ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌನ್ಸ್‌: 130 ಸಿಬ್ಬಂದಿ ಮನೆಗೆ

Last Updated 7 ಮಾರ್ಚ್ 2021, 15:25 IST
ಅಕ್ಷರ ಗಾತ್ರ

ಬೆಂಗಳೂರು: ‘ಉದ್ಯಮದ ಬದಲಾಗುತ್ತಿರುವ ಆದ್ಯತೆಗಳಿಗೆ ಅನುಗುಣವಾಗಿ ಫೆಬ್ರುವರಿಯಲ್ಲಿ ಗರಿಷ್ಠ 130 ಜನರನ್ನು ಕೆಲಸದಿಂದ ತೆಗೆಯಲಾಗಿದೆ. ಇದರಿಂದ ಒಟ್ಟಾರೆ ಸಿಬ್ಬಂದಿ ಸಂಖ್ಯೆ 270ಕ್ಕೆ ತಗ್ಗಿದೆ’ ಎಂದುದ್ವಿಚಕ್ರ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ನೀಡುವ ನವೋದ್ಯಮ ‘ಬೌನ್ಸ್‌’ ತಿಳಿಸಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಬೌನ್ಸ್ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿವೇಕಾನಂದ ಹಳ್ಳೆಕೆರೆ, ‘ವಿದೇಶದಲ್ಲಿಯೂ ವಹಿವಾಟು ವಿಸ್ತರಣೆ ಮಾಡುವ ಆಲೋಚನೆ ಇತ್ತು. ಆಟೊ, ಬೈಕ್ ಟ್ಯಾಕ್ಸಿ ಮತ್ತು ಕಾರ್‌ ಪೂಲ್‌ ಮಾಡುವ ಉದ್ದೇಶದಿಂದ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಾಗಿತ್ತು. ಆದರೆ, ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ನಮ್ಮ ಯೋಜನೆಗಳಿಗೆ ಅಡ್ಡಿಯುಂಟಾಗಿದೆ. ಹೀಗಾಗಿ ಕೆಲವರನ್ನು ಕೆಲಸದಿಂದ ತೆಗೆಯುವುದು ಅನಿವಾರ್ಯ ಆಯಿತು. ಆದರೆ, ಅವರಲ್ಲಿ ಬಹುತೇಕರಿಗೆ ಬೇರೆ ಕಂಪನಿಗಳಲ್ಲಿ ಕೆಲಸ ಕೊಡಿಸಲಾಗಿದೆ. ಮೂರು ತಿಂಗಳ ವೇತನ, ಡಿಸೆಂಬರ್‌ವರೆಗಿನ ವಿಮೆಯನ್ನೂ ನೀಡಿದ್ದೇವೆ’ ಎಂದು ತಿಳಿಸಿದರು.

‘ಬೌನ್ಸ್‌ನಿಂದ ಹೊರಹೋದವರಲ್ಲಿ ಕೆಲವರು ಒಟ್ಟಾಗಿ ಆರು ಹೊಸ ನವೋದ್ಯಮಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಅವರಿಗೆ ನಾವು ಬೆಂಬಲ ನೀಡುತ್ತಿದ್ದೇವೆ’ ಎಂದು ವಿವೇಕಾನಂದ ತಿಳಿಸಿದರು. ‘ಬೌನ್ಸ್‌ನಲ್ಲಿ ಹಣದ ಕೊರತೆ ಇಲ್ಲ. ಆದರೆ, ವಿದೇಶದಲ್ಲಿ ವಹಿವಾಟು ವಿಸ್ತರಣೆ ಸದ್ಯಕ್ಕೆ ಸಾಧ್ಯವಾಗದೇ ಇರುವುದು ಹಾಗೂ ವಿದ್ಯುತ್ ಚಾಲಿತ ವಾಹನಗಳತ್ತ ಹೆಚ್ಚು ಗಮನ ನೀಡುತ್ತಿರುವುದರಿಂದ ಕೆಲವೊಂದಿಷ್ಟು ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ’ ಎಂದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಶೂನ್ಯಕ್ಕೆ ತಲುಪಿದ್ದ ವಹಿವಾಟು ಈಗ ಶೇಕಡ 50ರಿಂದ ಶೇ 60ರವರೆಗೂ ಚೇತರಿಕೆ ಹಾದಿಗೆ ಮರಳಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT