ನವದೆಹಲಿ: ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಕಂಪನಿಗಳ ಮಾರುಕಟ್ಟೆ ಮೌಲ್ಯವು ಸೋಮವಾರದ ವಹಿವಾಟಿನಲ್ಲಿ ₹315 ಲಕ್ಷ ಕೋಟಿಗೆ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
ಆರ್ಥಿಕ ಚಟುವಟಿಕೆಗಳನ್ನು ಸೂಚಿಸುವ ಅಂಶಗಳು ಉತ್ತಮ ಬೆಳವಣಿಗೆ ಕಾಣುತ್ತಿರುವುದು, ಹೂಡಿಕೆ ಚಟುವಟಿಕೆ ಹೆಚ್ಚಾಗುತ್ತಿರುವುದು ಹಾಗೂ ಜಾಗತಿಕ ಷೇರುಪೇಟೆಗಳ ವಹಿವಾಟು ಸ್ಥಿರವಾಗಿ ಇರುವ ಕಾರಣಗಳಿಂದಾಗಿ ಮಾರುಕಟ್ಟೆ ಮೌಲ್ಯವು ಈ ಮಟ್ಟವನ್ನು ತಲುಪುವಂತಾಯಿತು.
ಬಿಎಸ್‌ಇ ಸೆನ್ಸೆಕ್ಸ್ ಸೋಮವಾರ 241 ಅಂಶ ಏರಿಕೆ ಕಂಡು 65,628 ಅಂಶಗಳಿಗೆ ತಲುಪಿತು. ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 556 ಅಂಶ ಏರಿಕೆ ಕಂಡಿತ್ತು. ಈ ಎರಡು ದಿನಗಳ ವಹಿವಾಟಿನಲ್ಲಿ ಮಾರುಕಟ್ಟೆ ಬಂಡವಾಳ ಮೌಲ್ಯವು ₹5.41 ಲಕ್ಷ ಕೋಟಿಯಷ್ಟು ಏರಿಕೆ ಕಂಡಿದ್ದು ಒಟ್ಟು ಮೌಲ್ಯವು ₹315 ಲಕ್ಷ ಕೋಟಿಗೆ ತಲುಪಿತು.
ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಳಕ್ಕೆ ತಡೆ ನೀಡಬಹುದು ಎನ್ನುವ ನಿರೀಕ್ಷೆಯಿಂದಾಗಿ ಮಾರುಕಟ್ಟೆಗಳಲ್ಲಿ ಸತತ ಎರಡನೇ ದಿನವೂ ಸೂಚ್ಯಂಕಗಳು ಏರಿಕೆ ಕಂಡುಕೊಂಡವು. ಚೀನಾವು ರಿಯಲ್ ಎಸ್ಟೇಟ್ ವಲಯದ ಪುನಶ್ಚೇತನಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವ ವರದಿಯು ಸಹ ಷೇರುಪೇಟೆಗಳಲ್ಲಿ ಉತ್ಸಾಹ ಹೆಚ್ಚಾಗಲು ಕಾರಣವಾಯಿತು ಎಂದು ಕೋಟಕ್ ಸೆಕ್ಯುರಿಟೀಸ್ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ ಶ್ರೀಕಾಂತ್ ಚೌಹಾಣ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.