ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಇ–ವೇ ಬಿಲ್‌ ತಡೆಗೆ ಕ್ರಮ

ತೆರಿಗೆ ಅಧಿಕಾರಿಗಳ ಸಲಹಾ ಸಮಿತಿ ರಚನೆ
Last Updated 18 ಫೆಬ್ರುವರಿ 2019, 12:14 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ನಕಲಿ ಇ–ವೇ ಬಿಲ್‌ ಹಾವಳಿ ತಡೆಗಟ್ಟಲು ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ಸಲಹೆ ನೀಡಲು ರೆವಿನ್ಯೂ ಇಲಾಖೆಯು ತೆರಿಗೆ ಅಧಿಕಾರಿಗಳ ಸಮಿತಿ ರಚಿಸಲು ಮುಂದಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ. ನಕಲಿ ಇ–ವೇ ಬಿಲ್‌ ಬಳಕೆಯ ವಿಧಾನಗಳನ್ನು ವಿಶ್ಲೇಷಿಸಲಿರುವ ಸಮಿತಿಯು ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲಿದೆ.

ಜಿಎಸ್‌ಟಿ ಸಂಗ್ರಹ ಮತ್ತು ತೆರಿಗೆ ಪಾವತಿ ಬದ್ಧತೆ ಹೆಚ್ಚಿಸಲು ತೆರಿಗೆ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ಹಾಕುವ ಕಠಿಣ ಕ್ರಮಗಳ ಅಗತ್ಯ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಇ–ವೇ ಬಿಲ್‌ ಮತ್ತು ಖೊಟ್ಟಿ ದರಪಟ್ಟಿ ಬಳಸಿ ಜಿಎಸ್‌ಟಿ ವಂಚನೆ ಎಸಗುತ್ತಿರುವುದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯ (ಸಿಬಿಐಸಿ) ಗಮನಕ್ಕೆ ಬಂದಿದೆ. ಕೆಲ ಸರಕು ಸಾಗಣೆದಾರರು ಒಂದೇ ಇ–ವೇ ಬಿಲ್ ಪಡೆದು ಹಲವು ಬಾರಿ ಸರಕು ಸಾಗಣೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹಿಂದಿನ ವರ್ಷದ ಏಪ್ರಿಲ್‌ನಿಂದಲೇ ಇಂತಹ ಅಸಂಖ್ಯ ಪ್ರಕರಣಗಳು ಪತ್ತೆಯಾಗಿವೆ.

ಖೊಟ್ಟಿ ಸರಕುಪಟ್ಟಿ ಆಧರಿಸಿ ನಕಲಿ ಇ–ವೇ ಬಿಲ್‌ಗಳನ್ನು ಸೃಷ್ಟಿಸಿ ₹ 5 ಸಾವಿರ ಕೋಟಿಯಷ್ಟು ತೆರಿಗೆ ತಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಹಿವಾಟುದಾರರ ತೆರಿಗೆ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ಹಾಕುವ ಉದ್ದೇಶಕ್ಕೆ ಇ–ಬಿಲ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ರಾಜ್ಯದಿಂದ ರಾಜ್ಯಕ್ಕೆ ಮತ್ತು ರಾಜ್ಯದ ಒಳಗೆ ₹ 50 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸರಕು ಸಾಗಣೆಗೆ ಇ–ವೇ ಬಿಲ್‌ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. 2018ರ ಏಪ್ರಿಲ್‌ನಿಂದ ಹಂತ ಹಂತವಾಗಿ ಇದನ್ನು ಜಾರಿಗೆ ತರಲಾಗಿತ್ತು.

ಸರಕು ಸಾಗಿಸುವ ಸಂದರ್ಭದಲ್ಲಿ ಜಿಎಸ್‌ಟಿ ಅಧಿಕಾರಿಗಳು ಕೇಳಿದರೆ ಇ–ವೇ ಬಿಲ್‌ ಅನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.

ಫಾಸ್ಟ್ಯಾಗ್‌ ಜತೆ ಇ–ವೇ ಬಿಲ್‌ ಜೋಡಣೆ

ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಕೇಂದ್ರಗಳಲ್ಲಿನ ಫಾಸ್ಟ್ಯಾಗ್‌ ಜತೆಗೆ ಇ–ವೇ ಬಿಲ್‌ ಜೋಡಿಸುವ ಸೌಲಭ್ಯವೂ ಸದ್ಯದಲ್ಲೇ ಜಾರಿಗೆ ಬರಲಿದೆ. ಇದರಿಂದ ರೆವಿನ್ಯೂ ಅಧಿಕಾರಿಗಳು ಇ–ವೇ ಬಿಲ್‌ ಪಡೆದ ವಾಹನಗಳ ಮೇಲೆ ನಿಗಾ ಇರಿಸಬಹುದು. ಜಿಎಸ್‌ಟಿ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ಇದು ನೆರವಾಗಲಿದೆ. ಇದರಿಂದ ಸರಕು ಸಾಗಣೆ ವಾಹನಗಳ ತ್ವರಿತ ಸಂಚಾರವೂ ಸಾಧ್ಯವಾಗಲಿದೆ.

ಫಾಸ್ಟ್ಯಾಗ್‌ಗೆ ಇ–ವೇ ಬಿಲ್‌ ಜೋಡಿಸುವುದರಿಂದ ವಾಹನ ಇರುವ ಸ್ಥಳದ ಖಚಿತ ಮಾಹಿತಿ ಸಿಗುವ ಜತೆಗೆ ಅದು ಎಷ್ಟು ಬಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್‌ ಪ್ಲಾಜಾವನ್ನು ಹಾದು ಹೋಗಿದೆ ಎನ್ನುವ ನಿಖರವಾದ ಮಾಹಿತಿಯೂ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT