ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ವಿಶ್ಲೇಷಣೆ: ಸಿಹಿ-ಕಹಿ ಅನುಭವ ಕೊಟ್ಟ ನಿರ್ಮಲ ಬಜೆಟ್ !

ಕಪ್ಪುಹಣಕ್ಕೆ ಕಡಿವಾಣ: ಡಿಜಿಟಲ್‌ ಪಾವತಿಗೆ ಉತ್ತೇಜನ
Last Updated 6 ಜುಲೈ 2019, 1:09 IST
ಅಕ್ಷರ ಗಾತ್ರ

ಮರಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರದ ಮೊದಲ ಬಜೆಟ್‌ನಲ್ಲಿ ಜನರು ಸಹಜವಾಗಿಯೇ ಸತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಆಕಾಂಕ್ಷೆಗಳನ್ನು ಹೊಂದಿದ್ದರು. ಸಾಮಾನ್ಯ ವರ್ಗದ ಜನರಿಗೆ ಇದು ಸಿಹಿ, ಮಧ್ಯಮ ವರ್ಗದ ಜನರಿಗೆ ನಿರಾಶೆ ಹಾಗೂ ಶ್ರೀಮಂತ ವರ್ಗಕ್ಕೆ ಒಂದಿಷ್ಟು ಕಹಿ ಅನುಭವ ನೀಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್, ಉದ್ದಿಮೆ ಕ್ಷೇತ್ರಕ್ಕೂ ತೆರಿಗೆ ಪ್ರಸ್ತಾಪದಲ್ಲಿ ಒಂದಿಷ್ಟು ಆಶಾದಾಯಕ ಅಂಶಗಳನ್ನು ಹೊಂದಿದೆ. ಕಪ್ಪು ಹಣದ ಹತೋಟಿಗೆ ಸಂಬಂಧಪಟ್ಟಂತೆ ನಗದು ವ್ಯವಹಾರವನ್ನು ತಡೆಯುವ ದೃಷ್ಟಿಯಿಂದ ಆರ್ಥಿಕತೆಗೆ ಅಗತ್ಯವಾದ ಕೆಲವು ಬಿಗಿ ಧೋರಣೆಗಳೂ ಇವೆ.

ಮೂಲ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿರುವುದರಿಂದ ಆಂತರಿಕ ಬಜೆಟ್‍ನಲ್ಲಿ ಘೋಷಿಸಿದ್ದ ಐದು ಲಕ್ಷ ರೂಪಾಯಿಗಳ ’ನಿವ್ವಳ ಆದಾಯ’ ಉಳ್ಳವರಿಗಷ್ಟೇ ಸೀಮಿತವಾಗಿರುವ ’ತೆರಿಗೆ ರಿಯಾಯಿತಿ’ ಮುಂದುವರಿಯಲಿದೆ. ಅದಕ್ಕಿಂತ ಅಧಿಕ ಆದಾಯವುಳ್ಳವರ ಪಾಲಿಗೆ ಯಾವುದೇ ತೆರಿಗೆ ಕಡಿತವನ್ನು ಪ್ರಸ್ತಾಪಿಸಲಾಗಿಲ್ಲ. ಹಣದುಬ್ಬರ, ವೃದ್ಧಿಯಾಗುತ್ತಿರುವ ದಿನನಿತ್ಯದ
ವೆಚ್ಚಗಳ ಮೇಲಿನ ಪರಿಣಾಮಗಳನ್ನು ಜನರ ಆಕಾಂಕ್ಷೆಗಳಿಗೆ ತಕ್ಕಂತೆ ಈ ಬಾರಿಯೂ ಪರಿಗಣಿಸಿಲ್ಲ.

ಹೊಸ ತೆರಿಗೆ ಪ್ರಸ್ತಾವದಂತೆ ಎರಡರಿಂದ ಐದು ಕೋಟಿ ರೂಪಾಯಿ ಆದಾಯ ಹೊಂದಿದ ಶ್ರೀಮಂತ ವರ್ಗದ ತೆರಿಗೆದಾರರಿಗೆ ಈಗಿರುವ ಶೇಕಡಾ 15ರ ಸರ್ಚಾರ್ಜ್‌ ಅನ್ನು ಶೇ 25ಕ್ಕೇರಿಸಲಾಗಿದೆ.

ಉದ್ದಿಮೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೇ 25ರ ತೆರಿಗೆ ದರ ವಾರ್ಷಿಕವಾಗಿ ₹ 250 ಕೋಟಿ ವಹಿವಾಟು ಹೊಂದಿದ ಕಂಪನಿಗಳಿಗಷ್ಟೇ ಸೀಮಿತವಾಗಿತ್ತು. ಇದನ್ನು ₹ 400 ಕೋಟಿಗೆ ಏರಿಸಿರುವುದು ಶೇ 99ರಷ್ಟು ಕಂಪನಿಗಳಿಗೆ ಲಾಭವಾಗಲಿದೆ. ಕಾರ್ಪೊರೇಟ್ ವಲಯಕ್ಕೆ ಸಂಬಂಧಿಸಿದಂತೆ, ಯಾವುದೇ ಬ್ಯಾಂಕ್, ಸಹಕಾರಿ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಯಿಂದ ವಾರ್ಷಿಕವಾಗಿ 1 ಕೋಟಿಗಿಂತ ಅಧಿಕ ಮೊತ್ತ ಹಿಂದೆ ಪಡೆದರೆ ಅಂತಹ ಹೆಚ್ಚುವರಿ ಮೊತ್ತದ ಮೇಲೆ ಶೇ 2ರಷ್ಟು ತೆರಿಗೆಯನ್ನು ಕಡಿತಗೊಳಿಸುವ ಪ್ರಸ್ತಾಪವನ್ನೂ ಮಂಡಿಸಲಾಗಿದೆ. ₹ 50 ಕೋಟಿಗೂ ಅಧಿಕ ಆರ್ಥಿಕ ವಹಿವಾಟು ಮಾಡುವ ಸಂಸ್ಥೆಗಳು ಇನ್ನು ಮುಂದೆ ಕಡ್ಡಾಯವಾಗಿ ಡಿಜಿಟಲ್ ಮಾಧ್ಯಮದ ಮೂಲಕವಷ್ಟೇ ತಮ್ಮ ಪಾವತಿಗಳನ್ನು ಮಾಡಬೇಕು.

ಒಂದು ವರ್ಷದ ಅವಧಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬ ಗುತ್ತಿಗೆ ರೂಪದಲ್ಲಿ ಅಥವಾ ಸಮಾಲೋಚನಾ ಶುಲ್ಕವಾಗಿ ಪಾವತಿಸುವ ರೂಪಾಯಿ 50 ಲಕ್ಷಗಳಿಗಿಂತ ಅಧಿಕ ಮೊತ್ತಕ್ಕೆ ಶೇ 5ರಷ್ಟು ತೆರಿಗೆ ಮುರಿದುಕೊಳ್ಳಲಾಗುವುದು. ಇದು ಹೊಸದಾಗಿ ಸೇರ್ಪಡೆಗೊಳಿಸಿದ ತೆರಿಗೆ ಕಡಿತ ನಿಯಮವಾಗಿದ್ದು ತಮ್ಮ ಪ್ಯಾನ್ ಸಂಖ್ಯೆಯಡಿಯಲ್ಲೇ ಕಡಿತಗೊಳಿಸಿದ ತೆರಿಗೆಯನ್ನು ಸರಕಾರಕ್ಕೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಯಾವುದೇ ಮನೆ ಅಥವಾ ನಿವೇಶನ ಮಾರಾಟ ಮಾಡುವ ಸಂದರ್ಭದಲ್ಲಿ ವರ್ಗಾವಣೆ ಮಾಡುವ ಕಾರ್ ಪಾರ್ಕಿಂಗ್ ಜಾಗ, ಕ್ಲಬ್ ಸದಸ್ಯತ್ವ, ನೀರು ಹಾಗೂ ವಿದ್ಯುತ್ ಸಂಪರ್ಕಕ್ಕೆ ಕಟ್ಟಿದ ಮುಂಗಡ ಮೊತ್ತ, ನಿರ್ವಹಣಾ ಶುಲ್ಕ ಇತ್ಯಾದಿಗಳನ್ನೂ ಸೆಪ್ಟೆಂಬರ್ ತಿಂಗಳಿನಿಂದ ಶೇ 1ರ ದರದಲ್ಲಿ ತೆರಿಗೆ ಕಡಿತಗೊಳಿಸಲು ಪ್ರಸ್ತಾಪಿಸಲಾಗಿದೆ.

ವೈಯಕ್ತಿಕ ತೆರಿಗೆದಾರರಿಗೆ ಅನುಕೂಲವಾಗುವಂತೆ ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಪಡೆದ ಸಾಲದ ಮೇಲಿನ ಬಡ್ಡಿ ಮೊತ್ತಕ್ಕೆ ಹೆಚ್ಚುವರಿಯಾಗಿ ₹ 1.50 ಲಕ್ಷಗಳ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಇದು ವಾಹನ ತಯಾರಿಕಾ ರಂಗವನ್ನು ಉತ್ತೇಜಿಸಲಿದೆ. ಇದರ ಲಾಭ ವಿದ್ಯುತ್ ಚಾಲಿತ ವಾಹನ ಖರೀದಿಗಷ್ಟೇ ಸೀಮಿತವಾಗಿದೆ. 2023 ರ ತನಕ ವಾಹನ ಖರೀದಿಸುವವರಿಗೆ ಲಭಿಸಲಿದೆ. ಈ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ 12ರಿಂದ 5 ಕ್ಕೆ ಇಳಿಸಿರುವುದು ವಾಹನ ಖರೀದಿದಾರರಿಗೆ ಮತ್ತಷ್ಟು ವರದಾನವಾಗಿ ಪರಿಣಮಿಸಿದೆ.

₹ 45 ಲಕ್ಷದೊಳಗಿನ ಮನೆಯನ್ನು ಅಫೋರ್ಡಬಲ್ ಹೌಸಿಂಗ್ ಸ್ಕೀಂ‍ನಡಿ ಖರೀದಿಸುವ ತೆರಿಗೆದಾರರಿಗೆ ಹೆಚ್ಚುವರಿಯಾಗಿ ₹ 1.50 ಲಕ್ಷದಷ್ಟು ಮೊತ್ತದ ತೆರಿಗೆ ರಿಯಾಯಿತಿ ನೀಡುವ ಪ್ರಸ್ತಾಪವು ಕಟ್ಟಡ ನಿರ್ಮಾಣ ಕ್ಷೇತ್ರವನ್ನು ಮತ್ತಷ್ಟು ಉತ್ತೇಜಿಸುವಂತೆ ಮಾಡಲಿದೆ. ಇದರ ಪ್ರಯೋಜನ ಪಡೆಯುವವರು ಈ ಹಿಂದೆ ಯಾವುದೇ ಮನೆ ಹೊಂದಿದವರಾಗಿರಬೇಕು ಮತ್ತು ಸಾಲವನ್ನು ಮುಂದಿನ ಮಾರ್ಚ್ 2020 ರೊಳಗೆ ಪಡೆದುಕೊಳ್ಳಬೇಕಾಗುತ್ತದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT