ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ್‌ಸೆಟ್‌ ರಕ್ಷಣೆಗೆ ಆಟೊ ಸ್ಟಾರ್ಟರ್

Last Updated 19 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ವಿದ್ಯುತ್‌ ಏರಿಳಿತದಿಂದಾಗಿ ಮೇಲಿಂದ ಮೇಲೆ ರೈತರ ತೋಟಗಳಲ್ಲಿನ ಪಂಪ್‌ಸೆಟ್‌ಗಳು ಆಗಾಗ ಸುಟ್ಟು ಹೋಗುತ್ತವೆ. ದುರಸ್ತಿ ಮಾಡಿಸಲು ಹತ್ತಾರು ದಿನಗಳು ಬೇಕು. ಜತೆಗೆ ಸಾವಿರಾರು ರೂಪಾಯಿ ಖರ್ಚು. ಬೆಳೆಗಳಿಗೆ ನೀರಿಲ್ಲದಂತಾಗಿ ಕಣ್ಮುಂದೆಯೇ ಬೆಳೆದು ನಿಂತಿದ್ದ ಬೆಳೆಗಳು ಹಾಳಾದ ಉದಾಹರಣೆಗಳಿವೆ. ವರ್ಷಪೂರ್ತಿ ಅವರು ಪಟ್ಟಶ್ರಮ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತದೆ.

ಪಂಪ್‌ಸೆಟ್‌ ಆನ್‌ ಮಾಡಲು ಹೋಗಿ ವಿದ್ಯುತ್ ಸ್ಪರ್ಶದಿಂದ ರೈತರು ಮೃತರಾಗುವ ಸುದ್ದಿಯನ್ನು ಆಗಾಗ ಓದುತ್ತಲೇ ಇರುತ್ತವೆ. ಪಂಪ್‌ಸೆಟ್‌ ಸುಡುವುದು ಹಾಗೂ ವಿದ್ಯುತ್ ಸ್ಪರ್ಶದಿಂದ ಆಗುವ ಅವಘಡಗಳು ಒಂದು ಪ್ರದೇಶದ ರೈತರು ಎದುರಿಸುವ ಸಮಸ್ಯೆಯಲ್ಲ. ಇಡೀ ದೇಶದ ರೈತರು ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಅಥಣಿಯ ವಿಕಾಸ ಜಮಖಂಡಿ (23), ಬಾಲ್ಯದಿಂದ ಹಿಡಿದು ಇಂದಿನವರೆಗೂ ತಮ್ಮ ಮನೆಯವರೂ ಸೇರಿದಂತೆ ರೈತ ಸಮೂಹ ಎದುರಿಸುತ್ತಿದ್ದ ಇಂತಹ ಕಷ್ಟವನ್ನು ನೋಡುತ್ತಲೇ ಬೆಳೆದಿದ್ದಾರೆ. ವಿದ್ಯುತ್‌ ಏರಿಳಿತದಿಂದಾಗುವ ಸಮಸ್ಯೆಯ ಪರಿಹಾರಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕಲ್ಲ ಎಂದು ಆರಂಭಿಸಿದ ಸಂಶೋಧನೆಯ ಫಲಿತಾಂಶವೇ ‘ಆಟೊ ಸ್ಟಾರ್ಟರ್‌’.

ಟಿವಿ, ಫ್ರಿಜ್‌ಗಳಿಗೆ ರಕ್ಷಣೆ ನೀಡುವ ಸ್ಟೆಬಲೈಸರ್‌ ಮಾದರಿಯಲ್ಲಿಯೇ ಇವರ ಆಟೊ ಸ್ಟಾರ್ಟರ್‌ ಸಹ ಕೆಲಸ ಮಾಡುತ್ತದೆ. ಬೆಂಗಳೂರಿನ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ ಮಾಡಿರುವ ಇವರು, ಒಂದೂವರೆ ವರ್ಷದಿಂದ ಸಂಶೋಧನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪಂಪ್‌ಸೆಟ್‌ಗಳ ಸಾಮರ್ಥ್ಯದ ಆಧಾರದ ಮೇಲೆ ಆಟೊ ಸ್ಟಾರ್ಟರ್‌ಗಳನ್ನು ಸಿದ್ಧಪಡಿಸಲಾಗಿದೆ. ಕೇವಲ ₹ 500 ಬೆಲೆ ನಿಗದಿ ಮಾಡಲಾಗಿದೆ. ವಿಕಾಸ ಜಮಖಂಡಿ ಅವರ ತಂದೆ ಆನಂದ ಜಮಖಂಡಿ ಅವರು ಕೂಡಾ ಮಗನ ಸಂಶೋಧನೆಗೆ ಕೈಜೋಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ 1,800ಕ್ಕೂ ಹೆಚ್ಚು ರೈತರು ಈಗಾಗಲೇ ವಿಕಾಸ ಅವರು ಅಭಿವೃದ್ಧಿ ಪಡಿಸಿರುವ ಆಟೊ ಸ್ಟಾರ್ಟರ್‌ಗಳನ್ನು ಬಳಸುತ್ತಿದ್ದಾರೆ. ಅದರ ಬಳಕೆ ಆರಂಭಿಸಿದ ಮೇಲೆ ಪಂಪ್‌ಸೆಟ್‌ಗಳು ಹಾಳಾಗುತ್ತಿಲ್ಲ. ವಿದ್ಯುತ್ ಸರಬರಾಜು ಹೆಚ್ಚಾದಾಗಲೂ ಏನೂ ಆಗುತ್ತಿಲ್ಲ. ಹೀಗಾಗಿ ಬೆಳೆಗಳಿಗೆ ನೀರು ಹರಿಸುವುದು ಸುಲಭವಾಗಿದೆ. ಜತೆಗೆ ಆರ್ಥಿಕ ಹೊರೆಯು ಇಲ್ಲದಂತಾಗಿದೆ.

‘ದೇಶಪಾಂಡೆ ಫೌಂಡೇಷನ್‌ನ ಸ್ಯಾಂಡ್‌ ಬಾಕ್ಸ್‌ನಲ್ಲಿ ಅವರ ಸಹಕಾರದಿಂದ ಮೈಕ್ರೊ ಎಲೆಕ್ಟ್ರಾನಿಕ್ಸ್ ಕಂಟ್ರೋಲ್ಸ್ ಹೆಸರಿನಲ್ಲಿ ಸ್ಟಾರ್ಟ್‌ ಅಪ್‌ ಆರಂಭಿಸಿದ್ದೇನೆ. ಮುಂದಿನ ದಿನಗಳಲ್ಲಿ ಕಂಪನಿಯನ್ನು ದೊಡ್ಡದಾಗಿಸುವ ಯೋಚನೆ ಇದೆ. ಹತ್ತು ಮಂದಿ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. ರೈತರ ಸಂಕಷ್ಟಗಳಿಗೆ ಅವಶ್ಯವಾದ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಯೋಜನೆ ಇದೆ’ ಎಂದು ವಿಕಾಸ ಜಮಖಂಡಿ ಹೇಳುತ್ತಾರೆ. ಕೇಂದ್ರ ಸರ್ಕಾರದ ಸ್ಟಾರ್ಟ್‌ ಅಪ್‌ ಇಂಡಿಯಾ ಯೋಜನೆಯ ಕರ್ನಾಟಕ ಯಾತ್ರಾದಲ್ಲಿ ಕೃಷಿ ವಿಭಾಗದ ನಂ.1 ಸ್ಟಾರ್ಟ್‌ ಅಪ್‌ ಎಂಬ ಪ್ರಶಸ್ತಿ, ಜಾಗೃತಿ ಸಂಸ್ಥೆ ನೀಡುವ ಟಾಪ್‌ ಟೆನ್‌ ಇನ್‌ ಸಸ್ಟೆನಬೆಲ್‌ ಪ್ರಶಸ್ತಿಯು ಈ ನವೋದ್ಯಮಕ್ಕೆ ದೊರೆತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT