ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 3 ಸಾವಿರ ಪಿಂಚಣಿಗೆ ನೋಂದಾಯಿಸಿ!

Last Updated 16 ಜೂನ್ 2019, 19:20 IST
ಅಕ್ಷರ ಗಾತ್ರ

ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಘೋಷಿಸಿರುವ ‘ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆ’ಯ ( ಪಿಎಂಎಸ್‌ವೈಎಂ) ಅನುಷ್ಠಾನ ಪ್ರಕ್ರಿಯೆ ಆರಂಭವಾಗಿದೆ. ಯೋಜನೆಯ ಸದಸ್ಯತ್ವ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ. ಈ ಹೊತ್ತಿನಲ್ಲಿ ಯೋಜನೆಗೆ ನೋಂದಾಯಿಸಿಕೊಳ್ಳುವುದು ಹೇಗೆ ಎನ್ನುವುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾರಿಗೆ ಅನ್ವಯಿಸುತ್ತದೆ: ತಳ್ಳುಗಾಡಿ ಎಳೆಯುವವರು, ಬೀದಿ ವ್ಯಾಪಾರಿಗಳು, ಬಿಸಿಯೂಟ ಯೋಜನೆಯ ನೌಕರರು, ಭೂರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಹಮಾಲಿಗಳು, ಚರ್ಮಕಾರರು, ಕಟ್ಟಡ ಕಾರ್ಮಿಕರು, ಬೀಡಿ ಕಟ್ಟುವವರು, ಕೈಮಗ್ಗದ ಕೆಲಸಗಾರರು ಸೇರಿ ಇನ್ನು ಕೆಲವರಿಗೆ ಯೋಜನೆ ಅನ್ವಯಿಸುತ್ತದೆ.

ಯಾರು ಅನರ್ಹರು: ರಾಷ್ಟ್ರೀಯ ಪಿಂಚಣಿ ಯೋಜನೆ, ಕಾರ್ಮಿಕರ ರಾಜ್ಯ ವಿಮಾ ನಿಗಮ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ ಮಾಡಿಸಿದ್ದರೆ ಅಂತಹ ಕಾರ್ಮಿಕರು ಈ ವ್ಯಾಪ್ತಿಗೆ ಬರುವುದಿಲ್ಲ. ತೆರಿಗೆದಾರರಿಗೂ ಈ ಯೋಜನೆ ಲಭ್ಯವಿಲ್ಲ.

ಅರ್ಹತೆಗಳೇನು: ಮಾಸಿಕ ₹ 15 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರುವ ಅಸಂಘಟಿತ ವಲಯದ 18 ರಿಂದ 40 ವರ್ಷದೊಳಗಿನ ಕಾರ್ಮಿಕರು ಈ ಯೋಜನೆಗೆ ಅರ್ಹರು. ಯೋಜನೆಯ ಸದಸ್ಯತ್ವ ಪಡೆದ ಕಾರ್ಮಿಕರು ಪ್ರತಿ ತಿಂಗಳೂ ಸಣ್ಣ ಮೊತ್ತದ ಹಣವನ್ನು 60 ವರ್ಷಗಳ ವರೆಗೆ ಪಾವತಿಸಿದರೆ, ನಂತರದಲ್ಲಿ ಅವರಿಗೆ ಪ್ರತಿ ತಿಂಗಳು ₹ 3 ಸಾವಿರ ಪಿಂಚಣಿ ಸಿಗಲಿದೆ.

ಸೇರ್ಪಡೆ ಹೇಗೆ: ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ (ಸಿಎಸ್‌ಸಿ) ಭೇಟಿ ನೀಡಬೇಕು. ನೋಂದಣಿಗೆ ಬ್ಯಾಂಕ್ ಖಾತೆ / ಜನ್ ಧನ್ ಖಾತೆ ಮತ್ತು ಆಧಾರ್ ಸಂಖ್ಯೆ ಕಡ್ಡಾಯ. ಪಿಂಚಣಿಯ ಮೊದಲ ಕಂತನ್ನು ಕಾರ್ಮಿಕರು ನಗದು ರೂಪದಲ್ಲಿ ಪಾವತಿಸಬೇಕು. ನಂತರದಲ್ಲಿ ಪ್ರತಿ ತಿಂಗಳು ಬ್ಯಾಂಕ್ ಖಾತೆ ಮೂಲಕ ನಿಗದಿತ ಮೊತ್ತ ಸ್ವಯಂಚಾಲಿತವಾಗಿ ಕಡಿತ ಆಗುತ್ತದೆ. ಸರ್ಕಾರದ ಎಲ್ಲ ಕಾರ್ಮಿಕ ಕಚೇರಿಗಳು, ಎಲ್‌ಐಸಿ ಕೇಂದ್ರಗಳು, ಪಿಎಫ್ ಹಾಗೂ ಇಎಸ್ ಐ ಕಚೇರಿಗಳಲ್ಲಿ ಯೋಜನೆಯ ಬಗ್ಗೆ ಕಾರ್ಮಿಕರಿಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.

ಹೊರಬರಲುಅವಕಾಶ: ಕಾರ್ಮಿಕ 10 ವರ್ಷಗಳಿಗೆ ಮೊದಲು ಪಂಚಣಿ ಯೋಜನೆಯಿಂದ ಹೊರಬರಲು ನಿರ್ಧರಿಸಿದರೆ ಆತ ಪಾವತಿಸಿರುವ ಮಾಸಿಕ ಪಿಂಚಣಿ ಕೊಡುಗೆಯ ಸಂಪೂರ್ಣ ಮೊತ್ತವನ್ನು ಉಳಿತಾಯ ಖಾತೆಯ ಬಡ್ಡಿ ದರದೊಂದಿಗೆ ಹಿಂದಿರುಗಿಸಲಾಗುತ್ತದೆ.

ಕಾರ್ಮಿಕನೊಬ್ಬ ನಿಯಮಿತವಾಗಿ ಪಿಂಚಣಿ ಪಾವತಿಸಿ 60 ವರ್ಷಗಳಿಗೆ ಮೊದಲು ಮೃತಪಟ್ಟರೆ/ ಅಂಗವೈಕಲ್ಯತೆ ಹೊಂದಿದರೆ ಅವರ ಪತ್ನಿ ಪಿಂಚಣಿ ಪಾವತಿ ಮುಂದುವರಿಸಬಹುದು. ಯೋಜನೆ ಮುಂದುವರಿಸದಿದ್ದಲ್ಲಿ ಮಾಸಿಕ ಪಿಂಚಣಿ ಕೊಡುಗೆಯ ಸಂಪೂರ್ಣ ಮೊತ್ತವನ್ನು ಉಳಿತಾಯ ಖಾತೆಯ ಬಡ್ಡಿ ದರದೊಂದಿಗೆ ಹಿಂದೆ ಪಡೆಯಬಹುದು.

ಜಾಗತಿಕ ವಿದ್ಯಮಾನಗಳ ಪ್ರಭಾವ ನಿರೀಕ್ಷೆ
ಷೇರು ಮಾರುಕಟ್ಟೆ ಸೂಚ್ಯಂಕಗಳಲ್ಲಿ ಅನಿಶ್ಚಿತತೆಯ ಓಟ ಶುರುವಾಗಿದೆ. ವಾರದ ಮೊದಲ ಎರಡು ದಿನಗಳಲ್ಲಿ ಸಕಾರಾತ್ಮಕ ವಹಿವಾಟು ಕಂಡ ಮಾರುಕಟ್ಟೆಯು ನಂತರದ ಮೂರು ದಿನಗಳಲ್ಲಿ ಭಾರಿ ಒತ್ತಡದಲ್ಲಿದ್ದ ಕಾರಣ ಕುಸಿತ ಕಂಡಿದೆ.

ಸೆನ್ಸೆಕ್ಸ್ ಮತ್ತು ನಿಫ್ಟಿ ವಾರದ ಅವಧಿಯಲ್ಲಿ ಶೇ 0.4 ರಷ್ಟು ಕುಸಿತ ಕಂಡು ಕ್ರಮವಾಗಿ 39,452 ಮತ್ತು 11,823 ರಲ್ಲಿ ವಹಿವಾಟು ಮುಗಿಸಿವೆ. ನಿಫ್ಟಿ ಮಿಡ್ ಕ್ಯಾಪ್ ಸಹ ಶೇ 1.2 ರಷ್ಟು ಹಿನ್ನಡೆ ಅನುಭವಿಸಿದೆ.

ನಿಫ್ಟಿ ವಲಯವಾರು: ನಿಫ್ಟಿ ಐಟಿ ಮತ್ತು ಲೋಹ ವಲಯ ಹೊರತುಪಡಿಸಿ ಎಲ್ಲ ವಲಯವಾರು ಸೂಚ್ಯಂಕಗಳು ಕಳೆದ ವಾರ ಕುಸಿದಿವೆ.

ರಿಯಲ್ ಎಸ್ಟೇಟ್ ವಲಯ ಶೇ 3.1 ರಷ್ಟು ಹಿನ್ನಡೆ ಕಂಡು ಗರಿಷ್ಠ ಕುಸಿತ ದಾಖಲಿಸಿದೆ. ಮಾಧ್ಯಮ ವಲಯ ಶೇ 2.1 ರಷ್ಟು ಇಳಿದಿದೆ. ಉಳಿದಂತೆ ವಾಹನ ಉತ್ಪಾದನಾ ವಲಯ ಶೇ 2, ಬ್ಯಾಂಕ್ ಶೇ 1.5, ಫಾರ್ಮಾ ಶೇ 1.2 ಹಾಗೂ ವಿದ್ಯುತ್‌ ಉತ್ಪಾದನಾ ವಲಯ ಶೇ 0.7 ರಷ್ಟು ಕುಸಿದಿವೆ. ನಿಫ್ಟಿ ಲೋಹ ಮತ್ತು ಐಟಿ ವಲಯಗಳು ಕ್ರಮವಾಗಿ ಶೇ 1.3 ಮತ್ತು ಶೇ 1 ರಷ್ಟು ಏರಿಕೆ ದಾಖಲಿಸಿವೆ.

ಉಕ್ಕು ಕಂಪನಿಗಳ ಗಳಿಕೆ: ಕೇಂದ್ರ ಉಕ್ಕು ಸಚಿವಾಲಯವು ದೇಶೀಯ ಉಕ್ಕು ಉತ್ಪಾದಕರಿಗೆ ಪೂರಕವಾದ ನೀತಿಯನ್ನು ಜಾರಿಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ ಪರಿಣಾಮ ಕಳೆದ ವಾರ ಉಕ್ಕು ಉತ್ಪಾದನಾ ಕಂಪನಿಗಳ ಷೇರುಗಳು ಉತ್ತಮ ಗಳಿಕೆ ದಾಖಲಿಸಿವೆ.

ಟಾಟಾ ಸ್ಟೀಲ್ ಶೇ 4, ಜೆಎಸ್‌ಡಬ್ಲ್ಯು ಸ್ಟೀಲ್ ಶೇ 3.4 ರಷ್ಟು ಪ್ರಗತಿ ಕಂಡಿವೆ. ಉಳಿದಂತೆ ಟಿಸಿಎಸ್ ಶೇ 3.3 , ಗ್ರಾಸಿಮ್ ಶೇ 3.1, ಬ್ರಿಟಾನಿಯಾ ಶೇ 2.2 ಹಿಂಡಾಲ್ಕೊ ಶೇ 1.8 ಮತ್ತು ಪವರ್ ಗ್ರಿಡ್ ಶೇ 1.5 ರಷ್ಟು ಗಳಿಸಿಕೊಂಡಿವೆ.

ಕುಸಿದ ಯೆಸ್ ಬ್ಯಾಂಕ್: ಯುಬಿಎಸ್ ಬ್ರೋಕರೇಜ್ ಕಂಪನಿಯು, ಯೆಸ್ ಬ್ಯಾಂಕ್‌ನ ಷೇರುಗಳ ರೇಟಿಂಗ್ ಕಡಿತಗೊಳಿಸಿದ ಕಾರಣ ಕಂಪನಿಯ ಷೇರುಗಳು ಶೇ 17.8 ರಷ್ಟು ಕುಸಿದಿವೆ.

ಇದೇ ರೀತಿ ಇಂಡಸ್ ಇಂಡ್ ಬ್ಯಾಂಕ್‌ನ ಷೇರುಗಳು ಕೂಡ ಶೇ 8 ರಷ್ಟು ಹಿನ್ನಡೆ ಕಂಡಿವೆ. ₹ 98,000 ಕೋಟಿ ದುರುಪಯೋಗ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್‌ನ ಷೇರುಗಳು ಶೇ 8 ರಷ್ಟು ಕುಸಿದಿವೆ.

ತೈಲ ಬೆಲೆ ಏರಿಕೆ ಭೀತಿಯಿಂದ ಬಿಪಿಸಿಎಲ್ ಮತ್ತು ಕೋಲ್ ಇಂಡಿಯಾ ಕ್ರಮವಾಗಿ ಶೇ 4 ಮತ್ತು ಶೇ 3.9 ರಷ್ಟು ಕುಸಿದಿವೆ.

ಮುನ್ನೋಟ: ಅಮೆರಿಕದ 29 ಸರಕುಗಳ ಮೇಲೆ ಭಾರತ ಪ್ರತೀಕಾರ ಸುಂಕ ವಿಧಿಸಿರುವುದು, ಅಮೆರಿಕ ಫೆಡರಲ್ ಬ್ಯಾಂಕ್‌ನ ಹಣಕಾಸು ನೀತಿ, ಗಲ್ಫ್ ಆಫ್ ಒಮನ್‌ನಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಭೀತಿ, ಮುಂಬರುವ ‘ಜಿ–20’ ಶೃಂಗಸಭೆ, ಜುಲೈ 5 ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಸೇರಿ ಪ್ರಮುಖ ಬೆಳವಣಿಗೆಗಳು ಈ ವಾರದ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT