ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇನಲ್ಲಿ ವಾಹನಗಳ ರಿಟೇಲ್‌ ಮಾರಾಟ ಇಳಿಕೆ

Last Updated 6 ಜೂನ್ 2022, 11:11 IST
ಅಕ್ಷರ ಗಾತ್ರ

ನವದೆಹಲಿ: ವಾಹನಗಳ ರಿಟೇಲ್‌ ಮಾರಾಟವು 2019ರ ಮೇ ತಿಂಗಳಿಗೆ ಹೋಲಿಸಿದರೆ 2022ರ ಮೇನಲ್ಲಿ ಇಳಿಕೆ ಆಗಿದೆ ಎಂದು ಭಾರತೀಯ ವಾಹನ ವಿತರಕರ ಒಕ್ಕೂಟ (ಎಫ್‌ಎಡಿಎ) ಸೋಮವಾರ ತಿಳಿಸಿದೆ.

2019ರ ಮೇನಲ್ಲಿ 18.22 ಲಕ್ಷ ವಾಹನಗಳು ಮಾರಾಟ ಆಗಿದ್ದವು. 2022ರ ಮೇನಲ್ಲಿ 16.46 ಲಕ್ಷ ವಾಹನಗಳು ಮಾರಾಟ ಆಗಿವೆ. ಪ್ರಯಾಣಿಕ ವಾಹನಗಳ ಮಾರಾಟ ಸಂಖ್ಯೆಯಲ್ಲಿ ಮಾತ್ರ ಹೆಚ್ಚಳ ಕಂಡುಬಂದಿದೆ.

2019ರ ಮೇಗೆ ಹೋಲಿಸಿದರೆ 2022ರ ಮೇನಲ್ಲಿನ ಮಾರಾಟ ಪ್ರಮಾಣವು, ವಾಹನಗಳ ಮಾರಾಟ ಬೆಳವಣಿಗೆ ಹಾದಿಗೆ ಮರಳಿಲ್ಲ ಎನ್ನುವುದನ್ನು ಸೂಚಿಸುತ್ತಿದೆ. ಒಟ್ಟಾರೆ ಮಾರಾಟವು ಶೇಕಡ 10ರಷ್ಟು ಇಳಿಕೆ ಆಗಿದೆ. ಪ್ರಯಾಣಿಕ ವಾಹನ ಮತ್ತು ಟ್ರ್ಯಾಕ್ಟರ್‌ ಮಾರಾಟ ಹೆಚ್ಚಾಗಿದೆ. ದ್ವಿಚಕ್ರ, ತ್ರಿಚಕ್ರ ಮತ್ತು ವಾಣಿಜ್ಯ ವಾಹನಗಳ ಮಾರಾಟವು ಇನ್ನಷ್ಟೇ ಬೆಳವಣಿಗೆ ಹಾದಿಗೆ ಬರಬೇಕಿದೆ ಎಂದು ಒಕ್ಕೂಟದ ಅಧ್ಯಕ್ಷ ವಿಂಕೇಶ್‌ ಗುಲಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2021ರ ಮೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮೇನಲ್ಲಿ ಉತ್ತಮ ಬೆಳವಣಿಗೆ ದರ ದಾಖಲಾಗಿದೆ. ಕೋವಿಡ್‌ ಸಾಂಕ್ರಾಮಿಕದಿಂದಾಗಿ 2020 ಮತ್ತು 2021ರಲ್ಲಿ ಮಾರಾಟದ ಮೇಲೆ ಪರಿಣಾಮ ಉಂಟಾಗಿದೆ. ಹೀಗಾಗಿ ಕೋವಿಡ್‌ ಬರುವುದಕ್ಕೂ ಮುಂಚಿನ 2019ರ ಮೇ ತಿಂಗಳಿನ ಜೊತೆ ಹೋಲಿಕೆ ಹೆಚ್ಚು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾಯುವಿಕೆ ಹೆಚ್ಚಲಿದೆ

ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳು ಇರುವುದರಿಂದ ವಿತರಕರಿಗೆ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಾಹನಗಳ ಕಾಯುವಿಕೆ ಅವಧಿಯು ಮೂರು ತಿಂಗಳಿನಿಂದ ಎರಡು ವರ್ಷ ಆಗಬಹುದು ಎಂದು ಅವರು ಹೇಳಿದ್ದಾರೆ.

ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಮುಂದಿನ ದಿನಗಳಲ್ಲಿಯೂ ಬೇಡಿಕೆ ಮತ್ತು ಪೂರೈಕೆ ನಡುವೆ ಅಸಮತೋಲನ ಮುಂದುವರಿಯಲಿದೆ. ಇದರಿಂದಾಗಿ ಪ್ರಯಾಣಿಕ ವಾಹನ ಲಭ್ಯತೆಯು ವಿಳಂಬ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT