ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮಕ್ಕೆ ಉತ್ತೇಜನ: ಏಂಜೆಲ್‌ ತೆರಿಗೆ ರದ್ದು

Last Updated 5 ಜುಲೈ 2019, 19:17 IST
ಅಕ್ಷರ ಗಾತ್ರ

ನವದೆಹಲಿ: ನವೋದ್ಯಮಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನವೋದ್ಯಮಗಳಿಗೆ ಮಾರಕವಾಗಿದ್ದ ಏಂಜೆಲ್ ಟ್ಯಾಕ್ಸ್ (ಬಂಡವಾಳ ಹೂಡಿಕೆ ಮೇಲಿನ ತೆರಿಗೆ) ರದ್ದು ಮಾಡಲು ಮತ್ತು ಆದಾಯ ತೆರಿಗೆ ಪರಿಶೀಲನೆಯಿಂದ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ.

ಭಾರತದಲ್ಲಿ ನವೋದ್ಯಮಗಳು ಭದ್ರವಾಗಿನೆಲೆಯೂರುತ್ತಿವೆ. ಹೀಗಾಗಿ, ಇವುಗಳ ಬೆಳವಣಿಗೆಗೆ ಉತ್ತೇಜನಕ್ಕೆ ಅಗತ್ಯ ಕ್ರಮಕೈಗೊಳ್ಳುವುದು ಅಗತ್ಯವಿದೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಹಣದ ಮೂಲ ಮತ್ತು ಹೂಡಿಕೆದಾರನನ್ನು ಗುರುತಿಸಲು ‘ಇ–ಪರಿಶೀಲನೆ’ ಯೋಜನೆ ಜಾರಿಗೆ ತರಲಾಗುವುದು. ಇದರಿಂದ ಹೂಡಿಕೆ ಮೂಲವನ್ನು ಆದಾಯ ತೆರಿಗೆ ಇಲಾಖೆಯಿಂದ ತಪಾಸಣೆ ಮಾಡಬೇಕಾದ ಅಗತ್ಯವಿರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ.

ನವೋದ್ಯಮಗಳ ಸಮಸ್ಯೆಗಳಿಗೆ ಪರಿಹಾರ ಮತ್ತು ಬಾಕಿ ಪರಿಶೀಲನೆಗೆಕೇಂದ್ರೀಯ ನೇರ ತೆರಿಗೆ ಮಂಡಳಿಯುವಿಶೇಷ ಆಡಳಿತಾತ್ಮಕ ವ್ಯವಸ್ಥೆಯನ್ನು ರೂಪಿಸಲಿದೆ.

ನವೋದ್ಯಮ ಯೋಜನೆಗಳ ಮಾಹಿತಿಗಾಗಿ ದೂರದರ್ಶನದ ಸಹಭಾಗಿತ್ವದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ವಾಹಿನಿಯನ್ನು ಸ್ವತಃ ನವೋದ್ಯಮಗಳೇ ರೂಪಿಸಿ ಕಾರ್ಯಗತಗೊಳಿಸುತ್ತವೆ. ನವೋದ್ಯಮಗಳ ಬೆಳವಣಿಗೆ, ಬಂಡವಾಳ ಹೂಡಿಕೆ ಮುಂತಾದ ವಿಷಯಗಳು ಕುರಿತು ಚರ್ಚಿಸಲು ಈ ಕಾರ್ಯಕ್ರಮಗಳು ವೇದಿಕೆ ಕಲ್ಪಿಸಲಿವೆ.

ಸುದೀರ್ಘ ಭಾಷಣ
ನವದೆಹಲಿ:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ 2ಗಂಟೆ 17 ನಿಮಿಷಗಳಲ್ಲಿ ಬಜೆಟ್‌ ಮಂಡಿಸಿದರು.

ಒಂದು ಬಾರಿಯೂ ನೀರು ಕುಡಿಯದೆ ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಬಜೆಟ್‌ ಮಂಡಿಸಿದರು. ಉರ್ದು, ಹಿಂದಿ ಮತ್ತು ತಮಿಳು ಭಾಷೆಗಳ ದ್ವಿಪದಿಗಳನ್ನು ಉಲ್ಲೇಖಿಸಿ ಗಮನಸೆಳೆದರು. ಹೊಸ ಪ್ರಸ್ತಾವನೆಗಳನ್ನು ಮಂಡಿಸಿದಾಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.

ಬಜೆಟ್‌ ಭಾಷಣಕ್ಕೆ ಮುನ್ನವೇ ಹಲವು ಮಹಿಳಾ ಸಂಸದರು ನಿರ್ಮಲಾ ಸೀತಾರಾಮನ್‌ ಅವರನ್ನು ಅಭಿನಂದಿಸಿದರು.ಆತ್ಮವಿಶ್ವಾಸದಿಂದ ಬೀಗುತ್ತಿದ್ದ ನಿರ್ಮಲಾ ಅವರು, ಬಜೆಟ್‌ ಮಂಡಿಸುವುದನ್ನು ನೋಡಲು ಬಂದಿದ್ದ ತಮ್ಮ ಪೋಷಕರಾದ ಸಾವಿತ್ರಿ ಮತ್ತು ನಾರಾಯಣ ಸೀತಾರಾಮನ್‌ ಅವರಿಗೆ ನಮಸ್ಕರಿಸಿದರು.

ಹಣ ಪಾವತಿಗೆ ಸರಳ ವ್ಯವಸ್ಥೆ
ನವದೆಹಲಿ:
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ (ಎಂಎಸ್‌ಎಂಇ) ಉತ್ತೇಜನ ನೀಡುವ ನಿಟ್ಟಿನಲ್ಲಿ ಸಕಾಲಕ್ಕೆ ಹಣ ಪಾವತಿಸುವ ವ್ಯವಸ್ಥೆಯನ್ನು ರೂಪಿಸಲು ಉದ್ದೇಶಿಸಲಾಗಿದೆ. ಬಿಲ್‌ಗಳನ್ನು ಸಲ್ಲಿಸಲು ಮತ್ತು ಪಾವತಿಸುವ ವ್ಯವಸ್ಥೆಯನ್ನು ಸರಳಗೊಳಿಸುವ ಪ್ರಸ್ತಾವ ಮಂಡಿಸಲಾಗಿದೆ.

ಪೂರೈಕೆದಾರರು ಮತ್ತು ಗುತ್ತಿಗೆದಾರರಿಗೆ ಸರ್ಕಾರದಿಂದ ಹಣ ಪಾವತಿಸುವ ವ್ಯವಸ್ಥೆಯಾಗುತ್ತದೆ. ಇದರಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮ ವಲಯದ ಉದ್ದಿಮೆದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಣ ಪಾವತಿ ವಿಳಂಬವಾಗುವುದನ್ನು ತಪ್ಪಿಸಿದರೆ ಎಂಎಸ್‌ಎಂಇಗಳಿಗೆ ಅಪಾರ ಉತ್ತೇಜನ ದೊರೆಯಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಪಾದಿಸಿದ್ದಾರೆ.

ಜಿಎಸ್‌ಟಿ ನೋಂದಣಿಯಾದ ಎಂಎಸ್ಎಂಇಗಳಿಗೆ 2019–20ನೇ ಸಾಲಿನಲ್ಲಿ ಶೇಕಡ 2ರ ಬಡ್ಡಿ ದರದಲ್ಲಿ ₹350 ಕೋಟಿ ನೀಡಲು ಉದ್ದೇಶಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿಸಲು ಆದ್ಯತೆ ನೀಡುವುದು ಅಗತ್ಯವಿದೆ. ‘ಸ್ಟ್ಯಾಂಡ್‌ಅಪ್‌ ಇಂಡಿಯಾ’ ಯೋಜನೆ ಅಡಿಯಲ್ಲಿ 300 ಉದ್ಯಮಿಗಳು ಸೃಷ್ಟಿಯಾಗಿದೆ ಎಂದು ವಿವರಿಸಿದ್ದಾರೆ.

1 ಲಕ್ಷ ಕೋಟಿ ಷೇರು ವಿಕ್ರಯ ಗುರಿ
ನವದೆಹಲಿ:
ಖಾಸಗೀಕರಣ ಪ್ರಕ್ರಿಯೆಗೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ, ಪ್ರಸ್ತುತ ಹಣಕಾಸು ವರ್ಷದಲ್ಲೇ ₹1.05 ಲಕ್ಷ ಕೋಟಿ ಷೇರು ವಿಕ್ರಯ ಮಾಡುವ ಗುರಿ ಹೊಂದಿದೆ.

ಇದೇ ವರ್ಷದ ಫೆಬ್ರುವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ ಷೇರು ವಿಕ್ರಯ ಗುರಿಯನ್ನು ₹90 ಸಾವಿರ ಕೋಟಿಗೆ ನಿಗದಿಪಡಿಸಲಾಗಿತ್ತು. ಸರ್ಕಾರಿ ಸ್ವಾಮ್ಯದ ಆಯ್ದ ಕಂಪನಿಗಳ ಷೇರು ವಿಕ್ರಯ ಕೈಗೊಳ್ಳಲು ಆದ್ಯತೆ ನೀಡಲು ಉದ್ದೇಶಿಸಲಾಗಿದೆ.

ವೈಮಾನಿಕ ಕ್ಷೇತ್ರದಲ್ಲಿ ಎಫ್‌ಡಿಐ ಹೆಚ್ಚಳ
ನವದೆಹಲಿ:
ದೇಶಿಯ ವೈಮಾನಿಕ ಕ್ಷೇತ್ರದಲ್ಲಿನ ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಏರ್‌ ಇಂಡಿಯಾಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮಕೈಗೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಗಿರುವ ಶೇಕಡ 49ರಷ್ಟು ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಯಾರು ಏನಂತಾರೆ?
ದೇಶದ ಎಲ್ಲ ವರ್ಗದ ಜನರ ನಿರೀಕ್ಷೆಗಳನ್ನು ಬಜೆಟ್ ಈಡೇರಿಸಿದೆ. ಸ್ವಾತಂತ್ರ್ಯಾನಂತರ ಪೂರ್ಣ ಪ್ರಮಾಣದ ಹಣಕಾಸು ಸಚಿವೆಯಾಗಿ ಮೊದಲ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸುತ್ತೇನೆ.
–ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

**
ಕೇಂದ್ರ ಬಜೆಟ್ ಬಡವರ, ರೈತರ ಹಾಗೂ ಗ್ರಾಮಗಳಲ್ಲಿ ಪರಿವರ್ತನೆ ತರುವ ಉದ್ದೇಶ ಹೊಂದಿದೆ. ಅರ್ಥವ್ಯವಸ್ಥೆಯ ಗಾತ್ರ ₹356 ಲಕ್ಷ ಕೋಟಿಗೆ ತಲುಪಿಸುವ ಪ್ರಧಾನಿಯವರ ಮಹತ್ವಾಕಾಂಕ್ಷೆ ಇದರಲ್ಲಿ ಕಾಣಿಸಿದೆ.
–ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ

**
ಬಜೆಟ್‌ನಲ್ಲಿ ದೂರದೃಷ್ಟಿಯ ಕೊರತೆಯಿದ್ದು, ಜನಸಾಮಾನ್ಯರು ಇದರಿಂದ ಯಾತನೆ ಅನುಭವಿಸಲಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ, ಮಾರುಕಟ್ಟೆ ಹಾಗೂ ಜನರ ದೈನದಿಂದ ಜೀವನದ ಮೇಲೆ ಹೊಡೆತ ಬೀಳಲಿದೆ.
–ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

**
ಬಜೆಟ್‌ನಲ್ಲಿ ಹೊಸತನವಿಲ್ಲ, ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆಯಿಲ್ಲ. ಹೊಸ ಬಾಟಲಿಯಲ್ಲಿ ಹಳೆ ಮದ್ಯ ತುಂಬಲಾಗಿದೆ.
–ಅಧೀರ್ ರಂಜನ್ ಚೌಧರಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ

**
ಒಟ್ಟು ವರಮಾನ, ಒಟ್ಟು ವೆಚ್ಚ, ವಿತ್ತ ಕೊರತೆ, ವರಮಾನ ಕೊರತೆ, ಹೆಚ್ಚುವರಿ ವರಮಾನ ಸಂಗ್ರಹ ಅಥವಾ ಆರ್ಥಿಕ ವಿನಾಯಿತಿ ಮಾಹಿತಿಯನ್ನು ನೀಡದ ಬಜೆಟ್‌ ಭಾಷಣವನ್ನು ಎಂದಾದರೂ ಇತ್ತೇ? ಸಾಮಾನ್ಯ ಪದ್ಧತಿಯಿಂದ ಹಿಡಿದಿರುವ ಭಿನ್ನ ಹಾದಿಯು ನಮಗೆ ಆಘಾತ ತಂದಿದೆ.
–ಪಿ. ಚಿದಂಬರಂ, ಮಾಜಿ ಹಣಕಾಸು ಸಚಿವ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT