಲೂ ಬಿಬಿಸಿಯನ್ನು ಕೇಳುವ ಅಥವಾ ನೋಡುವಷ್ಟೇ ಉತ್ಸಾಹದಿಂದ ರೇಡಿಯೊ ಬೀಜಿಂಗ್‍ ಕೇಳುವ ಸ್ವತಂತ್ರ ಮನಸ್ಥಿತಿಯ ಪಾಕಿಸ್ತಾನೀಯರು ಅಥವಾ ಉತ್ತರ ಕೊರಿಯನ್ನರು ಇದ್ದಾರೆಯೇ? ಚೀನಾದ ಪ್ರತಿಭಾವಂತ ಯುವ ಜನರು ಕೇಂಬ್ರಿಜ್‍ ಮತ್ತು ಹಾರ್ವರ್ಡ್‌ನಲ್ಲಿ ಕಲಿಯಲು ಸಾಲುಗಟ್ಟಿ ನಿಲ್ಲುವುದು ನಮಗೆ ಗೊತ್ತಿದೆ. ನ್ಯೂಯಾರ್ಕ್ ಅಥವಾ ಲಂಡನ್‍ನ ಪ್ರತಿಭಾವಂತರು ಶಾಂಘೈ ವಿಶ್ವವಿದ್ಯಾಲಯವನ್ನು ತಮ್ಮ ಮೊದಲ ಆಯ್ಕೆ ಮಾಡಿಕೊಳ್ಳುವುದು ಯಾವಾಗ?

1970ರ ದಶಕದಲ್ಲಿ ನಾನು ದೆಹಲಿಯಲ್ಲಿ ವಿದ್ಯಾರ್ಥಿಯಾಗಿದ್ದ ಬಹಳ ಹಿಂದಿನ ದಿನಗಳಿಂದಲೂ ಬ್ರಿಟನ್‍ ಶ್ರೇಷ್ಠವೇನೂ ಆಗಿರಲಿಲ್ಲ. ಹಾಗಿದ್ದರೂ, ಬ್ರಿಟಿಷ್‍ ಲೈಬ್ರರಿಯ ಸದಸ್ಯತ್ವಕ್ಕಾಗಿ, ಅಲ್ಲಿಂದ ಕಾದಂಬರಿಗಳು ಮತ್ತು ಕ್ರಿಕೆಟ್‍ ಪುಸ್ತಕಗಳನ್ನು ತರಲು ಬಸ್‍ನಲ್ಲಿ ಒಂದು ತಾಸು ಪ್ರಯಾಣ ಮಾಡುವುದಕ್ಕಾಗಿ ನನ್ನ ಕೈಖರ್ಚಿನ ದುಡ್ಡಿನ ದೊಡ್ಡ ಪಾಲನ್ನು ನಾನು ವ್ಯಯ ಮಾಡಿದ್ದೇನೆ. 1980ರ ದಶಕದಲ್ಲಿ ನಾನು ಕಲ್ಕತ್ತಾದಲ್ಲಿ ವಿದ್ಯಾರ್ಥಿಯಾಗಿದ್ದಾಗ ನನ್ನ ಜತೆಗಿದ್ದ ಎಡಪಂಥೀಯ ಗೆಳೆಯರು ಹಾಲಿವುಡ್‍ ಸಿನಿಮಾಗಳ ವಿಡಿಯೊಗಳನ್ನು ಪಡೆದುಕೊಳ್ಳಲು ಮತ್ತು ಜಾಜ್‍ ಸಂಗೀತಗಾರರ ಕಛೇರಿಗಳಿಗೆ ಹೋಗುವ ಅವಕಾಶ ಪಡೆಯಲು ರೊನಾಲ್ಡ್ ರೇಗನ್‍ ಆಡಳಿತದ ಬಗ್ಗೆ ಇದ್ದ ಅಸಡ್ಡೆಯನ್ನು ಬದಿಗೊತ್ತಿ ಅಮೆರಿಕನ್‍ ಸೆಂಟರ್‌ನ ಸದಸ್ಯತ್ವ ಪಡೆದಿದ್ದನ್ನು ಕಂಡಿದ್ದೇನೆ.

ವಿದೇಶದಲ್ಲಿ ಸಾಮ್ರಾಜ್ಯಶಾಹಿಗಳಾಗಿದ್ದರೂ ಬ್ರಿಟನ್‍ ಮತ್ತು ಅಮೆರಿಕ, ಆಂತರಿಕವಾಗಿ ಜನತಂತ್ರವಾಗಿದ್ದುದೇ ಆ ದೇಶಗಳ ಸಾಂಸ್ಕೃತಿಕ ನಾಜೂಕುತನಕ್ಕೆ ಕಾರಣ ಎಂಬ ವಾದ ಇರಬಹುದು. ಆದರೆ, ಈ ವಿಚಾರದಲ್ಲಿ ಚೀನೀಯರು ಹಿಂದಿನ ಸೋವಿಯತ್‍ ಒಕ್ಕೂಟಕ್ಕಿಂತಲೂ ಬಹಳ ಹಿಂದೆ ಇದ್ದಾರೆ. ಸೋವಿಯತ್‍ ಒಕ್ಕೂಟವು ನಿರಂಕುಶಾಧಿಕಾರದ ದಿಕ್ಕಿನಲ್ಲಿ ಸಾಗುತ್ತಿದ್ದರೂ ಜಾಗತಿಕ ಪ್ರಭಾವಕ್ಕಾಗಿ ತನ್ನದೇ ಆದ ಸಾಂಸ್ಕೃತಿಕ ರಫ್ತನ್ನು ಮಾಡಿದೆ. ಅವರಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ ನೃತ್ಯ ತಂಡವಿತ್ತು (ಬಾಲ್ಶೊಯ್‌ ಬ್ಯಾಲೆ), ಶೋಸ್ತಾಕೊವಿಚ್‍ರಂತಹ ಅತ್ಯದ್ಭುತ ಸಂಗೀತಗಾರರಿದ್ದರು ಮತ್ತು ಅವರ ಅತ್ಯುತ್ತಮ ಚೆಸ್‍ ಆಟಗಾರರು ಜಗತ್ತಿನೆಲ್ಲೆಡೆಯ ವಿದ್ಯಾರ್ಥಿಗಳಿಗೆ ಆ ಆಟವನ್ನು ಕಲಿಸಿದ್ದರು. 19ನೇ ಶತಮಾನದ ರಷ್ಯಾದ ಅತ್ಯುತ್ತಮ ಕಾದಂಬರಿಕಾರರ ಕೃತಿಗಳ ಸಂಪುಟ ಬರೇ ಐದೇ ರೂಪಾಯಿಗೆ ಎಲ್ಲೆಡೆ ದೊರೆಯುವಂತೆ ಸೋವಿಯತ್‍ ಮಾಡಿತ್ತು.

ಆರ್ಥಿಕ ಮತ್ತು ಸೇನಾ ಬಲವಷ್ಟೇ ಜಾಗತಿಕ ಪ್ರಾಬಲ್ಯದ ಸ್ಥಾನವನ್ನು ಖಚಿತಪಡಿಸಲಾರದು ಎಂಬುದು ಚೀನಾ ಸರ್ಕಾರಕ್ಕೆ ಗೊತ್ತಿದೆ. ಅದಕ್ಕಾಗಿಯೇ ಕನ್‍ಫ್ಯೂಷಿಯಸ್‍ ಇನ್‌ಸ್ಟಿಟ್ಯೂಟ್‌ಗಳನ್ನು ವಿದೇಶದಲ್ಲಿ ಚೀನಾ ಸ್ಥಾಪಿಸಿದೆ. ಚೀನಾದ ಭಾಷೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಪ್ರೋತ್ಸಾಹ ಕೊಡುವುದು ಈ ಸಂಸ್ಥೆಗಳ ಉದ್ದೇಶ. ಮ್ಯಾಂಡರಿನ್‍ ಭಾಷೆ ಕಲಿಯುವ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಈ ಇನ್‌ಸ್ಟಿಟ್ಯೂಟ್‌ಗಳು ಆಕರ್ಷಿಸುತ್ತಿವೆ. ಜಾಗತಿಕ ವಹಿವಾಟಿನ ಭಾಷೆಯಾಗಿ ಇಂಗ್ಲಿಷ್‍ಗೆ ಮ್ಯಾಂಡರಿನ್‍ ಸ್ಪರ್ಧೆ ಒಡ್ಡಬಹುದು ಎಂದು ಚೀನಾ ಭಾವಿಸಿದೆ. ಚೀನೀ ಸಂಗೀತ ಕೇಳಲು ಅಥವಾ ಚೀನೀ ಸಾಹಿತ್ಯ ಓದಲು ಜನರು ಕನ್‍ಫ್ಯೂಷಿಯಸ್‍ ಇನ್‌ಸ್ಟಿಟ್ಯೂಟ್‌ಗೆ ಹೋಗುತ್ತಾರೆ ಎಂಬುದರ ಬಗ್ಗೆ ನನಗೆ ಅನುಮಾನ ಇದೆ. ಯಾವುದೋ ಒಂದು ಉದ್ದೇಶ ಇಲ್ಲದೆ ಚೀನಾದ ಬಗ್ಗೆ ಆಸಕ್ತಿ ಹೊಂದಿರುವ ಯುವ ಜನರು ಚೀನಾದ ಹೊರಗೆ ಇದ್ದಾರೆಯೇ? ಒಂದು ವೇಳೆ, ಜಗತ್ತಿನ ಅತ್ಯಂತ ಪ್ರಭಾವಿ ದೇಶವಾಗಿ ಚೀನಾ ಹೊರಹೊಮ್ಮಿದರೆ, ಸಾಫ್ಟ್ ಪವರ್ ಇಲ್ಲದ ಮೊದಲ ಸೂಪರ್ ಪವರ್ ಎಂಬ ಇತಿಹಾಸ ಸೃಷ್ಟಿಯಾಗುತ್ತದೆ. ಸಾಫ್ಟ್ ಪವರ್ ಇಲ್ಲದ ಸೂಪರ್ ಪವರ್ ಎಂದರೆ, ಆತ್ಮವಿಲ್ಲದ ಸೂಪರ್ ಪವರ್ ಎಂದೇ ಅರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT