ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಕ್ಕೆ ಕಾದಿರುವ ಹೊಸ ಜಗತ್ತು

Last Updated 24 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ದೇಶಿ ಕಾರ್ಪೊರೇಟ್‌ ಜಗತ್ತು ರಚನಾತ್ಮಕವಾದ ಬದಲಾವಣೆಗೆ ಒಡ್ಡಿಕೊಳ್ಳುತ್ತಿದೆ. ಹೊಸ ಕಾಲದ ತಂತ್ರಜ್ಞಾನ ಆಧಾರಿತ ಕಂಪನಿಗಳು ತೀವ್ರ ಸ್ಪರ್ಧೆ ಒಡ್ಡಲಿವೆ. ಬದಲಾವಣೆಗೆ ಒಗ್ಗಿಕೊಳ್ಳದವರು ಅವಸಾನದತ್ತ ಸಾಗಬೇಕಾಗುತ್ತದೆ.

ಭಾರತೀಯ ಕಾರ್ಪೊರೇಟ್‌ ಜಗತ್ತು ಕೆಲವು ವರ್ಷಗಳಿಂದ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸು
ತ್ತಿದೆ. ದೇಶದ ಅತ್ಯುತ್ತಮ 500 ಕಂಪನಿಗಳಲ್ಲಿ, ಶೇ 23ರಷ್ಟು ಕಂಪನಿಗಳು ಮಾತ್ರ ಹಿಂದಿನ ಐದು ವರ್ಷಗಳಲ್ಲಿ ಲಾಭ ಗಳಿಕೆಯಲ್ಲಿ ಶೇ 20ಕ್ಕೂ ಹೆಚ್ಚಿನ ಏರಿಕೆ ದಾಖಲಿಸಿವೆ. ಸಾಲದ ಪ್ರಮಾಣ ಹೆಚ್ಚಾಗಿದೆ. ಲಾಭದ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಪರಿಣಾಮ, ಹೂಡಿಕೆಯ ಪ್ರಮಾಣ (ವಿಶೇಷವಾಗಿ ಖಾಸಗಿ ಕ್ಷೇತ್ರದ ಕಂಪನಿಗಳ) ಗಮನಾರ್ಹವಾಗಿ ಇಳಿದಿದೆ. ದೇಶದ ಆರ್ಥಿಕ ವೃದ್ಧಿ ದರದಲ್ಲಿ (ಜಿಡಿಪಿ) ಕಾರ್ಪೊರೇಟ್‌ ಸಂಸ್ಥೆಗಳ ಲಾಭದ ಅನುಪಾತ 10 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಈ ಸ್ಥಿತಿ ಏನನ್ನು ಹೇಳುತ್ತಿದೆ?: ನಾಲ್ಕಾರು ವರ್ಷಗಳಿಂದ ದೇಶದಲ್ಲಿ ಈ ಸ್ಥಿತಿಯೇ ಇದೆ. ಹೀಗೆ ಸಂಕಷ್ಟಕ್ಕೆ ಒಳಗಾದ ಉದ್ಯಮಿಗಳು, ಇದು ರಚನಾತ್ಮಕವಾಗಿ ಆಗುತ್ತಿರುವ ಬದಲಾವಣೆ ಎಂದು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಬದಲಿಗೆ ಇದು ಸಹಜ ಪ್ರಕ್ರಿಯೆ, ಮುಂದಿನ ವರ್ಷ ಸರಿಯಾಗುತ್ತದೆ ಎಂದು ಎಣಿಕೆ ಹಾಕುತ್ತಿದ್ದಾರೆ.

ವಾಸ್ತವದಲ್ಲಿ ಇದು ರಚನಾತ್ಮಕವಾದ ವಿಚಾರ. ಭಾರತದ ಅನೇಕ ಕಂಪನಿಗಳಿಗೆ ಇನ್ನು ‘ಪುನರುಜ್ಜೀವನ’ ಕಷ್ಟವಾಗಲಿದೆ. ಎರಡು ಪ್ರಮುಖ ಸಂಗತಿಗಳು ನಮ್ಮ ಹಳೆಯ ಕಾರ್ಪೊರೇಟ್‌ ವ್ಯವಸ್ಥೆಯನ್ನು ಹರಿದು ಚಿಂದಿಯಾಗಿಸುತ್ತಿವೆ. ಮೊದಲನೆಯದು– ತಂತ್ರಜ್ಞಾನ ಉಂಟು ಮಾಡುತ್ತಿರುವ ಪರಿಣಾಮ ಹಾಗೂ ದೊಡ್ಡ ಮಟ್ಟದ ಹೂಡಿಕೆ. ಎರಡನೆಯದು– ಪ್ರಭಾವಿ ಬಂಡವಾಳಶಾಹಿ ಕೂಟವನ್ನು ನಿಯಂತ್ರಿಸಿ, ಅರ್ಥವ್ಯವಸ್ಥೆಯನ್ನು ಸುಸ್ಥಿರಗೊಳಿಸಲು ಸರ್ಕಾರವು ತನ್ನ ಆರ್ಥಿಕ ನೀತಿಯಲ್ಲಿ ಮಾಡುತ್ತಿರುವ ಬದಲಾವಣೆ.

ಇಂಥ ವಿನಾಶಕಾರಿ ಆರ್ಥಿಕ ಬೆಳವಣಿಗೆಯು ಕೆಲವರನ್ನು ವಿಜಯಿಗಳನ್ನಾಗಿಸಿದರೆ ಇನ್ನೂ ಕೆಲವರನ್ನು ಸೋಲಿನ ದವಡೆಗೆ ತಳ್ಳುವುದು ಸಾಮಾನ್ಯ. ಈಗಿನ ಸ್ಥಿತಿಯನ್ನು ಗಮನಿಸಿದರೆ ಸೋಲಿನ ಕಡೆಗೆ ಮುಖಮಾಡುವವರ ಪಟ್ಟಿಯು ದೊಡ್ಡದಾಗಿರುವಂತೆ ಕಾಣಿಸುತ್ತಿದೆ. ಅದರಲ್ಲೂ ಹಳೆಯ ಕಾರ್ಪೊರೇಟ್‌ ಪದ್ಧತಿಯನ್ನು ಅನುಸರಿಸುವ ಸಂಸ್ಥೆಗಳಿಗೆ ಅಪಾಯ ಕಾದಿದೆ ಎಂದು ಭಾಸವಾಗುತ್ತಿದೆ. ಸ್ಪರ್ಧೆಯ ನಿಯಮಗಳೇ ಬದಲಾಗಿವೆ ಎಂಬುದನ್ನು ಈ ಸಂಸ್ಥೆಗಳು ಇನ್ನೂ ಅರ್ಥ ಮಾಡಿಕೊಂಡಿಲ್ಲ.

ಹಿಂದಿನ ಕಾರ್ಪೊರೇಟ್‌ ಜಗತ್ತಿನ ಕಾರ್ಯವೈಖರಿಯೇ ಬೇರೆ ಇತ್ತು. ತಾವು ಸಂಕಷ್ಟಕ್ಕೆ ಒಳಗಾದಾಗ ಸರ್ಕಾರದಲ್ಲಿ ನಿಯಮಗಳನ್ನು ರೂಪಿಸುವವರ ಮೇಲೆ ಪ್ರಭಾವ ಬೀರಿ, ತಮಗೆ ಅನುಕೂಲವಾಗುವ ರೀತಿಯಲ್ಲಿ ನಿಯಮಾವಳಿಗಳನ್ನು ಬದಲಿಸುವ ಮೂಲಕ ರಕ್ಷಣೆ ಪಡೆಯುವುದು, ಸಾಲ ಮರುಪಾವತಿ ಕಷ್ಟವಾಗುತ್ತಿದೆ ಎಂದಾಗ ಬ್ಯಾಂಕ್‌ಗಳ ಮೇಲೆ ಪ್ರಭಾವ ಬೀರಿ ಸಾಲಗಳನ್ನು ಮರು ಹೊಂದಾಣಿಕೆ ಮಾಡಿಕೊಳ್ಳುವುದೇ ಮುಂತಾದ ತಂತ್ರಗಳನ್ನು ಕಂಪನಿಗಳು ಬಳಸುತ್ತಿದ್ದವು. ಈ ತಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಅನೇಕರು ಯಶಸ್ವಿ ಉದ್ಯಮಿಗಳು ಎನಿಸಿಕೊಂಡಿದ್ದರು. ಕಡಿಮೆ ಸ್ಪರ್ಧೆ, ಮಿತಿಮೀರಿದ ನಿಯಂತ್ರಣಕ್ಕೊಳಪಟ್ಟ ವ್ಯವಸ್ಥೆಯಲ್ಲಿ ಸಾಕಷ್ಟು ಸಂಪನ್ಮೂಲಗಳನ್ನು ಪಡೆದು ಕಂಪನಿಗಳು ಸುಲಭವಾಗಿ ಹಣ ಸಂಪಾದಿಸಬಹುದಾಗಿತ್ತು. ಇಂಥ ಸನ್ನಿವೇಶದಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸದಿದ್ದರೂ ಗಳಿಕೆಯಲ್ಲಿ ಕೊರತೆ ಆಗುತ್ತಿರಲಿಲ್ಲ. ಈ ಹಳೆಯ ಪದ್ಧತಿ ಈಗ ಕೊನೆಗೊಂಡಿದೆ.

ಆರ್ಥಿಕತೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ನೀತಿಯಲ್ಲಿ ಆಗುತ್ತಿರುವ ಬದಲಾವಣೆಯು ಉದ್ಯಮ ವಲಯಕ್ಕೆ ಭಾರಿ ನೋವನ್ನು ನೀಡಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ವಿಪರೀತ ವೇಗದ ಬದಲಾವಣೆಯು ಅನೇಕ ಉದ್ದಿಮೆಗಳ ಅಸಮರ್ಥತೆಯನ್ನು ಬಯಲುಗೊಳಿಸಲಿದೆ. ಕಾರ್ಪೊರೇಟ್‌ ವಲಯದ ಹಳೆಯ ನೀತಿ ನಿಯಮಗಳಿಗೆ ಹೊಸ ಕಾಲದ ತಂತ್ರಜ್ಞಾನ ಆಧರಿತ ಕಂಪನಿಗಳು ತೀವ್ರ ಸ್ಪರ್ಧೆ ಒಡ್ಡಲಿವೆ. ಇಂಥ ಉದ್ದಿಮೆಗಳಲ್ಲಿ ಮಿತಿಯೇ ಇಲ್ಲದಷ್ಟು ಬಂಡವಾಳ ಹೂಡಿವವರೂ ಸಿಗಲಿದ್ದಾರೆ.

ಹೊಸ ತಲೆಮಾರಿನ ಉದ್ಯಮಿಗಳು ಮತ್ತು ಪಾರಂಪರಿಕ ಉದ್ಯಮಿಗಳ ನಡುವಣ ಈ ಸ್ಪರ್ಧೆಯು ಒಟ್ಟಾರೆ ವ್ಯಾಪಾರವನ್ನು ಹೊಸ ದಿಕ್ಕಿನತ್ತ ಎಳೆದೊಯ್ಯಲಿದೆ. ಅತಿಯಾದ ಚಾಣಾಕ್ಷತೆ, ಹಣದ ಬಲ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಮೂಲಕ ಅತಿ ಶೀಘ್ರದಲ್ಲೇ ಯಶಸ್ಸಿನ ಹಾದಿಯನ್ನು ತುಳಿಯಬಲ್ಲಂಥ ಹೊಸ ತಲೆಮಾರಿನ ಉದ್ಯಮಿಗಳು ಹಳೆಯ ಉದ್ದಿಮೆಗಳ ಅಸ್ತಿತ್ವಕ್ಕೆ ಧಕ್ಕೆ ತರಲಿದ್ದಾರೆ. ಬದಲಾವಣೆಗೆ ಒಗ್ಗಿಕೊಳ್ಳದವರು ಅವಸಾನದತ್ತ ಸಾಗಬೇಕಾಗುತ್ತದೆ. ಹಣ ಗಳಿಸಲು ಉದ್ದಿಮೆ ನಿರ್ವಾಹಕರು ಭಾರಿ ಶ್ರಮ ವಹಿಸಬೇಕಾಗುತ್ತದೆ. ಬ್ಯಾಂಕಿಂಗ್‌ ಕ್ಷೇತ್ರದ ನಿಯಮಾವಳಿಯಲ್ಲಿ ಆಗುವ ಬದಲಾವಣೆಯು ಆಡಳಿತ ಮಂಡಳಿಗಳಿಗೆ ತಲೆನೋವು ಉಂಟುಮಾಡುವುದು ಖಚಿತವಾಗಿದೆ.

ಈ ಸತ್ಯ ಅರ್ಥಮಾಡಿಕೊಂಡ ಕೆಲವು ಉದ್ದಿಮೆಗಳು ಹಳೆಯ ಅಸಮರ್ಥ ನೀತಿಗಳನ್ನು ನಿರ್ದಯವಾಗಿ ಮೂಲೆಗುಂಪು ಮಾಡಲಾರಂಭಿಸಿವೆ. ಇದರ ಸಕಾರಾತ್ಮಕ ಪರಿಣಾಮ ಎಂದರೆ, ಉದ್ಯಮ ಕ್ಷೇತ್ರದಲ್ಲಿ ಹೊಸ ನಾಯಕರು ಮುನ್ನೆಲೆಗೆ ಬರುತ್ತಿದ್ದಾರೆ. ನಾಯಕರು ಮತ್ತು ನಾಶಮಾಡುವವರು ಕೆಲವೇ ದಿನಗಳಲ್ಲಿ ಹೇಗೆ ಹುಟ್ಟಿಕೊಳ್ಳುತ್ತಾರೆ ಎಂಬುದನ್ನು ಕಳೆದ ಒಂದು ದಶಕ ನಮ್ಮ ಮುಂದೆ ಪುರಾವೆಗಳ ಸಹಿತ ತೆರೆದಿಟ್ಟಿದೆ. ನೆಟ್‌ಫ್ಲಿಕ್ಸ್‌, ವಾಟ್ಸ್‌ಆ್ಯಪ್‌, ಅಲಿಬಾಬಾ, ಅಮೆಜಾನ್‌... ಇಂಥವು ಇದಕ್ಕೆ ಉದಾಹರಣೆ. ಭಾರತದಲ್ಲೂ ವೇಗವಾಗಿ ಬದಲಾವಣೆ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಓಲಾ, ಜೊಮಾಟೊ, ಸ್ವಿಗ್ಗಿ, ಜಿಯೊ ಮುಂತಾದ ಹತ್ತು ಹಲವು ಕಂಪನಿಗಳು ವ್ಯಾಪಾರ ಕ್ಷೇತ್ರದ ನಿಯಮಗಳನ್ನೇ ಬದಲಿಸಿವೆ. ಮುಂಬೈನಲ್ಲಿ
ರುವ ಆರ್ಥಿಕ ಹಿನ್ನಡೆ ಅಥವಾ ಋಣಾತ್ಮಕ ಮನಸ್ಥಿತಿ ಬೆಂಗಳೂರಿನಲ್ಲಿ ಕಾಣಿಸುವುದಿಲ್ಲ. ಬೆಂಗಳೂರಿನ ಮನಸ್ಥಿತಿಯಲ್ಲಿ ಭಾರಿ ಬದಲಾವಣೆ ಕಾಣಿಸುತ್ತಿದೆ. ಕೆಲವು ಕಂಪನಿಗಳಿಗೆ ಭೇಟಿ ನೀಡಿದರೆ ಅವು ಹೊಸ ಜಗತ್ತಿನಲ್ಲಿ ಕಾರ್ಯನಿರ್ವಹಿಸುತ್ತಿವೆಯೋ ಎಂಬ ಭಾವನೆಯನ್ನು ಮೂಡಿಸುತ್ತವೆ.

ಇನ್ನುಮುಂದೆ ಉತ್ತಮ ಫಲಿತಾಂಶವನ್ನು ಪಡೆಯಲು ಅಪರಿಮಿತ ಶ್ರಮ ವಹಿಸಬೇಕಾಗುತ್ತದೆ ಎಂಬುದನ್ನು ಈಗಲೇ ಅರ್ಥ ಮಾಡಿಕೊಳ್ಳಬೇಕು. ಎಲ್ಲಿಬೇಕಾದರೂ ಅಥವಾ ಎಲ್ಲಾ ಕಡೆಗಳಲ್ಲಿ ಹೂಡಿಕೆ ಮಾಡಿ ಸುಲಭವಾಗಿ ಲಾಭ ಮಾಡಿಕೊಳ್ಳುವ ದಿನಗಳು ಸರಿದು ಹೋದವು. ಔದ್ಯಮಿಕ ಕ್ಷೇತ್ರದಲ್ಲಿ ಉಳಿಯಬೇಕಾದರೆ ಆಗುತ್ತಿರುವ ಬದಲಾವಣೆಯನ್ನು ಅರ್ಥ ಮಾಡಿಕೊಂಡು, ಅದಕ್ಕೆ ಅನುಗುಣವಾಗಿ ತಾವೂ ಬುದ್ಧಿವಂತಿಕೆಯಿಂದ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಉದ್ದಿಮೆಗಳಿಗೆ ಬೆಂಬಲ ನೀಡಬೇಕು, ಸೌಲಭ್ಯಗಳನ್ನು ಒದಗಿಸಬೇಕು ಎಂದು ಸರ್ಕಾರದ ಮುಂದೆ ಅಂಗಲಾಚುವುದು, ನೀಡ
ದಿದ್ದರೆ ಸರ್ಕಾರವನ್ನು ಟೀಕಿಸುವುದನ್ನು ಬಿಟ್ಟು, ಹೂಡಿಕೆಗೆ ಎಲ್ಲಿ ಅವಕಾಶವಿದೆ ಎಂಬುದರ ಬಗ್ಗೆ ಕಂಪನಿಗಳು ಗಮನ ಹರಿಸಬೇಕು ಎಂಬ ನೀತಿಪಾಠವನ್ನು ಈ ಬೆಳವಣಿಗೆಗಳು ನೀಡುತ್ತವೆ.

(ಲೇಖಕ: ಅ್ಯಕ್ಸಿಸ್‌ ಎಎಂಸಿಯ ಈಕ್ವಿಟಿ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT