ಎಟಿಎಂಗಳ ರದ್ದು ಆಲೋಚನೆ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

7

ಎಟಿಎಂಗಳ ರದ್ದು ಆಲೋಚನೆ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

Published:
Updated:
Deccan Herald

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮ ಎಟಿಎಂಗಳ ಸಂಖ್ಯೆಯನ್ನು ಕಡಿತಗೊಳಿಸುವ ಯಾವುದೇ ಆಲೋಚನೆ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.

ನಿರ್ವಹಣಾ ವೆಚ್ಚದ ಹೊರೆಯಿಂದಾಗಿ 2019ರ ಮಾರ್ಚ್‌ ಒಳಗಾಗಿ ದೇಶದಲ್ಲಿರುವ ಅರ್ಧದಷ್ಟು ಎಟಿಎಂಗಳು ಮುಚ್ಚಲಾಗುವುದು ಎಂದು ಎಟಿಎಂ ಉದ್ಯಮದ ಒಕ್ಕೂಟವು (ಸಿಎಟಿಎಂಐ) ತಿಳಿಸಿತ್ತು.

‘ವಾಣಿಜ್ಯ ಬ್ಯಾಂಕ್‌, ಕಿರು ಹಣಕಾಸು ಸಂಸ್ಥೆಗಳು, ಪೇಮೆಂಟ್ಸ್‌ ಬ್ಯಾಂಕ್ಸ್‌ಗಳಿಗೆ ಸೇರಿದಂತೆ ದೇಶದಾದ್ಯಂತ ಸೆ‍ಪ್ಟೆಂಬರ್‌ ತಿಂಗಳಾಂತ್ಯದ ವೇಳೆಗೆ 2.21 ಲಕ್ಷ ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಹಣಕಾಸು ರಾಜ್ಯ ಸಚಿವ ಶಿವ ಪ್ರತಾಪ್‌ ಶುಕ್ಲಾ ಅವರು ತಿಳಿಸಿದ್ದಾರೆ.

 ₹ 2.33 ಲಕ್ಷ ಕೋಟಿ ಸಾಲ ವಸೂಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು 2014–15ರಿಂದ 2017–18ರ ಅವಧಿಯಲ್ಲಿ  ₹ 2.33 ಲಕ್ಷ ಕೋಟಿ ಸಾಲ ವಸೂಲಿ ಮಾಡಿವೆ. ಇದರಲ್ಲಿ ₹ 32,693 ಕೋಟಿ ವಜಾ ಮಾಡಿದ ಸಾಲದ ಮೊತ್ತವಾಗಿದೆ ಎಂದು ಶುಕ್ಲಾ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ  ತಿಳಿಸಿದ್ದಾರೆ.

ಬ್ಯಾಂಕ್‌ಗಳು ತಮ್ಮ ಬ್ಯಾಲನ್ಸ್‌ಶೀಟ್‌ ಕ್ರಮಬದ್ಧಗೊಳಿಸಲು ನಿಯಮಿತವಾಗಿ ವಸೂಲಾಗದ ಸಾಲದಲ್ಲಿನ ಕೆಲ ಮೊತ್ತವನ್ನು ವಜಾ ಮಾಡುತ್ತವೆ. ಹೀಗೆ ವಜಾ ಮಾಡಿದ ಸಾಲದ ಫಲಾನುಭವಿಗಳು ಮರುಪಾವತಿಗೆ ಬದ್ಧರಾಗಿರಬೇಕಾಗುತ್ತದೆ. ನಾಲ್ಕು ವರ್ಷಗಳಲ್ಲಿ ಬ್ಯಾಂಕ್‌ಗಳು ಸಾಲ ವಜಾ ಮಾಡಿದ್ದರಿಂದ ಅವುಗಳ ವಸೂಲಾಗದ ಸಾಲದ ಪ್ರಮಾಣವು ₹ 3.16 ಲಕ್ಷ ಕೋಟಿ ಕಡಿಮೆಯಾಗಿತ್ತು ಎಂದು ಅವರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !