ನೀವು ಬುದ್ಧಿವಂತ ಹೂಡಿಕೆದಾರರೇ?

ಶುಕ್ರವಾರ, ಏಪ್ರಿಲ್ 26, 2019
33 °C
ಷೇರುಪೇಟೆ ಮತ್ತು ಸಾಮಾನ್ಯ ಜ್ಞಾನ

ನೀವು ಬುದ್ಧಿವಂತ ಹೂಡಿಕೆದಾರರೇ?

Published:
Updated:
Prajavani

ಷೇರು ಪೇಟೆಯಲ್ಲಿ ಹೂಡಿಕೆ ಮಾಡುವುದಕ್ಕೂ ಬುದ್ಧಿವಂತಿಕೆಗೂ ಎಲ್ಲಿಂದೆಲ್ಲಿಯ ಸಂಬಂಧ? ಷೇರು ಪೇಟೆಯಲ್ಲಿ ಹೂಡಿಕೆ ಮಾಡಬೇಕಾದರೆ ವಿಶೇಷವಾದ ಜ್ಞಾನ ಬೇಕಾಗುತ್ತದೆಯೇ? ಈ ಪ್ರಶ್ನೆಗಳಿಂದ ಬುದ್ಧಿವಂತ ಹೂಡಿಕೆದಾರನಾಗುವುದು ಹೇಗೆ ಎಂಬ ಬಗ್ಗೆ ಹಲವರಲ್ಲಿ ಗೊಂದಲ ಮೂಡಿರಬಹುದು.

ಹೆಚ್ಚಿನ ಜ್ಞಾನ ಇದ್ದ ಮಾತ್ರಕ್ಕೆ ಯಾರೇ ಆದರೂ ಬುದ್ಧಿವಂತ ಹೂಡಿಕೆದಾರನಾಗುತ್ತಾನೆ ಎಂದು ಹೇಳಲಾಗದು. ಬೆಂಜಮಿನ್‌ ಗ್ರಹಾಂ ಅವರ ಪ್ರಕಾರ ‘ಬುದ್ಧಿವಂತಿಕೆ’ ಎಂದರೆ ಸಮಾಧಾನಿಯಾಗಿರುವುದು, ಶಿಸ್ತುಬದ್ಧವಾಗಿರುವುದು ಮತ್ತು ಕಲಿಕೆಗೆ ಸದಾ ಸಿದ್ಧವಾಗಿರುವುದು ಮತ್ತು ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುವುದು. ಹೆಚ್ಚಿನ ಶಿಕ್ಷಣ ಹಾಗೂ ಸಾಮಾನ್ಯ ಜ್ಞಾನ ಹೊಂದಿರುವ ಮಾತ್ರಕ್ಕೆ ಎಲ್ಲರೂ ಬುದ್ಧಿವಂತ ಹೂಡಿಕೆದಾರರಾಗುವುದಿಲ್ಲ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಸಲೊಮನ್‌ ಬ್ರದರ್ಸ್‌ ಟ್ರೇಡರ್‌, ಜಾನ್‌ ಮೆರಿವೆದರ್‌ ಅವರು ಹಿಂದೆ ‘ಲಾಂಗ್‌ ಟರ್ಮ್‌ ಕ್ಯಾಪಿಟಲ್‌ ಮ್ಯಾನೇಜ್‌ಮೆಂಟ್‌’ (ಎಲ್‌ಟಿಸಿಎಂ) ಎಂಬ ಸಂಸ್ಥೆಯೊಂದನ್ನು ಆರಂಭಿಸಿದ್ದರು. ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞರಾದ ಮೈರನ್‌ ಶೋಲ್ಸ್‌ ಹಾಗೂ ರಾಬರ್ಟ್‌ ಮೆರ್ಟನ್‌ ಅವರು ಈ ಸಂಸ್ಥೆಯ ಪ್ರಮುಖ ಹೂಡಿಕೆದಾರರಾಗಿದ್ದರು. ಈ ಸಂಸ್ಥೆಯು ಜನರು ಹೂಡಿಕೆ ಮಾಡಿದ್ದ ಹಣವನ್ನು, ಊಹಾತ್ಮಕವಾಗಿ ಬೇರೆಬೇರೆ ಕ್ಷೇತ್ರಗಳಲ್ಲಿ ತೊಡಗಿಸಿ ಲಾಭಾಂಶವನ್ನು ನೀಡುತ್ತಿತ್ತು. ಈ ಫಂಡ್‌ನಲ್ಲಿ ಸದಸ್ಯತ್ವ ಲಭಿಸಬೇಕಾದರೆ ಕನಿಷ್ಠ ಒಂದು ಕೋಟಿ ಡಾಲರ್‌ ಹೂಡಿಕೆ ಮಾಡಬೇಕಾಗಿತ್ತು. ಕನಿಷ್ಠ ಲಾಕ್‌ಇನ್‌ ಅವಧಿ ಮೂರು ವರ್ಷದ್ದಾಗಿತ್ತು.

ತಮ್ಮಿಂದ ಪಡೆದ ಹಣವನ್ನು ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡಲಾಗುತ್ತದೆ ಎಂದು ತಿಳಿಯುವ ಅಧಿಕಾರ ಹೂಡಿಕೆದಾರರಿಗೆ ಇರಲಿಲ್ಲ. ಇಂಥ ನಿರ್ಬಂಧಗಳಿದ್ದರೂ ಜನರು ಇದರಲ್ಲಿ ಹೂಡಿಕೆ ಮಾಡಿದರು. 1995ರಲ್ಲಿ ಎಲ್‌ಟಿಸಿಎಂ ಸಂಸ್ಥೆಯು ಹೂಡಿಕೆದಾರರಿಗೆ ಶೇ 42.8ರಷ್ಟು ಮತ್ತು 1996ರಲ್ಲಿ ಶೇ 40.8ರಷ್ಟು ವಾರ್ಷಿಕ ಗಳಿಕೆಯನ್ನು ತಂದುಕೊಟ್ಟಿತು. 1997ರಲ್ಲಿ ಏಷ್ಯಾದಲ್ಲಿ ಕರೆನ್ಸಿ ಬಿಕ್ಕಟ್ಟು ಎದುರಾದರೂ ಈ ಸಂಸ್ಥೆಯು ಹೂಡಿಕೆದಾರರಿಗೆ ಶೇ 17.1ರಷ್ಟು ಗಳಿಕೆಯನ್ನು ತಂದುಕೊಟ್ಟಿತು. ಆದರೆ 1998ರ ಸೆಪ್ಟೆಂಬರ್‌ ವೇಳೆಗೆ ಸಂಸ್ಥೆ ದಿವಾಳಿಯಾಯಿತು. ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಅಮೆರಿಕದ ಫೆಡರಲ್‌ ರಿಜರ್ವ್‌, ಹೂಡಿಕೆದಾರರ ನೆರವಿಗೆ ಬಂತು.

1720ರ ಇಸವಿಯ ಇನ್ನೊಂದು ಉದಾಹರಣೆ ನೋಡೋಣ. ಇಂಗ್ಲೆಂಡ್‌ನಲ್ಲಿ ‘ಸೌತ್‌ ಸೀ ಕಂಪನಿ’ಯ ಷೇರುಗಳು ಉತ್ತುಂಗದಲ್ಲಿದ್ದವು. ಖ್ಯಾತ ಭೌತವಿಜ್ಞಾನಿ ಐಸಾಕ್‌ ನ್ಯೂಟನ್‌ ಈ ಕಂಪನಿಯ ಕೆಲವು ಷೇರುಗಳನ್ನು ಹೊಂದಿದ್ದರು. ಷೇರುಪೇಟೆ ದಾಖಲಿಸುತ್ತಿದ್ದ ಏರುಪೇರಿನ ಅಪಾಯವನ್ನು ಅರಿತುಕೊಂಡ ಅವರು, ‘ನಾನು ಬಾಹ್ಯಾಕಾಶದ ಚಲನವಲನಗಳನ್ನು ಲೆಕ್ಕ ಹಾಕಬಲ್ಲೆ ಆದರೆ ಜನರ ಹುಚ್ಚುತನವನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ’ ಎಂದಿದ್ದರು. ಅವರು ಸೌತ್‌ ಸೀ ಕಂಪನಿಯ ಷೇರುಗಳನ್ನೆಲ್ಲ ಮಾರಾಟ ಮಾಡಿ 7 ಸಾವಿರ ಪೌಂಡ್‌ ಲಾಭ ಗಳಿಸಿದ್ದರು. ಇದಾಗಿ ಒಂದು ತಿಂಗಳಲ್ಲಿ ಅದೇ ಕಂಪನಿಯ ಷೇರುಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಿ, ಕೊನೆಗೆ 20ಸಾವಿರ ಪೌಂಡ್‌ ನಷ್ಟ ಅನುಭವಿಸಿದ್ದರು. ಆನಂತರ ಆ ಕಂಪನಿಯ ಹೆಸರು ಕೇಳುವುದನ್ನೂ ಅವರು ಇಷ್ಟಪಡುತ್ತಿರಲಿಲ್ಲ. ಅತಿ ಬುದ್ಧಿವಂತ ಎನಿಸಿರುವ ವ್ಯಕ್ತಿಯು ಸಹ ಒಬ್ಬ ಹೂಡಿಕೆದಾರನಾಗಿ ಷೇರುಪೇಟೆಯಲ್ಲಿ ಸೋತುಹೋಗಿದ್ದರು.

ಆದ್ದರಿಂದ, ಹೂಡಿಕೆಯಲ್ಲಿ ಯಶಸ್ಸು ದಾಖಲಿಸಬೇಕಾದರೆ ಭಾವುಕ ಶಿಸ್ತು ಅಗತ್ಯ. ಇಲ್ಲಿ ಮಿದುಳಿನ ಶಕ್ತಿಗಿಂತ ವ್ಯಕ್ತಿತ್ವ ದೊಡ್ಡ ಕೆಲಸ ಮಾಡುತ್ತದೆ. ಒಂದು ಷೇರಿನ ಬೆಲೆಯು ಏರಿಕೆಯಾಗುತ್ತಿದೆ ಎಂದರೆ ಅದು ಅಪಾಯದ ಸೂಚನೆ, ಇಳಿಕೆಯಾಗುತ್ತಿದ್ದರೆ ಅಪಾಯ ಕಡಿಮೆ ಎಂದು ಅರ್ಥ ಮಾಡಿಕೊಳ್ಳುವವನೇ ನಿಜವಾದ ಬುದ್ಧಿವಂತ ಹೂಡಿಕೆದಾರ ಎನಿಸುತ್ತಾನೆ. ಬುದ್ಧಿವಂತ ಹೂಡಿಕೆದಾರ ಷೇರುಪೇಟೆಯಲ್ಲಿ ಗೂಳಿಯ ಓಟವನ್ನು ಯಾವತ್ತೂ ಇಷ್ಟಪಡುವುದಿಲ್ಲ. ಯಾಕೆಂದರೆ ಅದರಿಂದ ಷೇರುಗು ದುಬಾರಿಯಾಗುತ್ತವೆ.

ಹೂಡಿಕೆ ಎಂಬುದು ವಿಶಿಷ್ಟ ಕಲೆ. ಆದರೆ ಅದಕ್ಕೆ ಮೆಚ್ಚುಗೆ ಸಿಗುವುದಿಲ್ಲ. ಒಬ್ಬ ಸಾಮಾನ್ಯ ಹೂಡಿಕೆದಾರ ಇಲ್ಲಿ ಕನಿಷ್ಠ ಸಾಮರ್ಥ್ಯ ಮತ್ತು ಪ್ರಯತ್ನದಿಂದ ಸಾಧಾರಣ ಎನ್ನುವಷ್ಟು ಗಳಿಕೆ ಮಾಡಬಲ್ಲ. ಇದಕ್ಕೆ ಜ್ಞಾನಕ್ಕಿಂತ ಮುಖ್ಯವಾಗಿ ಆನ್ವಯಿಕ ಜ್ಞಾನ ಅಗತ್ಯ. ಕಳೆದ ಅನೇಕ ವರ್ಷಗಳಿಂದ, ಅತ್ಯಂತ ಅನುಭವಿಗಳು ನಿರ್ವಹಣೆ ಮಾಡುತ್ತಿರುವ ಫಂಡ್‌ಗಳು ಸಹ ಷೇರುಪೇಟೆಯ ಗಳಿಕೆಗೆ ಅನುಗುಣವಾದ ಪ್ರದರ್ಶನವನ್ನು ದಾಖಲಿಸಿಲ್ಲ. ‘ಬೇರೆ ಎಲ್ಲ ಕ್ಷೇತ್ರಗಳಲ್ಲಿ ಗೆಲುವಿಗೆ ಅತ್ಯುತ್ಸಾಹದ ಅಗತ್ಯ ಇರುತ್ತದೆ. ಆದರೆ, ಷೇರುಪೇಟೆಯಲ್ಲಿ ಗೆಲುವು ಕಾಣಲು ‘ದುರಂತ’ ಸಂಭವಿಸಬೇಕಾಗುತ್ತದೆ. ಇಲ್ಲಿ ಹೂಡಿಕೆದಾರನ ಅತ್ಯಂತ ಕೆಟ್ಟ ಶತ್ರು ಸ್ವತಃ ಅವನೇ ಆಗಿರುತ್ತಾನೆ’ ಎಂದು ಬೆಂಜಮಿನ್‌ ಗ್ರಹಾಂ ಹೇಳುತ್ತಾರೆ.

‘ಷೇರು ಪೆಟೆಯಲ್ಲಿ ನಷ್ಟ ಅನುಭವಿಸಿದಾಗ ಆಗುವ ದುಃಖವು ಅಲ್ಲಿ ಲಾಭ ಮಾಡಿದಾಗ ಆಗುವ ಖುಷಿಯ ಎರಡು ಪಟ್ಟಿನಷ್ಟು ಇರುತ್ತದೆ. ಸಾವಿರ ಡಾಲರ್‌ ಲಾಭ ಬಂದಾಗ ಖುಷಿಯಾಗುತ್ತದೆ. ಆದರೆ ಸಾವಿರ ಡಾಲರ್‌ ನಷ್ಟವಾದಾಗ ಎರಡುಪಟ್ಟು ದುಃಖವೆನಿಸುತ್ತದೆ’ ಎಂದು ಮನಃಶಾಸ್ತ್ರಜ್ಞರಾದ ಡ್ಯಾನಿಯಲ್‌ ಕಹನೆಮನ್‌ ಮತ್ತು ಅಮೋಸ್‌ ಟ್ವೆರ್ಸ್ಕಿ ಹೇಳುತ್ತಾರೆ.

ಷೇರುಗಳ ಬೆಲೆ ಇಳಿಕೆಯಾಗುತ್ತಿದೆ ಎಂಬುದು ಕೆಟ್ಟ ಸುದ್ದಿಯಲ್ಲ. ಬೆಲೆ ಇಳಿಕೆಯಾದಾಗ ಕಡಿಮೆ ಬೆಲೆಗೆ ಹೆಚ್ಚಿನ ಷೇರುಗಳ ಖರೀದಿ ಸಾಧ್ಯವಾಗುತ್ತದೆಯಾದ್ದರಿಂದ ಅದು ಒಳ್ಳೆಯ ಸುದ್ದಿಯೇ. ಹೂಡಿಕೆದಾರರು ಬೆಲೆ ಇಳಿಕೆಯ ಲಾಭ ಪಡೆಯಬೇಕು. ಒಬ್ಬ ಬುದ್ಧಿವಂತ ಹೂಡಿಕೆದಾರನಿಗೆ ಮುಂದಿನ ಹತ್ತು ವರ್ಷಗಳ ಕಾಲ ಷೇರು ಅಥವಾ ಮ್ಯೂಚುವಲ್‌ ಫಂಡ್‌ನ ಬೆಲೆಗಳು ಲಭ್ಯವಾಗದಿರುವಂಥ ಪರಿಸ್ಥಿತಿ ಎದುರಾದರೂ ಯಾವುದೇ ಆತಂಕ ಆಗಬಾರದು.

ಇವತ್ತು, ಈ ವಾರ, ಈ ತಿಂಗಳು ಅಥವಾ ಈ ವರ್ಷದಲ್ಲಿ ಒಂದು ಷೇರು ಅಥವಾ ಫಂಡ್‌ ಒಳ್ಳೆಯ ಪ್ರದರ್ಶನ ತೋರಬಲ್ಲದೇ ಎಂದು ನಿಖರವಾಗಿ ಊಹಿಸಲು ಹೂಡಿಕೆದಾರನಿಂದ ಸಾಧ್ಯವಿಲ್ಲ. ಅಲ್ಪಾವಧಿಯ ಗಳಿಕೆ ಎಂಬುದು ಯಾವತ್ತೂ ಮಾರುಕಟ್ಟೆಯ ಹುಚ್ಚಾಟವನ್ನು ಅವಲಂಬಿಸಿರುತ್ತದೆ. ಆದರೆ ಕೆಲವು ವಿಚಾರಗಳನ್ನು ಹೂಡಿಕೆದಾರ ನಿಯಂತ್ರಿಸಬಲ್ಲ ಎಂದು ಬೆಂಜಮಿನ್‌ ಗ್ರಹಾಂ ಹೇಳುತ್ತಾರೆ. ಅವುಗಳೆಂದರೆ:

ಸಮಾಧಾನದಿಂದಿದ್ದು, ಬೆಲೆ ಇಳಿಕೆಯಾದಾಗ ವಹಿವಾಟು ನಡೆಸುವ ಮೂಲಕ ಬ್ರೋಕರೇಜ್‌ ಅನ್ನು ಉಳಿಸಬಹುದು. ದುಬಾರಿ ನಿರ್ವಹಣಾ ವೆಚ್ಚದ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಗೆ ನಿರಾಕರಿಸುವ ಮೂಲಕ ಹೂಡಿಕಾ ವೆಚ್ಚವನ್ನು ಕಡಿಮೆ ಮಾಡಬಹುದು.

ಗಳಿಕೆಯ ಅಂದಾಜು ಮಾಡುವಾಗ ವಾಸ್ತವವನ್ನು ಗಣನೆಗೆ ತೆಗೆದುಕೊಂಡು ಮಾಡಿದರೆ ಭಾರಿ ನಿರೀಕ್ಷೆಗಳಿಂದ ಭ್ರಮನಿರಸನವಾಗುವುದನ್ನು ತಡೆಯಬಹುದು.

ಷೇರುಪೇಟೆಯಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಿ, ಬೇರೆಬೇರೆ ವರ್ಗದ ಷೇರು ಅಥವಾ ಫಂಡ್‌ಗಳಲ್ಲಿ ಹೂಡಿಕೆ ಮಾಡಿ, ಹೂಡಿಕೆಯನ್ನು ಮರು ಹೊಂದಾಣಿಕೆ ಮಾಡುವ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು. ದೀರ್ಘ ಕಾಲ ಹೂಡಿಕೆ ಮಾಡುವುದರಿಂದ ಬಂಡವಾಳ ಹೂಡಿಕೆ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಬಹುದು.

ಕೊನೆಯದಾಗಿ; ಇನ್ನೊಬ್ಬರು ಆರಂಭಿಸಿದ ಆಟದಲ್ಲಿ ಅವರನ್ನೇ ಸೋಲಿಸುವುದು ಹೂಡಿಕೆ ಅಲ್ಲ. ಬದಲಿಗೆ ನಮ್ಮದೇ ಆಟದಲ್ಲಿ ನಮ್ಮನ್ನು ನಿಯಂತ್ರಿಸಿಕೊಳ್ಳುವುದು ಮುಖ್ಯ. ಗರಿಷ್ಠ ಏರಿಕೆ ಮತ್ತು ಕನಿಷ್ಠ ಇಳಿಕೆ ದಾಖಲಿಸಬಲ್ಲ ಷೇರನ್ನು ಗುರುತಿಸುವುದೇ ಬುದ್ಧಿವಂತ ಹೂಡಿಕೆದಾರನ ಮುಂದಿರುವ ಸವಾಲಲ್ಲ. ಬದಲಿಗೆ ಗರಿಷ್ಠ ಬೆಲೆಗೆ ಖರೀದಿಸಿ ಕಡಿಮೆ ಬೆಲೆಗೆ ಮಾರುವ ಸಂದರ್ಭ ಎದುರಾಗುವುದರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ನಿಜವಾದ ಸವಾಲು.

(ಲೇಖಕ: ಮೈಸೂರಿನ ಮಹಾರಾಣೀಸ್‌ ಮಹಿಳಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಸ್ನಾತಕೋತ್ತರ ಕೇಂದ್ರದ ಸಹ ಪ್ರಾಧ್ಯಾಪಕ)

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !