ಕೃಷಿ, ಕೈಗಾರಿಕೆ ಬೆಳವಣಿಗೆಯಲ್ಲಿ ಅಸ್ಥಿರತೆ

7
ಅಸೋಚಾಂ ಅಧ್ಯಯನ ವರದಿಯಲ್ಲಿ ಪ್ರಸ್ತಾವ l ಸುಧಾರಣಾ ಕ್ರಮಗಳಿಗೆ ಶಿಫಾರಸು

ಕೃಷಿ, ಕೈಗಾರಿಕೆ ಬೆಳವಣಿಗೆಯಲ್ಲಿ ಅಸ್ಥಿರತೆ

Published:
Updated:

ಬೆಂಗಳೂರು: ರಾಜ್ಯದ ಕೃಷಿ ಮತ್ತು ಕೃಷಿ ‍ಪೂರಕ ಉದ್ದಿಮೆ ಹಾಗೂ ಕೈಗಾರಿಕಾ ಕ್ಷೇತ್ರಗಳ ಬೆಳವಣಿಗೆಯಲ್ಲಿ ತೀವ್ರವಾದ ಅಸ್ಥಿರತೆ ಉಂಟಾಗಿದೆ.

ಹೊಸ ಸರ್ಕಾರದ ಮುಂದಿರುವ ಕಾರ್ಯಸೂಚಿಗೆ ಸಂಬಂಧಿಸಿದ ವರದಿಯಲ್ಲಿ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು (ಅಸೋಚಾಂ) ಈ ವಿಷಯ ಪ್ರಸ್ತಾಪಿಸಿದೆ. 

2016–17ನೇ ಸಾಲಿನಲ್ಲಿ ಶೇ 5.7ರಷ್ಟಿದ್ದ ಕೃಷಿ ಕ್ಷೇತ್ರದ ಬೆಳವಣಿಗೆ ದರ 2017–18ನೇ ಸಾಲಿನಲ್ಲಿ ಶೇ 4.9ಕ್ಕೆ ಕುಸಿದಿದೆ. ಕೃಷಿಯನ್ನೇ ನಂಬಿಕೊಂಡಿರುವ ಪೂರಕ ಉದ್ದಿಮೆಗಳ ಮೇಲೆ (ಅಕ್ಕಿ ಗಿರಣಿ, ಸಕ್ಕರೆ ಕಾರ್ಖಾನೆ, ಹತ್ತಿ, ಮೆಕ್ಕೆಜೋಳ ಸಂಸ್ಕರಣೆ ಘಟಕಗಳು, ಆಹಾರ ಸಂಸ್ಕರಣೆ...) ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯ ಬಗ್ಗೆಯೂ ಅಸೋಚಾಂ ಎಚ್ಚರಿಸಿದೆ.

2011ರ ಸಮೀಕ್ಷೆ ಪ್ರಕಾರ ಕೃಷಿ ಮತ್ತು ಅದಕ್ಕೆ ಪೂರಕ ಕ್ಷೇತ್ರಗಳಲ್ಲಿ ರಾಜ್ಯದ ಜನಸಂಖ್ಯೆಯ ಶೇ 49.3ರಷ್ಟು ಜನ ತೊಡಗಿಸಿಕೊಂಡಿದ್ದಾರೆ. ಆದರೆ, ಕ್ಷೇತ್ರದಲ್ಲಿರುವ ಅಸ್ಥಿರತೆಯು ಜನರು ಇಲ್ಲಿಂದ ವಿಮುಖವಾಗುವಂತೆ ಮಾಡಿದೆ ಎಂದು ಸಮೀಕ್ಷೆ ಅಂದಾಜಿಸಿದೆ. 

2013–14ನೇ ಆರ್ಥಿಕ ವರ್ಷದಲ್ಲಿ ಶೇ 7.2ರಷ್ಟಿದ್ದ ಬೆಳವಣಿಗೆ 2015–16ರಲ್ಲಿ  ಶೇ –11.2ಕ್ಕೆ ಕುಸಿದಿತ್ತು. ನಿಧಾನಕ್ಕೆ ಚೇತರಿಸಿಕೊಂಡ ಕ್ಷೇತ್ರದ ಬೆಳವಣಿಗೆ ಮತ್ತೆ ಇಳಿಮುಖವಾಗಿದೆ. ಹಾಗೆಂದು, ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯೂ ಆಶಾದಾಯಕವಾಗಿಲ್ಲ. 2015–16ನೇ ಸಾಲಿನಲ್ಲಿ ಶೇ 8.8ರಷ್ಟಿದ್ದ ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಆ ಬಳಿಕದ ವರ್ಷಗಳಲ್ಲಿ ಶೇ 4.9ಗೆ ಕುಸಿದಿದೆ. ಇಲ್ಲಿಯೂ ಅಸ್ಥಿರತೆ ಕಾಡಿದೆ ಎಂದು ಸಮೀಕ್ಷೆ ವಿವರಿಸಿದೆ. 

ಸೇವಾ ಕ್ಷೇತ್ರ ಮಾತ್ರ ಏಕಪ್ರಕಾರದ ಬೆಳವಣಿಗೆ ಕಂಡಿದೆ. 2014–15ರಲ್ಲಿ ಶೇ 6.8ಕ್ಕೆ ಕುಸಿದಿದ್ದ ಕ್ಷೇತ್ರದ ಬೆಳವಣಿಗೆ 2015–16ರಲ್ಲಿ ಶೇ 7.5ರಷ್ಟು, 2016–17ರಲ್ಲಿ 7.2, 2017–18ರಲ್ಲಿ ಶೇ 8.4ರ ಬೆಳವಣಿಗೆ ದಾಖಲಿಸಿದೆ.

ಪರಿಹಾರವೇನು?: ಕೃಷಿ ಕ್ಷೇತ್ರದ ಬೆಳವಣಿಗೆಗಿರುವ ಅಡೆತಡೆಗಳನ್ನು ಗುರುತಿಸಿ ನಿವಾರಣಾ ಕ್ರಮ ಕೈಗೊಳ್ಳಬೇಕು. ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಜೈವಿಕ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಿದ, ಹೆಚ್ಚು ಇಳುವರಿ ಕೊಡಬಲ್ಲ ಬೆಳೆ ಬೆಳೆಯಲು ಆದ್ಯತೆ ನೀಡಬೇಕು. 

ಈ ಕ್ಷೇತ್ರಕ್ಕೆ ಪರಿಣಾಮಕಾರಿ ಮೂಲಸೌಲಭ್ಯ ಒದಗಿಸಬೇಕು. ರೈತರಿಗೆ ಹೊಸ ಆಲೋಚನೆಗಳನ್ನು ಕೊಡಬೇಕು. ಕೃಷಿ ಜ್ಞಾನ ಆಧರಿತ ಕಾರ್ಯಕ್ರಮಗಳನ್ನು ಗ್ರಾಮಮಟ್ಟದಲ್ಲಿ ಹಮ್ಮಿಕೊಳ್ಳಬೇಕು. ನೀರಾವರಿ ಕಾಲುವೆ ಸೌಲಭ್ಯ ಒದಗಿಸಬೇಕು. ಉತ್ಪಾದನಾ ವೆಚ್ಚ ತಗ್ಗಿಸಲು ಆದ್ಯತೆ ನೀಡಬೇಕು.

ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಕೃಷಿಯಲ್ಲಿ ತಂತ್ರಜ್ಞಾನ ಬಳಕೆ, ಸಾವಯವ ಕೃಷಿ ಸಂಬಂಧಿಸಿ ತರಬೇತಿ ಹಮ್ಮಿಕೊಳ್ಳಬೇಕು. ಕೊಯಿಲು ಬಳಿಕ ಉತ್ಪನ್ನದ ಮಾರಾಟಕ್ಕೆ ಹೊಸ ಕೃಷಿ ಮಾರುಕಟ್ಟೆಗಳನ್ನು ಆದ್ಯತೆ ಮೇಲೆ ಸ್ಥಾಪಿಸಬೇಕು. ತೋಟಗಾರಿಕೆ ಕ್ಷೇತ್ರದ ಉತ್ತೇಜನಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಉತ್ಕೃಷ್ಟ ಗುಣಮಟ್ಟದ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಅಸೋಚಾಂ ಶಿಫಾರಸು ಮಾಡಿದೆ.

ಮಹಿಳಾ ಕಾರ್ಮಿಕರಿಗೆ ಆರೋಗ್ಯ ವಿಮೆ: ಮಹಿಳಾ ಕಾರ್ಮಿಕರಿಗೆ ಆರೋಗ್ಯ ವಿಮೆ ಸೌಲಭ್ಯ ಕೊಡಬೇಕು. ಮಹಿಳಾ ಸ್ವಸಹಾಯ ಸಂಘಗಳಿಗೆ ಭೂಮಿ ಅಥವಾ ತೋಟವನ್ನು ಭೋಗ್ಯಕ್ಕೆ ಕೊಡುವ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು. ನೀರು ನಿರ್ವಹಣೆ ಸಂಬಂಧಿಸಿ ವಿಶೇಷ ಗಮನ ಕೊಡಬೇಕು. ಕೃಷಿ ವಿಸ್ತರಣಾ ಸೇವೆಗಳನ್ನು ಗಟ್ಟಿಗೊಳಿಸಬೇಕು ಎಂದು ವರದಿ ಹೇಳಿದೆ. 

ಆಹಾರ ಸಂಸ್ಕರಣೆ: ಆಹಾರ ಸಂಸ್ಕರಣೆಯಿಂದ ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿರುವ ಘಟಕಗಳಿಗೆ ತೆರಿಗೆ ವಿನಾಯಿತಿ ಕೊಡುವ ಮೂಲಕ ಉತ್ತೇಜಿಸಬೇಕು. ಇಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಪ್ರೋತ್ಸಾಹಿಸಬೇಕು. ಅವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯುವಂತಾಗಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

**

ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ ಶೇ 7.2ರಷ್ಟು ಇದೆ. ಈ ಬೆಳವಣಿಗೆಯನ್ನು ಸುಸ್ಥಿರವಾಗಿರಿಸುವುದು ಅಗತ್ಯ.

ಸಂಪತ್‌ ರಾಮನ್‌, ಅಧ್ಯಕ್ಷ ಅಸೋಚಾಂ ಕರ್ನಾಟಕ ಕೌನ್ಸಿಲ್‌

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !