ಸೋಮವಾರ, ಸೆಪ್ಟೆಂಬರ್ 27, 2021
22 °C
ರಾಜ್ಯದಲ್ಲಿ ಪ್ರತಿವರ್ಷ 4 ಲಕ್ಷದಿಂದ 5 ಲಕ್ಷ ಟನ್‌ ಅಡಿಕೆ ಉತ್ಪಾದನೆ

ಗುಟ್ಕಾ ನಿರ್ಬಂಧ: ಅಡಿಕೆ ಮಾರುಕಟ್ಟೆ ತಲ್ಲಣ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜನರು ಜಗಿದು ಎಲ್ಲೆಂದರಲ್ಲಿ ಉಗುಳುವ ಪರಿಣಾಮ ಕೊರೊನಾ ವೈರಸ್‌ ವೇಗವಾಗಿ ಹರಡುವ ಸಾಧ್ಯತೆ ಇದೆ ಎಂದು ಉತ್ತರ ಭಾರತದ ಹಲವು ರಾಜ್ಯಗಳು ಗುಟ್ಕಾ, ಪಾನ್‌ಮಸಾಲ ಉತ್ಪಾದನೆ, ಮಾರಾಟ ನಿಷೇಧಿಸಿವೆ. ಇದು ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ.

ಕೊರೊನಾ ನಿರ್ಬಂಧದ ಕಾರಣ ಅಡಿಕೆ ಮಾರುಕಟ್ಟೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಏ.14ರ ನಂತರ ವಹಿವಾಟು ಮತ್ತೆ ಆರಂಭವಾಗಬಹುದು. ಆದರೆ, ರಾಜ್ಯದ ಅಡಿಕೆಗೆ ಉತ್ತರ ಭಾರತವೇ ಪ್ರಮುಖ ಮಾರುಕಟ್ಟೆ. ದೇಶದ ಶೇ 90ರಷ್ಟು ಗುಟ್ಕಾ, ಪಾನ್‌ಮಸಾಲ ಕಂಪನಿಗಳು, ಕಾರ್ಖಾನೆಗಳು ಇರುವುದು ಉತ್ತರದ ರಾಜ್ಯಗಳಲ್ಲೇ. ಕೊರೊನಾ ಭೀತಿಯ ಕಾರಣ ಉತ್ತರ ಪ್ರದೇಶ, ಹರಿಯಾಣ ಮೊದಲಾದ ರಾಜ್ಯಗಳು ದೀರ್ಘಾವಧಿಯವರೆಗೆ ನಿಷೇಧ ಹೇರಿವೆ. 

ದೇಶದಲ್ಲಿ ಬೆಳೆಯುವ ಅಡಿಕೆಯಲ್ಲಿ ರಾಜ್ಯದ ಪ್ರಮಾಣ ಶೇ 60ರಷ್ಟಿದೆ. ರಾಜ್ಯದಲ್ಲಿ ಪ್ರತಿವರ್ಷ 4 ಲಕ್ಷದಿಂದ 5 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ಕೇರಳದಲ್ಲಿ 30 ಸಾವಿರದಿಂದ 50 ಸಾವಿರ ಟನ್‌, ಗೋವಾದಲ್ಲಿ 6 ಸಾವಿರದಿಂದ 8 ಸಾವಿರ ಟನ್‌, ಅಸ್ಸಾಂನಲ್ಲಿ 20 ಸಾವಿರದಿಂದ 25 ಸಾವಿರ ಟನ್‌ ಹಾಗೂ ಮಹಾರಾಷ್ಟ್ರ ಸೇರಿ ಇತರೆ ಕೆಲವು ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಅಡಿಕೆ ಬೆಳೆಯಲಾಗುತ್ತದೆ.

ರಾಜ್ಯದಲ್ಲಿ ಬೆಳೆಯುವ ಶೇ 70ರಷ್ಟು ಅಡಿಕೆಯನ್ನು ದಾವಣಗೆರೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲೇ ಬೆಳೆಯಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ತುಮಕೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ವಾರ್ಷಿಕ ಸರಾಸರಿ ₹ 20 ಸಾವಿರ ಕೋಟಿ ವಹಿವಾಟು ನಡೆಯುತ್ತದೆ.

2014–15ರಲ್ಲಿ ಕ್ವಿಂಟಲ್ ಅಡಿಕೆ ಧಾರಣೆ ₹ 1 ಲಕ್ಷದ ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ನಂತರ ಮತ್ತೆ ಕುಸಿತ ಕಂಡಿತ್ತು. 2020ರಲ್ಲಿ ಗರಿಷ್ಠ ಧಾರಣೆ ₹ 40 ಸಾವಿರ ಇತ್ತು. ಬೆಲೆ ಹೆಚ್ಚಳದ ಲಾಭ ಮಧ್ಯವರ್ತಿಗಳ ಪಾಲಾದ ನಂತರ ಬೆಳೆಗಾರರೇ ಅಧಿಕ ಪ್ರಮಾಣದಲ್ಲಿ ದಾಸ್ತಾನು ಮಾಡುತ್ತಾ ಬಂದಿದ್ದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮೂರು ವರ್ಷಗಳ ಅಡಿಕೆ ದಾಸ್ತಾನು ಇದೆ. ಬೆಳೆಗಾರರ ಮನೆ, ಸಹಕಾರ ಸಂಘಗಳು, ಮಂಡಿ ವರ್ತಕರ ಬಳಿ 12 ಲಕ್ಷ ಟನ್‌ ಅಡಿಕೆ ಇರಬಹುದು ಎಂದು ಅಂದಾಜಿಸಲಾಗಿದೆ. ಉತ್ತರ ಭಾರತದಲ್ಲಿ ಗುಟ್ಕಾ, ಪಾನ್‌ಮಸಾಲ ತಯಾರಿಕೆ ಮೇಲಿನ ನಿರ್ಬಂಧ ಮುಂದುವರಿದರೆ ಅಡಿಕೆ ಮಾರುಕಟ್ಟೆಯಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಲಿದೆ.

ಅಂಕಿ ಅಂಶ

ರಾಜ್ಯ; ಅಡಿಕೆ ಉತ್ಪಾದನೆ (ಟನ್‌ಗಳಲ್ಲಿ)

ಕರ್ನಾಟಕ; 5 ಲಕ್ಷ
ಕೇರಳ; 50 ಸಾವಿರ
ಅಸ್ಸಾಂ; 25 ಸಾವಿರ
ಗೋವಾ‌; 8 ಸಾವಿರ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು