ಮಂಗಳವಾರ, ಮಾರ್ಚ್ 21, 2023
29 °C

ಸಾಲನಿಧಿಗಳಲ್ಲಿ ಹೂಡಿಕೆ: ಕೆಲವು ಸಲಹೆಗಳು

ಸಂದೀಪ್‌ ಭಾರದ್ವಾಜ್‌ Updated:

ಅಕ್ಷರ ಗಾತ್ರ : | |

ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ

ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಉತ್ಸಾಹದಲ್ಲಿರುವ ಹೂಡಿಕೆದಾರರು, ಅನೇಕ ಸಂದರ್ಭದಲ್ಲಿ ‘ಸಾಲ ನಿಧಿಗಳು’ ಎಂಬ ಹೂಡಿಕೆಯ ಪರ್ಯಾಯ ಮಾರ್ಗವೊಂದಿದೆ, ಆ ಮಾರ್ಗವೂ ಹೂಡಿಕೆಗೆ ಆಕರ್ಷಕವಾಗಿರುತ್ತದೆ ಎಂಬುದನ್ನು ಮರೆತಿರುತ್ತಾರೆ. ಹೆಚ್ಚು ಗಳಿಕೆ ಮಾಡುವುದೊಂದೇ ಹೂಡಿಕೆಯ ಉದ್ದೇಶವಲ್ಲ. ನಷ್ಟದ ಅಪಾಯವನ್ನು ಕಡಿಮೆ ಮಾಡಿಕೊಳ್ಳುವುದು ಹಾಗೂ ಬೇಕಾದಾಗ ಹಣವನ್ನು ವಾಪಸ್‌ ಪಡೆಯುವುದೂ ಆಗಿರುತ್ತದೆ. ಈ ವಿಚಾರದಲ್ಲಿ ಸಾಲ ನಿಧಿಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.

ಮೊದಲನೆಯದಾಗಿ ಸಾಲ ನಿಧಿಗಳು ಹೂಡಿಕೆಗೆ ಭದ್ರತೆಯನ್ನು ಒದಗಿಸುತ್ತವೆ. ಎರಡನೆಯದಾಗಿ ಅಲ್ಪ ಹಾಗೂ ಮಧ್ಯಮ ಅವಧಿಯ ಹೂಡಿಕೆಯಲ್ಲಿ ಅವು ಇತರ ಮ್ಯೂಚುವಲ್‌ ಫಂಡ್‌ಗಳಿಗಿಂತ ಒಳ್ಳೆಯ ಗಳಿಕೆಯನ್ನು ತಂದುಕೊಡುತ್ತವೆ. ನೀವು 2–3 ವರ್ಷಗಳ ಅವಧಿಗೆ ಹೂಡಿಕೆ ಮಾಡಬೇಕೆಂದಿದ್ದರೆ ಈಕ್ವಿಟಿ ಫಂಡ್‌ಗಳಿಗಿಂತ ಸಾಲ ನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ಸಾಲ ನಿಧಿಗಳಲ್ಲಿ ಹೂಡಿಕೆ ಮಾಡಬೇಕೆಂಬ ಇಚ್ಛೆ ನಿಮಗೂ ಇದ್ದರೆ, ನೆನಪಿನಲ್ಲಿಡಬೇಕಾದ ಕೆಲವು ಸಲಹೆಗಳು ಇಲ್ಲಿವೆ;

ಒಟ್ಟು ಹೂಡಿಕೆಯಲ್ಲಿ ಎಷ್ಟು ಭಾಗವನ್ನು ಸಾಲ ನಿಧಿಗಳಲ್ಲಿ ಹೂಡಿಕೆ ಮಾಡಬೇಕು ಎಂಬುದು ನಿಮ್ಮ ಅಗತ್ಯ ಮತ್ತು ಯೋಜನೆಗಳನ್ನು ಆಧರಿಸಿರುತ್ತದೆ. ಆದ್ದರಿಂದ ಮೊದಲು ಇವುಗಳನ್ನು ನಿರ್ಧರಿಸಬೇಕು. ಒಮ್ಮ ನಿಮ್ಮ ಗುರಿ ನಿರ್ಧಾರವಾಯಿತೆಂದರೆ ಅದರ ಈಡೇರಿಕೆಗೆ ಹೂಡಿಕೆಯು ಭದ್ರವಾಗಿರುವುದು ಅಗತ್ಯ. ಈ ಭದ್ರತೆಯನ್ನು ಸಾಲ ನಿಧಿಗಳು ನೀಡುತ್ತವೆ.

ದೀರ್ಘಾವಧಿಯ ಹೂಡಿಕೆಯಲ್ಲಿ ಸಾಲನಿಧಿಗಳ ಗಳಿಕೆಯು ಈಕ್ವಿಟಿ ಫಂಡ್‌ಗಳ ಗಳಿಕೆಗಿಂತ ಕಡಿಮೆ ಇರಬಹುದು. ಆದರೆ ಹೂಡಿಕೆಗೆ ಅಗತ್ಯವಿರುವ ಭದ್ರತೆಯನ್ನು ಇವುಗಳು ನೀಡುತ್ತವೆ ಎಂಬುದನ್ನು ಮರೆಯಬಾರದು. ಸಾಲ ನಿಧಿಗಳಲ್ಲೂ ಕಾರ್ಪೊರೇಟ್‌ ಫಂಡ್‌, ಕ್ರಡಿಟ್‌ ಅಪೋರ್ಚುನಿಟಿ ಫಂಡ್‌ ಎಂದೆಲ್ಲ ಸಾಕಷ್ಟು ಆಯ್ಕೆಗಳು ಲಭ್ಯ. ಮಾತ್ರವಲ್ಲ ದೀರ್ಘಾವಧಿ, ಅಲ್ಪಾವಧಿ ನಿಧಿಗಳೂ ಲಭ್ಯ ಇವೆ. ನಿಮ್ಮ ಅಗತ್ಯಕ್ಕೆ ಅನುಗುಣವಾದ ನಿಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಈಕ್ವಿಟಿ ಫಂಡ್‌ಗಳಲ್ಲಾದರೆ ನಿಯಮಿತವಾಗಿ ಹಣವನ್ನು ಪಡೆಯುವುದು ಕಷ್ಟದ ಕೆಲಸ. ಅವು ಡಿವಿಡೆಂಡ್‌ ಅಥವಾ ಬಂಡವಾಳ ಗಳಿಕೆಯನ್ನು ನೀಡಬಲ್ಲವು. ಅದೂ ಖಚಿತ ಇರುವುದಿಲ್ಲ. ಆದರೆ ಸಾಲ ನಿಧಿಯನ್ನು ವೃದ್ಧಿ ಯೋಜನೆಯಾಗಿ ಅಥವಾ ಡಿವಿಡೆಂಡ್ ಯೋಜನೆಯಾಗಿ ರೂಪಿಸಿಕೊಳ್ಳಬುದು. ಆಯ್ಕೆ ಯಾವುದೇ ಆದರೂ ನಿಗದಿತ ಆದಾಯವಂತೂ ಖಚಿತವಾಗಿರುತ್ತದೆ.

ನಮಗೆ ವಯಸ್ಸಾದಂತೆ ಆರ್ಥಿಕ ಆಘಾತಗಳನ್ನು ತಾಳುವ ಶಕ್ತಿ ಕುಂದುತ್ತದೆ. ಇಂಥ ಆಘಾತಗಳು ಬಾರದಂತೆ ತಡೆಯುವುದೇ ಸಾಲ ನಿಧಿಗಳಲ್ಲಿ ಹೂಡಿಕೆ ಮಾಡುವುದರ ಹಿಂದಿನ ಉದ್ದೇಶ. ಆದರೆ ಸಾಲನಿಧಿಗಳೂ ಅಪಾಯದಿಂದ ಪೂರ್ಣವಾಗಿ ಮುಕ್ತವಲ್ಲ ಎಂಬುದನ್ನು ಮರೆಯಬಾರದು. ಈಕ್ವಿಟಿ ಫಂಡ್‌ಗಳಿಗೆ ಹೋಲಿಸಿದರೆ ಮಧ್ಯಮಾವಧಿಯಲ್ಲಿ ಇವುಗಳು ಹೆಚ್ಚು ಭದ್ರವಾಗಿರುತ್ತವೆ ಮತ್ತು ಇವುಗಳ ಏರಿಳಿಕೆಯನ್ನು ಮೊದಲೇ ನಿರೀಕ್ಷಿಸಬಹುದಾಗಿರುತ್ತದೆ ಎಂಬುದು ಸಮಾಧಾನಕರ ಅಂಶ.

ಸಾಲ ನಿಧಿಗಳಲ್ಲಿ ಹೂಡಿಕೆ ಮಾಡುವವರು ಸಾಮಾನ್ಯವಾಗಿ ಎಲ್ಲಾ ನಿಧಿಗಳನ್ನು ನಿಗದಿತ ಆದಾಯದ ಮೂಲವನ್ನಾಗಿ ಮಾಡುತ್ತಾರೆ. ಹಾಗೆಯೇ ಮಾಡಬೇಕೆಂದಿಲ್ಲ. ಈ ನಿಧಿಗಳ ಹೂಡಿಕೆಯನ್ನೂ ಅಗತ್ಯಕ್ಕೆ ತಕ್ಕಂತೆ ಬದಲಿಸುವ ಅವಕಾಶ ಇದೆ. ‘ಎಎಎ’ ಶ್ರೇಯಾಂಕದ ನಿಧಿಯನ್ನು ಹೆಚ್ಚು ಆದಾಯ ತರಬಲ್ಲ ಆದರೆ ‘ಎಎ’ ಶ್ರೇಯಾಂಕದ ನಿಧಿಗೆ ಬದಲಿಸಲೂ ಸಾಧ್ಯವಿದೆ. ಇದರಿಂದ ದೊಡ್ಡ ಆರ್ಥಿಕ ಆಘಾತವೇನೂ ಸಂಭವಿಸದು. ದೀರ್ಘಾವಧಿಯ ನಿಧಿಯಿಂದ ಅಲ್ಪಾವಧಿಯ ನಿಧಿಗೂ ಹೂಡಿಕೆಯನ್ನು ಬದಲಿಸಲು ಸಾಧ್ಯವಿದೆ.

ಹಣದುಬ್ಬರವೂ ಸಾಲ ನಿಧಿ ಹೂಡಿಕೆದಾರರಿಗೆ ಲಾಭ ತಂದುಕೊಡುತ್ತದೆ. ನೀವು ಬ್ಯಾಂಕ್‌ನಲ್ಲಿ ಅವಧಿ ಠೇವಣಿ ಇರಿಸಿದ್ದೀರಿ ಎಂದಿಟ್ಟುಕೊಳ್ಳಿ. ಬಡ್ಡಿ ದರ ಕಡಿಮೆಯಾದಾಗ ನಿಮ್ಮ ಆದಾಯವೂ ಕಡಿಮೆಯಾಗುವುದಲ್ಲವೇ? ಅದೇ, ಸಾಲನಿಧಿಯ ಹೂಡಿಕೆಯಲ್ಲಿ ಬಡ್ಡಿ ದರ ಇಳಿಕೆಯಾದಾಗ ಗಳಿಕೆಯ ಪ್ರಮಾಣ ಕಡಿಮೆಯಾದರೂ ಬಾಂಡ್‌ ಮೌಲ್ಯ ಹೆಚ್ಚುತ್ತದೆ. ಇದರಿಂದ ಪರ್ಯಾಯವಾಗಿ ಬಂಡವಾಳ ಗಳಿಕೆಯಾಗುತ್ತದೆ (ವಿಶೇಷವಾಗಿ ದೀರ್ಘಾವಧಿಯ ನಿಧಿಗಳಲ್ಲಿ).

ಇತರ ಹೂಡಿಕೆಗಳಿಗೆ ಹೋಲಿಸಿದರೆ ಸಾಲ ನಿಧಿಗಳಲ್ಲಿ ತೆರಿಗೆ ಉಳಿತಾಯಕ್ಕೂ ಹೆಚ್ಚಿನ ಅವಕಾಶಗಳಿರುತ್ತವೆ. ಆದ್ದರಿಂದ ಸಾಲ ನಿಧಿಗಳು ಹೂಡಿಕೆಗೆ ಒಳ್ಳೆಯ ಆಯ್ಕೆ ಎಂಬುದರಲ್ಲಿ ಸಂದೇಹವಿಲ್ಲ. ಸಾಕಷ್ಟು ಅಧ್ಯಯನ ನಡೆಸಿ ಒಳ್ಳೆಯ ನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ.

(ಲೇಖಕ: ಏಂಜಲ್‌ ಬ್ರೋಕಿಂಗ್‌ನ ಉಪನಿರ್ದೇಶಕ ಮತ್ತು ಮುಖ್ಯ ಮಾರಾಟ ಅಧಿಕಾರಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು