ಬಾಷ್‌: ₹ 1,700 ಕೋಟಿ ಹೂಡಿಕೆ

7
ಆಡುಗೋಡಿ ಘಟಕದ ವಿಸ್ತರಣೆಗೆ ₹ 600 ಕೋಟಿ ವೆಚ್ಚ

ಬಾಷ್‌: ₹ 1,700 ಕೋಟಿ ಹೂಡಿಕೆ

Published:
Updated:
ಸುದ್ದಿಗೋಷ್ಠಿಯಲ್ಲಿ ಬಾಷ್‌ ಇಂಡಿಯಾ ಗ್ರೂಪ್‌ನ ಅಧ್ಯಕ್ಷ ಸೌಮಿತ್ರ  ಭಟ್ಟಾಚಾರ್ಯ ಮತ್ತು ಬಾಷ್‌ ಸಮೂಹದ ಆಡಳಿತ ನಿರ್ವಹಣಾ ಮಂಡಳಿ ಅಧ್ಯಕ್ಷ ವೋಲ್ಕಮರ್‌ ಡೆನ್ನರ್‌ ಭಾಗವಹಿಸಿದ್ದರು  – ಪ್ರಜಾವಾಣಿ ಚಿತ್ರ

ಬೆಂಗಳೂರು: ವಾಹನಗಳ ಬಿಡಿಭಾಗ ತಯಾರಿಕಾ ಸಂಸ್ಥೆ ಬಾಷ್‌, ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ ₹ 1,700 ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಲಿದೆ.

‘ಈ ಹೂಡಿಕೆಯಲ್ಲಿನ ದೊಡ್ಡ ಮೊತ್ತವನ್ನು ನಗರದ ಆಡುಗೋಡಿಯಲ್ಲಿನ ತಯಾರಿಕಾ ಘಟಕದ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು. ಈ   ಘಟಕವನ್ನು ತಂತ್ರಜ್ಞಾನ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಸ್ಮಾರ್ಟ್‌ ಕ್ಯಾಂಪಸ್‌ಗಾಗಿ  ಮೂರು ವರ್ಷಗಳಿಂದ ₹ 370 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗಿದೆ’ ಎಂದು ಬಾಷ್‌ ಸಮೂಹದ ಆಡಳಿತ ನಿರ್ವಹಣಾ ಮಂಡಳಿ ಅಧ್ಯಕ್ಷ ಡಾ. ವೋಲ್ಕಮರ್‌ ಡೆನ್ನರ್‌ ಹೇಳಿದ್ದಾರೆ.

‘ಭಾರತದಲ್ಲಿನ ಸಂಸ್ಥೆಯ 18 ಸಾವಿರ ಎಂಜಿನಿಯರ್‌ಗಳ ಪೈಕಿ, 3,650 ಸಿಬ್ಬಂದಿ ಆಡುಗೋಡಿ ಘಟಕದಲ್ಲಿ ದುಡಿಯುತ್ತಿದ್ದಾರೆ. ಈ ಘಟಕದ ಇನ್ನಷ್ಟು ವಿಸ್ತರಣೆಗೆ ₹ 600 ಕೋಟಿಗಳಷ್ಟು ಹೆಚ್ಚುವರಿ ಹೂಡಿಕೆ ಮಾಡಲಾಗುವುದು. ಭಾರತದಲ್ಲಿನ ಇತರ ಘಟಕಗಳ ವಿಸ್ತರಣೆ ಉದ್ದೇಶಕ್ಕೆ ಒಟ್ಟಾರೆ ₹ 1,700 ಕೋಟಿ ಹೂಡಿಕೆ ಮಾಡಲಾಗುತ್ತಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭರವಸೆದಾಯಕ ಮಾರುಕಟ್ಟೆ: ‘ಭಾರತದಲ್ಲಿ ವಾಹನ ಬಿಡಿಭಾಗ ಮಾರುಕಟ್ಟೆಯು ಗಮನಾರ್ಹವಾಗಿ ವಿಸ್ತರಣೆಯಾಗುತ್ತಿದೆ. ಭಾರತ ಈಗ ವಿಶ್ವದಲ್ಲಿಯೇ ನಾ‌ಲ್ಕನೆ ಅತಿದೊಡ್ಡ ಮಾರುಕಟ್ಟೆಯಾಗಿ ಜರ್ಮನಿಯನ್ನು ಹಿಂದಿಕ್ಕಿದೆ. ಪ್ರಯಾಣಿಕರ ಮತ್ತು ವಾಣಿಜ್ಯ ವಾಹನಗಳ ಮಾರುಕಟ್ಟೆಯು ಶೇ 9.5ರಷ್ಟು ವಿಸ್ತರಣೆಯಾಗಿದೆ. ಇಂತಹ ಭರವಸೆದಾಯಕ ಮಾರುಕಟ್ಟೆಯಲ್ಲಿ ಸಂಸ್ಥೆಯ ವಹಿವಾಟು ಮುಂಬರುವ ದಿನಗಳಲ್ಲಿ ಗರಿಷ್ಠ ಏರಿಕೆ ದಾಖಲಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೃತಕ ಬುದ್ಧಿಮತ್ತೆ ಕೇಂದ್ರ: ಸಂಸ್ಥೆಯು ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆಯ ಕೇಂದ್ರ ಆರಂಭಿಸಿದೆ. ಜರ್ಮನಿ ಮತ್ತು ಕ್ಯಾಲಿಫೋರ್ನಿಯಾ ನಂತರದ ಮೂರನೇ ಕೇಂದ್ರ ಇದಾಗಿದೆ. ತಯಾರಿಕೆ, ಎಂಜಿನಿಯರಿಂಗ್‌ ಮತ್ತು ಸರಕು ಪೂರೈಕೆ ನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸಲಾಗುತ್ತಿದೆ. ಭವಿಷ್ಯದಲ್ಲಿ ಸಂಸ್ಥೆಯ ಉತ್ಪನ್ನಗಳಲ್ಲಿ ಕೃತಕ ಬುದ್ಧಿಮತ್ತೆಯು ಪ್ರಮುಖ ಭಾಗವಾಗಿರುತ್ತದೆ’ ಎಂದರು.

2017ರಲ್ಲಿ ಬಾಷ್‌ ಸಮೂಹವು ದೇಶದಲ್ಲಿ ₹ 15,784 ಕೋಟಿಗಳಷ್ಟು ವಹಿವಾಟು ನಡೆಸಿದೆ. 

 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !